ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು | ಮನೆ ಮನೆ ಕಸ ಸಂಗ್ರಹಕ್ಕೆ ಇನ್ನು ‘ಇ–ಆಟೊ’

24 ಪರಿಸರ ಸ್ನೇಹಿ ಆಟೊಗಳನ್ನು ಲೋಕಾರ್ಪಣೆಗೊಳಿಸಿದ ಪಾಲಿಕೆ
Published 19 ಜೂನ್ 2024, 15:48 IST
Last Updated 19 ಜೂನ್ 2024, 15:48 IST
ಅಕ್ಷರ ಗಾತ್ರ

ಮಂಗಳೂರು: ನಗರದಲ್ಲಿ ಮನೆ ಮನೆಯಿಂದ ಕಸ ಸಂಗ್ರಹಿಸಲು ಪಾಲಿಕೆಯು ವಿದ್ಯುತ್‌ಚಾಲಿತ ಆಟೊ‌ಗಳನ್ನು (ಇ–ಆಟೊ) ಖರೀದಿಸಿದೆ. ಮಾಲಿನ್ಯ ನಿಯಂತ್ರಣಕ್ಕೆ ನೆರವಾಗಲಿರುವ ಇಂತಹ 24 ಆಟೊಗಳು ಬಳಕೆಯಾಗಲಿವೆ. ಬೆಂಗಳೂರಿನ ಪ್ರಗ್ಯಾ ಆಟೊಮೊಬೈಲ್ಸ್ ಸಂಸ್ಥೆಯು ಪೂರೈಸಿರುವ ಈ ವಾಹನಗಳನ್ನು ಸಂಸದ ಕ್ಯಾ.ಬ್ರಿಜೇಶ್‌ ಚೌಟ ಬುಧವಾರ ಇಲ್ಲಿ ಲೋಕಾರ್ಪಣೆಗೊಳಿಸಿದರು. 

‘ಸ್ವಚ್ಛ ಮಂಗಳೂರು– ಹಸಿರು ಮಂಗಳೂರು ಪರಿಕಲ್ಪನೆಯನ್ನು ಸಾಕಾರಗೊಳಿಸಲು ಈ ಆಟೊಗಳು ನೆರವಾಗಲಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತ ಹಾಗೂ ಭಾರತದಲ್ಲೇ ತಯಾರಿಸುವ ಪರಿಕಲ್ಪನೆಯಡಿ ಈ ಕಸ ಸಂಗ್ರಹ ವಾಹನಗಳನ್ನು ನಿರ್ಮಿಸಲಾಗಿದೆ. ಪಾಲಿಕೆಯವರು ಇದನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು’ ಎಂದರು.

ಶಾಸಕ ವೇದವ್ಯಾಸ ಡಿ.ಕಾಮತ್, ‘ಇಂಧನ ಬೆಲೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಇಂತಹ ವಾಹನಗಳ ಅಗತ್ಯ ಹೆಚ್ಚು ಇದೆ. ತಲಾ 1 ಕಿ.ಮೀ ಚಲಾಯಿಸಲು ಬೇರೆ ಆಟೊಗಳಿಗೆ ₹ 12ರವರೆಗೆ ವೆಚ್ಚವಾದರೆ, ಈ ವಾಹನಕ್ಕೆ ಗರಿಷ್ಠ 50 ಪೈಸೆ ವೆಚ್ಚವಾಗುತ್ತದೆ. ಒಮ್ಮೆ ಚಾರ್ಚ್‌ ಮಾಡಿದ ಬಳಿಕ ವಾಹನವು 90 ಕಿ.ಮೀ ದೂರದವರೆಗೆ ಚಲಿಸಬಲ್ಲುದು’ ಎಂದರು.

‘ಓಣಿಗಳಲ್ಲಿರುವ ಮನೆಗಳಿಂದ ಪೌರಕಾರ್ಮಿಕರೇ ಕಸವನ್ನು ಹೊತ್ತೊಯ್ಯಬೇಕಾಗಿತ್ತು. ಆ ಶ್ರಮ ಇನ್ನು ತಪ್ಪಲಿದೆ. 5 ಅಡಿ ಅಗಲದ ಓಣಿಗಳಲ್ಲೂ ಈ ಆಟೊ ಚಲಿಸಬಲ್ಲುದು. ಈ ವಾಹನಗಳ ನಿರ್ವಹಣೆಗೆ ಪರ್ಯಾಯ ವ್ಯವಸ್ಥೆಯನ್ನು ಪಾಲಿಕೆ ಕಂಡುಕೊಳ್ಳಬೇಕು’ ಎಂದು ಅವರು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಹಸಿ ಮತ್ತು ಒಣ ಕಸ ಸಂಗ್ರಹಕ್ಕೆ ಸದ್ಯಕ್ಕೆ ಮೂರು ವಾರ್ಡ್‌ಗಳಿಗೆ ತಲಾ ಒಂದು ಆಟೊವನ್ನು ಬಳಸಲಿದ್ದೇವೆ. ಎಲ್ಲ ಕಾರ್ಯಗಳಿಗೆ ವಿದ್ಯುತ್‌ಚಾಲಿತ ವಾಹನ ಬಳಕೆಗೆ ಪಾಲಿಕೆ ಹಂತ ಹಂತವಾಗಿ ಕ್ರಮವಹಿಸಲಿದೆ. ಸಂಸ್ಕರಣಾ ಘಟಕಕ್ಕೆ ಕಸ ಸಾಗಿಸಲು ವಿದ್ಯುತ್ ಚಾಲಿತ ಆಟೊಟಿಪ್ಪರ್‌ ಬಳಸುವ ಚಿಂತನೆ ಇದೆ ಎಂದರು.    

ಶಾಸಕ ಡಾ.ವೈ. ಭರತ್ ಶೆಟ್ಟಿ, ಉಪಮೇಯರ್ ಸುನೀತಾ, ಪಾಲಿಕೆಯ  ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಗಣೇಶ್ ಕುಲಾಲ್, ಲೋಹಿತ್ ಅಮೀನ್, ವರುಣ್ ಚೌಟ, ಭರತ್‌ಕುಮಾರ್, ವಿರೋಧ ಪಕ್ಷದ ನಾಯಕ ಪ್ರವೀಣಚಂದ್ರ ಆಳ್ವ, ವಾರ್ಡ್‌ನ ಪಾಲಿಕೆ ಸದಸ್ಯ ದಿವಾಕರ ಪಾಂಡೇಶ್ವರ, ಪಾಲಿಕೆಯ ಆರೋಗ್ಯಾಧಿಕಾರಿ ಡಾ.ಮಂಜಯ್ಯ ಶೆಟ್ಟಿ, ಪ್ರಗ್ಯಾ ಆಟೊಮೊಬೈಲ್ಸ್ ವ್ಯವಸ್ಥಾಪಕ ನಿರ್ದೇಶಕ ಆದಿತ್ಯ ಸುರಾನ ಭಾಗವಹಿಸಿದ್ದರು.

ಪಾಲಿಕೆಯ ಸಚೇತಕ ಪ್ರೇಮಾನಂದ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.  ಆರೋಗ್ಯ ಕಾರ್ಯಕರ್ತರಿಗೆ ಸಮವಸ್ತ್ರ ವಿತರಿಸಲಾಯಿತು. ಪೌರಕಾರ್ಮಿಕರಿಗೆ  ವೈದ್ಯಕೀಯ ತಪಾಸಣೆ ನಡೆಸಲಾಯಿತು. 

ಅಂಕಿ ಅಂಶ

25 ಕಿ.ಮೀ ವಿದ್ಯುತ್ ಚಾಲಿತ ಆಟೊ ಪ್ರತಿ ಗಂಟೆಗೆ ಚಲಿಸುವ ಗರಿಷ್ಠ ವೇಗ ₹ 2.08 ಲಕ್ಷ ಪ್ರತಿ ವಾಹನ ಖರೀದಿಗೆ ತಗುಲಿದ ವೆಚ್ಚ 310 ಕೆ.ಜಿ ವಾಹನದಲ್ಲಿ ಏಕಕಾಲಕ್ಕೆ ಕೊಂಡೊಯ್ಯಬಹುದಾದ ಕಸದ ಗರಿಷ್ಠ ಪ್ರಮಾಣ

ಓಣಿಗಳಿರುವ ಕಡೆ ಮನೆ ಮನೆಯಿಂದ ಕಸ ಸಂಗ್ರಹಿಸಲು ಕಷ್ಟವಾಗುತ್ತಿತ್ತು. ಈ ವಾಹನವನ್ನು ಓಡಿಸುವುದು ತುಂಬಾ ಸುಲಭ. ಇದರಿಂದ ನಮಗೆ ತುಂಬಾ ಅನುಕೂಲವಾಗಲಿದೆ.
ಕುಮಾರ್‌, ಮನೆ ಮನೆಯಿಂದ ಕಸ ಸಂಗ್ರಹಿಸುವ ವಾಹನದ ಚಾಲಕ
ಪರಿಸರ ಸ್ನೇಹಿ ವಾಹನಗಳನ್ನು ಪಾಲಿಕೆಗೆ ಒದಗಿಸಲು ಖುಷಿಯಾಗುತ್ತಿದೆ. ವಾಹನಗಳನ್ನು ಪಾಲಿಕೆಯೇ ನಿರ್ವಹಣೆ ಮಾಡಲಿದೆ.
ಆದಿತ್ಯ ಸುರಾನ, ವ್ಯವಸ್ಥಾಪಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT