ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ: ‘ಹಿಂದುತ್ವ‘ ಹಣಿಯಲು ‘ಜಾತಿ’ ಅಸ್ತ್ರ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ
Published 17 ಏಪ್ರಿಲ್ 2024, 21:55 IST
Last Updated 17 ಏಪ್ರಿಲ್ 2024, 21:55 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ‘ಹಿಂದುತ್ವವಾದ’ವನ್ನೇ ಮುಂದಿಟ್ಟುಕೊಂಡು 33 ವರ್ಷಗಳಿಂದ ಪ್ರಾಬಲ್ಯ ಮೆರೆದಿದೆ. ಸತತ ಒಂಬತ್ತು ಸಲ ಗೆದ್ದಿದ್ದ ಕಾಂಗ್ರೆಸ್‌, 1991ರ ಬಳಿಕ ಒಮ್ಮೆಯೂ ಗೆಲುವಿನ ಮುಖ ನೋಡಿಲ್ಲ. ಈ ಸಲ ಕ್ಷೇತ್ರವನ್ನು ಶತಾಯ ಗತಾಯ ‘ಕೈ’ವಶ ಮಾಡಿಕೊಳ್ಳುವ ಛಲದಿಂದ, ಎದುರಾಳಿಯ ‘ಹಿಂದುತ್ವವಾದ’ಕ್ಕೆ ಪ್ರತಿಯಾಗಿ ‘ಜಾತಿವಾದ’ದ ಅಸ್ತ್ರವನ್ನು ಬಳಸಿದೆ.

ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಪೈಪೋಟಿ ಇದೆ. ಜೆಡಿಎಸ್‌ ಪ್ರಾಬಲ್ಯ ಇಲ್ಲದ ಕಾರಣ ಮೈತ್ರಿಯು ಪರಿಣಾಮ ಬೀರಿಲ್ಲ. ಬಿಜೆಪಿಯಿಂದ ಮಾಜಿ ಸೇನಾಧಿಕಾರಿ, ಬಂಟ ಸಮುದಾಯದ ಕ್ಯಾ.ಬ್ರಿಜೇಶ್‌ ಚೌಟ ಹಾಗೂ ಕಾಂಗ್ರೆಸ್‌ನಿಂದ ಕ್ಷೇತ್ರದಲ್ಲಿ ಅತಿ ಹೆಚ್ಚು ಸಂಖ್ಯೆಯ ಮತದಾರರಿರುವ ಬಿಲ್ಲವ ಸಮುದಾಯದ ವಕೀಲ ಆರ್‌.ಪದ್ಮರಾಜ್‌ ಹುರಿಯಾಳುಗಳು. ಇಬ್ಬರಿಗೂ ಇದು ಮೊದಲ ಚುನಾವಣೆ.

ಹಿಂದೂ ಜಾಗರಣ ವೇದಿಕೆಯ ನೇತಾರರಾಗಿದ್ದ ಸತ್ಯಜಿತ್‌ ಸುರತ್ಕಲ್‌ ಈ ಸಲ ‘ಬಿಲ್ಲವ ಅಭ್ಯರ್ಥಿ’ಗೆ ಬೆಂಬಲ ಸೂಚಿಸಿದ್ದಾರೆ. ‘ಸೌಜನ್ಯಾ ಸಾವಿಗೆ ನ್ಯಾಯ ಕೊಡಿಸಿ’ ಎಂದು ಹೋರಾಟ ನಡೆಸುತ್ತಿರುವ ಮಹೇಶ್‌ ಶೆಟ್ಟಿ ತಿಮರೋಡಿ ‘ನೋಟಾ’ ಚಲಾಯಿಸುವಂತೆ ಹೇಳುತ್ತಿದ್ದಾರೆ. ಈ ಸಲ ಎಸ್‌ಡಿಪಿಐ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಇವು ಈ ಬಾರಿ ಹೊಸ ಬೆಳೆವಣಿಗೆಗಳು.

ಮುಸ್ಲಿಂ ಅಭ್ಯರ್ಥಿ ಕಣದಲ್ಲಿ ಇಲ್ಲದಿರುವುದು ಕಾಂಗ್ರೆಸ್‌ಗೆ ಅನುಕೂಲ. ಪದ್ಮರಾಜ್‌ ಹೊಸಮುಖವಾಗಿರುವುದರಿಂದ ಕಾಂಗ್ರೆಸ್‌ನ ಸ್ಥಳೀಯ ಭಿನ್ನಮತಗಳು ಶಮನವಾಗಿವೆ.

ಕಾರ್ಯಕರ್ತರ ಕೋಪಕ್ಕೆ ಗುರಿಯಾಗಿದ್ದ ಸಂಸದ ನಳಿನ್ ಕುಮಾರ್ ಕಟೀಲ್‌ ಅವರಿಗೆ ಬಿಜೆಪಿ ಟಿಕೆಟ್‌ ನಿರಾಕರಿಸಿ, ಆಡಳಿತ ವಿರೋಧಿ ಅಲೆಯನ್ನು ತಕ್ಕಮಟ್ಟಿಗೆ ತಣಿಸಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ 62,458 ಮತ ಪಡೆದಿದ್ದ ಅರುಣ್ ಕುಮಾರ್ ಪುತ್ತಿಲ ಪಕ್ಷಕ್ಕೆ ಮರಳಿರುವುದು ಬಿಜೆಪಿಯ ತಲೆನೋವನ್ನು ಕಡಿಮೆ ಮಾಡಿದೆ.

‘ಗೆಲುವು ಸುಲಭವಲ್ಲ’ ಎಂಬ ಅರಿವು ಉಭಯಪಕ್ಷಗಳ ನಾಯಕರಿಗೂ ಇದೆ. ಬಿಜೆಪಿಯವರು ಪ್ರಧಾನಿ ನರೇಂದ್ರ ಮೋದಿಯವರ ಬಲ ನೆಚ್ಚಿಕೊಂಡಿದ್ದಾರೆ. ಕಾಂಗ್ರೆಸ್‌ ನಾಯಕರು, ‘ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಒಮ್ಮೆಯೂ ಬಿಲ್ಲವರಿಗೆ ಅವಕಾಶ ನೀಡಿಲ್ಲ’ ಎಂಬ ವಾದ ಮುಂದಿಟ್ಟಿದ್ದಾರೆ.

‘ಹಿಂದೆಲ್ಲ ಚುನಾವಣೆಯಲ್ಲಿ ಜಾತಿ ವಿಚಾರ ಗೌಣವಾಗಿತ್ತು. ಆದರೆ, ಈ ಸಲ ಸ್ಥಿತಿ ಹಾಗಿಲ್ಲ. ಆದರೂ, ಜಿಲ್ಲೆಯ ಜನ ಮೋದಿಯವರ ಮುಖ ನೋಡಿ ಬಿಜೆಪಿಗೇ ಮತ ಹಾಕುತ್ತಾರೆ’ ಎನ್ನುವುದು ಬಿಜೆಪಿ ಅಭಿಮಾನಿ ಕೈಕಂಬದ ಬಾಲಕೃಷ್ಣ ಅಡಪ ಅವರ ವಿಶ್ವಾಸ.

ನಾವೂರ ಗ್ರಾಮದ ವಿಜಯ್‌, ‘ಹಿಂದಿನಿಂದಲೂ ಜಿಲ್ಲೆಯಲ್ಲಿ ಬಿಜೆಪಿಗೆ ಬಿಲ್ಲವ ಸಮುದಾಯ ಶಕ್ತಿ ತುಂಬುತ್ತಿದೆ. ಈ ಸಲ ಬಿಲ್ಲವರ ಮುಖಗಳು ಬಿಜೆಪಿ ಜೊತೆ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ’ ಎನ್ನುತ್ತಾರೆ.

ಆರ್‌. ಪದ್ಮರಾಜ್ 
ಆರ್‌. ಪದ್ಮರಾಜ್ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT