ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತರೀಕೆರೆ: ಚುನಾವಣಾ ಬಾಂಡ್‌ ಹಗರಣದ ತನಿಖೆಗೆ ಒತ್ತಾಯ

Published 13 ಏಪ್ರಿಲ್ 2024, 14:00 IST
Last Updated 13 ಏಪ್ರಿಲ್ 2024, 14:00 IST
ಅಕ್ಷರ ಗಾತ್ರ

ತರೀಕೆರೆ: ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಮತ್ತು ದೇಶದ ಇತರ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್‌ ಮೂಲಕ ಪಡೆದಿರುವ ಸಾವಿರಾರು ಕೋಟಿ ಮೊತ್ತದ ಹಗರಣದ ಬಗ್ಗೆ ಕೂಲಂಕಷ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಜಿಲ್ಲಾ ಸಮಿತಿಯವರು ಉಪವಿಭಾಗಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

‘ಕಂಪನಿಯೊಂದರಿಂದ ₹ 966 ಕೋಟಿ ಪಡೆದಿರುವ ಕೇಂದ್ರ ಸರ್ಕಾರ ಮುಂಬೈಯಲ್ಲಿ ಸುರಂಗಮಾರ್ಗ ನಿರ್ಮಾಣ ಕಾಮಗಾರಿ ಗುತ್ತಿಗೆಯಲ್ಲಿ ₹ 14,400 ಕೋಟಿ ಮೊತ್ತದ ಅವ್ಯವಹಾರ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಲ್ಯಾಬೊರೇಟರಿ ಕಂಪನಿಯೊಂದು ತೆರಿಗೆ ವಂಚನೆ ಮಾಡಿದೆ ಎಂದು ಐಟಿ ದಾಳಿ ನಡೆಸಲಾಗಿತ್ತು. ಆ ಕಂಪನಿಯಿಂದ ₹ 80 ಕೋಟಿ ದೇಣಿಗೆ ಪಡೆಯಲಾಗಿದೆ. ಸ್ಯಾನಿಟೈಸರ್ ಉತ್ಪಾದಕ ಕಂಪನಿಯೊಂದರ ಮೇಲೆ ಜಿಎಸ್‌ಟಿ ದಾಳಿ ಮಾಡಲಾಗಿತ್ತು. ಹೆದರಿದ ಕಂಪನಿ ₹ 92 ಕೋಟಿ ದೇಣಿಗೆ ನೀಡಿದೆ’ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

‘ಪವರ್ ಲಿಮಿಟೆಡ್ ಸಂಸ್ಥೆಯೊಂದು ಅಕ್ರಮ ಹಣ ವರ್ಗಾವಣೆ ಆರೋಪದಡಿ ಇಡಿ ತನಿಖೆ ಎದುರಿಸುತ್ತಿದೆ. ಆ ಕಂಪನಿ ₹ 400 ಕೋಟಿ ದೇಣಿಗೆ ನೀಡಿರುವುದು ಅಚ್ಚರಿಯ ವಿಷಯ. ಐಟಿ ದಾಳಿಗೆ ಒಳಗಾದ ಆಸ್ಪತ್ರೆಯೊಂದರಿಂದ ₹ 162 ಕೋಟಿ, ಚೆನ್ನೈನ ಕಂಪನಿಯಿಂದ ₹ 105 ಕೋಟಿ, ಹೈದರಾಬಾದ್ ಸಂಸ್ಥೆಯೊಂದರಿಂದ ₹ 60 ಕೋಟಿ, ಇಡಿ ದಾಳಿಗೆ ಕಂಪನಿಯಿಂದ ₹ 123 ಕೋಟಿ, ಸಿಬಿಐ ಮತ್ತು ಇಡಿ ತನಿಖೆ ಎದುರಿಸುತ್ತಿರುವ ಸಂಸ್ಥೆಯೊಂದರಿಂದ ₹ 130 ಕೋಟಿ ಪಡೆಯಲಾಗಿದೆ’ ಎಂದು ಸಮಿತಿಯವರು ದೂರಿದ್ದಾರೆ.

ಲಂಚವಾಗಿ ಮತ್ತು ಬ್ಲ್ಯಾಕ್‌ಮೇಲ್ ಮಾಡಿ ದೇಣಿಗೆ ಪಡೆದಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖಾ ಸಮಿತಿ ರಚಿಸಿ ತನಿಖೆ ನಡೆಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಓಂಕಾರಪ್ಪ ಎಂ, ಸುನಿಲ್ ಡಿ.ಎನ್, ರಘು ಹಾಗೂ ಹನುಮಂತು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT