ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

91 ಮಂದಿಗೆ ಸೋಂಕು ಮತ್ತೆ ಮೂವರು ಸಾವು

ಕೋವಿಡ್‌ನಿಂದ ಮತ್ತೆ ಮೂವರು ಸಾವು
Last Updated 14 ಜುಲೈ 2020, 17:30 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ 91 ಜನರಿಗೆ ಕೋವಿಡ್‌–19 ಸೋಂಕು ತಗುಲಿರುವುದು ಮಂಗಳವಾರ ದೃಢಪ
ಟ್ಟಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,452ಕ್ಕೆ ತಲುಪಿದೆ.

‘ಸೋಂಕಿತರ ಪ್ರಾಥಮಿಕ ಸಂಪರ್ಕಿತರಾಗಿದ್ದ 20 ಮಂದಿ, ಶೀತ ಜ್ವರದಿಂದ (ಐಎಲ್‌ಐ) ಆಸ್ಪತ್ರೆಗೆ ದಾಖಲಾಗಿದ್ದ 29 ಜನರು, ಉಸಿರಾಟದ ತೀವ್ರತೊಂದರೆ ಎದುರಿಸುತ್ತಿದ್ದ (ಎಸ್‌ಎಆರ್‌ಐ) ಐವರು, ವಿದೇಶದಿಂದ ಬಂದಿರುವ ಒಬ್ಬರು, ಶಸ್ತ್ರಚಿಕಿತ್ಸೆಗೆ ಆಸ್ಪತ್ರೆಗೆಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಉಳಿದ 35 ಜನರಿಗೆ ಸೋಂಕು ಯಾವ ಮೂಲದಿಂದ ಬಂದಿದೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ’ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ತಿಳಿಸಿದ್ದಾರೆ.

ಮಂಗಳವಾರ ಒಟ್ಟು 179 ಜನರ ಗಂಟಲಿನ ದ್ರವದ ಮಾದರಿಗಳ ಪರೀಕ್ಷಾ ವರದಿಗಳು ಬಂದಿವೆ. 91 ಜನರಲ್ಲಿ ಸೋಂಕು ದೃಢಪಟ್ಟಿದ್ದರೆ, 88 ಜನರ ವರದಿಗಳು ನೆಗೆಟಿವ್‌ ಆಗಿವೆ. ಸೋಂಕಿತರಲ್ಲಿ ಒಂದು ವರ್ಷದ ಮಗುವಿನಿಂದ 72 ವರ್ಷದ ವೃದ್ಧರವರೆಗೂ ಇದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 25,129 ಜನರ ಗಂಟಲಿನ ದ್ರವದ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ಪೈಕಿ 22,677 ಜನರ ವರದಿಗಳು ನೆಗೆಟಿವ್‌ ಆಗಿವೆ.

47 ರೋಗಿಗಳು ಗುಣಮುಖ: ವೆನ್ಲಾಕ್‌ ಕೋವಿಡ್‌ ಆಸ್ಪತ್ರೆ ಹಾಗೂ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯು
ತ್ತಿದ್ದ 47 ಕೋವಿಡ್‌ ರೋಗಿಗಳು ಗುಣಮುಖರಾಗಿ ಮಂಗಳವಾರ ಮನೆಗಳಿಗೆ ಮರಳಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 985 ಮಂದಿ ಕೋವಿಡ್‌ ಸೋಂಕಿನಿಂದ ಗುಣಮುಖರಾಗಿದ್ದು, ಸದ್ಯ 1,414 ಸಕ್ರಿಯ ಪ್ರಕರಣಗಳಿವೆ.

ಮೂವರು ಸಾವು: ಸೋಮವಾರ ತಡರಾತ್ರಿ ಮೃತಪಟ್ಟ ಇಬ್ಬರು ಮತ್ತು ಮಂಗಳವಾರ ಮೃತಪಟ್ಟ ಒಬ್ಬರಲ್ಲಿ ಕೋವಿಡ್‌ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತರ ಸಾವಿನ ಸಂಖ್ಯೆ 53ಕ್ಕೇರಿದೆ.

ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಆಸ್ತಮಾ ಸಮಸ್ಯೆಗಳಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ನಗರದ ಆಸ್ಪತ್ರೆಗೆ ದಾಖಲಾಗಿದ್ದ ಹಾಸನ ಜಿಲ್ಲೆಯ ಸಕಲೇಶಪುರದ 65 ವರ್ಷ ವಯಸ್ಸಿನ ಮಹಿಳೆಯನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಅವರು ಸೋಮವಾರ ಮೃತಪಟ್ಟಿದ್ದು, ಕೋವಿಡ್‌ ಸೋಂಕು ತಗುಲಿರುವುದು ದೃಢಪಟ್ಟಿದೆ. ಉಸಿರಾಟದ ತೀವ್ರ ತೊಂದರೆಯಿಂದ ನಗರದ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದ ಉಡುಪಿ ಜಿಲ್ಲೆಯ ಕುಂದಾಪುರದ 55 ವರ್ಷದ ಪುರುಷ ಕೂಡ ಸೋಮವಾರ ಮೃತಪಟ್ಟಿದ್ದು, ಅವರಲ್ಲೂ ಕೋವಿಡ್‌ ಸೋಂಕು ಪತ್ತೆಯಾಗಿದೆ.

ಶ್ವಾಸಕೋಶದ ಸೋಂಕು, ಅಧಿಕರಕ್ತದೊತ್ತಡದಿಂದ ಬಳಲುತ್ತಿದ್ದ ಮಂಗಳೂರಿನ 70 ವರ್ಷದ ಮಹಿಳೆಗೆತೀ ಚಿಕಿತ್ಸೆ
ನೀಡಲಾಗುತ್ತಿತ್ತು. ಅವರು ಚಿಕಿತ್ಸೆಗೆ ಸ್ಪಂದಿಸದೇ ಮಂಗಳವಾರ ಮೃತಪಟ್ಟಿದ್ದಾರೆ. ಅವರಿಗೂ ಕೋವಿಡ್‌ ಸೋಂಕು ತಗುಲಿರುವುದು ಖಚಿತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT