ಶನಿವಾರ, ಡಿಸೆಂಬರ್ 3, 2022
28 °C
ಮಂಗಳೂರು ಗ್ರಾಮಾಂತರ, ಬಂಟ್ವಾಳದಲ್ಲಿ ಅಧಿಕ ; ಮುನ್ನೆಚ್ಚರಿಕೆ ಅಗತ್ಯ

ಕರಾವಳಿಯನ್ನು ಕಾಡುತ್ತಿರುವ ಕೆಂಗಣ್ಣು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕೆಂಪುಕಣ್ಣು (ಕೆಂಗಣ್ಣು) ಕಾಯಿಲೆ ಜಿಲ್ಲೆಯಲ್ಲಿ ವ್ಯಾಪಿಸಿದ್ದು, ಎರಡು ವಾರಗಳಲ್ಲಿ ಜಿಲ್ಲೆಯಲ್ಲಿ ಸುಮಾರು 2,500 ಜನರನ್ನು ಬಾಧಿಸಿದೆ. ಮಂಗಳೂರು ಗ್ರಾಮಾಂತರ, ಬಂಟ್ವಾಳ ತಾಲ್ಲೂಕುಗಳಲ್ಲಿ ಇದು ಹೆಚ್ಚು ಹರಡಿದೆ.

‘ಇದು ವೈರಸ್‌ನಿಂದ ಹರಡುವ ಸಾಂಕ್ರಾಮಿಕ ಕಾಯಿಲೆ ಆಗಿದ್ದರಿಂದ ಇನ್ನೂ ಎರಡು ವಾರ ಮುಂದುವರಿಯಬಹುದು. ಸಾರ್ವಜನಿಕರು ಸಾಧ್ಯವಾದಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಕೆಂಗಣ್ಣಿಗೆ ತುತ್ತಾದವರು ಸಾರ್ವಜನಿಕ ಪ್ರದೇಶಕ್ಕೆ ಬರದೆ ಮನೆಯಲ್ಲೇ ಇರಬೇಕು. ಕಣ್ಣನ್ನು ಪದೇ ಪದೇ ಮುಟ್ಟುವುದರಿಂದ, ಬಟ್ಟೆಯ ಮೂಲಕ ರೋಗ ಹರಡುತ್ತದೆ. ಸಾಮಾನ್ಯವಾಗಿ ಮೂರರಿಂದ ಐದು ದಿನಗಳವರೆಗೆ ಇದು ಕಾಡುತ್ತದೆ. ಕೆಲವರಿಗೆ ಬೇಗ ಗುಣವಾಗುತ್ತದೆ. ಕೆಂಗಣ್ಣು ಬಂದವರು ಕನ್ನಡಕ ಧರಿಸುವುದು ಉತ್ತಮ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್‌ಕುಮಾರ್ ತಿಳಿಸಿದರು.

‘ಶಾಲೆಗಳಲ್ಲಿ ಮಕ್ಕಳು ಒಟ್ಟಿಗೆ ಕುಳಿತುಕೊಳ್ಳುವ ಕಾರಣ, ಕೆಂಗಣ್ಣಿಗೆ ತುತ್ತಾದವರು ಮನೆಯಲ್ಲೇ ಆರೈಕೆ ಪಡೆಯುವಂತೆ ತಿಳಿಸಲಾಗಿದೆ. ಸರ್ಕಾರಿ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಔಷಧದ ಲಭ್ಯತೆ ಇದೆ. ಆ್ಯಂಟಿಬಯಾಟಿಕ್ ಡ್ರಾಪ್ಸ್ ಹಾಕುವುದರಿಂದ ಕಾಯಿಲೆ ಕಡಿಮೆ ಆಗುತ್ತದೆ. ನೋವು ಬಾಧಿಸಿದರೆ, ಪಾರಾಸಿಟಮೋಲ್ ಮಾತ್ರೆ ಬೇಕಾಗಬಹುದು’ ಎಂದು ವಿವರಿಸಿದರು.

‘ಸರ್ಕಾರಿ ಆಸ್ಪತ್ರೆಯಲ್ಲಿ ಯಾವುದೇ ಔಷಧದ ಕೊರತೆ ಇಲ್ಲ. ರಾಜ್ಯ ಮಟ್ಟದಲ್ಲಿ ಔಷಧ ಸಂಗ್ರಹ ವಿಳಂಬವಾದಾಗ, ಕೆಲವೊಮ್ಮೆ ಜಿಲ್ಲಾ ಕೇಂದ್ರಗಳಿಗೆ ಬರಲು ತಡವಾಗುತ್ತದೆ. ಯಾವುದೇ ಔಷಧದ ದಾಸ್ತಾನು ಇಲ್ಲದಿದ್ದರೆ, ಆಸ್ಪತ್ರೆಗೆ ಲಭ್ಯವಿರುವ ಅನುದಾನದಲ್ಲಿ ಅಗತ್ಯ ಔಷಧ ಖರೀದಿಸುವಂತೆ ಸೂಚಿಸಲಾಗಿದೆ. ಪಾರಾಸಿಟಮೋಲ್ ಸೇರಿದಂತೆ ಎಲ್ಲ ಔಷಧಗಳೂ ಲಭ್ಯ ಇವೆ’ ಎಂದು ಸ್ಪಷ್ಟಪಡಿಸಿದರು.

ಶಾಲೆಗೆ ಕಳುಹಿಸದಂತೆ ಸೂಚನೆ: ಕೆಂಪುಕಣ್ಣು ತಗುಲಿರುವ ಮಕ್ಕಳನ್ನು ಐದು ದಿನ ಶಾಲೆಗೆ ಕಳುಹಿಸದಂತೆ ಜಿಲ್ಲಾ ಶಿಕ್ಷಣ ಇಲಾಖೆ ಜ್ಞಾಪನಪತ್ರ ಹೊರಡಿಸಿದೆ. ಇದು ಶೀಘ್ರ ಹರಡುವ ಕಾಯಿಲೆ ಆಗಿದ್ದರಿಂದ, ಮಕ್ಕಳು ಮನೆಯಲ್ಲೇ ಇರುವಂತೆ ಪೋಷಕರು ಮನವರಿಕೆ ಮಾಡಬೇಕು ಎಂದು ಜಿಲ್ಲಾ ದಿವ್ಯಾಂಗ ಉಪನಿರ್ದೇಶಕರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು