ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಡಾಳ್‌ ವಿಜಯೋತ್ಸವಕ್ಕೆ ಡಿ.ಕೆ.ಶಿವಕುಮಾರ್‌ ಪ್ರೇರಣೆ: ಈಶ್ವರಪ್ಪ

Last Updated 13 ಮಾರ್ಚ್ 2023, 6:59 IST
ಅಕ್ಷರ ಗಾತ್ರ

ಮಂಗಳೂರು: ‘ಭ್ರಷ್ಟಾಚಾರ ಪ್ರಕರಣದಲ್ಲಿ ಜಾಮೀನು ಸಿಕ್ಕಾಗ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ವಿಜಯೋತ್ಸವ ಮೆರವಣಿಗೆ ಆಚರಿಸುವುದಕ್ಕೆ ಪ್ರೇರಣೆ ನೀಡಿದ್ದೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌. ತಿಹಾರ್‌ ಜೈಲಿನಿಂದ ಬಿಡುಗಡೆಯಾಗಿದ್ದ ಡಿ.ಕೆ.ಶಿ ಅವರನ್ನು ಅವರ ಪಕ್ಷದ ಬೆಂಬಲಿಗರು ವಿಮಾನನಿಲ್ದಾಣದಿಂದಲೇ ಮೆರವಣಿಗೆಯಲ್ಲಿ ಕರೆ ತಂದಿದ್ದರು’ ಎಂದು ಬಿಜೆಪಿ ಮುಖಂಡ ಕೆ.ಎಸ್‌.ಈಶ್ವರಪ್ಪ ಹೇಳಿದರು.

ಮಂಗಳೂರು ಕ್ಷೇತ್ರದಲ್ಲಿ ಬಿಜೆಪಿ ವತಿಯಿಂದ ಸೋಮವಾರ ಹಮ್ಮಿಕೊಂಡಿರುವ ವಿಜಯ ಸಂಕಲ್ಪ ಯಾತ್ರೆಗೆ ಮುನ್ನ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಮಾಡಾಳ್‌ ವಿರೂಪಾಕ್ಷಪ್ಪ ಈ ರೀತಿ ಮಾಡಿದ್ದು ನೂರಕ್ಕೆ ನೂರು ತಪ್ಪು. ಬಿಜೆಪಿಯ ಕೇಂದ್ರ ಮತ್ತು ರಾಜ್ಯ ನಾಯಕರು ಸ್ಪಷವಾಗಿ ಇದನ್ನು ಟೀಕೆ ಮಾಡಿದ್ದಾರೆ. ಆದರೆ, ಡಿ.ಕೆ.ಶಿವಕುಮಾರ್‌ ಮೆರವಣಿಗೆ ಮಾಡಿದ್ದಾಗ ಕಾಂಗ್ರೆಸ್‌ ನಾಯಕರು ಒಬ್ಬರಾದರೂ ಅದನ್ನು ತಪ್ಪು ಅಂತ ಹೇಳಿದ್ದರೇ’ ಎಂದು ಪ್ರಶ್ನಿಸಿದರು.

ಕಾವೂರಿನಲ್ಲಿ ಭಾನುವಾರ ವಿಜಯ ಸಂಕಲ್ಪ ಯಾತ್ರೆಯಲ್ಲಿ ‘ಮುಸ್ಲೀಮರ ಮತ ಬೇಕಾಗಿಲ್ಲ’ ಎಂದು ಹೇಳಿಕೆ ನೀಡಿದ್ದನ್ನು ಸಮರ್ಥಿಸಿಕೊಂಡ ಈಶ್ವರಪ್ಪ, ‘ಎಲ್ಲ ಮುಸ್ಲಿಮರ ಮತ ಬೇಡ ಎಂದಿಲ್ಲ. ಪಿಎಫ್‌ಐ, ಎಸ್‌ಡಿಪಿಐ ಬೆಂಬಲಿಸುವ ಮುಸ್ಲಿಮರ ಕುರಿತಾಗಿ ಆ ರೀತಿ ಹೇಳಿದ್ದೇನೆ. ರಾಷ್ಟ್ರವಾದಿ ಮುಸ್ಲಿಮರು ನಮಗೇ ಬೆಂಬಲ ನೀಡುತ್ತಾರೆ. ನಾನು ಪ್ರತಿನಿಧಿಸುವ ಕ್ಷೇತ್ರದ 60ಕ್ಕೂ ಹೆಚ್ಚು ಬೂತ್‌ಗಳಲ್ಲಿ ಮುಸ್ಲಿಮರ 62 ಸಾವಿರ ಮತಗಳಿವೆ. ಹಿಂದಿನ ಚುನಾವಣೆಯಲ್ಲಿ ಅವರೊಬ್ಬರೂ ನನಗೆ ಮತ ಹಾಕಿರಲಿಲ್ಲ. ಕಳೆದ ಚುನಾವಣೆಯಲ್ಲಿ ಯಾವ ಮುಸ್ಲಿಮರ ಬಳಿಯೂ ನಾನು ಮತ ಕೇಳಿಲ್ಲ. ಆದರೂ 5 ಸಾವಿರಕ್ಕೂ ಅಧಿಕ ಮುಸ್ಲಿಮರು ನನಗೆ ಮತ ಹಾಕಿದ್ದಾರೆ. ಅವರಿಗೆ ಸವಲತ್ತು ಒದಗಿಸುವ ವಿಚಾರದಲ್ಲಿ ಯಾವತ್ತೂ ರಾಜಕೀಯ ಮಾಡಿಲ್ಲ’ ಎಂದರು.

‘ಆಜಾನ್‌ ನಿಷೇಧ ಕುರಿತ ಮಾತನಾಡುವಾಗ ಅಲ್ಲಾಹ್‌ ಅವರಿಗೆ ಕಿವಿ ಕೇಳಲ್ವಾ ಎಂದು ಕೇಳಿದ್ದು ಹೌದು. ಇದು ಧಾರ್ಮಿಕ ನಿಂದನೆ ಅಲ್ಲ. ಆಜಾನ್‌ಗೆ ಮೂರು ನಾಲ್ಕು ಧ್ವನಿವರ್ಧಕ ಬಳಸುವ ಮೂಲಕ ಮುಸ್ಲಿಮರೇ ಅವರ ದೇವರಿಗೆ ಅವಮಾನ ಮಾಡುತ್ತಿದ್ದಾರೆ. ಪರೀಕ್ಷೆಗೆ ತಯಾರಿ ನಡೆಸುವ ವಿದ್ಯಾರ್ಥಿಗಳಿಗೆ ಆಜಾನ್‌ನಿಂದ ಸಮಸ್ಯೆ ಆಗುತ್ತದೆ ಎಂಬ ಭಾವನೆ ಜನರಲ್ಲಿದೆ. ಜನರ ಮನಸ್ಸಿನಲ್ಲಿರುವುದನ್ನು ನಾನು ವ್ಯಕ್ತಪಡಿಸಿದ್ದೇನಷ್ಟೇ. ಮುಸ್ಲಿಂ ನಾಯಕರು ಈ ಬಗ್ಗೆ ಚಿಂತನೆ ಮಾಡಬೇಕು’ ಎಂದು ತಿಳಿಸಿದರು.

‘ಸ್ವಾತಂತ್ರ್ಯ ಹೋರಾಟ ಮಾಡಿದ್ದು ಚರಂಡಿ ಸ್ವಚ್ಛಗೊಳಿಸುವುದಕ್ಕಾಗಿ ಅಲ್ಲ, ದೇಶದ ಚರಿತ್ರೆ ಸಂಸ್ಕೃತಿ ಉಳಿಸಲು. ಬಿಜೆಪಿಯು ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ದೇಶದ ಸಂಸ್ಕೃತಿಗೆ ಅಡ್ಡಿಯಾಗುವ ಅಂಶಗಳನ್ನು ಒಂದೊಂದಾಗಿ ಕಿತ್ತುಹಾಕಿದೆ. ಗೋಹತ್ಯೆ ನಿಷೇಧ ಮಾಡಿದೆ. ಮತಾಂತರ ತಡೆಯಲು ಕಾನೂನು ರೂಪಿಸಿದೆ. ತ್ರಿವಳಿ ತಲಾಖ್‌ಗೆ ನಿಷೇಧ ಹೇರಿದೆ. ಇವತ್ತಲ್ಲ ನಾಳೆ ಆಜಾನ್‌ ಕುರಿತೂ ಕ್ರಮಕೈಗೊಳ್ಳಲಿದೆ’ ಎಂದು ಸ್ಪಷ್ಟಪಡಿಸಿದರು.

‘ಅಖಂಡ ಭಜನೆ ವರ್ಷಪೂರ್ತಿ ನಡೆಯುವುದಿಲ್ಲ. ಕೆಲವೇ ಕಡೆ ಮಾತ್ರ ದಿನದ 24 ಗಂಟೆ ಭಜನೆ ನಡೆಯುತ್ತದೆ. ಇದನ್ನು ಜನ ಸುಧಾರಿಸಿಕೊಳ್ಳಬೇಕು’ ಎಂದರು.

‘ಚುನಾವಣೆಗೆ ಸ್ಪರ್ಧಿಸಲು 75 ವರ್ಷ ದಾಟಿದವರಿಗೆ ಟಿಕೆಟ್‌ ನೀಡಬಾರದು ಎಂದು ಪಕ್ಷದ ಸಂವಿಧಾನದಲ್ಲಿ ಎಲ್ಲೂ ಹೇಳಿಲ್ಲ. ಬಸವರಾಜ ಹೊರಟ್ಟಿ ಅವರಿಗೆ 77 ವರ್ಷ. ಅವರು ಬಿಜೆಪಿ ಸೇರಿ ಸಭಾಪತಿಯೂ ಆಗಿದ್ದಾರೆ. ಚುನಾಯಿತ ಪ್ರತಿನಿಧಿಯಾಗಿಯೇ ಸಮಾಜ ಸೇವೆ ಮಾಡಬೇಕೆಂದಿಲ್ಲ. ನನ್ನಿಂದಾಗಿ ಬಿಜೆಪಿ ಅಲ್ಲ. ಪಕ್ಷವು ಚುನಾವಣೆಗೆ ನಿಲ್ಲುವಂತೆ ಸೂಚಿಸಿದರೆ ನಿಲ್ಲುತ್ತೇನೆ. ಬೇಡ ಎಂದರೆ ನಿಲ್ಲುವುದಿಲ್ಲ. ಮಗನಿಗೆ ನನ್ನ ಮಗನೂ ಆಕಾಶದಿಂದ ಉದುರಿಲ್ಲ. ಅವನಿಗೂ ಟಿಕೆಟ್‌ ಕೊಡಬಹುದು. ನನಗೂ ಕೊಡಬಹುದು. ಆದರೆ ಒಂದೇ ಮನೆಯಲ್ಲಿ ಇಬ್ಬರಿಗೆ ಟಿಕೆಟ್‌ ನೀಡುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ರಾಜಕಾರಣಿಯಾದವರು ಚುನಾವಣೆಗೆ ಸೀಟು ಬೇಕು ಎಂದು ಅಪೇಕ್ಷೆ ಪಡುವುದು ತಪ್ಪಲ್ಲ. ರಾಜ್ಯದ 224 ಕ್ಷೇತ್ರದಲ್ಲಿ ಸಮೀಕ್ಷೆ ನಡೆಸಲಾಗುತ್ತಿದೆ. ಪಕ್ಷದ ಸಿದ್ಧಾಂತಕ್ಕೆ ಯಾರು ಬದ್ಧವಾಗಿದ್ದಾರೆ, ಯಾರು ಗೆಲ್ಲುವ ಸಾಧ್ಯತೆ ಜಾಸ್ತಿ ಇದೆ ಎಂದು ನೋಡಿಕೊಂಡು ಅಭ್ಯರ್ಥಿಯನ್ನು ಹೈಕಮಾಂಡ್‌ ನಿರ್ಧರಿಸಲಿದೆ. ಹಾಲಿ ಶಾಸಕರಿಗೆ ಟಿಕೆಟ್‌ ಸಿಕ್ಕರೂ ಸಿಗಬಹುದು’ ಎಂದರು.

‘ಸಿದ್ದರಾಮಯ್ಯ ಪಕ್ಷ ಕಟ್ಟಲು ಇರುವವರಲ್ಲ. ಅವರಿರುವುದು ಅಧಿಕಾರ ಅನುಭವಿಸಲಿಕ್ಕೆ ಮಾತ್ರ. ‘ನಿಮ್ಮನ್ನು ಮುಖ್ಯಮಂತ್ರಿ ಮಾಡುವುದಿಲ್ಲ’ ಎಂದು ಸುಮ್ಮನೆ ಮಾತಿಗೆ ಹೇಳಿದರೂ ಅವರು ಕಾಂಗ್ರೆಸ್‌ನಲ್ಲಿ ಉಳಿಯುತ್ತಾರೆಯೇ ನೋಡಿ. ಜಾತಿ ಹೆಸರಿನಲ್ಲಿ ಮುಖ್ಯಮಂತ್ರಿ ಆಗಲು ಹೊರಟ ಅವರು ನನ್ನನ್ನು ಕೋಮುವಾದಿ ಎನ್ನುತ್ತಾರೆ. ಕಾಂಗ್ರೆಸ್‌ ಗ್ಯಾರಂಟಿ ಸೋಲಲಿದೆ’ ಎಂದರು.

ಮೇಯರ್‌ ಜಯಾನಂದ ಅಂಚನ್‌, ಶಾಸಕ ಡಾ.ವೈ.ಭರತ್‌ ಶೆಟ್ಟಿ, ಮಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಮಚಂದ್ರ ಮಿಜಾರು, ಪಕ್ಷದ ಮುಖಂಡರಾದ ದೇವದಾಸ ಹೆಗ್ಡೆ, ವಿಜಯ ಸಂಕಲ್ಪ ಯಾತ್ರೆಯ ಸಹಸಂಚಾಲಕ ದತ್ತಾತ್ರಿ ಶಿವಮೊಗ್ಗ, ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸುಧೀರ್‌ ಶೆಟ್ಟಿ ಕಣ್ಣೂರು ಹಾಗೂ ಮಂಗಳೂರು ದಕ್ಷಿಣ ಕ್ಷೇತ್ರ ಘಟಕದ ಅಧ್ಯಕ್ಷ ವಿಜಯಕುಮಾರ್‌ ಶೆಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT