ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ: ಪರಿಸರ ಸ್ನೇಹಿ ವಾಹನಕ್ಕೆ ಬೆಲೆಯ ಬರೆ

ಸಿಎನ್‌ಜಿ ಬೆಲೆ ನಿಯಂತ್ರಣಕ್ಕೆ ಒತ್ತಡ ತರಲು ಮುಂದಾದ ಗ್ರಾಹಕರು
Last Updated 20 ಜೂನ್ 2022, 10:32 IST
ಅಕ್ಷರ ಗಾತ್ರ

ಮಂಗಳೂರು: ಪರಿಸರ ಪೂರಕ ಸಿಎನ್‌ಜಿ (ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್) ಬಳಕೆಯ ಬಗ್ಗೆ ಕೇಂದ್ರ ಸರ್ಕಾರ ನಿರಂತರ ಜನಜಾಗೃತಿ ಮಾಡುತ್ತಿದೆ. ಇದರಿಂದ ಪ್ರೇರಿತರಾಗಿ ಸಿಎನ್‌ಜಿ ವಾಹನ ಖರೀದಿಸಿದ ಗ್ರಾಹಕರು ನಿಯಂತ್ರಣ ತಪ್ಪಿದ ನೈಸರ್ಗಿಕ ಇಂಧನ ಬೆಲೆಯಿಂದ ಕಂಗೆಟ್ಟಿದ್ದಾರೆ.

‘ಎಂತ ಮಾರಾಯ್ರೆ, ಕೆ.ಜಿ.ಗೆ ₹ 52 ಇದ್ದ ದರ ಒಂದು ವರ್ಷದಲ್ಲಿ ಇಷ್ಟು ಹೆಚ್ಚಾದರೆ ಹೇಗೆ? ನಾನು ಎಲ್‌ಪಿಜಿ ರಿಕ್ಷಾ ಖರೀದಿಸಿದ ಸಾಲ ₹ 40ಸಾವಿರ ಬಾಕಿ ಇತ್ತು. ಸಿಎನ್‌ಜಿ ಬೆಲೆಯಿಂದ ಖುಷಿಯಾಗಿ, ಮತ್ತೆ ₹ 2 ಲಕ್ಷ ಹೊಸ ಸಾಲ ಮಾಡಿ, ಸಿಎನ್‌ಜಿ ರಿಕ್ಷಾ ಖರೀದಿಸಿದೆ. ವರ್ಷದೊಳಗೆ ಒಂದು ಕೆ.ಜಿ ಸಿಎನ್‌ಜಿ ಬೆಲೆಯಲ್ಲಿ ₹ 36 ಹೆಚ್ಚಳವಾಗಿದೆ. ಈಗ ನಾನು ಗುಂಡಿಗೆ ಬಿದ್ದೆ ಅನ್ನಿಸುತ್ತಿದೆ’ ಎನ್ನುತ್ತಲೇ ಮಾತಿಗಿಳಿದರು ಸುರತ್ಕಲ್‌ನ ರಿಕ್ಷಾ ಚಾಲಕ ರವಿಕಿರಣ ಭಟ್.

‘ಸಿಎನ್‌ಜಿ ದರ ಕರಾವಳಿಯ ಉಷ್ಣತೆಯಿಂತೆ ಏರುತ್ತಲೇ ಇದೆ. ಈ ಗೇಲ್ ಕಂಪನಿಯವರು ‘ಗೋ ಗ್ರೀನ್’ ಎಂದು ತಲೆತಿಂದು, ಗ್ರಾಹಕರನ್ನು ಮಂಗ ಮಾಡುತ್ತಾರೆ. ಅನಿಲದ ಬೆಲೆಯೂ ದುಬಾರಿ, ಬಿಡಿಭಾಗ ಹಾಳಾದರೆ ಅದರ ಬೆಲೆಯೂ ಒಂದೂವರೆ ಪಟ್ಟು ಹೆಚ್ಚು’ ಎಂದು ಅಸಮಾಧಾನ ಹೊರ ಹಾಕಿದರು.

ಇದು ರವಿಕಿರಣ್ ಅವರ ಅಭಿಪ್ರಾಯ ಮಾತ್ರ ಆಗಿರಲಿಲ್ಲ, ಹಲವು ಆಟೊರಿಕ್ಷಾ ಚಾಲಕರು, ಸಿಎನ್‌ಜಿ ವಾಹನಗಳ ಮಾಲೀಕರು ಇದೇ ಮಾತನ್ನು ಪುನರುಚ್ಚರಿಸಿದರು.

ನಗರದಲ್ಲಿ ಸಿಎನ್‌ಜಿ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದರಲ್ಲಿ ಕಾರು, ಗೂಡ್ಸ್ ವಾಹನಗಳಿಗಿಂತ ಆಟೊರಿಕ್ಷಾಗಳದೇ ಸಿಂಹಪಾಲು. ಏರುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಕಂಡು ರಿಕ್ಷಾ ಚಾಲಕರು, ಸಿಎನ್‌ಜಿ ವಾಹನಕ್ಕೆ ಪರಿವರ್ತನೆ ಮಾಡಿಕೊಳ್ಳುತ್ತಿದ್ದಾರೆ. ಪ್ರಾದೇಶಿಕ ಸಾರಿಗೆ ಇಲಾಖೆ ನೀಡಿದ ಮಾಹಿತಿ ಪ್ರಕಾರ ಏಪ್ರಿಲ್‌ನಿಂದ ಈವರೆಗೆ 150ಕ್ಕೂ ಹೆಚ್ಚು ಆಟೊರಿಕ್ಷಾಗಳು ಇಂಧನದಿಂದ ಸಿಎನ್‌ಜಿಗೆ ಪರಿವರ್ತನೆ ಹೊಂದಿವೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಆರ್‌ಪಿಎಲ್ ಬಂಕ್, ಹೊಸಬೆಟ್ಟು, ಕಾವೂರು, ಕೂಳೂರು, ಹಳೆಯಂಗಡಿ, ಅಡ್ಯಾರು, ಬೆಳ್ತಂಗಡಿಯಲ್ಲಿ ಸಿಎನ್‌ಜಿ ಬಂಕ್‌ಗಳು ಇವೆ.

‘ಈ ಹಿಂದೆ ಬೆಂಗಳೂರಿನಿಂದ ನಗರಕ್ಕೆ ಸಿಎನ್‌ಜಿ ಪೂರೈಕೆ ಆಗುತ್ತಿತ್ತು. ಈಗ ಬೈಕಂಪಾಡಿಯಲ್ಲೇ ದೊಡ್ಡ ಕೇಂದ್ರ ನಿರ್ಮಾಣಗೊಂಡಿದೆ. ಸರ್ಕಾರಿ ಸ್ವಾಮ್ಯದ ಗೇಲ್ ಗ್ಯಾಸ್ ಕಂಪನಿಯು ಈ ಕೇಂದ್ರದಿಂದ ನೈಸರ್ಗಿಕ ಅನಿಲವನ್ನು ಸಿಎನ್‌ಜಿ ಬಂಕ್‌ಗಳಿಗೆ ಪೂರೈಕೆ ಮಾಡುತ್ತದೆ. ಬೆಂಗಳೂರಿನಿಂದ ಮಂಗಳೂರಿಗೆ ಸಿಎನ್‌ಜಿ ಬರುವಾಗ ಕೆ.ಜಿ.ಯೊಂದರ ದರ ₹ 52 ಇತ್ತು. ಈಗ ಸ್ಥಳೀಯವಾಗಿ ಪೂರೈಕೆ ಆರಂಭವಾದ ಮೇಲೆ ಇದರ ದರ ಏರುಗತಿಯಲ್ಲಿ ಸಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು ದಕ್ಷಿಣ ಕನ್ನಡ ಸಿಎನ್‌ಜಿ ಬಳಕೆದಾರರ ಸಂಘದ ಪ್ರಮುಖ ಶ್ರೀಕಾಂತ ರಾವ್.

‘ಜೂನ್ ಮೊದಲ ವಾರದಲ್ಲಿ ಸಿಎನ್‌ಜಿ ದರ ಕೆ.ಜಿ.ಗೆ ₹ 88 ತಲುಪಿದಾಗ ರಾಜ್ಯದಲ್ಲೇ ಇದು ಗರಿಷ್ಠ ದರವಾಗಿತ್ತು. ಆಗ ಸಂಸದ ನಳಿನ್‌ಕುಮಾರ್ ಕಟೀಲ್ ಅವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಿದ ಪರಿಣಾಮ ಒಂದು ವಾರದಲ್ಲಿ ಎರಡು ಬಾರಿ ತಲಾ ₹ 4 ರಂತೆ ಇಳಿಕೆಯಾಗಿ ಈಗ ₹ 80ಕ್ಕೆ ನಿಂತಿದೆ. ಪಕ್ಕದ ಉಡುಪಿ ಜಿಲ್ಲೆಯಲ್ಲಿ ಸಿಎನ್‌ಜಿ ದರ ₹ 73 ಇದೆ. ಇಲ್ಲಿಗೆ ಅದಾನಿ ಗ್ರೂಪ್ ಪೂರೈಕೆ ಮಾಡುತ್ತದೆ. ಅದಾನಿ ಕಂಪನಿಗೆ ಮೂಲ ಪೂರೈಕೆದಾರ ಗೇಲ್ ಕಂಪನಿಯಾಗಿದೆ. ಅಲ್ಲಿ ಒಂದೆರಡು ದಿನಗಳ ಈಚೆ ದರದಲ್ಲಿ ಕೊಂಚ ಏರಿಕೆ ಆಗಿದ್ದರೂ, ಮಂಗಳೂರಿಗಿಂತ ಕಡಿಮೆ ಇದೆ. ಆದರೂ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದರ ವ್ಯತ್ಯಾಸ ಅಚ್ಚರಿ ಮೂಡಿಸುತ್ತದೆ’ ಎಂದು ವಿವರಿಸಿದರು.

‘ಬೆಂಗಳೂರಿನಿಂದ ಬರುವಾಗ ₹ 52 ದರ ಇತ್ತು. ಈಗ ಸಾಗಣೆ ವೆಚ್ಚ ಇಲ್ಲದೆ, ಸ್ಥಳೀಯವಾಗಿ ಲಭ್ಯವಾಗುವ ಸಿಎನ್‌ಜಿ ದರ ಕೆ.ಜಿ.ಗೆ ₹ 80. ಇದು ಸಿಎನ್‌ಜಿ ಬಳಕೆದಾರರ ಉತ್ಸಾಹವನ್ನು ತಗ್ಗಿಸುತ್ತದೆ. ಪರಿಸರ ಪೂರಕವಾಗಿರುವ ಸಿಎನ್‌ಜಿ ಬೆಲೆ ಪೆಟ್ರೋಲ್‌ಗಿಂತ ಕನಿಷ್ಠ ₹ 40 ಕಡಿಮೆ ಇರಬೇಕು ಎಂಬುದು ನಮ್ಮ ಬೇಡಿಕೆ. ಇದಕ್ಕಾಗಿ ಬಳಕೆದಾರರ ಸಂಘ ರಚಿಸಿದ್ದು, 300ರಷ್ಟು ಸದಸ್ಯರು ಇದ್ದಾರೆ’ ಎಂದು ತಿಳಿಸಿದರು.

ಸಮಸ್ಯೆಗಳು ಹಲವಾರು: ಈ ಮೊದಲು ಪೂರೈಕೆಯಲ್ಲಿ ವ್ಯತ್ಯಯ ಸಾಮಾನ್ಯವಾಗಿತ್ತು. ಸ್ಥಳೀಯವಾಗಿ ಕೇಂದ್ರ ಆರಂಭವಾದ ಮೇಲೆ ಈ ಸಮಸ್ಯೆ ಪರಿಹಾರವಾಗಿದೆ. ಆದರೆ, ಈಗ ಇನ್ನೊಂದು ಸಮಸ್ಯೆ ಎದುರಿಸುತ್ತಿದ್ದೇವೆ. ಎಂಆರ್‌ಪಿಎಲ್ ಬಂಕ್‌ನಲ್ಲಿ ಪದೇ ಪದೇ ತಾಂತ್ರಿಕ ತೊಂದರೆ ಎದುರಾಗುತ್ತದೆ. ಆಗ ಉಳಿದ ಬಂಕ್‌ಗಳಲ್ಲಿ ವಾಹನಗಳು ಸಾಲು ನಿಲ್ಲುತ್ತವೆ. ಬಹುತೇಕ ಬಂಕ್‌ಗಳಲ್ಲಿ ಕಂಪ್ರೆಸರ್ ಸಮರ್ಪಕವಾಗಿಲ್ಲ. ಕಂಪ್ರೆಸರ್ ಇಲ್ಲದಿದ್ದರೆ 8 ಕೆ.ಜಿ. ಸಾಮರ್ಥ್ಯದ ಟ್ಯಾಂಕ್‌ಗೆ 7 ಕೆ.ಜಿ.ಯಷ್ಟು ಮಾತ್ರ ಅನಿಲ ತುಂಬಲು ಸಾಧ್ಯವಾಗುತ್ತದೆ. ಅನಿಲವನ್ನು ವಾಹನಕ್ಕೆ ಇಳಿಸುವಾಗ ಕನಿಷ್ಠ 220 ಬಾರ್ ಪ್ರೆಷರ್ ಇರಬೇಕು. ಬೆಂಗಳೂರು ಮತ್ತಿತರ ಕಡೆಗಳಲ್ಲಿ ಈ ರೀತಿ ಇದ್ದರೂ, ಮಂಗಳೂರಿನಲ್ಲಿ ಈ ವ್ಯವಸ್ಥೆ ಇಲ್ಲದ ಕಾರಣ, ವಾಹನಗಳ ಮೈಲೇಜ್ ಕೂಡ ಕೆ.ಜಿ.ಗೆ 4–5 ಕಿ.ಮೀ ಕಡಿಮೆಯಾಗುತ್ತಿದೆ’ ಎಂದು ಇನ್ನೊಬ್ಬರು ಗ್ರಾಹಕರು ಬೇಸರ ವ್ಯಕ್ತಪಡಿಸಿದರು.

ಅಧಿಕ ಬೆಲೆಯ ವಾಹನ, ಡಿಕ್ಕಿಯ ಜಾಗ ನುಂಗುವ ಟ್ಯಾಂಕ್, ದುಬಾರಿ ಬಿಡಿಭಾಗಗಳು ಹೀಗೆ ಹಲವಾರು ಸಮಸ್ಯೆಗಳ ನಡುವೆ ಕೂಡ ಮಾಲಿನ್ಯ ತಗ್ಗಿಸುವ ಸಿಎನ್‌ಜಿ ವಾಹನಗಳಿಗೆ ಮೊರೆ ಹೋಗಿರುವ ಗ್ರಾಹಕರು, ಈಗ ಜನಪ್ರತಿನಿಧಿಗಳು, ಜಿಲ್ಲಾಡಳಿತವನ್ನು ಭೇಟಿ ಮಾಡಿ, ದರ ನಿಯಂತ್ರಣಕ್ಕೆ ಒತ್ತಡ ತರಲು ಸಿದ್ಧತೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT