ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೆರವಾಗಿ ಇಲ್ಲವೇ ದಯಾಮರಣ ನೀಡಿ: ಸುಳ್ಯದ ಚಾಂದಿನಿಯಿಂದ ಸಿಎಂಗೆ ಪತ್ರ

ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಸುಳ್ಯದ ಚಾಂದಿನಿಯಿಂದ ಸಿ.ಎಂ.ಗೆ ಪತ್ರ
Published 8 ಜುಲೈ 2024, 19:37 IST
Last Updated 8 ಜುಲೈ 2024, 19:37 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ನಾವೂರು ಗ್ರಾಮದ ಬಡ ಕುಟುಂಬದ ಚಾಂದಿನಿ ಜಿ.ಡಿ. (33) ಎಂಬುವರು ‘ಹೈಪರ್‌ ಐಜಿಇ ಸಿಂಡ್ರೋಮ್‌’ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ವೆಚ್ಚ ಭರಿಸಲು ಸರ್ಕಾರದ ನೆರವು ಕೋರಿದ್ದಾರೆ.

‘ಚಿಕಿತ್ಸೆಗೆ ನೆರವು ನೀಡಲು ಸಾಧ್ಯವಾಗದಿದ್ದರೆ ದಯಾಮರಣವನ್ನಾದರೂ ನೀಡಿ’ ಎಂದು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌  ಅವರಿಗೆ  ಇ– ಮೇಲ್‌ ಕಳುಹಿಸಿದ್ದಾರೆ.

‘ನನ್ನ ಕಾಯಿಲೆಗೆ ಊರಿನಲ್ಲಿ ಚಿಕಿತ್ಸೆ ಪಡೆದರೂ ಪ್ರಯೋಜನವಾಗಿರಲಿಲ್ಲ. ಹೆಚ್ಚಿನ ಚಿಕಿತ್ಸೆಗೆ ಹೈದರಾಬಾದ್‌ನ ಎಐಜಿ ಆಸ್ಪತ್ರೆಗೆ ದಾಖಲಾಗುವಂತೆ ಊರಿನ ವೈದ್ಯರು ಸಲಹೆ ನೀಡಿದ್ದರು. ನನಗೆ ಅತ್ಯಂತ ಅಪರೂಪವಾದ ‘ಹೈಪರ್‌ ಐಜಿಇ ಮೆಡಿಕೇಟೆಡ್ ಸೆಲ್ ಆಕ್ಟಿವೇಷನ್‌ ಸಿಂಡ್ರೋಮ್’ ಕಾಯಿಲೆ ಇರುವುದನ್ನು ಆ ಆಸ್ಪತ್ರೆಯವರು ಪತ್ತೆ ಹಚ್ಚಿದ್ದರು. ತೀವ್ರತರವಾದ ಅಲರ್ಜಿಯನ್ನುಂಟು ಮಾಡುವ (ಅನಫಿಲ್ಯಾಕ್ಸಿಸ್) ಈ ಕಾಯಿಲೆಗೆ ಅಲ್ಲಿ ಒಮ್ಮೆ ಚಿಕಿತ್ಸೆ ಪಡೆದು ಬಳಿಕ ಮಂಗಳೂರಿನ ಸರ್ಕಾರಿ ವೆನ್ಲಾಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ತೆರಳಿದ್ದೆ. ಅಲ್ಲಿ ಈ ಕಾಯಿಲೆಗೆ ಚಿಕಿತ್ಸೆ ಲಭ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದರು. ಬೆಂಗಳೂರಿನ ಕೆಲವು ಆಸ್ಪತ್ರೆಯಲ್ಲಿ ಇದಕ್ಕೆ ಚಿಕಿತ್ಸೆ ಲಭ್ಯವಿದೆ ಎಂದು ತಿಳಿದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಹಾಗೂ ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಪತ್ರ ಬರೆದಿದ್ದೆ. ಅಲ್ಲಿಂದ ಉತ್ತರ ಬಂದಿರಲಿಲ್ಲ’ ಎಂದು ಚಾಂದಿನಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ಈ ನಡುವೆ ಆರೋಗ್ಯ ಏರುಪೇರಾಗಿದ್ದರಿಂದ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ವೈದ್ಯರ ಸಲಹೆಯಂತೆ ಹೈದರಾಬಾದ್‌ನ ಎಐಜಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದೆ. ಊರಿನವರು ಆಂಬುಲೆನ್ಸ್ ಮಾಡಿಕೊಡುವ ಮೂಲಕ ನೆರವಾಗಿದ್ದರು. ಚಿಕಿತ್ಸೆ ವೆಚ್ಚ ಭರಿಸುವ ಬಗ್ಗೆ ಆರೋಗ್ಯ ಇಲಾಖೆಯಿಂದ ಪತ್ರ ಬಾರದ ಕಾರಣಕ್ಕೆ ಎಐಜಿ ಆಸ್ಪತ್ರೆಯವರು ಎರಡು ಸಲ ಚಿಕಿತ್ಸೆ ನಿಲ್ಲಿಸಿದ್ದರು. ಸರ್ಕಾರದಿಂದ ಭರವಸೆ ಸಿಗುತ್ತಿದೆಯಾದರೂ, ಚಿಕಿತ್ಸೆಗೆ ಹಣದ ನೆರವು ಸಿಗುತ್ತಿಲ್ಲ. ಹಾಗಾಗಿ ದಯಾಮರಣ ಕೋರಿ ಈ ಪತ್ರ ಬರೆಯುತ್ತಿದ್ದೇನೆ’ ಎಂದು ಅವರು ಉಲ್ಲೇಖಿಸಿದ್ದಾರೆ.

ಈ  ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂಪಿ, ‘ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತರಲು ಡಿಎಚ್‌ಒ ಈಗಾಗಲೇ  ಕ್ರಮವಹಿಸಿದ್ದಾರೆ’ ಎಂದರು. ಪರಿಶಿಷ್ಟ ಪಂಗಡಕ್ಕೆ ಸೇರಿದ ಧನಂಜಯ ನಾಯ್ಕ್ ಅವರ ಮಗಳಾದ ಚಾಂದಿನಿ ಅವರಿಗೆ ಮದುವೆಯಾಗಿದ್ದು, ಒಂದು ಮಗುವಿದೆ.

‘ಬದುಕುವ ಹಕ್ಕನ್ನು  ಗೌರವಿಸಲಿ’:

ಆರೋಗ್ಯ ಇಲಾಖೆ ತಕ್ಷಣ ಸ್ಪಂದಿಸಿ ಚಾಂದಿನಿ ಅವರ ಚಿಕಿತ್ಸೆಗೆ ನೆರವಾಗುವ ಮೂಲಕ ಅವರನ್ನು ಬದುಕಿಸಬೇಕು‘ ಎಂದು ದಾರಿ ಸಂಘಟನೆಯ ರವಿ ಬಂಗೇರ ತಿಳಿಸಿದರು. ದಾರಿ ಸಂಘಟನೆಯು ಚಾಂದಿನಿ ಅವರ ಹೋರಾಟಕ್ಕೆ ನೆರವಾಗುತ್ತಿದೆ. 

‘ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಂದೇಶ’

ಡಿಎಚ್‌ಒ ಡಾ.ಎಚ್‌.ಆರ್‌.ತಿಮ್ಮಯ್ಮ ಅವರಿಗೆ   ಚಾಂದಿನಿ ಅವರು ಜೂನ್‌ 21ರಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ಕಳುಹಿಸಿದ್ದರು. ‘ನನ್ನ ಸಾವಿಗೆ ಆರೋಗ್ಯ ಸಚಿವರು ಸುಳ್ಯ ಕ್ಷೇತ್ರದ ಶಾಸಕರು ಡಿಎಚ್‌ಒ ಹೊಣೆ’ ಎಂದು ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಡಿಎಚ್‌ಒ ‘ದುಡುಕಿನ ನಿರ್ಧಾರ ಕೈಗೊಳ್ಳಬೇಡಿ. ಚಿಕಿತ್ಸೆಗೆ ನೆರವಾಗುವ ಬಗ್ಗೆ ಈಗಾಗಲೇ ರಾಜ್ಯ ಸರ್ಕಾರ ಉನ್ನತ ಅಧಿಕಾರಿಗಳ ಜೊತೆ ಚರ್ಚಿಸಿದ್ದೇವೆ’ ಎಂದು ಪತ್ರ ಬರೆದಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT