ಶುಕ್ರವಾರ, ಜುಲೈ 1, 2022
21 °C
ಕುತೂಹಲ ಮೂಡಿಸಿರುವ ಸರ್ಕಾರದ ನಡೆ

ಕುಕ್ಕೆ ದೇವಳಕ್ಕೆ ಅಭಿವೃದ್ಧಿ ಪ್ರಾಧಿಕಾರ?                                

ಲೋಕೇಶ ಬಿ.ಎನ್. Updated:

ಅಕ್ಷರ ಗಾತ್ರ : | |

Prajavani

ಸುಬ್ರಹ್ಮಣ್ಯ: ರಾಜ್ಯದ ಶ್ರೀಮಂತ ದೇವಸ್ಥಾನಗಳಲ್ಲಿ ಒಂದಾಗಿರುವ ಕುಕ್ಕೆ ಸುಬ್ರಹ್ಮಣ್ಯದ ವ್ಯವಸ್ಥಾಪನ ಸಮಿತಿ ಅವಧಿ ಮುಗಿದು ಒಂದು ವರ್ಷ ಪೂರ್ಣಗೊಂಡಿದೆ. ನೂತನ ಆಡಳಿತ ಸಮಿತಿ ನೇಮಕಾತಿ ವಿಚಾರ ಆಗಾಗ್ಗೆ ಪ್ರಸ್ತಾಪವಾಗಿತ್ತಾದರೂ, ಇದುವರೆಗೂ ಆಗಿಲ್ಲ. ಈಗ ವ್ಯವಸ್ಥಾಪನ ಸಮಿತಿ ಬದಲಾಗಿ ಅಭಿವೃದ್ಧಿ ಸಮಿತಿ, ಅಭಿವೃದ್ಧಿ ಪ್ರಾಧಿಕಾರ ರಚಿಸಲು ಸರ್ಕಾರ ಮುಂದಾಗಿರುವ ಬಗ್ಗೆ ತೀವ್ರ ಚರ್ಚೆಗಳು ನಡೆಯತೊಡಗಿವೆ.

ದೇಗುಲದ ಆಡಳಿತಾಧಿಕಾರಿಯಾಗಿ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿರುವ ರೂಪಾ ಎಂ.ಎಸಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ದೇವಳದ ಆಡಳಿತ ನೋಡಿಕೊಳ್ಳುವ ದೃಷ್ಟಿಯಿಂದ ಅಧ್ಯಕ್ಷರು, ಕ್ಷೇತ್ರದ ಅರ್ಚಕರೂ ಸೇರಿ ಎಂಟು ಸದಸ್ಯರನ್ನೊಳಗೊಂಡ ವ್ಯವಸ್ಥಾಪನ ಸಮಿತಿ ಕಾರ್ಯನಿರ್ವಹಿಸುತ್ತದೆ. ಕ್ಷೇತ್ರದ ಎಲ್ಲ ಅಭಿವೃದ್ಧಿ ಚಟುವಟಿಕೆಗಳು ಈ ಸಮಿತಿ ನಿರ್ಣಯ ಮೂಲಕ ನಡೆಯುತ್ತವೆ. ಪ್ರಸ್ತುತ ವ್ಯವಸ್ಥಾಪನ ಸಮಿತಿಯ ಎಲ್ಲ ಪ್ರಕ್ರಿಯೆಗಳು ಸ್ಥಗಿತಗೊಂಡಿವೆ ಎನ್ನಲಾಗಿದೆ. ವ್ಯವಸ್ಥಾಪನ ಸಮಿತಿಗೆ ನೂರಾರು ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ ಇನ್ನೊಂದೆಡೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವನ್ನು ಪ್ರಾಧಿಕಾರ ಮಾಡಬೇಕೆಂಬ ಚಿಂತನೆಯ ಬಗ್ಗೆ ಇಲಾಖೆ, ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ.

ಸುಬ್ರಹ್ಮಣ್ಯ ಪ್ರಾಧಿಕಾರ ರಚನೆಗೊಂಡಲ್ಲಿ ರಾಜ್ಯದ ಮುಖ್ಯಮಂತ್ರಿ ಅದರ ಅಧ್ಯಕ್ಷರಾಗುತ್ತಾರೆ. ಧಾರ್ಮಿಕ ದತ್ತಿ ಸಚಿವರು ಉಪಾಧ್ಯಕ್ಷರಾಗಿ, ಧಾರ್ಮಿಕದತ್ತಿ ಇಲಾಖೆಯ ಆಯುಕ್ತರು ಕಾರ್ಯದರ್ಶಿಯಾಗಿ, ಸುಳ್ಯ ಶಾಸಕರು, ಸಂಸದರು, ಜಿಲ್ಲಾಧಿಕಾರಿ, ಸರ್ಕಾರದ ನಾಮನಿರ್ದೇಶಿತರು ಇದಕ್ಕೆ ಸದಸ್ಯರಾಗುತ್ತಾರೆ. ಕೆಎಎಸ್ ಅಧಿಕಾರಿ ದೇವಳದ ಆಡಳಿತಾಧಿಕಾರಿಯಾಗುತ್ತಾರೆ. ಅನುದಾನವು ನೇರವಾಗಿ ಅಭಿವೃದ್ಧಿ ಕಾರ್ಯಗಳಿಗೆ ಬಳಕೆಯಾಗುತ್ತದೆ.

ಪ್ರಾಧಿಕಾರ ರಚನೆ ಆಗುವವರೆಗೆ ಸರ್ಕಾರ ಅಭಿವೃದ್ಧಿ ಸಮಿತಿ ರಚಿಸುತ್ತದೆ. ಇದರಲ್ಲಿ ಐವರು ಸದಸ್ಯರು ಇರುತ್ತಾರೆ. ಕುಕ್ಕೆ ದೇಗುಲದ ಅಭಿವೃದ್ಧಿ ಸಮಿತಿಗೆ ಐವರು ಸದಸ್ಯರ ನೇಮಕ ಅಂತಿಮಗೊಂಡಿದ್ದು, ಪೊಲೀಸ್ ಇಲಾಖೆಯ ಪರಿಶೀಲನೆ ಹಂತದಲ್ಲಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು