ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ಲಸಿಕೆ: ಆಸ್ಪತ್ರೆ ನಗರಿ ಸಜ್ಜು

ದ.ಕ ಜಿಲ್ಲೆಯಲ್ಲಿ 15 ರಿಂದ 18 ವರ್ಷದೊಳಗಿನವರಿಗೆ ಇಂದಿನಿಂದ ಲಸಿಕಾ ಅಭಿಯಾನ
Last Updated 3 ಜನವರಿ 2022, 2:33 IST
ಅಕ್ಷರ ಗಾತ್ರ

ಮಂಗಳೂರು: ಆಸ್ಪತ್ರೆಗಳ ನಗರ, ಕರಾವಳಿ ಜಿಲ್ಲೆಯ ಮಂಗಳೂರಿನಲ್ಲಿ ಕೋವಿಡ್‌ನ ಸಂಭಾವ್ಯ 3ನೇ ಅಲೆಯನ್ನು ತಡೆಯಲು, ಜಿಲ್ಲಾಡಳಿ ಹಾಗೂ ಆರೋಗ್ಯ ಇಲಾಖೆಯು 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಲು ಯುದ್ಧೋಪಾದಿ ಸಿದ್ಧತೆ ಮಾಡಿಕೊಂಡಿದೆ.

ಕೋವಿಡ್‌ ಎದುರಿಸಲು ಸದ್ಯಕ್ಕೆ ಇರುವ ಏಕೈಕ ಆಯ್ಕೆ ಎಂದರೆ ಲಸಿಕೆ ಹಾಕಿಸಿಕೊಳ್ಳುವುದು. ಈವರೆಗೆ 18 ವರ್ಷ ವಯಸ್ಸು ಮೀರಿದವರಿಗೆ ಮಾತ್ರ ಲಸಿಕೆ ಹಾಕುವ ಯೋಜನೆ ಇತ್ತು. ಈಗ 15ರಿಂದ 18ವರ್ಷ ವಯಸ್ಸಿನೊಳಗಿನವರಿಗೂ ಲಸಿಕೆ ನೀಡಲು ಸರ್ಕಾರದಿಂದ ಅನುಮತಿ ಲಭಿಸಿದೆ. ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಪಾಲಿಕೆ ವ್ಯಾಪ್ತಿಯಲ್ಲಿ ಈ ವಯೋಮಾನದವರಿಗೆ ಜನವರಿ 3ರಿಂದ ಲಸಿಕೆ ನೀಡುವ ಅಭಿಯಾನ ಆರಂಭವಾಗಲಿದೆ. ಇದಕ್ಕೆ ಬೇಕಾದ ವೈದ್ಯಕೀಯ ಸಿಬ್ಬಂದಿ, ಲಸಿಕೆ, ತಜ್ಞರು, ಚಿಕಿತ್ಸಕರು, ಶುಶ್ರೂಷಕರು, ಜನಪ್ರತಿನಿಧಿಗಳು, ಆರೋಗ್ಯ ಕಾರ್ಯಕರ್ತರು, ಆಸ್ಪತ್ರೆ ಸಿಬ್ಬಂದಿ ಎಲ್ಲವನ್ನೂ ಸಿದ್ಧಗೊಳಿಸಲಾಗಿದೆ. ಮಕ್ಕಳಪೋಷಕರಲ್ಲೂ ಜಾಗೃತಿ ಮೂಡಿಸಲಾಗಿದೆ. ಸೋಮವಾರ, ಜಿಲ್ಲೆಯಲ್ಲಿ 100 ಶಾಲಾ ಹಾಗೂ ಕಾಲೇಜುಗಳಲ್ಲಿ ಏಕಕಾಲದಲ್ಲಿ ಲಸಿಕೆ ನೀಡುವ ಪ್ರಕ್ರಿಯೆ ಶುರುವಾಗಲಿದೆ.ಮೊದಲ ದಿನವೇ 15 ಸಾವಿರ ಮಕ್ಕಳಿಗೆ ಲಸಿಕೆ ನೀಡುವ ಗುರಿ ಇದೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಈ ಸಂಬಂಧ ಈಗಾಗಲೇ ಮೂರು ಸಭೆಗಳನ್ನು ನಡೆಸಿದ್ದಾರೆ. ಮಕ್ಕಳಿಗೆ ಕೋವಿಡ್‌ ತಡೆಯ ಲಸಿಕೆ ನೀಡುವಾಗ ಎದುರಾಗಬಹುದಾದ ಸವಾಲುಗಳನ್ನು ಎದುರಿಸಲು ಬೇಕಾದ ತರಬೇತಿಯನ್ನು ಪ್ರತಿ ಶಾಲೆ ಹಾಗೂ ಕಾಲೇಜು ಹಂತದ ಶಿಕ್ಷಕರಿಗೆ ನೀಡಲಾಗಿದೆ. ವಿದ್ಯಾರ್ಥಿಗಳ ಆಧಾರ್‌ ಹಾಗೂ ಮೊಬೈಲ್‌ ಸಂಖ್ಯೆಯ ವಿವರಗಳನ್ನು ಈಗಾಗಲೇ ಸಂಗ್ರಹಿಸಲಾಗಿದೆ.

‘ಮಕ್ಕಳಿಗೆ ಕೋವ್ಯಾಕ್ಸಿನ್‌ ಲಸಿಕೆ ಮಾತ್ರ ನೀಡಲಾಗುವುದು. ಈ ವಿಚಾರದಲ್ಲಿ ಪಾಲಕರಲ್ಲಿ ಮೂಡಬಹುದಾದ ಪ್ರಶ್ನೆ ಹಾಗೂ ಆತಂಕ ದೂರ ಮಾಡಲು ತಜ್ಞ ವೈದ್ಯರ ತಂಡವೂ ಸಿದ್ದಗೊಂಡಿದೆ. ಪ್ರತಿ ಶಿಕ್ಷಣ ಸಂಸ್ಥೆಯಲ್ಲಿ ವೈದ್ಯಾಧಿಕಾರಿ ಹಾಗೂ ಆಯಾ ಶಾಲೆಯ ಮುಖ್ಯ ಶಿಕ್ಷಕರು ವಿದ್ಯಾರ್ಥಿ ಮತ್ತು ಪೋಷಕರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿದ್ದಾರೆ. ಲಸಿಕೆಯ ಬಗ್ಗೆ ಭಯ, ಗೊಂದಲ ಇರುವಂತಹ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತಜ್ಞ ವೈದ್ಯರ ಮೂಲಕ ಸಲಹೆ ಕೊಡಲಾಗುತ್ತದೆ. ಲಸಿಕೆ ಅಭಿಯಾನವು ಜಿಲ್ಲೆಯಲ್ಲಿ ಯಶಸ್ವಿ ಆಗುವುದೆಂಬ ವಿಶ್ವಾವಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕುಮಾರ್‌ ಹೇಳಿದರು.

ಜಿಲ್ಲೆಯ ಸುಮಾರು 1.7 ಲಕ್ಷ ಅರ್ಹ ವಿದ್ಯಾರ್ಥಿಗಳ ಪಟ್ಟಿಯನ್ನು ರಾಜ್ಯದಿಂದ ನೀಡಲಾಗಿದೆ. ಪಟ್ಟಿಯಿಂದ ಯಾರಾದರೂ ಹೊರಗೆ ಉಳಿದಿದ್ದರೆ ಅಂಥವರನ್ನು ಪತ್ತೆ ಮಾಡಿ ಲಸಿಕೆ ನೀಡುವುದಕ್ಕೆ ಆದ್ಯತೆ ನೀಡಲಾಗುವುದು. ಮೊದಲ ಡೋಸ್‌ ಕೊಟ್ಟ 28 ದಿನಗಳ ನಂತರ ಎರಡನೇ ಡೋಸ್‌ ಲಸಿಕೆ ನೀಡುವವರ ಪಟ್ಟಿ ಕೂಡ ಸಿದ್ಧವಾಗುತ್ತದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಚನ್ನಬಸಪ್ಪ ತಿಳಿಸಿದರು.‘ಲಸಿಕೆ ವಿಚಾರವಾಗಿ ಯಾವುದೇ ಸಮಸ್ಯೆ ಬಂದರೂ ಅದನ್ನು ಸಮರ್ಥವಾಗಿ ನಿಭಾಯಿಸುತ್ತೆವೆ. ಸೋಂಕು ತಡೆಗೆ ಬೇಕಾದ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು’ ಎಂದು ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ. ರಾಜೇಶ್‌ ತಿಳಿಸಿದರು.

ಮಹಾನಗರ ಪಾಲಿಕೆಯ 10 ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು ನಮ್ಮ ಜತೆಗೆ ಕೈಜೋಡಿಸಿದ್ದಾರೆ. ಲಸಿಕೆ ಹಾಕಿಸಿಕೊಳ್ಳುವವರು ಬಾಕಿ ಇರುವವರ ಮನವೊಲಿಸುವ ಕೆಲಸ ಮಾಡಲಾಗುತ್ತದೆ. ಮಂಗಳೂರಿನ ಮಕ್ಕಳ ತಜ್ಞ ವೈದ್ಯ ಸಂಘವೂ ಲಸಿಕಾ ಅಭಿಯಾನದಲ್ಲಿ ಕೈ ಜೋಡಿಸಿದೆ ಎಂದು ಮಹಾನಗರ ಪಾಲಿಕೆಯ ಕೋವಿಡ್‌ ನೋಡಲ್‌ ಅಧಿಕಾರಿ ಡಾ. ಅಣ್ಣಯ್ಯ ಕುಲಾಲ್‌ ತಿಳಿಸಿದರು.

‘ಧೈರ್ಯ ತುಂಬುವ ಕೆಲಸ’

‘ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಲಸಿಕೆಯ ಮಹತ್ವ ಹಾಗೂ ಸೋಂಕು ತಡೆಯುವಲ್ಲಿ ಅನುಸರಿಸುವ ಮಾರ್ಗಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಈವರೆಗೆ ಲಸಿಕೆ ಹಾಕಿಸಿಕೊಂಡವರಿಗೆ ಯಾವುದೇ ಹಾನಿ ಆಗಿರುವ ಉದಾಹರಣೆ ಇಲ್ಲ. ಈ ಹಿಂದೆ ಲಸಿಕೆ ಹಾಕಿಸಿಕೊಳ್ಳದೆ ಇದ್ದವರಲ್ಲಿ ಜಾಗೃತಿ ಮೂಡಿಸುವುದಕ್ಕೆ ಶಾಲೆಗಳ ಮೂಲಕ ಪತ್ರ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಅದರಂತೆ ಶಾಲೆಯ ವಿದ್ಯಾರ್ಥಿಗಳು ಕೂಡ ಪಟ್ಟಿಯನ್ನು ಶಾಲೆಗೆ ತಂದುಕೊಟ್ಟಿದ್ದರು. ಮಕ್ಕಳ ಮೂಲಕ ನಡೆಸಿದ ಅಭಿಯಾನ ಯಶಸ್ವಿಯಾಗಲಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ. ಕುಮಾರ್‌ ತಿಳಿಸಿದರು.

‘ಸರ್ಕಾರದ ದಿಟ್ಟ ಹೆಜ್ಜೆ’

‘ಮಕ್ಕಳಿಗೆ ಲಸಿಕೆ ನೀಡುವ ಅಭಿಯಾನ ಉತ್ತಮವಾಗಿದ್ದು. ಈ ಕಾರ್ಯಕ್ರಮವನ್ನು ಎಲ್ಲ ಪೋಷಕರು ಒಪ್ಪಿಕೊಳ್ಳಲೇಬೇಕು. ಆರೋಗ್ಯ ರಕ್ಷಣೆ ನಿಟ್ಟಿನಲ್ಲಿ ಇದು ದಿಟ್ಟ ಹೆಜ್ಜೆಯಾಗಿದೆ. ಲಸಿಕೆ ಹಾಕಿಸಿಕೊಳ್ಳುವ ವಿಚಾಋದಲ್ಲಿ ಪೋಷಕರು ಮಕ್ಕಳಲ್ಲಿಯೂ ಅರಿವು ಮೂಡಿಸುವ ಕೆಲಸ ಮಾಡಬೇಕು’ ಎಂದು ಪೋಷಕ ಜ್ಯೋತಿರ್ಲಿಂಗ ಹೊನಕಟ್ಟಿ ಹೇಳಿದರು.

‘ಉತ್ತಮ ಪ್ರತಿಕ್ರಿಯೆ ನಿರೀಕ್ಷೆ’

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2007ಕ್ಕೂ ಹಿಂದೆ ಹುಟ್ಟಿದ ಮಕ್ಕಳಿಗೆ ಆಯಾ ಶಾಲೆಯಲ್ಲಿಯೇ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಿಕ್ಷಣ ಸಂಸ್ಥೆಯನ್ನು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಜೋಡಣೆ ಮಾಡಲಾಗಿದೆ. ಒಂದು ತಿಂಗಳ ಕಾಲ ಮೀತಿಯಲ್ಲಿ ಎರಡು ಡೋಸ್‌ ನೀಡಲಾಗುತ್ತದೆ. ಜಿಲ್ಲೆಯಲ್ಲಿ ಮೊದಲಿನಿಂದಲೂ ಲಸಿಕಾ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸಾಕಷ್ಟು ಲಸಿಕೆ ಸಂಗ್ರಹ ಇದೆ. ಒಂದೇ ಬಾರಿಗೆ ಲಕ್ಷ ಮಕ್ಕಳಿಗೆ ಲಸಿಕೆ ನೀಡುವಷ್ಟು ಸಂಗ್ರಹ ಜಿಲ್ಲೆಯಲ್ಲಿ ಇದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕಿಶೋರ್‌ ಕುಮಾರ್‌ ತಿಳಿಸಿದರು.

ಮಕ್ಕಳ ವಯಸ್ಸಿಗೆ ಸಂಬಂಧಿಸಿದ ಮಾಹಿತಿಯನ್ನು ಶಿಕ್ಷಣ ಸಂಸ್ಥೆಗಳಿಂದ ಕಲೆ ಹಾಕಲಾಗಿದೆ. ಅರ್ಹ ಮಕ್ಕಳಿಗೆ ಆದ್ಯತೆಮೇರೆಗೆ ಲಸಿಕೆ ನೀಡಲಾಗುವುದು.

ಡಾ. ಎಚ್‌. ಅಶೋಕ, ಕೋವಿಡ್‌ ನೋಡಲ್‌ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT