ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೆಲೆ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್‌’

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್
Last Updated 31 ಡಿಸೆಂಬರ್ 2020, 13:57 IST
ಅಕ್ಷರ ಗಾತ್ರ

ಮಂಗಳೂರು: ‘ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು ಅಭೂತ ಪೂರ್ವ ಜಯ ಸಾಧಿಸಿದ್ದು, ಕಾಂಗ್ರೆಸ್‌ ಸಾಂಪ್ರದಾಯಿಕ ಮತಗಳನ್ನು ಕಳೆದುಕೊಂಡಿರುವುದು ಮಾತ್ರವಲ್ಲ, ಅದರ ಅಸ್ತಿತ್ವವೂ ಅಲುಗಾಡುತ್ತಿರುವುದು ಸಾಬೀತಾಗಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹೇಳಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ತನಕದ ಮಾಹಿತಿ ಪ್ರಕಾರ ಬಿಜೆಪಿಯ 29,478, ಕಾಂಗ್ರೆಸ್‌ನ 24,000, ಜೆಡಿಎಸ್‌ನ 18,825 ಹಾಗೂ ಇತರ 9,753 ಬೆಂಬಲಿತರು ಗೆಲುವು ಸಾಧಿಸಿದ್ದಾರೆ. ಬಿಜೆಪಿ ತಳಮಟ್ಟದಲ್ಲಿ ಭದ್ರವಾಗುತ್ತಿದೆ’ ಎಂದರು.

‘ಕಾಂಗ್ರೆಸ್‍ನ ಗೂಂಡಾಗಿರಿ ಪ್ರವೃತ್ತಿ, ಕುತಂತ್ರ ರಾಜಕಾರಣವನ್ನು ಜನತೆ ತಿರಸ್ಕರಿಸಿದ್ದಾರೆ. ಕೆಲವು ಕಡೆ ಕಾಂಗ್ರೆಸ್‍ ಅನ್ನು ತಿರಸ್ಕಾರ ಮಾಡಿ ಎಸ್‍ಡಿಪಿಐ ಕಡೆ ಬೆಂಬಲ ನೀಡಿದ್ದಾರೆ. ಕಾಂಗ್ರೆಸ್‍ನ ಸಂಪ್ರದಾಯಿಕ ಮತಗಳೂ ಕೈ ಬಿಟ್ಟುಹೋಗಿವೆ. ಕಾಂಗ್ರೆಸ್ ಠೇವಣಿ ಉಳಿಸಿಕೊಳ್ಳಲೂ ಪರದಾಡಿದೆ’ ಎಂದು ಅವರು ಲೇವಡಿ ಮಾಡಿದರು.

‘ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರುದ್ಧ ಕಾಂಗ್ರೆಸ್ ಅಪಪ್ರಚಾರ ಮಾಡಿತು. ಜನತೆ ಕಾಂಗ್ರೆಸ್‌ ಅನ್ನೇ ತಿರಸ್ಕರಿಸಿದರು. ಕೃಷಿ ಪ್ರಧಾನವಾಗಿರುವ ಪ್ರದೇಶದಲ್ಲಿ ಬಿಜೆಪಿ ಬೆಂಬಲಿತರು ಗೆದ್ದಿರುವುದೇ ಇದಕ್ಕೆ ಸಾಕ್ಷಿ. ಕೋವಿಡ್‌ ಸಂದರ್ಭದ ಸರ್ಕಾರದ ಆಡಳಿತವನ್ನು ಜನತೆ ಮೆಚ್ಚಿಕೊಂಡಿದ್ದಾರೆ’ ಎಂದು ಶ್ಲಾಘಿಸಿದರು.

‘2020ರ ಎಲ್ಲ ಸವಾಲುಗಳ ಮಧ್ಯೆ ಬಿಜೆಪಿ ಗೆದ್ದಿದೆ. ಈ ಚುನಾವಣೆ ಗೆಲ್ಲಲು ಬಿಜೆಪಿ ನಡೆಸಿದ ಸಂಘಟಿತ ಪ್ರಚಾರ, ಪಂಚತಂತ್ರ, ಪೇಜ್, ಪ್ರಮುಖ್, ಶಕ್ತಿ ಕೇಂದ್ರ, ಕುಟುಂಬ ಮಿಲನ್, ಗ್ರಾಮ ಸ್ವರಾಜ್ಯ ಯಾತ್ರೆಗಳೂ ಕಾರಣ’ ಎಂದರು.

ಎಸ್‍ಡಿಪಿಐ ವಿರುದ್ಧ ಕಠಿಣ ಕ್ರಮ:‘ಉಜಿರೆಯಲ್ಲಿ ವಿಜಯೋತ್ಸವದ ವೇಳೆ ಎಸ್‌ಡಿಪಿಐ ಕಾರ್ಯಕರ್ತರು ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ. ಎಸ್‍ಡಿಪಿಐ ರಾಜಕೀಯ ಪಕ್ಷ ಎಂದುಕೊಂಡಿದ್ದೆವು. ಆದರೆ, ಅದು ಭಯೋತ್ಪಾದನೆಗೆ ಪೂರಕವಾಗಿ ವರ್ತಿಸುತ್ತಿದೆ’ ಎಂದು ಖಂಡಿಸಿದರು.

‘ಎಸ್‍ಡಿಪಿಐ ನಿಷೇಧಿಸುವುದು ಚುನಾವಣಾ ಆಯೋಗದ ವ್ಯಾಪ್ತಿಗೆ ಬರುತ್ತದೆ. ದೇಶ ವಿರೋಧಿ ಕೃತ್ಯಗಳ ಬಗ್ಗೆ ಚುನಾವಣಾ ಆಯೋಗವು ಗಮನಿಸುತ್ತಿದೆ. ರಾಜ್ಯ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತದೆ. ಪಿಎಫ್‍ಐ ಮುಖಂಡರ ಬಂಧನ ಆದಾಗ ಜನಪ್ರತಿನಿಧಿಗಳ ಕಚೇರಿಗೆ ಮುತ್ತಿಗೆ ಹಾಕಿ ಗಲಭೆ ಸೃಷ್ಟಿ ಮಾಡಲು ಯತ್ನಿಸುತ್ತಾರೆ’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ ಮೂಡುಬಿದಿರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ವಕ್ತಾರರಾದ ರವಿಶಂಕರ ಮಿಜಾರು, ರಾಧಾಕೃಷ್ಣ, ಜಗದೀಶ ಶೇಣವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT