ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭೆ ಚುನಾವಣೆ: ಭದ್ರಕೋಟೆಯಲ್ಲಿ ನಳಿನ್‌ಗೆ ಮತ್ತೆ ಮಣೆ ಹಾಕುವುದೇ ಬಿಜೆಪಿ?

Published 24 ಜನವರಿ 2024, 21:50 IST
Last Updated 24 ಜನವರಿ 2024, 21:50 IST
ಅಕ್ಷರ ಗಾತ್ರ

ಮಂಗಳೂರು: ಬಿಜೆಪಿಯ ಭದ್ರ ಕೋಟೆ ಎಂದೇ ಗುರುತಿಸಿಕೊಂಡಿ ರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಅಸಮಾಧಾನದ ಅಲೆಯನ್ನು ತಣಿಸಿ ಲೋಕಸಭೆ ಚುನಾವಣೆ ಎದುರಿಸಬೇಕಾದ ಇಕ್ಕಟ್ಟಿಗೆ ಬಿಜೆಪಿ ನಾಯಕತ್ವ ಸಿಲುಕಿದೆ.

ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಸತತ ಗೆಲುವಿನ ಸರಪಣಿಯು 1991ರ ಲೋಕಸಭೆ ಚುನಾವಣೆಯಲ್ಲಿ ವಿ.ಧನಂಜಯ ಕುಮಾರ್‌  ಗೆಲುವಿನೊಂದಿಗೆ ಕಳಚಿತ್ತು. ಆ ಬಳಿಕ ನಡೆದ ಎಂಟೂ ಚುನಾವಣೆಗಳಲ್ಲಿಇಲ್ಲಿ ಬಿಜೆಪಿಯದೇ ಪಾರುಪತ್ಯ.

2004ರ ಚುನಾವಣೆಯಲ್ಲಿ ಆಗಿನ ಸಂಸದ ಧನಂಜಯ್‌ ಕುಮಾರ್‌ ವಿರುದ್ಧ ಪಕ್ಷದೊಳಗೆ ಅಸಮಾಧಾನವಿತ್ತು. ಆಗ ಅವರಿಗೆ ಟಿಕೆಟ್‌ ನಿರಾಕರಿಸಿದ ಬಿಜೆಪಿ, ಡಿ.ವಿ. ಸದಾನಂದ ಗೌಡರನ್ನು ಕಣಕ್ಕಿಳಿಸಿ ಗೆಲುವಿನ ಓಟವನ್ನು ಮುಂದುವರಿಸಿತ್ತು. 2009ರ ಚುನಾವಣೆ ವೇಳೆ ಕಾರ್ಯಕರ್ತ ವಲಯದಲ್ಲಿ ಸದಾನಂದ ಗೌಡರ ವಿರುದ್ಧವೂ ಅಸಮಾಧಾನ ವ್ಯಕ್ತವಾಗಿತ್ತು. ‌ಆಗ ಸಂಘ ಪರಿವಾರದ ಹಿನ್ನೆಲೆಯ ಯುವ ನಾಯಕ ನಳಿನ್‌ ಕುಮಾರ್‌ ಕಟೀಲ್‌ ಅವರನ್ನು ಪಕ್ಷವು ಕಣಕ್ಕಿಳಿಸಿತ್ತು. ಈ ಸಲವೂ ಪಕ್ಷ ಅದೇ ತಂತ್ರ ಅನುಸರಿಸಬಹುದು ಎಂಬ ಚರ್ಚೆ ಪಕ್ಷದಲ್ಲಿ ನಡೆಯುತ್ತಿದೆ

ಬೆಳ್ಳಾರೆಯಲ್ಲಿ 2022ರ ಜುಲೈನಲ್ಲಿ ಪಕ್ಷದ ಯುವ ಮೋರ್ಚಾ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆ ನಡೆದ ಸಂದರ್ಭದಲ್ಲಿ ನಳಿನ್‌ ವಿರುದ್ಧ ಪಕ್ಷದ ಕಾರ್ಯಕರ್ತರು ಬಹಿರಂಗವಾಗಿಯೇ ಅಸಮಾಧಾನ ತೋರ್ಪಡಿಸಿದ್ದರು. ಪುತ್ತೂರು ಕ್ಷೇತ್ರದ ಟಿಕೆಟ್‌ ಹಂಚಿಕೆ  ಆದ ಬಳಿಕ ಇದು ತಾರಕಕ್ಕೇರಿತ್ತು. ಈ ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅರುಣ್‌ ಕುಮಾರ್‌ ಪುತ್ತಿಲ 62,458 ಮತಗಳನ್ನು ಗಳಿಸುವ ಮೂಲಕ ಪಕ್ಷದ ಅಧಿಕೃತ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಅವರು ಮೂರನೇ ಸ್ಥಾನಕ್ಕೆ ಕುಸಿಯುವಂತೆ ಮಾಡಿದ್ದರು.

ಪುತ್ತಿಲ ಬೆಂಬಲಿಗರು ಸಾಮಾಜಿಕ ಮಾಧ್ಯಮಗಳಲ್ಲಿ ಗುಂಪುಗಳನ್ನು ರಚಿಸಿಕೊಂಡು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪುತ್ತಿಲ ಅವರಿಗೆ ಟಿಕೆಟ್‌ ನೀಡಬೇಕು ಎಂಬ ಅಭಿಯಾನ ನಡೆಸುತ್ತಿದ್ದಾರೆ. ನಳಿನ್‌ಗೆ ಈ ಸಲವೂ ಟಿಕೆಟ್‌ ನೀಡಿದರೆ ಪುತ್ತಿಲ ಪಕ್ಷೇತರರಾಗಿ ಸ್ಪರ್ಧಿಸುವ ಸಾಧ್ಯತೆ ದಟ್ಟವಾಗಿದೆ.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಇತ್ತೀಚೆಗೆ ಮಂಗಳೂರಿನಲ್ಲಿ ಕಾರ್ಯಕರ್ತರ ಸಭೆಯಲ್ಲಿ ‘ನಳಿನ್‌ ಅವರಿಗೆ ಈ ಬಾರಿಯೂ ಆಶೀರ್ವದಿಸಿ’ ಎಂದು ಹೇಳಿಕೆ ನೀಡಿದ್ದರು.

‘ರಾಜ್ಯ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ನಳಿನ್‌ಗೆ ಟಿಕೆಟ್‌ ನಿರಾಕರಿಸಿದರೆ ವಿರೋಧ ಪಕ್ಷದವರು ಅದನ್ನು ರಾಜಕೀಯವಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ’ ಎಂದು ಬಿಜೆಪಿ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. 

ಪಕ್ಷದ ರಾಜ್ಯ ಘಟಕದ ಕಾರ್ಯದರ್ಶಿ ಕ್ಯಾ. ಬೃಜೇಶ್‌ ಚೌಟ ಅವರೂ ಟಿಕೆಟ್‌ಗೆ ಪ್ರಬಲ ಆಕಾಂಕ್ಷಿ. ಅರುಣ್‌ ಪುತ್ತಿಲ ಬಣದ ವಿರೋಧ ಇರುವುದು ನಳಿನ್‌ ಸ್ಪರ್ಧೆಗೆ ಮಾತ್ರ. ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಅಭ್ಯರ್ಥಿ ಆಯ್ಕೆಗೆ ವರಿಷ್ಠರು ತೀರ್ಮಾನಿಸಿದರೆ, ತಮಗೂ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಅವರದು.

ಅಸಮಾಧಾನ ತಣಿಸಲು ಪಕ್ಷದ ವರಿಷ್ಠರು ನಿರ್ಧರಿಸಿದರೆ, ನಳಿನ್‌ ಅವರನ್ನು ಉಡುಪಿ– ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಣಕ್ಕಿಳಿಸಿ, ಇಲ್ಲಿ ಬೇರೊಬ್ಬರಿಗೆ ಟಿಕೆಟ್‌ ನೀಡುವ ಸಾಧ್ಯತೆಯೂ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಲೋಕಸಭಾ ಚುನಾವಣೆ ಕಾರ್ಯತಂತ್ರದ ಬಗ್ಗೆ ಚರ್ಚಿಸಲು ಜಿಲ್ಲೆಯ 16 ಬೂತ್‌ಗಳಲ್ಲೂ ಪೂರ್ವಭಾವಿ ಸಭೆ ನಡೆಸಿದ್ದೇವೆ. ಈ ಸಭೆಗಳಿಗೆ ನಮ್ಮ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾಗಿದೆ.
–ಹರೀಶ್‌ ಕುಮಾರ್‌, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ
ಲೋಕಸಭೆಗೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಪಕ್ಷದ ವರಿಷ್ಠರು ಈಗಾಗಲೇ ರಾಜ್ಯಮಟ್ಟದಲ್ಲಿ ಸಭೆ ನಡೆಸಿ ಚರ್ಚಿಸಿದ್ದಾರೆ. ಯಾರನ್ನೇ ಕಣಕ್ಕಿಳಿಸಿದರೂ ಅನಾಯಾಸವಾಗಿ ಗೆಲ್ಲಿಸುತ್ತೇವೆ.
–ಸತೀಶ್‌ ಕುಂಪಲ, ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ

ಗೆಲ್ಲಲು ಬಿಲ್ಲವರಿಗೆ ಮಣೆ ಹಾಕಲಿದೆ ಕಾಂಗ್ರೆಸ್‌?

1991ರ ಲೋಕಸಭಾ ಚುನಾವಣೆವರೆಗೆ ಜಿಲ್ಲೆಯಲ್ಲಿ ಒಮ್ಮೆಯೂ ಸೋಲನ್ನೇ ಕಾಣದ ಕಾಂಗ್ರೆಸ್‌ ಪಾಲಿಗೆ, ಆ ಬಳಿಕ ಗೆಲುವು ಮರೀಚಿಕೆಯಾಗಿದೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯದಾದ್ಯಂತ ಗೆಲುವಿನಲೆಯಲ್ಲಿ ತೇಲಿದ್ದ ಪಕ್ಷಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫಲಿತಾಂಶ ನಿರಾಶೆ ಮೂಡಿಸಿತ್ತು. ಇಲ್ಲಿನ ಎಂಟರಲ್ಲಿ ಎರಡು ಕ್ಷೇತ್ರಗಳಲ್ಲಿ ಮಾತ್ರ ಪಕ್ಷದ ಅಭ್ಯರ್ಥಿಗಳು ಗೆದ್ದಿದ್ದರು. ಈ ಲೋಕಸಭೆ ಚುನಾವಣೆಯಲ್ಲಾದರೂ ಗತ ವೈಭವವನ್ನು ಮರಳಿ ಪಡೆಯಬೇಕೆಂದು ಪಕ್ಷದ ಮುಖಂಡರು ಶತಾಯ ಗತಾಯ ಪ್ರಯತ್ನ ಮಾಡುತ್ತಿದ್ದಾರೆ.

ಬಿಜೆಪಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಖ್ಯಾ ಪ್ರಾಬಲ್ಯ ಹೊಂದಿರುವ ಬಿಲ್ಲವರಿಗೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ ನೀಡಿಯೇ ಇಲ್ಲ. ಇದೇ ವಿಚಾರವನ್ನು ಚುನಾವಣಾ ಅಸ್ತ್ರವನ್ನಾಗಿ ಮಾಡಿಕೊಂಡು ಬಿಲ್ಲವ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕಾಂಗ್ರೆಸ್‌ ಪಕ್ಷವು ತಯಾರಿ ನಡೆಸಿದೆ. ಬಿಜೆಪಿಯೊಳಗಿನ ಭಿನ್ನಮತದ ಲಾಭ ಪಡೆದು ಚುನಾವಣೆ ಗೆಲ್ಲಲು ಕಾರ್ಯತಂತ್ರ ರೂಪಿಸುತ್ತಿದೆ.

ಕಾರ್ಯಕರ್ತರಲ್ಲಿ ಸ್ಥೈರ್ಯ ತುಂಬಲು ರಾಜ್ಯಮಟ್ಟದ ಸಮಾವೇಶವನ್ನೂ ಜಿಲ್ಲೆಯಲ್ಲಿ ಆಯೋಜಿಸಲಾಗುತ್ತಿದೆ. ಈ ಸಮಾವೇಶದ ನೆಪದಲ್ಲಿ ಜಿಲ್ಲೆಯ 16 ಬ್ಲಾಕ್‌ಗಳಲ್ಲೂ ಸಭೆ ನಡೆಸಿದೆ.

ಬಿಲ್ಲವ ಸಮುದಾಯದವರಾದ ಮಾಜಿ ಸಂಸದ, ಮಾಜಿ ಸಚಿವ ವಿನಯಕುಮಾರ್‌ ಸೊರಕೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಪದ್ಮರಾಜ್‌ ಆರ್‌, ಕೆಪಿಸಿಸಿ ವಕ್ತಾರ ವಿವೇಕ್‌ರಾಜ್‌ ಪೂಜಾರಿ ಪ್ರಬಲ ಆಕಾಂಕ್ಷಿಗಳು. ಹಿರಿತನವನ್ನು ಆಧರಿಸಿ ಟಿಕೆಟ್‌ ನೀಡಿದರೆ ಸೊರಕೆ ಅಭ್ಯರ್ಥಿಯಾಗುವ ಸಾಧ್ಯತೆ ಇದೆ. ಯುವ ಮುಖಗಳಿಗೆ ಮಣೆ ಹಾಕಿದರೆ ಪದ್ಮರಾಜ್‌ ಆರ್‌. ಅಥವಾ ವಿವೇಕ್‌ರಾಜ್‌ ಪೂಜಾರಿ ಅವರಲ್ಲಿ ಒಬ್ಬರಿಗೆ ಟಿಕೆಟ್‌ ಸಿಗುವ ಸಾಧ್ಯತೆ ಇದೆ.  ರಕ್ಷಿತ್‌ ಶಿವರಾಂ ಹೆಸರೂ  ಚಾಲ್ತಿಯಲ್ಲಿತ್ತಾದರೂ, ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಅಷ್ಟು ಆಸಕ್ತಿ ಹೊಂದಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.

’ರಾಜ್ಯದಲ್ಲಿ ನಮ್ಮದೇ ಪಕ್ಷದ ಸರ್ಕಾರ ಅಸ್ತಿತ್ವಕ್ಕ ಬಂದ ಜಾರಿಗೊಳಿಸಿರುವ ಯೋಜನೆಗಳಿಂದಾಗಿ ಜಿಲ್ಲೆಯಲ್ಲಿ ಪಕ್ಷಕ್ಕೆ ಬಲ ಬಂದಿದೆ. ಉಡುಪಿ– ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಂಟ ಸಮುದಾಯದವರಿಗೆ ಟಿಕೆಟ್‌ ನೀಡಿದರೆ, ನಮ್ಮ ಜಿಲ್ಲೆಯಲ್ಲಿ ಬಿಲ್ಲವರಿಗೆ ಟಿಕೆಟ್‌ ನೀಡುವ ಸಾಧ್ಯತೆ ಜಾಸ್ತಿ. ಪಕ್ಷವು ಯಾರಿಗೆ ಟಿಕೆಟ್‌ ನೀಡಿದರೂ ಗೆಲ್ಲಿಸಿಕೊಂಡು ಬರಲು ಶಕ್ತಿ ಮೀರಿ ಪ್ರಯತ್ನಿಸುತ್ತೇವೆ’ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್‌ ಕುಮಾರ್‌ ’ಪ್ರಜಾವಾಣಿ‘ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT