ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟದಲ್ಲಿರುವ ಕನ್ನಡಿಗರನ್ನು ಕರೆತನ್ನಿ

ಕಾಂಗ್ರೆಸ್‌ ನಿಯೋಗದಿಂದ ಸಚಿವ ಕೋಟ ಶ್ರೀನಿವಾಸ ಪೂಜಾರಿಗೆ ಆಗ್ರಹ
Last Updated 2 ಜೂನ್ 2020, 10:13 IST
ಅಕ್ಷರ ಗಾತ್ರ

ಮಂಗಳೂರು: ಮಹಾರಾಷ್ಟ್ರ ಸೇರಿದಂತೆ ಹೊರ ರಾಜ್ಯಗಳಲ್ಲಿ ಕೋವಿಡ್‌–19 ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಕನ್ನಡಿಗರನ್ನು ಮರಳಿ ದಕ್ಷಿಣ ಕನ್ನಡ ಜಿಲ್ಲೆಗೆ ಕರೆತರಲು ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಸಮಿತಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಕೆ.ಹರೀಶ್‌ ಕುಮಾರ್‌, ಶಾಸಕ ಯು.ಟಿ.ಖಾದರ್‌ ಮತ್ತು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜ ನೇತೃತ್ವದ ನಿಯೋಗ ಮಂಗಳವಾರ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಭೇಟಿಮಾಡಿ, ಈ ಕುರಿತು ಮನವಿ ಸಲ್ಲಿಸಿತು.

‘ಹೊರ ರಾಜ್ಯಗಳಲ್ಲಿ ದುಡಿಯುತ್ತಿದ್ದ ಕನ್ನಡಿಗರು ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಗೆ ಬರಲು ಅನುಮತಿ ಕೋರಿ 50,000ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿ, ಕಾಯುತ್ತಿದ್ದಾರೆ. ಈ ಕುರಿತು ಜಿಲ್ಲಾಡಳಿತ ಯಾವುದೇ ನಿರ್ಧಾರ ಕೈಗೊಳ್ಳದೇ ಇರುವುದರಿಂದ ಅವರು ಅತಂತ್ರರಾಗಿದ್ದಾರೆ. ತಕ್ಷಣವೇ ಈ ಎಲ್ಲ ಜನರನ್ನೂ ಜಿಲ್ಲೆಗೆ ಕರೆತರಲು ಅಗತ್ಯ ವ್ಯವಸ್ಥೆ ಮಾಡಬೇಕು’ ಎಂದು ನಿಯೋಗ ಒತ್ತಾಯಿಸಿತು.

ಕ್ವಾರಂಟೈನ್‌ಗೆ ಆಗ್ರಹ

‘ವಿದೇಶಗಳಲ್ಲಿರುವ ಕರಾವಳಿಯ ಜನರೂ ಇಲ್ಲಿಗೆ ಮರಳುವುದಕ್ಕೆ ಕಾಯುತ್ತಿದ್ದಾರೆ. ಅವರನ್ನು ಕರೆತರುವುದಕ್ಕೂ ವ್ಯವಸ್ಥೆ ಮಾಡಿ. ವಿದೇಶ ಮತ್ತು ಹೊರ ರಾಜ್ಯಗಳಿಂದ ಬರುವ ಎಲ್ಲರನ್ನೂ ನಿಗದಿತ ಅವಧಿಯವರೆಗೆ ಕ್ವಾರಂಟೈನ್‌ನಲ್ಲಿ ಇರಿಸಲು ವ್ಯವಸ್ಥೆ ಮಾಡಬೇಕು’ ಎಂದು ಯು.ಟಿ.ಖಾದರ್‌ ಆಗ್ರಹಿಸಿದರು.

ಗುಜರಾತ್‌, ಉತ್ತರ ಪ್ರದೇಶ, ಜಾರ್ಖಂಡ್‌, ಬಿಹಾರ ಸೇರಿದಂತೆ ಹೊರ ರಾಜ್ಯಗಳ ಸಾವಿರಾರು ವಲಸೆ ಕಾರ್ಮಿಕರು ಇನ್ನೂ ಜಿಲ್ಲೆಯಲ್ಲೇ ಇದ್ದಾರೆ. ಊರಿಗೆ ಮರಳಲು ಅವರು ಕಾಯುತ್ತಿದ್ದಾರೆ. ಅಂತಹ ಎಲ್ಲ ಕಾರ್ಮಿಕರನ್ನು ತವರಿಗೆ ಕಳುಹಿಸಲು ಅಗತ್ಯವಿರುವ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ತ್ವರಿತವಾಗಿ ಮಾಡಬೇಕು ಎಂದು ಒತ್ತಾಯಿಸಿದರು.

ಸಂಕಷ್ಟದಲ್ಲಿರುವ ಖಾಸಗಿ ಬಸ್‌ ಸಿಬ್ಬಂದಿ, ಬೀಡಿ ಕಾರ್ಮಿಕರು, ಟೈಲರ್‌ಗಳು, ಗ್ಯಾರೇಜ್‌ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳಿಗೆ ತುರ್ತಾಗಿ ನೆರವು ನೀಡಬೇಕು. ಖಾಸಗಿಯಾಗಿ ಕೋವಿಡ್‌–19 ಪರೀಕ್ಷೆ ಮಾಡಿಸಿಕೊಳ್ಳುವವರಿಗೆ ಕಡಿಮೆ ದರ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.

ಆಸ್ಪತ್ರೆ ತೆರೆಯಿರಿ: ‘ವೆನ್ಲಾಕ್‌ ಜಿಲ್ಲಾ ಸರ್ಕಾರಿ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೋವಿಡ್‌ ಚಿಕಿತ್ಸಾ ಆಸ್ಪತ್ರೆಯನ್ನಾಗಿ ಪರಿವರ್ತಿಸಿರುವುದರಿಂದ ಬಡವರಿಗೆ ತುಂಬಾ ತೊಂದರೆ ಆಗಿದೆ. ಆಸ್ಪತ್ರೆಯ ಕೆಲ ಭಾಗವನ್ನು ತಕ್ಷಣವೇ ಸಾಮಾನ್ಯ ಚಿಕಿತ್ಸೆಗೆ ತೆರೆಯಬೇಕು’ ಎಂದು ನಿಯೋಗ ಮನವಿ ಮಾಡಿತು.

ಗಡಿ ತೆರೆಯಲು ಆಗ್ರಹ

ಕರ್ನಾಟಕ–ಕೇರಳ ನಡುವೆ ಸಂಪರ್ಕ ಕಲ್ಪಿಸುವ ತಲಪಾಡಿ ಗಡಿಯಲ್ಲಿ ಇನ್ನೂ ನಿರ್ಬಂಧ ಇರುವುದರಿಂದ ಜನರಿಗೆ ತೊಂದರೆ ಆಗಿದೆ. ಉದ್ಯೋಗ, ಶಿಕ್ಷಣ ಮತ್ತು ಚಿಕಿತ್ಸೆಯ ಕಾರಣದಿಂದ ಮುಕ್ತವಾಗಿ ಓಡಾಡಲು ಗಡಿಯನ್ನು ತೆರೆಯಬೇಕು. ಎರಡೂ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸಭೆ ನಡೆಸಿ ತ್ವರಿತವಾಗಿ ನಿರ್ಧಾರ ಕೈಗೊಳ್ಳಬೇಕು ಎಂದು ಕಾಂಗ್ರೆಸ್‌ ನಿಯೋಗ ಒತ್ತಾಯಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT