ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಕರ ಬಾಕಿ ವಸೂಲಿಗೆ ಗಡುವು

ಪಾಲಿಕೆ ಅಧಿಕಾರಿಗಳಿಗೆ ಸಚಿವ ಯು.ಟಿ.ಖಾದರ್ ತಾಕೀತು
Last Updated 17 ಜುಲೈ 2018, 14:34 IST
ಅಕ್ಷರ ಗಾತ್ರ

ಮಂಗಳೂರು: ನಗರದ ಹಲವು ಜನರು ಬಾಕಿ ಇರಿಸಿಕೊಂಡಿರುವ ₹ 16.42 ಕೋಟಿ ನೀರಿನ ಕರವನ್ನು ಎರಡು ತಿಂಗಳೊಳಗೆ ವಸೂಲಿ ಮಾಡುವಂತೆ ಮಂಗಳೂರು ಮಹಾನಗರ ಪಾಲಿಕೆಯ ನೀರು ಪೂರೈಕೆ ವಿಭಾಗದ ಅಧಿಕಾರಿಗಳಿಗೆ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ಆದೇಶಿಸಿದರು.

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಸಚಿವರು ಮಂಗಳವಾರ ನಡೆಸಿದ ಪ್ರಗತಿ ಪರಿಶೀಲನೆ ವೇಳೆ ನೀರಿನ ಕರ ಬಾಕಿ ಕುರಿತು ಚರ್ಚೆ ನಡೆಯಿತು. ₹ 16.42 ಕೋಟಿ ಕರ ಬಾಕಿ ಇರುವುದಾಗಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ವಸೂಲಿಗೆ ಎರಡು ತಿಂಗಳ ಗಡುವು ನೀಡಿದ ಸಚಿವರು, ತಪ್ಪಿದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.

₹ 1 ಲಕ್ಷಕ್ಕಿಂತ ಹೆಚ್ಚು ಬಾಕಿ ಇರಿಸಿಕೊಂಡಿರುವ 144 ಗ್ರಾಹಕರಿದ್ದಾರೆ. ಉಳ್ಳಾಲ ನಗರಸಭೆ ₹ 50 ಲಕ್ಷ ಮತ್ತು ಮೂಲ್ಕಿ ಪಟ್ಟಣ ಪಂಚಾಯಿತಿ ₹ 60 ಲಕ್ಷ ಬಾಕಿ ಪಾವತಿಸಬೇಕಿದೆ. ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಒಕ್ಕೂಟ ₹ 7.95 ಲಕ್ಷ, ದಕ್ಷಿಣ ರೈಲ್ವೆ ₹ 6 ಲಕ್ಷ, ಬಂದರು ಇಲಾಖೆ ₹ 1.03 ಲಕ್ಷ, ಕೆಎಸ್‌ಆರ್‌ಟಿಸಿ ₹ 1.02 ಲಕ್ಷ ಬಾಕಿ ಇರಿಸಿಕೊಂಡಿವೆ ಎಂದು ಕಾರ್ಯನಿರ್ವಾಹಕ ಎಂಜಿನಿಯರ್‌ ಲಿಂಗೇಗೌಡ ತಿಳಿಸಿದರು.

ದೊಡ್ಡ ಮೊತ್ತ ಬಾಕಿ ಇರಿಸಿಕೊಂಡಿರುವವರ ಹೆಸರು ಬಹಿರಂಗಪಡಿಸಲು ಲಿಂಗೇಗೌಡ ಹಿಂದೇಟು ಹಾಕಿದರು. ಆದರೆ, ಸಚಿವರ ಒತ್ತಡಕ್ಕೆ ಮಣಿದ ಅವರು ₹ 1 ಲಕ್ಷಕ್ಕಿಂತ ಹೆಚ್ಚಿನ ಬಾಕಿ ಹೊಂದಿರುವವರ ಪಟ್ಟಿಯನ್ನು ಓದಿದರು.

2015–16ರಲ್ಲಿ 34.50 ಕೋಟಿ ಹಾಗೂ 2016–17ರಲ್ಲಿ ₹ 33.13 ಕೋಟಿ ನೀರಿನ ಕರ ವಸೂಲಿ ಮಾಡಲಾಗಿದೆ. ಮೊದಲು ಹೊರಗುತ್ತಿಗೆ ಸಿಬ್ಬಂದಿ ಸಮೀಕ್ಷೆ ನಡೆಸಿ ನೀಡಿದ ವರದಿ ಪ್ರಕಾರ, ನಗರದಲ್ಲಿ 81,000 ನೀರಿನ ಸಂಪರ್ಕ ಮಾಹಿತಿ ದೊರಕಿತ್ತು. ಈಗ ಮಲ್ಟಿ ಪರ್ಪಸ್ ವರ್ಕರ್ಸ್ (ಎಂಪಿಡಬ್ಲ್ಯು) ಮೂಲಕ ಸಮೀಕ್ಷೆ ನಡೆಸಿದ್ದು, 91,000 ಸಂಪರ್ಕಗಳ ಮಾಹಿತಿ ಸಂಗ್ರಹಿಸಲಾಗಿದೆ. ಅವರ ಮೂಲಕವೇ ನೀರಿನ ಕರದ ಬಿಲ್ ನೀಡಲಾಗುತ್ತಿದೆ ಎಂದು ಪಾಲಿಕೆ ಆಯುಕ್ತ ಮೊಹಮ್ಮದ್ ನಝೀರ್ ತಿಳಿಸಿದರು.

ನೋಟಿಸ್‌ ಜಾರಿಗೆ ಸೂಚನೆ:

ನಗರದಲ್ಲಿ 8,000 ಆಸ್ತಿಗಳು ದಪ್ಪಟ್ಟು ತೆರಿಗೆ ವ್ಯಾಪ್ತಿಯಲ್ಲಿವೆ. ಆದರೆ, 5,000 ಆಸ್ತಿಗಳ ಮಾಲೀಕರು ಮಾತ್ರ ದುಪ್ಪಟ್ಟು ತೆರಿಗೆ ಪಾವತಿಸುತ್ತಾರೆ ಎಂದು ಕಂದಾಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದರು. ಸುಸ್ತಿದಾರರಿಗೆ ತಕ್ಷಣವೇ ನೋಟಿಸ್ ಜಾರಿಗೆ ಸೂಚಿಸಿದ ಸಚಿವರು, ಆಸ್ತಿ ತೆರಿಗೆ ಸಂಗ್ರದಲ್ಲಿ ತಿಂಗಳೊಳಗೆ ಪ್ರಗತಿ ದಾಖಲಿಸಬೇಕು ಎಂದು ತಾಕೀತು ಮಾಡಿದರು.

ನೀರಿನ ಕರ, ಆಸ್ತಿ ತೆರಿಗೆ, ಜಾಹೀರಾತು ಫಲಕಗಳ ತೆರಿಗೆ, ವಾಣಿಜ್ಯ ಆಸ್ತಿಗಳ ಬಾಡಿಗೆ ವಸೂಲಾತಿಗೆ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು. ನಿರ್ಲಕ್ಷ್ಯ ತೋರುವ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಖಾದರ್ ಎಚ್ಚರಿಕೆ ನೀಡಿದರು.

‘ಪಾಲಿಕೆ ದಾಖಲೆಗಳ ಸಂಪೂರ್ಣ ಕಂಪ್ಯೂಟರೀಕರಣ ಯೋಜನೆ ನನೆಗುದಿಗೆ ಬಿದ್ದಿದೆ. ಇದರಿಂದ ತೆರಿಗೆ ವಂಚಕರಿಗೆ ಅನುಕೂಲವಾಗುತ್ತಿದೆ. ವರಮಾನ ಸಂಗ್ರಹ ಹೆಚ್ಚಿಸಲು ಪೂರಕವಾದ ತಂತ್ರಾಂಶ ಅಳವಡಿಸಬೇಕು’ ಎಂದು ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ನವೀನ್‌ ಡಿಸೋಜ, ವಿರೋಧ ಪಕ್ಷದ ನಾಯಕ ಪ್ರೇಮಾನಂದ ಶೆಟ್ಟಿ ಒತ್ತಾಯಿಸಿದರು.

ಭೂ ಪರಿವರ್ತನೆ ಮತ್ತು ಕಟ್ಟಡ ನಿರ್ಮಾಣ ಅನುಮತಿ ನೀಡುವ ಪ್ರಕ್ರಿಯೆಯನ್ನು ಸರಳೀಕರಣ ಮಾಡಬೇಕು. ಇದಕ್ಕಾಗಿ ಏಕಗವಾಕ್ಷಿ ವ್ಯವಸ್ಥೆಯೊಂದನ್ನು ರೂಪಿಸಬೇಕು ಎಂದು ಬಿಜೆಪಿ ಸದಸ್ಯ ಸುಧೀರ್ ಶೆಟ್ಟಿ ಆಗ್ರಹಿಸಿದರು.

ವಲಯ ನಿಯಮಾವಳಿ:

‘ಮಂಗಳೂರು ಮಹಾನಗರ ಪಾಲಿಕೆಗೆ ಸರಿಯಾದ ವಲಯ ನಿಯಮಾವಳಿಗಳಿಲ್ಲ. ಆರ್ಥಿಕವಾಗಿ ಹಿಂದುಳಿದ ಜನರಿಗೆ ವಸತಿ ಕಲ್ಪಿಸುವ ಯೋಜನೆ ಜಾರಿಯಾಗಿಲ್ಲ. ಪ್ರೀಮಿಯಂ ಎಫ್‌ಎಆರ್‌ನಿಂದ ₹ 131 ಕೋಟಿ ಸಂಗ್ರಹವಾಗಿದೆ. ಆದರೆ, ₹ 17 ಕೋಟಿ ಮಾತ್ರ ವೆಚ್ಚ ಮಾಡಲು ಸಾಧ್ಯವಾಗಿದೆ. ತಕ್ಷಣವೇ ವಲಯ ನಿಯಮಾವಳಿ ರೂಪಿಸಲು ಸೂಚನೆ ನೀಡಬೇಕು’ ಎಂದು ಪ್ರೇಮಾನಂದ ಶೆಟ್ಟಿ ಸೇರಿದಂತೆ ಹಲವು ಸದಸ್ಯರು ಮನವಿ ಮಾಡಿದರು.

‘ನಗರದ ವ್ಯಾಪ್ತಿಯಲ್ಲಿರುವ ಆಸ್ತಿಗಳ ಖಚಿತ ಮಾಹಿತಿಯೇ ಪಾಲಿಕೆ ಬಳಿ ಇಲ್ಲ. ಇದರಿಂದ ತೆರಿಗೆ ಸೋರಿಕೆ ಆಗುತ್ತಿದೆ. ಸ್ವಯಂಘೋಷಿತ ಆಸ್ತಿ ತೆರಿಗೆಯ ಕುರಿತು ಪರಿಶೀಲಿಸುವ ಕ್ರಮವೂ ಇಲ್ಲ. ಈ ಲೋಪಗಳ ನಿವಾರಣೆಯ ಜೊತೆಗೆ, ಪಾಲಿಕೆಯಲ್ಲಿ ಇ– ಆಡಳಿತವನ್ನು ಬಲ‍ಪಡಿಸಬೇಕು’ ಎಂದು ಹಿರಿಯ ಸದಸ್ಯ ಕೆ.ಹರಿನಾಥ್ ಹೇಳಿದರು.

ಶಾಸಕರಾದ ಡಿ.ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಐವನ್‌ ಡಿಸೋಜ, ಮೇಯರ್ ಭಾಸ್ಕರ್ ಕೆ., ಉಪ ಮೇಯರ್ ಮಹಮ್ಮದ್ ಕುಂಜತ್ತ ಬೈಲ್‌, ನಗರಾಭಿವೃದ್ಧಿ ಇಲಾಖೆ ಜಂಟಿ ನಿರ್ದೇಶಕ ಎ.ಆರ್‌.ರವಿ ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT