ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ.ಕ: ಎನ್‌ಐಎ ಅಧಿಕಾರಿಗಳಿಂದ 16 ಕಡೆ ಶೋಧ

Published 19 ಮಾರ್ಚ್ 2024, 5:22 IST
Last Updated 19 ಮಾರ್ಚ್ 2024, 5:22 IST
ಅಕ್ಷರ ಗಾತ್ರ

ಪುತ್ತೂರು/ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು‌ ಮತ್ತು ಬಂಟ್ವಾಳ ತಾಲ್ಲೂಕುಗಳಲ್ಲಿ ಒಟ್ಟು 16 ಕಡೆ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ಅಧಿಕಾರಿಗಳು ಸ್ಥಳೀಯ ಪೊಲೀಸರ ನೆರವಿನಿಂದ ಬುಧವಾರ ಶೋಧ ಕಾರ್ಯ ನಡೆಸಿದರು.

‘ಬಿಹಾರದ ಪಾಟ್ನಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೇಲೆ ದಾಳಿಗೆ ಸಂಚು ರೂಪಿಸಿದ್ದ ಪ್ರಕರಣದ ತನಿಖೆ ನಡೆಸುತ್ತಿರುವ ಎನ್ಐಎ ಅಧಿಕಾರಿಗಳ ತಂಡ ಜಿಲ್ಲೆಗೆ ಭೇಟಿ ನೀಡಿದೆ. ಈ ಪ್ರಕರಣದ ತನಿಖೆಯ ಅಂಗವಾಗಿ ಜಿಲ್ಲೆಯಲ್ಲೂ ಕೆಲವು ಮನೆಗಳು, ಕಚೇರಿಗಳು ಹಾಗೂ ಆಸ್ಪತ್ರೆಯಲ್ಲಿ ತಪಾಸಣಾ ಕಾರ್ಯ ಕೈಗೊಳ್ಳಲಾಗಿದೆ. ಭಯೋತ್ಪಾದಕ ಕೃತ್ಯಗಳಿಗೆ ಕೊಲ್ಲಿ ರಾಷ್ಟ್ರಗಳಿಂದ ಹವಾಲಾ ಮೂಲಕ ರವಾನೆಯಾದ ಹಣ ಬಳಕೆಯಾಗಿದೆ ಎಂಬ ಸಂಶಯದಿಂದ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ’ ಎಂದು ಸ್ಥಳೀಯ ಪೊಲೀಸ್ ಮೂಲಗಳು ತಿಳಿಸಿವೆ‌.

ಪುತ್ತೂರು ತಾಲ್ಲೂಕಿನ ಚಿಕ್ಕಮುಡ್ನೂರು ಗ್ರಾಮದ ಕೆರೆಮೂಲೆ, ಸಂಪ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಕುಟಿನೋಪಿನಡ್ಕ ಮತ್ತು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೂರ್ನಡ್ಕ ಕ್ಯಾಂಪ್ಕೊ ಚಾಕಲೇಟ್ ಕಾರ್ಖಾನೆಯ ಬಳಿಯ ವಸತಿ ಸಮುಚ್ಚಯದ ಮನೆಯೊಂದನ್ನು ತಪಾಸಣೆ ನಡೆಸಿ ನಿವಾಸಿಗಳನ್ನು ವಿಚಾರಣೆ ನಡೆಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಬಂಟ್ವಾಳ ತಾಲ್ಲೂಕಿನ ನರಿಕೊಂಬು ಮತ್ತು ಗೋಳ್ತಮಜಲು ಗ್ರಾಮಗಳಲ್ಲಿ ತಲಾ ಎರಡು ಕಡೆ, ಮಾಣಿ, ನೆಟ್ಲಮುಡ್ನೂರು, ಕೊಳ್ನಾಡು, ಸಜಿಪನಡು, ಸಜಿಪಮೂಡ ಗ್ರಾಮಗಳು ಸೇರಿ ಒಟ್ಟು 9 ಕಡೆ ಎನ್ಐಎ ದಾಳಿ ನಡೆಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಡಿಜಿಟಲ್ ರೂಪದಲ್ಲಿ ಹಣ ವರ್ಗಾವಣೆ ಮಾಡಿದ್ದಕ್ಕೆ ಸಂಬಂಧಿಸಿದ ಉಪಕರಣಗಳನ್ನು ಅಧಿಕಾರಿಗಳು ದಾಳಿ ವೇಳೆ ವಶಕ್ಕೆ ಪಡೆದಿದ್ದಾರೆ ಎಂದು ಗೊತ್ತಾಗಿದೆ.

‘ಎನ್‌ಐಎ ಅಧಿಕಾರಿಗಳು ಭಯೋತ್ಪಾದನಾ ಕೃತ್ಯಗಳಿಗೆ ಬೆಂಬಲ ನೀಡಿದ ಸಂಶಯದ ಮೇರೆಗೆ ಕೆಲವರ ವಿಚಾರಣೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ನಮಗೂ ಲಭ್ಯವಿಲ್ಲ’ ಎಂದು  ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. 

undefined undefined

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT