ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ–ಖಾತೆ ವಿಲೇವಾರಿ ಹೊಸ ತಂತ್ರಾಂಶ

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಸೆ.12ರಿಂದ ಆರಂಭ: ಮೇಯರ್ ಪ್ರೇಮಾನಂದ ಶೆಟ್ಟಿ
Last Updated 7 ಸೆಪ್ಟೆಂಬರ್ 2022, 14:25 IST
ಅಕ್ಷರ ಗಾತ್ರ

ಮಂಗಳೂರು: ಇ– ಖಾತೆ ನೀಡುವಲ್ಲಿ ಆಗುತ್ತಿದ್ದ ವಿಳಂಬವನ್ನು ತಪ್ಪಿಸಲು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೊಸ ಇ– ಆಸ್ತಿ ತಂತ್ರಾಂಶ ಅಳವಡಿಸಲಾಗಿದೆ. ಈ ವ್ಯವಸ್ಥೆ ಅಡಿಯಲ್ಲಿ ಎಂಟರಿಂದ 10 ದಿನಗಳಲ್ಲಿ ಅರ್ಜಿ ವಿಲೇವಾರಿ ಮಾಡಲು ಸಾಧ್ಯವಾಗಲಿದೆ ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ಹೇಳಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸೆ.12ರಿಂದ ಈ ವ್ಯವಸ್ಥೆ ಜಾರಿಯಾಗಲಿದೆ. ಈ ತಂತ್ರಾಂಶವು ಬಳಕೆದಾರ ಸ್ನೇಹಿಯಾಗಿದ್ದು, ಅರ್ಜಿದಾರರು ಮೊಬೈಲ್ ಮೂಲಕ ಈ ತಂತ್ರಾಂಶದಲ್ಲಿ ಅಳವಡಿಸಿದ ಅರ್ಜಿಯೊಂದಿಗೆ ತಮ್ಮ ಜಾಗದ ಆಸ್ತಿಗೆ ಸಂಬಂಧಿಸಿದ ಮಾಹಿತಿಯನ್ನು ಅಪ್‌ಲೋಡ್ ಮಾಡಿ, ಖಾತೆಯನ್ನು ಪಡೆಯಬಹುದು. ಹಿಂದಿನ ಮೂರು ವರ್ಷಗಳಲ್ಲಿ ಸುಮಾರು 23 ಸಾವಿರ ಖಾತಾವನ್ನು ನೀಡಲಾಗಿದೆ. ಈ ಹಿಂದೆ ಖಾತಾಕ್ಕೆ ಅರ್ಜಿ ಸಲ್ಲಿಸಿದರೆ, 30ರಿಂದ 50 ದಿನಗಳವರೆಗೆ ಕಾಯಬೇಕಾದ ಸಂದರ್ಭ ಇರುತ್ತಿತ್ತು. ಇನ್ನು ಜನರಿಗೆ ಈ ಅಲೆದಾಟ ತಪ್ಪಲಿದೆ’ ಎಂದರು.

