ಮಂಗಳೂರು: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ, ಯಾರಿಗೆ ಅಗತ್ಯ ಇದೆಯೋ ಅಂತಹವರಿಗೆ ಯೋಜನೆಯ ಲಾಭ ಸಿಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಗುರುವಾರ ಇಲ್ಲಿ ಮಾಧ್ಯಮದವರೊಡನೆ ಮಾತನಾಡಿದ ಅವರು, 'ಯೋಜನೆಯನ್ನು ಇನ್ನೂ ಹೆಚ್ಚು ಜನರಿಗೆ ತಲುಪಿಸಲು ಕ್ರಮ ವಹಿಸಲಾಗುವುದು. ಯೋಜನೆ ಅನುಷ್ಠಾನದಲ್ಲಿ ಸೋರಿಕೆಯಾಗುವುದನ್ನು ತಪ್ಪಿಸಬೇಕು, ಅಗತ್ಯ ಇರುವವರಿಗೆ ಯೋಜನೆ ಸಿಗಬೇಕು. ಇದು ಹೊಸ ಯೋಜನೆ ಆಗಿದ್ದು, ನ್ಯೂನತೆ ಇದ್ದರೆ ಸರಿಪಡಿಸಿಕೊಂಡು ಮುಂದುವರಿಸುತ್ತೇವೆ ಎಂದರು.
ಅಗತ್ಯ ಇರುವವರಿಗೆ ಗ್ಯಾರಂಟಿ ಯೋಜನೆ ಸಿಗಬೇಕು, ಅರ್ಹತೆ ಇಲ್ಲದವರಿಗೆ ಸಿಕ್ಕಿದರೆ ಅದು ಸರ್ಕಾರಕ್ಕೆ ಹೊರೆ ಮತ್ತು ಯೋಜನೆಯ ಉದ್ದೇಶವೂ ಅಲ್ಲ. ಬಡವರು, ಅಗತ್ಯ ಇರುವವರಿಗೆ ಸಿಗಬೇಕು ಎಂಬುದು ಯೋಜನೆಯ ಉದ್ದೇಶ. ಸರ್ಕಾರದ ಹಣ ದುರುಪಯೋಗ ಆಗಬಾರದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಬಗ್ಗೆ ಸಮೀಕ್ಷೆ ನಡೆಸಿ, ವರದಿ ಪಡೆದು ಮಾನದಂಡಗಳ ಬಗ್ಗೆ ಚರ್ಚಿಸಲಾಗುವುದು ಎಂದರು.
ನಗರದ ಹೊರ ವಲಯದ ಕೆತ್ತಿಕಲ್ ನಲ್ಲಿ ನಡೆದ ಗುಡ್ಡ ಕುಸಿತಕ್ಕೆ ಸಂಬಂಧಿಸಿ ತಜ್ಞರ ವರದಿ ಪಡೆದು ಸುರಕ್ಷತೆಗೆ ಕ್ರಮ ವಹಿಸಲಾಗುವುದು. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯ ತನಿಖೆ ನಡೆಯುತ್ತಿದ್ದು, ಈ ತಿಂಗಳ ಕೊನೆಯೊಳಗೆ ವರದಿ ಸಲ್ಲಿಕೆಯಾಗಲಿದೆ. ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು. ಭೂಮಿಯ ಜಾಗದ ಮಾಲೀಕರು ಮತ್ತು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಗುತ್ತಿಗೆ ಪಡೆದಿರುವ ಕಂಪನಿಯ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು.
ಈ ಬಾರಿ ಎಲ್ಲ ಜಿಲ್ಲೆಗಳಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಅಂಗಾಂಗ ದಾನ ಮಾಡಿದವರನ್ನು ಗುರುತಿಸಿ ಸನ್ಮಾನಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಘನ ವಾಹನ ಸಂಚಾರಕ್ಕೆ ತಡೆ
ಕುಳೂರು ಹಳೆ ಸೇತುವೆ ಸುರಕ್ಷಿತೆಗೆ ಸಂಬಂಧಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವರದಿ ನೀಡಿದ್ದು, ಸೇತುವೆಯ ಮೇಲೆ ಘನ ವಾಹನ ಸಂಚಾರ ತಡೆಗೆ ಸಲಹೆ ನೀಡಿದೆ. ಆಗಸ್ಟ್ 19,20 ಮತ್ತು 21 ರಂದು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗುವುದು. ಪ್ರಸ್ತುತ ಇರುವ ಹೊಸ ಸೇತುವೆಯ ಮೇಲೆ ವಾಹನ ದಟ್ಟಣೆ ಕಡಿಮೆ ಇರುವ ಮಧ್ಯಾಹ್ನ 11ರಿಂದ 3ರವರೆಗೆ, ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ, ದ್ವಿಮುಖ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ. ಹಳೆ ಸೇತುವೆ ಬಂದ್ ಮಾಡಲಾಗುತ್ತದೆ. ಘನವಾಹನಕ್ಕೆ ಮಧ್ಯಾಹ್ನದ ವೇಳೆ ಸುರತ್ಕಲ್, ಬಜಪೆ ಮಾರ್ಗದಲ್ಲಿ ಅವಕಾಶ ಒದಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.