ಶನಿವಾರ, ಸೆಪ್ಟೆಂಬರ್ 25, 2021
25 °C
ನೆಲ್ಯಾಡಿ ಗ್ರಾಮ ಪಂಚಾಯಿತಿ ಕೋವಿಡ್ ಕಾರ್ಯಪಡೆ ಸಭೆಯಲ್ಲಿ ನಿರ್ಧಾರ

ನೆಲ್ಯಾಡಿ: ವಾರಕ್ಕೊಮ್ಮೆ ವರ್ತಕರ ಕೋವಿಡ್ ಪರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನೆಲ್ಯಾಡಿ(ಉಪ್ಪಿನಂಗಡಿ): ನೆಲ್ಯಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವರ್ತಕರಿಗೆ ವಾರಕ್ಕೆ ಒಂದು ಬಾರಿ ಕೋವಿಡ್ ಪರೀಕ್ಷೆ ಮಾಡುವ ಬಗ್ಗೆ ಮಂಗಳವಾರ ನೆಲ್ಯಾಡಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಕೋವಿಡ್ ಕಾರ್ಯಪಡೆ ಸಭೆಯಲ್ಲಿ ನಿರ್ಧರಿಸಲಾಯಿತು.

ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಿಸಿರಾ ಮಾತನಾಡಿ, ‘ಪುತ್ತೂರು ತಾಲ್ಲೂಕಿನಲ್ಲಿ, ಈ ಹಿಂದೆ ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಕರಣಗಳಿದ್ದವು. ಈಗ ನೆಲ್ಯಾಡಿ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಹೆಚ್ಚಿನ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಲಸಿಕೆ ಪಡೆಯುವ ಜೊತೆಗೆ ಕೋವಿಡ್ ಪ್ರಕರಣ ತಡೆಗೆ ಯೋಚಿಸಬೇಕಾಗಿದೆ. ವರ್ತಕರು ಹಾಗೂ ಅಂಗಡಿಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ವಾರಕ್ಕೊಮ್ಮೆ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತ ಎಂದರು. ಇದಕ್ಕೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯೂ ಸಮ್ಮತಿ ಸೂಚಿಸಿತು. ವರ್ತಕರು ವಾರಕ್ಕೊಮ್ಮೆ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಅವರ ಮನವೊಲಿಕೆ ಮಾಡುವ ನಿರ್ಧಾರ ಕೈಗೊಳ್ಳಲಾಯಿತು.

ಸೋಂಕಿತ ವ್ಯಕ್ತಿ ಮನೆಯಲ್ಲಿಯೇ ಐಸೊಲೇಷನ್ ಆಗುವುದರಿಂದ ಮನೆಯ ಇತರ ಸದಸ್ಯರಿಗೂ ಸೋಂಕು ಹರಡುವ ಸಂಭವ ಹೆಚ್ಚು ಇದೆ. ಸೋಂಕಿತರಿಗೆ ಮನೆಯಲ್ಲಿ ಸರಿಯಾದ ಸೌಲಭ್ಯವಿಲ್ಲದೇ ಇದ್ದಲ್ಲಿ ಅವರನ್ನು ಕಡ್ಡಾಯವಾಗಿ ಕೋವಿಡ್ ಆರೈಕೆ ಕೇಂದ್ರಕ್ಕೆ ದಾಖಲಿಸಬೇಕು ಎಂದು ವೈದ್ಯಾಧಿಕಾರಿ ಹೇಳಿದರು. ನೆಲ್ಯಾಡಿ ಗ್ರಾಮದ ಪಡುಬೆಟ್ಟು ವ್ಯಾಪ್ತಿಯಲ್ಲಿ ಹೆಚ್ಚು ಕೋವಿಡ್ ಪ್ರಕರಣಗಳು ದಾಖಲಾಗಿರುವುದರಿಂದ ಆ ಪ್ರದೇಶವನ್ನು ಮೈಕ್ರೊ ಕಂಟೈನ್‌ಮೆಂಟ್ ಮಾಡಲಾಗುವುದು ಎಂದರು.

ದಂಡ ವಿಧಿಸಲು ನಿರ್ಣಯ: ಪರವಾನಗಿ ಪಡೆಯದೆ ಮದುವೆ ಹಾಗೂ ಇನ್ನಿತರ ಕಾರ್ಯಕ್ರಮ ಆಯೋಜಿಸಿದವರ ವಿರುದ್ಧ ದಂಡ ವಿಧಿಸುವ ನಿರ್ಣಯ ಕೈಗೊಳ್ಳಲಾಯಿತು. ಪಾಸಿಟಿವ್ ಪತ್ತೆಯಾದ ಮನೆಯ ಸುತ್ತಲಿನ 50 ಮನೆಯವರ ಕೋವಿಡ್ ಪರೀಕ್ಷೆ ಮಾಡಬೇಕು ಎಂದು ಸದಸ್ಯರು ಆಗ್ರಹಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೇತನಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್, ಸದಸ್ಯರಾದ ಜಯಾನಂದ ಬಂಟ್ರಿಯಾಲ್, ರವಿಪ್ರಸಾದ್ ಶೆಟ್ಟಿ, ಪ್ರಕಾಶ್, ಆನಂದ ಪಿಲವೂರು, ಯಾಕೂಬ್ ಯಾನೆ ಸಲಾಂ, ರೇಷ್ಮಾಶಶಿ, ಮಹಮ್ಮದ್ ಇಕ್ಬಾಲ್ ಇದ್ದರು. ಪಿಡಿಒ ಮಂಜುಳಾ ಸ್ವಾಗತಿಸಿದರು. ಶಿವಪ್ರಸಾದ್ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.