ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆರೋಗ್ಯ ಸಿಬ್ಬಂದಿ ಕೊರತೆ ನಿವಾರಣೆಗೆ ಕ್ರಮ- ದಿನೇಶ್‌ ಗುಂಡೂರಾವ್‌

Published 3 ಮಾರ್ಚ್ 2024, 4:56 IST
Last Updated 3 ಮಾರ್ಚ್ 2024, 4:56 IST
ಅಕ್ಷರ ಗಾತ್ರ

ಮಂಗಳೂರು: ಆರೋಗ್ಯ ಇಲಾಖೆಯ ಸಿಬ್ಬಂದಿ ಕೊರತೆ ನಿವಾರಿಸಲು ಕ್ರಮ ವಹಿಸಲಾಗಿದೆ. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯರ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ತಿಳಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಫಾರ್ಮಸಿಸ್ಟ್‌ಗಳು ಮತ್ತು ಲ್ಯಾಬ್‌ ಟೆಕ್ನಿಷಿಯನ್‌ ಹುದ್ದೆಗಳು ಸೇರಿದಂತೆ ಒಟ್ಟು 800 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಶೀಘ್ರವೇ ಪೂರ್ಣಗೊಳ್ಳಲಿದೆ. ಕಡ್ಡಾಯ ಗ್ರಾಮೀಣ ಸೇವೆಯ ಮೂಲಕವೂ ಸರ್ಕಾರಿ ಸೇವೆಗೆ ವೈದ್ಯರು ಲಭ್ಯವಾಗಲಿದ್ದಾರೆ’ ಎಂದರು.  

‘ಗ್ಯಾರಂಟಿ ಯೋಜನೆಗಳ ಹೊರತಾಗಿಯೂ ರಾಜ್ಯದ ಆರ್ಥಿಕ ಸ್ಥಿತಿ ಚೆನ್ನಾಗಿಯೇ ಇದೆ. ಅತಿ ಹೆಚ್ಚು ಜಿಎಸ್‌ಟಿ ಸಂಗ್ರಹಿಸುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಸರ್ಕಾರ ಕಾಯಕ ಮಾಡುತ್ತಿಲ್ಲ, ದಾಸೋಹ ಮಾಡುತ್ತಿದೆ ಎಂದು ಎಂದು ವಿರೋಧ ಪಕ್ಷದವರು ಟೀಕಿಸಿದ್ದರು. ಗ್ಯಾರಂಟಿ ಯೋಜನೆಗಳಿಂದ ಜನರ ಕೈಗೆ ದುಡ್ಡು ಸೇರಿದೆ. ಜನ ಕೆಲಸವನ್ನೂ ಮಾಡುತ್ತಿದ್ದಾರೆ. ಖರ್ಚನ್ನೂ ಮಾಡುತ್ತಿದ್ದಾರೆ. ಆ ಹಣವೇ ಮಾರುಕಟ್ಟೆಗೆ ಹರಿದು ಬರುತ್ತಿದೆ. ಹಾಗಾಗಿಯೇ ರಾಜ್ಯದಲ್ಲಿ ಜಿಎಸ್‌ಟಿ ಸಂಗ್ರಹ ಪ್ರಮಾಣ ಕಳೆದ ಸಾಲಿಗಿಂತ ಶೇ 18ರಷ್ಟು ಹೆಚ್ಚಳವಾಗಿದೆ’ ಎಂದರು.

‘ಸರ್ಕಾರವನ್ನು ಹಿಂದೂ ವಿರೋಧಿ ಎಂದು ಬಿಂಬಿಸಲು ವಿರೋಧ ಪಕ್ಷಗಳು ಯತ್ನಿಸುತ್ತಿವೆ. ದೇವಸ್ಥಾನದ ದುಡ್ಡನ್ನು ಚರ್ಚ್‌ ಹಾಗೂ ಮಸೀದಿಗಳಿಗೆ ನೀಡಲಾಗುತ್ತಿದೆ ಎಂದು ಅಪಪ್ರಚಾರ ಮಾಡುತ್ತಿವೆ. ಬಿಎಸ್‌.ಯಡಿಯೂರಪ್ಪ ಅವರ ಆಡಳಿತಾವಧಿಯಲ್ಲಿ ಹಿಂದೂ ದೇವಸ್ಥಾನದಲ್ಲಿ ಸಂಗ್ರಹವಾಗುವ ಹಣವನ್ನು ಬೇರೆ ಧರ್ಮಗಳಿಗೂ ಹಂಚಲು ಅವಕಾಶ ಕಲ್ಪಿಸಲಾಗಿತ್ತು. ದೇವಸ್ಥಾನದ ಹಣವನ್ನು ಹಿಂದೂ ಧರ್ಮದ ಸಿ ವರ್ಗದ ದೇವಸ್ಥಾನಗಳಿಗೆ ಮಾತ್ರ ಹಂಚಬಹುದು ಎಂದು ಕಾನೂನು ತಿದ್ದುಪಡಿ ಮಾಡಿದ್ದು ನಾವು’ ಎಂದರು.

‘ಆಂಜನಾದ್ರಿ, ಮಂತ್ರಾಲಯ, ತಿರುಪತಿಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಕೋಟಿಗಟ್ಟಲೆ ಅನುದಾನ ನೀಡಿರುವ ನಮ್ಮ ಸರ್ಕಾರ ಹಿಂದೂ ವಿರೋಧಿಯೇ’ ಎಂದು ಅವರು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT