ಮಂಗಳವಾರ, ಸೆಪ್ಟೆಂಬರ್ 29, 2020
27 °C
‘ಡಾಲ್ಫಿನ್‌ ಕನ್ಸರ್ವೇಶನ್‌’ ಯೋಜನೆ ಪ್ರಸ್ತಾವ

ಕಡಲಿನ ಸೂಕ್ಷ್ಮಜೀವಿಗಳ ಸಂರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕರಾವಳಿಯ ಕಡಲಿನಲ್ಲಿರುವ ಸೂಕ್ಷ್ಮಜೀವಿಗಳ ರಕ್ಷಣೆ ಹಾಗೂ ಅವುಗಳ ಅಧ್ಯಯನಕ್ಕಾಗಿ ಡಾಲ್ಫಿನ್‌ ಕನ್ಸರ್ವೇಶನ್‌ ಯೋಜನೆಯ ಪ್ರಸ್ತಾವವನ್ನು ಅರಣ್ಯ ಇಲಾಖೆಯು ತನ್ನ ಕೇಂದ್ರ ಕಚೇರಿಗೆ ಸಲ್ಲಿಸಿದೆ. ಅಲ್ಲಿಂದ ಕೇಂದ್ರ ಅರಣ್ಯ ಇಲಾಖೆಗೆ ಪ್ರಸ್ತಾವ ಸಲ್ಲಿಕೆಯಾಗಲಿದ್ದು, ನಂತರ ಯೋಜನೆ ಅನುಷ್ಠಾನಕ್ಕೆ ಬರುವ ಸಾಧ್ಯತೆ ಇದೆ.

ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಹೇಳಿದ ಪ್ರಕಾರ ಈ ಯೋಜನೆಯ ರೂಪುರೇಷೆ ಸಿದ್ಧವಾಗುತ್ತಿದೆ. ಕೇಂದ್ರ ಅರಣ್ಯ ಇಲಾಖೆಯು ವಿವಿಧ ರಾಜ್ಯಗಳಿಗೆ ಮಾಹಿತಿ ನೀಡುವಂತೆ ತಿಳಿಸಿದ್ದು, ಅದರನ್ವಯ ಕರ್ನಾಟಕದ ಕರಾವಳಿಯ 320 ಕಿ.ಮೀ. ವ್ಯಾಪ್ತಿಯ ಕಡಲಿನಲ್ಲಿರುವ ಡಾಲ್ಫಿನ್‌ ಸೇರಿದಂತೆ 40 ರೀತಿಯ ಅತಿ ಸೂಕ್ಷ್ಮಜೀವಿಗಳ ವಿವರಗಳನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ.

ಕರ್ನಾಟಕದ ಕರಾವಳಿಯಲ್ಲಿ ಹಲವು ಬಾರಿ ಡಾಲ್ಫಿನ್‌ಗಳು ಪತ್ತೆಯಾಗಿದ್ದು, 1972 ರಿಂದ ಇಲ್ಲಿಯವರೆಗೆ 19 ಅತಿ ಸೂಕ್ಷ್ಮ ಸಸ್ತನಿಗಳು ಕಂಡುಬಂದಿವೆ. ಈ ಪೈಕಿ 11 ಬಲೀನ್‌ ವೇಲ್‌, 3 ವೇಲ್‌ ಶಾರ್ಕ್‌, 2 ಸ್ಮಾರ್ಟ್‌ ವೇಲ್‌, 1 ಬ್ಲೂವೇಲ್‌, 1 ಕ್ಯುವೇರಿಯಸ್‌ ಬಿಕ್‌ಅಡ್‌ ವೇಲ್‌ ಹಾಗೂ ಒಂದು ಬಾರಿ ಗಿಟಾರ್‌ ಫಿಶ್‌ಗಳು ಪತ್ತೆಯಾಗಿವೆ ಎಂದು ಪರಿಸರ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಡಾ.ವೈ.ಕೆ. ದಿನೇಶ್‌ಕುಮಾರ್‌ ತಿಳಿಸಿದ್ದಾರೆ.

2006 ರಲ್ಲಿ ಕರ್ನಾಟಕ ಜೀವ ವೈವಿಧ್ಯತಾ ಮಂಡಳಿ ನೇತೃತ್ವದಲ್ಲಿ ನಡೆದ ಸಂಶೋಧನೆಯಲ್ಲಿ ರಾಜ್ಯ ಕರಾವಳಿಯಲ್ಲಿ 40 ಬಗೆಯ ಸೂಕ್ಷ್ಮ ಜೀವಿಗಳು ಪತ್ತೆಯಾಗಿವೆ. ಇದರಲ್ಲಿ 8 ಸಸ್ತನಿಗಳು, 3 ಬಗೆಯ ಕಡಲಾಮೆಗಳು, 3 ಜಾತಿ ಕಡಲ ಹಾವುಗಳು, 2 ಬಗೆಯ ಮೀನು, 3 ರೀತಿಯ ಕಪ್ಪೆಚಿಪ್ಪುಗಳು, ಸೀ ಕುಕುಂಬರ್‌, 14 ಬಗೆ ಕೋರೆಲ್ಸ್‌ ಮತ್ತು ನಾಲ್ಕು ಬಗೆಯ ಸ್ಪಾಂಜಸ್‌ಗಳು ಸೇರಿವೆ.

ಜನರಲ್ಲಿ ಸಂರಕ್ಷಣೆಯ ಅರಿವು’

ಮಂಗಳೂರು ಸೇರಿದಂತೆ ಕರಾವಳಿಯ ಕಡಲ ಕಿನಾರೆಗಳಲ್ಲಿ ಡಾಲ್ಫಿನ್‌ಗಳ ಮೃತದೇಹ ಪತ್ತೆಯಾಗುತ್ತಿದ್ದು, ಅವು ಯಾವ ಕಾರಣದಿಂದ ಸಾಯುತ್ತಿವೆ? ಎಷ್ಟು ಡಾಲ್ಫಿನ್‌ಗಳು ಇಲ್ಲಿವೆ? ಸಂರಕ್ಷಣೆ ಹೇಗೆ? ಎಂಬಿತ್ಯಾದಿ ವಿಷಯಗಳು ಆಗಾಗ್ಗೆ ಚರ್ಚೆಯಾಗುತ್ತಲೇ ಇವೆ. ಆದರೆ, ಇದುವರೆಗೆ ಈ ಬಗ್ಗೆ ಯಾವುದೇ ಅಧ್ಯಯನ ನಡೆದಿರಲಿಲ್ಲ.

‘ಡಾಲ್ಫಿನ್‌ಗಳನ್ನು ಗಮನದಲ್ಲಿಟ್ಟುಕೊಂಡು ಉಳಿದ ಸೂಕ್ಷ್ಮ ಜೀವಿಗಳ ಅಧ್ಯಯನ ಹಾಗೂ ಅವುಗಳ ಸಂರಕ್ಷಣೆಯ ಕುರಿತು ಮೀನುಗಾರರಿಗೆ ಮತ್ತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದೇ ಡಾಲ್ಫಿನ್‌ ಸಂರಕ್ಷಣೆ ಯೋಜನೆಯ ಉದ್ದೇಶ’ ಎಂದು ದಕ್ಷಿಣ ಕನ್ನಡ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕರಿಕಾಳನ್‌ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.