ಇ–ಆಸ್ತಿ ಸಾಫ್ಟ್‌ವೇರ್ ತಂತ್ರಾಂಶವು ಆ್ಯಪ್ ಮೂಲಕ ಸಿದ್ಧಪಡಿಸುವ ಮಾಹಿತಿಯನ್ನು ಮಂಗಳೂರು ಒನ್ ಸೇವಾ ಕೇಂದ್ರಕ್ಕೆ ಸಲ್ಲಿಸಿ, ಖಾತೆ ಪಡೆಯಲು ಅನುಕೂಲ ಮಾಡಿಕೊಡುತ್ತದೆ. ಸೇವಾ ಕೇಂದ್ರವು ನಿಗದಿತ ಅವಧಿಯಲ್ಲಿ ಇದನ್ನು ವಿಲೇವಾರಿ ಮಾಡುತ್ತದೆ. ಸ್ಕ್ಯಾನ್ ಮಾಡಲಾಗುವ ಎಲ್ಲ ಅರ್ಜಿಗಳನ್ನು ಸಿಸ್ಟಮ್‌ನಲ್ಲಿ ಅಳವಡಿಸಿದ ಮೇಲೆ ನೇರವಾಗಿ ಮಂಗಳೂರು ಸೇವಾ ಕೇಮದ್ರದ ಮೂಲಕ ಸ್ವೀಕೃತವಾಗಿ ಸ್ವಯಂ ಚಾಲಿತವಾಗಿ ಪಾಲಿಕೆಯ ಶಾಖೆಗೆ ತಲುಪುತ್ತವೆ. ಅರ್ಜಿದಾರರು ಅನುಮೋದಿತ ಇ ಖಾತಾವನ್ನು ನಾಗರಿಕ, ಮಂಗಳೂರು ಸೇವಾ ಕೇಂದ್ರ ಪೋರ್ಟಲ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಮಾಹಿತಿ ನೀಡಿದರು.

ಈ ಹಿಂದಿನ ಕೈಬರಹ ಖಾತೆಗಳನ್ನು ಇ– ಖಾತೆಗಳಾಗಿ ಪರಿವರ್ತಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಖಾಲಿ ನಿವೇಶನ ಹೊರತುಪಡಿಸಿ, 2.2 ಲಕ್ಷ ಆಸ್ತಿಗಳಿದ್ದು, ಸಮಗ್ರ ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ನಕಾಶೆ ಸಿದ್ಧಪಡಿಸಲಾಗಿದೆ. 20 ವಾರ್ಡ್‌ಗಳಲ್ಲಿ ಡ್ರೋನ್ ಕ್ಯಾಮೆರಾ ಮೂಲಕ ಸಮೀಕ್ಷೆ ನಡೆಸಲಾಗಿದೆ. ಇನ್ನುಳಿದ 40 ವಾರ್ಡ್‌ಗಳಲ್ಲೂ ಇದನ್ನು ಮಾಡಲಾಗುವುದು ಎಂದರು.

ಕಾಗದ ರಹಿತ ಕಚೇರಿ: ಪಾಲಿಕೆಯ ನಿತ್ಯದ ಆಡಳಿತಾತ್ಮಕ ಕಾರ್ಯಗಳನ್ನು ಡಿಜಿಟಲೀಕರಣಗೊಳಿಸಿ, ಕಾಗದರಹಿತ ಕಚೇರಿಯನ್ನಾಗಿ ರೂಪಿಸುವ ವ್ಯವಸ್ಥೆ ಒಂದೂವರೆ ವರ್ಷಗಳಿಂದ ಚಾಲ್ತಿಯಲ್ಲಿದೆ. ಯಾಂತ್ರೀಕೃತಗೊಂಡ ಸೇವೆಗಳನ್ನು ನಾಗರಿಕ ಇಂಟರ್‌ಫೇಸ್ ಮೂಲಕ ಒದಗಿಸಲಾಗುತ್ತದೆ. ಐದು ಲಕ್ಷ ದಾಖಲೆಗಳನ್ನು ಈಗಾಗಲೇ ಡಿಜಿಟಲೀಕರಣಗೊಳಿಸಲಾಗಿದೆ. ಇವನ್ನು ಸುಲಭವಾಗಿ ಪಡೆಯಲು ‘ಮೆಟಾಡೇಟಾ‘ ಕೋಡಿಂಗ್ ವ್ಯವಸ್ಥೆ ಅಳವಡಿಸಲಾಗುತ್ತದೆ. ಈ ವ್ಯವಸ್ಥೆಯನ್ನು ವಲಯ ಕಚೇರಿಗಳಿಗೂ ವಿಸ್ತರಿಸಲಾಗುವುದು ಎಂದು ಹೇಳಿದರು. ಶಾಸಕರಾದ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಉಪಮೇಯರ್ ಸುಮಂಗಳಾ ರಾವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT