ದಕ್ಷಿಣ ಕನ್ನಡ: ಶೇ 68.50 ರಷ್ಟು ಮತದಾನ

7
ಮೂರು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ

ದಕ್ಷಿಣ ಕನ್ನಡ: ಶೇ 68.50 ರಷ್ಟು ಮತದಾನ

Published:
Updated:

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಮತ್ತು ಪುತ್ತೂರು ನಗರಸಭೆಗಳು ಹಾಗೂ ಬಂಟ್ವಾಳ ಪುರಸಭೆಯ 89 ವಾರ್ಡ್‌ಗಳ ಪ್ರತಿನಿಧಿಗಳ ಆಯ್ಕೆಗೆ ಶುಕ್ರವಾರ ನಡೆದ ಮತದಾನದಲ್ಲಿ ಶೇಕಡ 68.50 ಮಂದಿ ಮತ ಚಲಾಯಿಸಿದ್ದಾರೆ. ಜಿಲ್ಲೆಯಲ್ಲಿ ಶಾಂತಿಯುತವಾಗಿ ಮತದಾನ ನಡೆದಿದೆ.

111 ಮತಗಟ್ಟೆಗಳಲ್ಲಿ ಬೆಳಿಗ್ಗೆ 7 ಗಂಟೆಗೆ ಆರಂಭವಾದ ಮತದಾನ ಸಂಜೆ 5ಗಂಟೆಗೆ ಕೊನೆಗೊಂಡಿತು. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ವಿದ್ಯುನ್ಮಾನ ಮತಯಂತ್ರ (ಇವಿಎಂ) ಬಳಕೆ ಮಾಡಲಾಗಿತ್ತು. ಬಂಟ್ವಾಳ ಪುರಸಭೆಯಲ್ಲಿ ಶೇ 72.36, ಪುತ್ತೂರು ನಗರಸಭೆಯಲ್ಲಿ ಶೇ 68.69 ಮತ್ತು ಉಳ್ಳಾಲ ನಗರಸಭೆಯಲ್ಲಿ ಶೇ 65.36ರಷ್ಟು ಮತದಾನವಾಗಿದೆ.

ಬೆಳಿಗ್ಗೆಯಿಂದಲೂ ಮತ ಚಲಾವಣೆ ಮಂದಗತಿಯಲ್ಲಿ ಸಾಗಿತ್ತು. ಬೆಳಿಗ್ಗೆ 9 ಗಂಟೆಗೆ ಶೇ 14.90ರಷ್ಟು ಮತದಾನವಾಗಿತ್ತು. 11 ಗಂಟೆಗೆ ಶೇ 30.78ಕ್ಕೆ ಏರಿಕೆಯಾಗಿ, ಮಧ್ಯಾಹ್ನ 1ಕ್ಕೆ ಶೇ 44.26ರಷ್ಟಿತ್ತು. ಮಧ್ಯಾಹ್ನ 3 ಗಂಟೆಗೆ ಶೇ 54.50 ಮತದಾನವಾಗಿತ್ತು. ಅಂತಿಮವಾಗಿ ಶೇ 68.50ರಷ್ಟಕ್ಕೆ ಸೀಮಿತವಾಯಿತು.

ಜಿಲ್ಲೆಯ ಮೂರೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಒಟ್ಟು 1,17,979 ಮತದಾರರಿದ್ದರು. ಈ ಪೈಕಿ 80,820 ಮಂದಿ ಮಾತ್ರ ಮತ ಚಲಾಯಿಸಿದರು. ಪುತ್ತೂರು ನಗರಸಭೆಯಲ್ಲಿ 39,745 ಮತದಾರರ ಪೈಕಿ 27,299, ಉಳ್ಳಾಲ ನಗರಸಭೆಯಲ್ಲಿ 44,132 ಮತದಾರರ ಪೈಕಿ 28,845 ಮತ್ತು ಬಂಟ್ವಾಳ ಪುರಸಭೆಯಲ್ಲಿ 34,102 ಮತದಾರರ ಪೈಕಿ 24,676 ಮಂದಿ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದರು.

ಇವಿಎಂ ದೋಷ:  ಇವಿಎಂಗಳಲ್ಲಿ ಸಣ್ಣ ಪ್ರಮಾಣದ ತಾಂತ್ರಿಕ ದೋಷಗಳು ಕಂಡುಬಂದ ಕಾರಣದಿಂದ ಆರಂಭಿಕ ಹಂತದಲ್ಲಿ ಕೆಲವು ಮತಗಟ್ಟೆಗಳಲ್ಲಿ ಗೊಂದಲ ಉಂಟಾಗಿತ್ತು. ತಕ್ಷಣವೇ ಸ್ಪಂದಿಸಿದ ತಜ್ಞರ ತಂಡ, ತಾಂತ್ರಿಕ ದೋಷ ಸರಿಪಡಿಸಿ ಮತದಾನಕ್ಕೆ ಅನುವು ಮಾಡಿಕೊಟ್ಟಿತು. ಎಲ್ಲ ಮತಗಟ್ಟೆಗಳಲ್ಲೂ ಮೊದಲು ಒದಗಿಸಿದ್ದ ಮತಯಂತ್ರಗಳಲ್ಲೇ ಮತದಾನ ಮುಂದುವರಿಯಿತು.

ಪುತ್ತೂರಿನ ಪೆರ್ಲಡ್ಕ ಮತಗಟ್ಟೆಯಲ್ಲಿ ಪ್ರಾಯೋಗಿಕ ಮತದಾನದ ವೇಳೆ ಚಲಾಯಿಸಿದ ಮತಗಳು ಇವಿಎಂನಲ್ಲಿ ತಪ್ಪಾಗಿ ದಾಖಲಾಗುತ್ತಿದ್ದವು. ಪ್ರಾಯೋಗಿಕವಾಗಿ ಚಲಾಯಿಸಿದ ಹತ್ತು ಮತಗಳ ಪೈಕಿ ಆರು ನೋಟಾಕ್ಕೆ ಪರಿವರ್ತನೆಯಾಗಿದ್ದವು. ಈ ಕುರಿತು ಕಾಂಗ್ರೆಸ್ ಅಭ್ಯರ್ಥಿ ಪುಷ್ಪಾವತಿ ಅವರ ಮತಗಟ್ಟೆ ಏಜೆಂಟ್‌ ತಕರಾರು ಸಲ್ಲಿಸಿದರು.

ಮೂರು ಬಾರಿ ಪ್ರಾಯೋಗಿಕ ಮತದಾನ ನಡೆಸಲಾಯಿತು. ಮೂರನೇ ಬಾರಿಗೆ ಚಲಾವಣೆಯಾದ ಎಲ್ಲ ಮತಗಳು ಸರಿಯಾಗಿ ದಾಖಲಾಗಿರುವುದು ಖಚಿತವಾಯಿತು. ಆ ಬಳಿಕ ಅದೇ ಮತಯಂತ್ರವನ್ನು ಬಳಸಿಕೊಂಡು ಮತದಾನ ಆರಂಭಿಸಲಾಯಿತು. ಈ ಬೆಳವಣಿಗೆಯಿಂದಾಗಿ ಕೆಲಕಾಲ ಮತದಾನ ವಿಳಂಬಬವಾಯಿತು.

ಮಾತಿನ ಚಕಮಕಿ: ಪುತ್ತೂರು ನಗರಸಭೆ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ. ಉಳ್ಳಾಲ ನಗರಸಭೆ ಮತ್ತು ಬಂಟ್ವಾಳ ಪುರಸಭೆ ವ್ಯಾಪ್ತಿಯ ಕೆಲವು ಮತಗಟ್ಟೆಗಳಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆಯಿತು. ತಕ್ಷಣ ಸ್ಥಳಕ್ಕೆ ಬಂದ ಹೆಚ್ಚುವರಿ ಪೊಲೀಸರು, ಪರಿಸ್ಥಿತಿ ಕೈಮೀರದಂತೆ ತಡೆದರು.

ಉಳ್ಳಾಲದ ಸೇವಂತಿಗುಡ್ಡೆ ಮತ್ತು ಬಬ್ಬುಕಟ್ಟೆ ಮತಗಟ್ಟೆಗಳಲ್ಲಿ ಕಾಂಗ್ರೆಸ್‌ ಹಾಗೂ ಪಕ್ಷೇತರ ಅಭ್ಯರ್ಥಿಗಳ ಗುಂಪಿನ ನಡುವೆ ಮಾತಿನ ಚಕಮಕಿ ನಡೆಯಿತು. ಉಳ್ಳಾಲ ದರ್ಗಾ ಬಳಿಯ ಮತಗಟ್ಟೆಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ ಅಭ್ಯರ್ಥಿಗಳ ಬೆಂಬಲಿಗರ ನಡುವೆ ವಾಗ್ವಾದ ಆರಂಭವಾಗಿತ್ತು. ಬಂಟ್ವಾಳ ಪುರಸಭೆ ವ್ಯಾಪ್ತಿ ಕೊಡಂಗೆ ಮತಗಟ್ಟೆಯಲ್ಲಿ ಕಾಂಗ್ರೆಸ್‌ ಮತ್ತು ಎಸ್‌ಡಿಪಿಐ ಕಾರ್ಯಕರ್ತರ ನಡುವೆ ವಾಕ್ಸಮರವೂ ನಡೆಯಿತು.

ಉಳ್ಳಾಲ ನಗರಸಭೆ ವ್ಯಾಪ್ತಿಯ ಕೆಲವು ಮತಗಟ್ಟೆಗಳಲ್ಲಿ ಚುನಾವಣಾ ಸಿಬ್ಬಂದಿಗೆ ಆಹಾರ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಕೆಲವು ಮತಗಟ್ಟೆಗಳಲ್ಲಿ ಬೆಳಿಗ್ಗೆ ಉಪಾಹಾರ ಪೂರೈಕೆಯೇ ಇರಲಿಲ್ಲ. ವಿಷಯ ತಿಳಿದು ಸ್ಥಳಕ್ಕೆ ಬಂದ ಹಿರಿಯ ಅಧಿಕಾರಿಗಳು ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !