ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಮೂವರಿಗೆ ಕೊರೊನಾ ಸೋಂಕು ಪತ್ತೆ

ದ.ಕ.: 22ಕ್ಕೇರಿದ ಕೋವಿಡ್‌–19 ಸೋಂಕಿತರ ಸಂಖ್ಯೆ
Last Updated 7 ಮೇ 2020, 5:58 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನೂ ಮೂವರು ಮಹಿಳೆಯರಿಗೆ ಕೋವಿಡ್‌–19 ಸೋಂಕು ತಗಲಿರುವುದು ಬುಧವಾರ ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 22ಕ್ಕೇರಿದೆ.

‘ಮಂಗಳೂರು ನಗರದ ಬೋಳೂರಿನ 35 ವರ್ಷದ ಮಹಿಳೆ (ಪಿ–675), 11 ವರ್ಷದ ಬಾಲಕಿ (ಪಿ–674) ಮತ್ತು ಬಂಟ್ವಾಳ ತಾಲ್ಲೂಕಿನ ಕಸಬಾ ಗ್ರಾಮದ 16 ವರ್ಷದ ಯುವತಿಯಲ್ಲಿ (ಪಿ–676) ಕೋವಿಡ್‌–19 ಸೋಂಕು ಇರುವುದು ದೃಢಪಟ್ಟಿದೆ. ಮೂವರನ್ನೂ ವೆನ್ಲಾಕ್‌ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ತಿಳಿಸಿದ್ದಾರೆ.

ಪಿ–675 ಮತ್ತು ಪಿ–674 ಪಡೀಲ್‌ನ ಫಸ್ಟ್‌ ನ್ಯೂರೋ ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಸೋಂಕು ತಗಲಿದ್ದ ಬೋಳೂರು ನಿವಾಸಿಯಾಗಿರುವ 58 ವರ್ಷದ ಮಹಿಳೆಯ (ಪಿ–536) ಮಗಳು ಮತ್ತು ಮೊಮ್ಮಗಳು. ಈ ಇಬ್ಬರಿಗೂ ಪಿ–536 ಅವರ ಸಂಪರ್ಕದಿಂದಲೇ ಸೋಂಕು ತಗಲಿದೆ.

ಕ್ವಾರಂಟೈನ್‌ನಲ್ಲಿ ಇದ್ದ ಇಬ್ಬರ ಗಂಟಲಿನ ದ್ರವದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇಬ್ಬರಿಗೂ ಕೋವಿಡ್‌–19 ಸೋಂಕು ತಗಲಿರುವುದು ಬುಧವಾರ ಲಭಿಸಿದ ಪ್ರಯೋಗಾಲಯದ ವರದಿಯಲ್ಲಿ ಖಚಿತವಾಗಿದೆ. ಈ ಇಬ್ಬರ ಸಂಪರ್ಕದಲ್ಲಿದ್ದ ಬಹುತೇಕರು ಈಗಾಗಲೇ ಕ್ವಾರಂಟೈನ್‌ನಲ್ಲಿದ್ದಾರೆ. ಅವರ ಮೇಲೆ ವೈದ್ಯಕೀಯ ನಿಗಾ ಇರಿಸಲಾಗಿದೆ.

ತಾಯಿಯಿಂದ ಮಗಳಿಗೆ: ಬಂಟ್ವಾಳದ ಕಸಬಾ ಗ್ರಾಮದ 16 ವರ್ಷದ ಯುವತಿಯ ತಾಯಿ (ಪಿ–390) ಕೋವಿಡ್‌–19 ಸೋಂಕಿನಿಂದ ಏಪ್ರಿಲ್‌ 19ರಂದು ಮೃತಪಟ್ಟಿದ್ದರು. ಬಳಿಕ ಅವರ ಕುಟುಂಬದ ಎಲ್ಲರನ್ನೂ ಸುರತ್ಕಲ್‌ನ ಎನ್‌ಐಟಿಕೆ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು.

ಯುವತಿಯನ್ನು ಕ್ವಾರಂಟೈನ್‌ನಲ್ಲಿ ಇರಿಸಿದ 12ನೇ ದಿನ ಸಂಗ್ರಹಿಸಿದ್ದ ಗಂಟಲಿನ ದ್ರವದ ಮಾದರಿಯ ಪರೀಕ್ಷಾ ವರದಿ ಬುಧವಾರ ಬಂದಿದೆ. ಯುವತಿಯಲ್ಲಿ ಸೋಂಕು ಇರುವುದು ಖಚಿತವಾಗಿದೆ. ತಾಯಿಯಿಂದಲೇ ಮಗಳಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ.

ಹೆಚ್ಚುತ್ತಲೇ ಇರುವ ಪ್ರಕರಣ:ಮೊದಲ ಹಂತದಲ್ಲಿ ಕಾಣಿಸಿಕೊಂಡ ಕೋವಿಡ್‌–19 ಸೋಂಕು ಜಿಲ್ಲೆಯಲ್ಲಿ ಬಹುತೇಕ ನಿಯಂತ್ರಣಕ್ಕೆ ಬಂದಿತ್ತು. ಬಂಟ್ವಾಳದ ಕಸಬಾ ನಿವಾಸಿಯಾಗಿದ್ದ ಪಿ–390 ಅವರಲ್ಲಿ ಸೋಂಕು ಪತ್ತೆಯಾದ ಬಳಿಕ ಈ ಸಂಖ್ಯೆ ಏರುತ್ತಲೇ ಇದೆ. ಜಿಲ್ಲೆಯ ನಿವಾಸಿಗಳೇ ಆಗಿರುವ 25 ಜನರಲ್ಲಿ ಈವರೆಗೆ ಸೋಂಕು ದೃಢಪಟ್ಟಿದೆ. ಕೇರಳದ ನಾಲ್ವರು, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ತಲಾ ಒಬ್ಬರಿಗೆ ಜಿಲ್ಲೆಯಲ್ಲೇ ಚಿಕಿತ್ಸೆ ನೀಡಲಾಗಿದೆ.

‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ 79 ಜನರ ಆರೋಗ್ಯ ತಪಾಸಣೆ ನಡೆಸಲಾಗಿದೆ. ಕೋವಿಡ್‌–19 ಸೋಂಕಿನ ಶಂಕಿತ ಲಕ್ಷಣಗಳುಳ್ಳ 23 ಜನರನ್ನು ವೈದ್ಯಕೀಯ ನಿಗಾಕ್ಕಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿವಿಧ ಆಸ್ಪತ್ರೆಗೆ ದಾಖಲಾಗಿರುವ ಏಳು ರೋಗಿಗಳಲ್ಲಿ ಉಸಿರಾಟದ ತೀವ್ರ ಸಮಸ್ಯೆ (ಎಸ್‌ಎಆರ್‌ಐ) ಇರುವುದು ಕಂಡುಬಂದಿದೆ. ಅವರ ಆರೋಗ್ಯ ಸ್ಥಿತಿಯ ಮೇಲೂ ನಿಗಾ ಇಡಲಾಗಿದೆ. ಜಿಲ್ಲೆಯ ಜ್ವರ ಕ್ಲಿನಿಕ್‌ಗಳಲ್ಲಿ 50 ಜನರ ಆರೋಗ್ಯ ತಪಾಸಣೆ ನಡೆಸಲಾಗಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

85 ವರದಿ ನೆಗೆಟಿವ್‌: ಬುಧವಾರ ಒಟ್ಟು 88 ಜನರ ಗಂಟಲಿನ ದ್ರವದ ಮಾದರಿಗಳ ಪರೀಕ್ಷಾ ವರದಿಗಳು ಬಂದಿವೆ. ಮೂವರಲ್ಲಿ ಮಾತ್ರ ಸೋಂಕು ದೃಢಪಟ್ಟಿದೆ. 85 ಜನರಲ್ಲಿ ಸೋಂಕು ಇಲ್ಲ (ನೆಗೆಟಿವ್‌) ಎಂಬ ವರದಿಗಳು ಬಂದಿವೆ. ಬುಧವಾರ ಸಂಗ್ರಹಿಸಿರುವ 137 ಜನರ ಗಂಟಲಿನ ದ್ರವದ ಮಾದರಿಗಳೂ ಸೇರಿದಂತೆ 217 ಮಾದರಿಗಳ ಪರೀಕ್ಷಾ ವರದಿಗಳು ಇನ್ನಷ್ಟೇ ಬರಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT