ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಂಕಣಿ ಸಾಹಿತ್ಯ ಅಕಾಡೆಮಿಗೆ ಉದ್ಯಮಿಗಳ ನೇಮಿಸದಿರಿ: ಸಾಹಿತಿ ಮನವಿ

Published 8 ಫೆಬ್ರುವರಿ 2024, 4:10 IST
Last Updated 8 ಫೆಬ್ರುವರಿ 2024, 4:10 IST
ಅಕ್ಷರ ಗಾತ್ರ

ಮಂಗಳೂರು: ರಾಜ್ಯದ ಕೊಂಕಣಿ ಸಾಹಿತ್ಯ ಅಕಾಡೆಮಿಗೆ ರಿಯಲ್‌ ಎಸ್ಟೇಟ್‌ ಉದ್ಯಮಿಗಳನ್ನು ಹಾಗೂ ವ್ಯಾಪಾರಿಗಳನ್ನು ನೇಮಿಸಬೇಡಿ. ಸಾಹಿತ್ಯ ಕ್ಷೇತ್ರದ ಪ್ರಮುಖರನ್ನೇ ಅಕಾಡೆಮಿಯ ಅಧ್ಯಕ್ಷರನ್ನಾಗಿ ನೇಮಿಸಿ ಎಂದು ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅವರಿಗೆ ಲೇಖಕ ಆಲ್ವಿನ್ ಮೆಂಡೋನ್ಸಾ ಪತ್ರ ಬರೆದಿದ್ದಾರೆ.

‘ಕೊಂಕಣಿ ಭಾಷೆ, ಸಾಹಿತ್ಯ ಕಲೆಗಳ ಅಭಿವೃದ್ಧಿಯನ್ನೇ ಪ್ರಮುಖ ಕಾರ್ಯಸೂಚಿಯನ್ನಾಗಿಟ್ಟುಕೊಂಡು ಅಕಾಡೆಮಿಯನ್ನು 1994ರಲ್ಲಿ ಸ್ಥಾಪಿಸಲಾಗಿದೆ. ರಾಜ್ಯದ ಕೊಂಕಣಿ ಅಕಾಡೆಮಿಗೆ ಕೆಲವು ಅವಧಿಗಳಲ್ಲಿ ಕೊಂಕಣಿ ಭಾಷೆಯ ಒಂದಕ್ಷರವನ್ನೂ ಬರೆಯಲು ಅಶಕ್ತರಾಗಿರುವ, ಸರಳವಾಗಿ ಕೊಂಕಣಿ ಓದಲೂ ಬಾರದ ಉದ್ಯಮಿಗಳನ್ನು, ಗುತ್ತಿಗೆದಾರರನ್ನು ಹಾಗೂ ರಾಜಕೀಯ ನಾಯಕರ ಹಿಂಬಾಲಕರನ್ನು ನೇಮಕ ಮಾಡಲಾಗಿದೆ. ಇದರಿಂದ ಸರ್ಕಾರದ ಹಣ ವ್ಯರ್ಥವಾಗಿದೆ. ಕೊಂಕಣಿ ಭಾಷಾಭಿವೃದ್ಧಿಯ ಆಶಯವೂ ಈಡೇರುತ್ತಿಲ್ಲ. ರಾಜಕಾರಣಿಗಳ ಹಿಂಬಾಲಕರಿಗೆ ಅಕಾಡೆಮಿಯ ಅಧ್ಯಕ್ಷ ಸ್ಥಾನ ಮಾರಾಟವಾಗುತ್ತಿದೆ ಎಂಬ ಅಪವಾದವೂ ಇದೆ’ ಎಂದು ಅವರು ಆರೋಪಿಸಿದ್ದಾರೆ.

‘ಸಮರ್ಥ ಅಧ್ಯಕ್ಷರ ನೇಮಕವಾಗದಿರುವುದರಿಂದಾಗಿ ಕೊಂಕಣಿ ಆಕಾಡೆಮಿ ತನ್ನ ಆಶೋತ್ತರಗಳನ್ನು ಈಡೇರಿಸಲು ಶಕ್ತವಾಗಿಲ್ಲ. ಅಕಾಡೆಮಿ ವ್ಯವಸ್ಥೆಯ ಲಾಭ ಪಡೆಯಲು ರಿಯಲ್ ಎಸ್ಟೇಟ್ ಉದ್ಯಮ ಕ್ಷೇತ್ರದ ಪ್ರಭಾವಿಗಳು ಈ ಸಲವೂ ಮುಂದಾಗಿದ್ದಾರೆ ಎಂಬ ಮಾತುಗಳು ಸಾಹಿತ್ಯ ಕ್ಷೇತ್ರದಲ್ಲಿ ಕೇಳಿಬರುತ್ತಿದೆ.’ 

‘ಕೊಂಕಣಿ ಸಾಹಿತ್ಯ, ಸಂಗೀತ, ನಾಟಕ, ಜಾನಪದ ಕಾರ್ಯಾಗಾರ, ಉತ್ಸವಗಳನ್ನು ಏರ್ಪಡಿಸಿ, ಸಾಹಿತ್ಯಕಾರರಿಗೆ, ಸಂಗೀತಗಾರರಿಗೆ ನಾಟಕಕಾರಿಗೆ ಜಾನಪದ ಕಲಾವಿದರಿಗೆ ಪ್ರೋತ್ಸಾಹ  ನೀಡುವುದು, ಕೊಂಕಣಿ ಪುಸ್ತಕ ರಚನೆ ಮತ್ತು ಪ್ರಕಟಣೆಯನ್ನು ಪ್ರೋತ್ಸಾಹಿಸುವುದು, ಕೊಂಕಣಿ ಮಹನೀಯರೊಂದಿಗೆ ಸಂವಾದ ಎರ್ಪಡಿಸುವುದು. ಕೊಂಕಣಿ ಭಾಷಾ ಮಾನ್ಯತಾ ದಿವಸ ಅಚರಣೆ, ಮಕ್ಕಳಲ್ಲಿ ಕೊಂಕಣಿ ಸಾಹಿತ್ಯ ಉತ್ಸವ, ಕಲಾಪ್ರತಿಭೋತ್ಸವ ಹಾಗೂ ವಿವಿಧ ಸ್ಪರ್ಧೆಗಳನ್ನು ನಡೆಸುವುದು, ಶಬ್ದಕೋಶ, ತ್ರೈಮಾಸಿಕ ಪತ್ರಿಕೆಯನ್ನು ಪ್ರಕಟಿಸುವುದು, ಕೊಂಕಣಿ ಭಾಷೆಯ ಜಾಗೃತಿ ಮೂಡಿಸುವುದು ಪ್ರಧಾನ ಕಾರ್ಯಕ್ರಮಗಳು’ ಎಂಬುದನ್ನು ಅಕಾಡೆಮಿಯ ವೆಬ್‌ಸೈಟ್'ನಲ್ಲೇ ( https://konkaniacademy.karnataka.gov.in/info-1/Introduction/kn) ಪ್ರಕಟಿಸಲಾಗಿದೆ. ಸಾಹಿತ್ಯದ ಅರಿವಿದ್ದವರಿಂದ ಮಾತ್ರ ಈ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸಾಧ್ಯ ಎಂದು ಅವರು ಹೇಳಿದ್ದಾರೆ.

ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ-ಸದಸ್ಯ ಸ್ಥಾನಗಳಿಗೆ ಕೊಂಕಣಿ ಓದಲು-ಬರೆಯಲು ಗೊತ್ತಿರುವ ಸಾಹಿತಿ, ಕವಿ, ಶಿಕ್ಷಕ, ಪತ್ರಕರ್ತರನ್ನು ಮಾತ್ರ ನೇಮಕ ಮಾಡಬೇಕು ಎಂದು ಅವರು ಕೋರಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT