ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡದಲ್ಲಿ ಅಂಚೆ ಮೂಲಕ ಔಷಧಿ ರವಾನೆ

ಲಾಕ್‌ಡೌನ್: ವಿವಿಧ ಸೇವೆ ನೀಡಲು ಸಿದ್ಧ
Last Updated 15 ಏಪ್ರಿಲ್ 2020, 14:33 IST
ಅಕ್ಷರ ಗಾತ್ರ

ಮಂಗಳೂರು: ಕೊರೊನಾ ವೈರಸ್ ಮುನ್ನೆಚ್ಚರಿಕೆ ಕ್ರಮವಾಗಿ ವಿಧಿಸಿರುವ ಲಾಕ್‌ಡೌನ್ ಅವಧಿಯಲ್ಲಿ ಅಂಚೆ ಇಲಾಖೆಯು ಅಗತ್ಯ ಸೇವೆಗಳನ್ನು ನೀಡುತ್ತಿದೆ. ಮಂಗಳೂರು ವಿಭಾಗದಲ್ಲಿ ಎಲ್ಲ ಇಲಾಖಾ ಮತ್ತು ಶಾಖಾ ಅಂಚೆ ಕಚೇರಿಗಳು ಈಗಾಗಲೇ ಈ ನಿಟ್ಟಿನಲ್ಲಿ ಕಾರ್ಯಾರಂಭಿಸಿವೆ.

ಔಷಧ ರವಾನೆ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಯಾವುದೇ ಊರಿನಿಂದ ಯಾವುದೇ ಊರಿಗೆ ಅಂಚೆ ಮೂಲಕ ಔಷಧ ಮತ್ತು ತುರ್ತು ಅಗತ್ಯದ ವಸ್ತುಗಳನ್ನು ರವಾನಿಸಬಹುದು. ಸಮೀಪದ ಜಿಲ್ಲೆಗಳಾದ ಶಿವಮೊಗ್ಗ, ಮೈಸೂರು, ಕೊಡಗು ಹಾಗೂ ಚಿಕ್ಕಮಗಳೂರು ಇತ್ಯಾದಿ ಊರುಗಳಿಗೆ ಕೂಡ ಔಷಧ ಮತ್ತು ಅಗತ್ಯ ವಸ್ತುಗಳನ್ನು ಕ್ಷಿಪ್ರವಾಗಿ ತಲುಪಿಸಲು ಎಲ್ಲ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ.

ಇ ಮನಿಯಾರ್ಡರ್ ಸೇವೆ: ಕುಟುಂಬದವರಿಗೆ ಹಣ ಕಳುಹಿಸುವ ಅಗತ್ಯ ಬರಬಹುದಾಗಿದ್ದು, ಇದಕ್ಕಾಗಿ ಅಂಚೆ ಕಚೇರಿಯಲ್ಲಿ ವಿಶೇಷವಾದ ಇ– ಮನಿಯಾರ್ಡರ್ ಸೇವೆ ಲಭ್ಯವಿದೆ. ಸಾರಿಗೆ ಸಂಪರ್ಕ ವ್ಯವಸ್ಥೆ ಇಲ್ಲದಿರುವುದು ಈ ಸೇವೆಯ ಮೇಲೆ ಪರಿಣಾಮ ಬೀರುವುದಿಲ್ಲ.

ಎಲೆಕ್ಟ್ರಾನಿಕ್ ತಂತ್ರಜ್ಞಾನದ ಮೂಲಕ ಪಿನ್‌ಕೋಡ್ ಆಧಾರಿತವಾಗಿ ಕಳುಹಿಸುವ ವ್ಯವಸ್ಥೆ ಇರುವುದರಿಂದ ದೇಶದ ಯಾವುದೇ ಭಾಗಕ್ಕೂ ಇ– ಮನಿಯಾರ್ಡರ್ ಮೂಲಕ ಹಣವನ್ನು ಸಾರ್ವಜನಿಕರು ಅಂಚೆ ಕಚೇರಿಗಳಿಂದ ಕಳುಹಿಸಬಹುದು.

ಸಾಮಾಜಿಕ ಭದ್ರತೆ ಯೋಜನೆಗಳ ಹಣ ಪಾವತಿ: ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಇ-ಮನಿಯಾರ್ಡರ್ ಹಾಗೂ ಅಂಚೆ ಉಳಿತಾಯ ಖಾತೆಗಳ ಮೂಲಕ ಸಂಬಂಧಿಸಿದ ಫಲಾನುಭವಿಗಳಿಗೆ ಹಣವು ಅಂಚೆ ಕಚೇರಿಗಳಲ್ಲಿ ಪಾವತಿಯಾಗುತ್ತಿದ್ದು, ಒಂದು ವಾರದಲ್ಲಿ ಸುಮಾರು 5,500 ಫಲಾನುಭವಿಗಳಿಗೆ ಇ– ಮನಿಯಾರ್ಡರ್‌ಗಳನ್ನು ಮಂಗಳೂರು ವಿಭಾಗದಲ್ಲಿ ವಿತರಿಸಲಾಗಿದೆ. ಇನ್ನೂ ಸುಮಾರು 24ಸಾವಿರ ಫಲಾನುಭವಿಗಳಿಗೆ ಈ ವಾರದಲ್ಲಿ ಇ– ಮನಿಯಾರ್ಡರ್‌ಗಳನ್ನು ಪಾವತಿಸಲಾಗುತ್ತಿದೆ.

ಮಾಹಿತಿಗೆ ಮಂಗಳೂರು ವಿಭಾಗೀಯ ಕಚೇರಿಯ ವಾಟ್ಸ್‌ಆ್ಯಪ್ ಸಂಖ್ಯೆ 94482 91072ಗೆ ಸಂದೇಶ ಕಳುಹಿಸಬಹುದು ಎಂದು ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.

ವಿದ್ಯುತ್ ಬಿಲ್‌, ರೀಚಾರ್ಜ್‌:ಮಂಗಳೂರು ಅಂಚೆ ವಿಭಾಗದ ಎಲ್ಲ ಇಲಾಖಾ ಮತ್ತು ಶಾಖಾ ಅಂಚೆ ಕಚೇರಿಗಳಲ್ಲಿ ವಿದ್ಯುತ್ ಬಿಲ್ ಪಾವತಿ ಸೇವೆ ಲಭ್ಯವಿದ್ದು, ಮೆಸ್ಕಾಂ ಬಿಲ್ ಬಾರದಿದ್ದರೂ ಗ್ರಾಹಕರು ತಮ್ಮ ಆರ್.ಆರ್. ನಂಬರ್ ಹಾಗೂ ಮೆಸ್ಕಾಂ ಸಬ್‌ಡಿವಿಷನ್ ಮಾಹಿತಿಯನ್ನು ಅಂಚೆ ಕಚೇರಿಯಲ್ಲಿ ನೀಡಿ ವಿದ್ಯುತ್ ಬಿಲ್ ಪಾವತಿ ಮಾಡಬಹುದು.

ಅದೇ ರೀತಿ ಮೊಬೈಲ್, ಡಿಟಿಎಚ್ ರೀಚಾರ್ಜ್ ಸೌಲಭ್ಯಗಳು ಕೂಡ ಅಂಚೆ ಕಚೇರಿಯಲ್ಲಿ ಲಭ್ಯವಿವೆ. ಇಂಡಿಯಾ ಪೋಸ್ಟ್‌ ಪೇಮೆಂಟ್ಸ್ ಬ್ಯಾಂಕ್ ಖಾತೆಯ ಮೂಲಕ ಗ್ರಾಹಕರು ಸಮೀಪದ ಅಂಚೆ ಕಚೇರಿಯಲ್ಲಿ ಮೊಬೈಲ್/ಡಿ.ಟಿ.ಎಚ್ ರೀಚಾರ್ಜ್ ಮಾಡಬಹುದು. ಮೊಬೈಲ್ ಬ್ಯಾಂಕಿಂಗ್ ಮೂಲಕ ಮನೆಯಲ್ಲೇ ಈ ಸೌಲಭ್ಯ ಪಡೆದುಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT