ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕಿತರು ಓಡಾಡಿದಲ್ಲಿ ಪ್ರಕರಣ ದಾಖಲು; ಡಾ. ರಾಜೇಂದ್ರ ಕೆ.ವಿ ಸೂಚನೆ

ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಸೂಚನೆ
Last Updated 14 ಆಗಸ್ಟ್ 2021, 13:28 IST
ಅಕ್ಷರ ಗಾತ್ರ

ಮಂಗಳೂರು: ರಾಜ್ಯದ ಮುಖ್ಯಮಂತ್ರಿ ನೀಡಿರುವ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಮೂಲಕ ಜಿಲ್ಲೆಯಲ್ಲಿ ಕೋವಿಡ್-19 ಹಾಗೂ ಅದರ ಪಾಸಿಟಿವಿಟಿ ದರವನ್ನು ನಿಯಂತ್ರಿಸುವಂತೆ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ, ಅಧಿಕಾರಿಗಳಿಗೆ ತಾಕೀತು ಮಾಡಿದರು.

ಶನಿವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ವಿಡಿಯೊ ಸಂವಾದದಲ್ಲಿ ಅವರು ಮಾತನಾಡಿದರು.

‘ಈಗಾಗಲೇ ಕೋವಿಡ್ ಬಾಧಿತರನ್ನು ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲಿಸಲಾಗುತ್ತಿದೆ. ಇದನ್ನು ‍ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ನೋಡಿಕೊಳ್ಳಬೇಕು. ಸೋಂಕು ತಗುಲಿರುವವರು ಹೊರಗೆ ಓಡಾಡಿದ್ದು ಕಂಡಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು. ಗರ್ಭಿಣಿಯರಾಗಿದ್ದಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಬೇಕು. ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲಿಸುವುದರಿಂದ ವಿನಾಯಿತಿ ನೀಡಬೇಕಾದಲ್ಲಿ, ಅದು ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿಗೆ ತಿಳಿದಿರಬೇಕು ಎಂದರು.

ಸೋಂಕು ನಿರ್ವಹಣೆಯಲ್ಲಿ ಯಾವುದೇ ಕೊರತೆ ಆಗದಂತೆ ಅಗತ್ಯ ಪರಿಕರಗಳು ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇರಬೇಕು. ಸೋಂಕಿತರೊಂದಿಗೆ ಸಂಪರ್ಕ ಇದ್ದವರ ಪತ್ತೆ ಕಾರ್ಯ ಮತ್ತಷ್ಟು ಚುರುಕಾಗಬೇಕು. ಅವರ ಸಂಪರ್ಕ ಪತ್ತೆ ಹಚ್ಚಲು ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಬಳಸಿಕೊಳ್ಳಬಹುದು ಎಂದು ಸಲಹೆ ಮಾಡಿದರು.

ಕೋವಿಡ್ ನಿರ್ವಹಣಾ ದೃಷ್ಟಿಯಿಂದ ತಾಲ್ಲೂಕು ಆರೋಗ್ಯಾಧಿಕಾರಿಗೆ ಅಗತ್ಯವಿದ್ದರೆ ಅನುದಾನ ಬಿಡುಗಡೆ ಮಾಡಲಾಗುವುದು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮೂಲಕ ಪತ್ರ ಬರೆದು ಅನುದಾನ ಪಡೆಯಬಹುದು. ಅದೇ ರೀತಿ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗೂ ಅಗತ್ಯವಿದ್ದಲ್ಲಿ ಹಣ ನೀಡಲಾಗುವುದು. ವಾರಾಂತ್ಯ ಕರ್ಫ್ಯೂ ಅನುಷ್ಠಾನದ ಬಗ್ಗೆ ಅಧಿಕಾರಿಗಳು ಕ್ಷೇತ್ರ ಕಾರ್ಯ ನಡೆಸಬೇಕು. ಪ್ರಯೋಗಾಲಯ ತಂತ್ರಜ್ಞರ ಅಗತ್ಯವಿದ್ದರೆ ಕೂಡಲೇ ನೇಮಕ ಮಾಡಿಕೊಳ್ಳಬೇಕು. ವಾಹನಗಳ ಅಗತ್ಯವಿದ್ದರೆ ಕೂಡಲೇ ಪಡೆದುಕೊಳ್ಳುಬಹುದು. ಆಂಬುಲೆನ್ಸ್‌ಗಳ ಅಗತ್ಯವಿದ್ದರೆ ಅವುಗಳನ್ನು ಬಾಡಿಗೆಗೆ ಪಡೆಯಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ರಿಕ್ರಿಯೆಷನ್ ಕ್ಲಬ್‌ಗಳನ್ನು ಬಂದ್ ಮಾಡಲಾಗಿದೆ, ಬಾರ್ ಹಾಗೂ ಹೋಟೆಲ್‌ಗಳಲ್ಲಿ ಶೇ 50ರ ಅನುಪಾತದಲ್ಲಿ ನಿರ್ವಹಿಸಬೇಕು. ಪರಿಸ್ಥಿತಿಯ ಗಂಭೀರತೆ ಅರಿತು ಅಧಿಕಾರಿಗಳು ಹಾಗೂ ಸಿಬ್ಬಂದಿ ಕೆಲಸ ಮಾಡಬೇಕು ಎಂದರು.

ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಜ್ಞಾ ಅಮ್ಮೆಂಬಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

‘ಸಾವು ಸಂಭವಿಸದಂತೆ ಎಚ್ಚರವಹಿಸಿ’

ಹೋಂ ಐಸೊಲೇಷನ್‌ನಲ್ಲಿರುವ ಸೋಂಕಿತರು ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕು. ಅಧಿಕಾರಿಗಳು ಈ ಬಗ್ಗೆ ಮನೆಗೆ ಭೇಟಿ ನೀಡಿ ಖಚಿತಪಡಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಸಾವು ಸಂಭವಿಸದಂತೆ ಎಚ್ಚರ ವಹಿಸಬೇಕು. ಮನೆಯ ಸುತ್ತಮುತ್ತ ಸೋಂಕಿತರು, ಸಂಪರ್ಕಿತರು ಓಡಾಡುವುದು ಕಂಡುಬಂದಲ್ಲಿ ವಿಡಿಯೊ ಮಾಡಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು. ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ತಪಾಸಣೆಯನ್ನು ಮತ್ತಷ್ಟು ಹೆಚ್ಚಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT