ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುತ್ತಿಗೆಗೆ ಸಂಕೋಲೆ ಬಿಗಿದು ಯುವಕ ಸಾವು: ಕೊಲೆ ಪ್ರಕರಣ ದಾಖಲು

ಕುಡಿದು ದಾಂಧಲೆ ನಡೆಸುತ್ತಿದ್ದ ಯುವಕನನ್ನು ಮನೆಗೆ ಕರೆದೊಯ್ಯುತ್ತಿದ್ದ ವೇಳೆ ಘಟನೆ
Published 10 ಮೇ 2024, 13:57 IST
Last Updated 10 ಮೇ 2024, 13:57 IST
ಅಕ್ಷರ ಗಾತ್ರ

ಪುತ್ತೂರು: ಮದ್ಯಪಾನ ಮಾಡಿದ ಮತ್ತಿನಲ್ಲಿ ಪಕ್ಕದ ಮನೆಗೆ ಹೋಗಿ ದಾಂಧಲೆ ನಡೆಸಿದ ಯುವಕನನ್ನು ನಾಯಿಯನ್ನು ಕಟ್ಟಿಹಾಕುವ ಸಂಕೋಲೆಯಿಂದ ಬಿಗಿದು ಮನೆಗೆ ಎಳೆದುಕೊಂಡು ಹೋಗುತ್ತಿದ್ದ ವೇಳೆ, ಸಂಕೋಲೆ ಕುತ್ತಿಗೆಗೆ ಬಿಗಿದು ಯುವಕ ಮೃತಪಟ್ಟ ಘಟನೆ ಪುತ್ತೂರು ತಾಲ್ಲೂಕಿನ ಬೆಟ್ಟಂಪಾಡಿ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.

ಬೆಟ್ಟಂಪಾಡಿ ಗ್ರಾಮದ ಕಾನಾವುಮೂಲೆ ನಿವಾಸಿ ದಿ. ಕೊರಗಪ್ಪ ಶೆಟ್ಟಿ ಅವರ ಪುತ್ರ ಚೇತನ್ ಶೆಟ್ಟಿ (35) ಮೃತಪಟ್ಟ ಯುವಕ. ಚೇತನ್ ಶೆಟ್ಟಿ ಕುಡಿತದ ಚಟ ಹೊಂದಿದ್ದು, ಮದ್ಯ ಸೇವಿಸಿದ ಬಳಿಕ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ  ಎನ್ನಲಾಗಿದೆ.

ಗುರುವಾರ ರಾತ್ರಿ ವಿಷರೀತ ಮದ್ಯ ಸೇವಿಸಿ ಮನೆಗೆ ಬಂದಿದ್ದ ಚೇತನ್ ಶೆಟ್ಟಿ, ತಡರಾತ್ರಿ 2 ಸುಮಾರಿಗೆ ಮನೆಯಲ್ಲಿ ಗಲಾಟೆ ಮಾಡಿ ತಾಯಿ ಉಮಾವತಿಯೊಂದಿಗೆ ಜಗಳವಾಡಿ ಬಳಿಕ ನೆರೆಯ ನಿವಾಸಿ ಯೂಸುಫ್ ಎಂಬವರ ಮನೆಗೆ ಹೋಗಿ ಬಾಗಿಲು ಬಡಿಯುತ್ತಾ, ಕಿಟಕಿ ಬಾಗಿಲುಗಳಿಗೆ ಹೊಡೆಯುತ್ತಾ ದಾಂಧಲೆ ಎಬ್ಬಿಸಿದ್ದರು. ಈ ವಿಚಾರವನ್ನು ಯೂಸುಫ್ ಅವರು ಉಮಾವತಿಗೆ ಕರೆ ಮಾಡಿ, ಮಗನನ್ನು ಕರೆದುಕೊಂಡು ಹೋಗುವಂತೆ ತಿಳಿಸಿದ್ದರು.

ತಾಯಿ ಉಮಾವತಿ ಅವರು ಚೇತನ್‌ನನ್ನು ಮನೆಗೆ ಕರೆದುಕೊಂಡು ಬರಲು ನಾಯಿಯನ್ನು ಕಟ್ಟಿಹಾಕುವ ಸಂಕೋಲೆ ಹಿಡಿದುಕೊಂಡು ಯೂಸುಫ್ ಅವರ ಮನೆಗೆ ಹೋಗಿದ್ದರು. ಅಲ್ಲಿ ಗಲಾಟೆ ಮಾಡುತ್ತಿದ್ದ ಚೇತನ್‌ನನ್ನು ಯೂಸುಫ್ ಅವರ ಸಹಕಾರದೊಂದಿಗೆ ನಾಯಿಯನ್ನು ಕಟ್ಟಿ ಹಾಕುವ ಸಂಕೋಲೆಯಲ್ಲಿ ಕಟ್ಟಿಹಾಕಿ ಎಳೆದುಕೊಂಡು ಮನೆಗೆ ಬರುತ್ತಿದ್ದ ವೇಳೆ ಸಂಕೋಲೆ ಕುತ್ತಿಗೆಗೆ ಬಿಗಿದು, ಚೇತನ್‌ ಅಸ್ವಸ್ಥಗೊಂಡರು. ಅವರನ್ನು ಪುತ್ತೂರಿನ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು. ಆದರೆ, ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದ.

ಉಮಾವತಿ ಅವರು, ಚೇತನ್ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸಂಪ್ಯ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಪುತ್ತೂರು ಆಸ್ಪತ್ರೆಗೆ ತೆರಳಿ ಮೃತದೇಹ ಪರಿಶೀಲನೆ ನಡೆಸಿದ ವೇಳೆ ಮೃತದೇಹದ ಕುತ್ತಿಗೆಯ ಭಾಗದಲ್ಲಿ ಹಾಗೂ ಬೆನ್ನಿನ ಭಾಗದಲ್ಲಿ ಸಂಕೋಲೆಯಿಂದ ಬಿಗಿದ ಗುರುತುಗಳು ಕಂಡು ಬಂದಿತ್ತು. ಸಾವಿನ ವಿಚಾರದಲ್ಲಿ ಅನುಮಾನಗೊಂಡು ತಾಯಿಯನ್ನು ವಿಚಾರಣೆಗೆ ಒಳಪಡಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ.

ಎಸ್‌ಪಿ ರಿಷ್ಯಂತ್ ಸಿ.ಬಿ. ಘಟನೆ ನಡೆದ ಸ್ಥಳ ಮತ್ತು ಮೃತದೇಹ ಇರಿಸಿದ್ದ  ಪುತ್ತೂರಿನ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಘಟನೆಗೆ ಸಂಬಂಧಿಸಿದಂತೆ ಚೇತನ್ ತಾಯಿ ಉಮಾವತಿ ಮತ್ತು ಪಕ್ಕದ ಮನೆಯ ನಿವಾಸಿ ಯೂಸುಫ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT