ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು | ತ್ಯಾಜ್ಯ ಡಿಜಿಟಲ್‌, ನಿರ್ವಹಣೆ ಮ್ಯಾನುವಲ್‌

ಎಲೆಕ್ಟ್ರಾನಿಕ್‌ ತ್ಯಾಜ್ಯ ಸಂಗ್ರಹ, ಸುರಕ್ಷಿತ ವಿಲೇವಾರಿಗೆ ಜನ ಜಾಗೃತಿ
Last Updated 22 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಮಂಗಳೂರು: ತ್ಯಾಜ್ಯ ನಿರ್ವಹಣೆ ನಗರಾಡಳಿತ ಹಾಗೂ ನಗರ ವಾಸಿಗಳ ನಿದ್ದೆಕೆಡಿಸುತ್ತಿದೆ. ಇದಕ್ಕೆ ಆಧುನಿಕತೆಯ ಸೇರ್ಪಡೆ ‘ಇ–ತ್ಯಾಜ್ಯ’(ಇ–ವೇಸ್ಟ್‌, ಎಲೆಕ್ಟ್ರಾನಿಕ್‌ ಸಾಮಗ್ರಿಗಳ ತ್ಯಾಜ್ಯ). ವರ್ಷಗಳಿಂದ ನಡೆಯುತ್ತಿರುವ ಡಿಜಿಟಲ್‌ ಕ್ರಾಂತಿಯ ಪರಿಣಾಮ ಮಂಗಳೂರು ಮಹಾನಗರದಲ್ಲೂ ಇ–ತ್ಯಾಜ್ಯ ಹೆಚ್ಚಿದೆ. ನಿರ್ವಹಣೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ.

ಮಂಗಳೂರು ನಗರ ಪಾಲಿಕೆ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಕಾನೂನು ರೀತಿಯ ಕ್ರಮಗಳನ್ನು ಅಳವಡಿಸುತ್ತಿದ್ದಾರೆ. ಎಲೆಕ್ಟ್ರಾನಿಕ್‌ ತ್ಯಾಜ್ಯ ಸಂಗ್ರಹ ಮತ್ತು ಸುರಕ್ಷಿತ ವಿಲೇವಾರಿಯನ್ನು ನಿರ್ದಿಷ್ಟ ಕಂಪನಿಗೆ ವಹಿಸಿಕೊಡಲಾಗಿದೆ. ತ್ಯಾಜ್ಯ ಸಂಗ್ರಹ ವಿಧಾನವು ಕಾರ್ಮಿಕರನ್ನು ಬಳಸುವ ಮ್ಯಾನುವಲ್‌ ವಿಧಾನದಲ್ಲೇ ಇದೆ, ಇ–ತ್ಯಾಜ್ಯದ ಆನ್‌ಲೈನ್‌ ಡಿಜಿಟಲ್‌ ನಿರ್ವಹಣೆ ಇಲ್ಲ.

ಈ ಮಧ್ಯೆ, ಖಾಸಗಿ ಹಾಗೂ ಸರ್ಕಾರೇತರ ಸಂಸ್ಥೆಗಳು ಇ–ತ್ಯಾಜ್ಯದ ವಿಲೇವಾರಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿವೆ. ಹೀಗಾಗಿ ನಗರದಲ್ಲಿ ಇದು ಆರೋಗ್ಯ ಸಮಸ್ಯೆ ಸೃಷ್ಟಿಸುವಷ್ಟು ನಿರ್ಲಕ್ಷ್ಯಕ್ಕೆ ಒಳಗಾಗಿಲ್ಲ. ಜನರಲ್ಲೂ ಅರಿವು ಹೆಚ್ಚುತ್ತಿದೆ.

ದೇಶದಲ್ಲಿ ಅಂದಾಜು 20 ಲಕ್ಷ ಟನ್ ಇ-ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ರಾಜ್ಯದಲ್ಲೂ ಕಡಿಮೆ ಏನಲ್ಲ. ಮಂಗಳೂರು ನಗರದಲ್ಲಿ ಪ್ರತೀ ತಿಂಗಳು 385.32 ಟನ್‌ ಇ–ತ್ಯಾಜ್ಯ ಸಂಗ್ರಹ ಹಾಗೂ ವಿಲೇವಾರಿ ಆಗುತ್ತಿದೆ ಎಂಬುದು ಮಾಲಿನ್ಯ ನಿಯಂತ್ರಣ ಮಂಡಳಿಯ ಲೆಕ್ಕಾಚಾರ. ಇದರಲ್ಲಿ ಕಂಪ್ಯೂಟರ್ ತ್ಯಾಜ್ಯ ಸಾಮಗ್ರಿ 70 ಶೇಕಡ ಇದ್ದರೆ, ಟೆಲಿಕಾಂಹಾಗೂ ಅನುಬಂಧಿತ ಕ್ಷೇತ್ರದಿಂದ ಶೇ 12, ವೈದ್ಯಕೀಯ ಪರಿಕರಗಳು ಶೇ 8 ಹಾಗೂ ಎಲೆಕ್ಟ್ರಾನಿಕ್ ಸಾಮಗ್ರಿ ಶೇ 7ರಷ್ಟು ಸೇರಿವೆ.

ಸಂಗ್ರಹ ಕೇಂದ್ರ: ಮಂಗಳೂರು ನಗರ ಪಾಲಿಕೆ ಲಾಲ್‌ಭಾಗ್‌ ಕಾರ್ಯಾಲಯ, ಕದ್ರಿ ಹಾಗೂ ಸುರತ್ಕಲ್‌ ಕಚೇರಿಗಳಲ್ಲಿ ಇ–ತ್ಯಾಜ್ಯ ಸಂಗ್ರಹ ಕಂಟೇನರ್‌ ಇರಿಸಲಾಗಿದೆ. ಸಾರ್ವಜನಿಕರು ತಾವು ಎಸೆಯುವಂಥ ಎಲೆಕ್ಟ್ರಾನಿಕ್‌ ಸಾಮಗ್ರಿಗಳನ್ನು ಇಲ್ಲಿ ಮುಕ್ತವಾಗಿ ಪ್ರವೇಶಿಸಿ ನಿರ್ದಿಷ್ಟ ಕಂಟೇನರ್‌ನಲ್ಲಿ ಹಾಕಬಹುದು. ಲಾಲ್‌ಬಾಗ್‌ನಲ್ಲಿರುವ ಪಾಲಿಕೆ ಕಚೇರಿಯ ಎರಡನೇ ಅಂತಸ್ತಿನ ಜಗುಲಿಯಲ್ಲಿ (ಶಾಸಕರ ಕಚೇರಿ ಪಕ್ಕ) ಇರಿಸಲಾಗಿದೆ. ಇದೇ ರೀತಿ ಎಂಸಿಎಫ್‌ವತಿಯಿಂದ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿಯೂ ಇ–ತ್ಯಾಜ್ಯ ಸಂಗ್ರಹ ಕಂಟೇನರ್‌ ಅನ್ನು ಇರಿಸಲಾಗಿದೆ.

ಎಂಎಂಆರ್‌ ರೀಸೈಕ್ಲಿಂಗ್‌ ಕಂಪನಿ: ‘ಮಂಗಳೂರು ಮಹಾನಗರ ವ್ಯಾಪ್ತಿ ಹಾಗೂ ಜಿಲ್ಲೆಯಲ್ಲಿ ‘ಎಂಎಂಆರ್‌ ರೀಸೈಕ್ಲಿಂಗ್‌ ಕಂಪನಿ’ಯು ಇ–ತ್ಯಾಜ್ಯ ಸಂಗ್ರಹದ ಹೊಣೆಗಾರಿಕೆ ವಹಿಸಿದೆ. ಇವರನ್ನು ಯರು ಬೇಕಿದ್ದರೂ ಸಂಪರ್ಕಿಸಿ ಹಳೆ ಎಲೆಕ್ಟ್ರಾನಿಕ್‌ ಸಾಮಗ್ರಿಗಳನ್ನು ಹಸ್ತಾಂತರಿಸಬಹುದು. ಅಥವಾ ಮಾರಾಟಮಾಡಬಹುದು. ಕಂಪನಿಯು ಇ–ತ್ಯಾಜ್ಯವನ್ನು ಸುರಕ್ಷಿತ ಹಾಗೂ ಕಾನೂನು ರೀತಿಕ ಮಾನಕಗಳಂತೆ ವಿಲೇವಾರಿ ಮಾಡುತ್ತದೆ. ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಸ್ಥಾವರ ಇದೆ. ತಿಂಗಳಿಗೆ ಸುಮಾರು 150 ಟನ್‌ ಎಲೆಕ್ಟ್ರಾನಿಕ್‌ ತ್ಯಾಜ್ಯವನ್ನು ಸಂಗ್ರಹಿಸುತ್ತಿದ್ದೇವೆ’ ’ ಎಂದು ವ್ಯವಸ್ಥಾಪಕ ಹರಿಸೂಧನ್‌ ತಿಳಿಸಿದರು.

ಪಾಲಿಕೆ ಪರಿಸರ ವಿಭಾಗ: ಮಂಗಳೂರು ಮಹಾನಗರ ಪಾಲಿಕೆಯ ಪರಿಸರ ಎಂಜಿನಿಯರ್‌ ವಿಭಾಗವು ಮಧುಮನೋಹರ್‌ ಹಾಗೂ ಶಬರಿ ರೈ, ಅಧಿಕಾರಿಗಳ ತಂಡ ಇ–ತ್ಯಾಜ್ಯ ನಿರ್ವಹಣೆಯ ಉಸ್ತುವಾರಿ ಹೊಂದಿದೆ. ಶಿಕ್ಷಣ ಸಂಸ್ಥೆಗಳು, ಕಚೇರಿಗಳು, ಉದ್ಯಮಗಳು, ವಿದ್ಯಾರ್ಥಿಗಳಲ್ಲಿ ಇ–ತ್ಯಾಜ್ಯದ ಸುರಕ್ಷಿತ ನಿರ್ವಹಣೆ, ನಿರುಪಯುಕ್ತ ಎಲೆಕ್ಟ್ರಾನಿಕ್‌ ಸಾಮಗ್ರಿಗಳನ್ನು ನಿರ್ದಿಷ್ಟ ಕಂಟೇನರ್‌ಗಳಿಗೆ ಹಾಕುವ ಕುರಿತಂತೆ ಜಾಗೃತಿ ಮೂಡಿಸುತ್ತಿದ್ದಾರೆ. ಎರಡು ವರ್ಷಗಳಿಂದ ನಗರದ ಶಾರದಾ ವಿದ್ಯಾಲಯ, ಸೇಂಟ್‌ ಅಲೋಶಿಯಸ್‌, ಆ್ಯಗ್ನೆಸ್‌, ಬೆಸೆಂಟ್‌ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇ–ತ್ಯಾಜ್ಯದ ಬಗ್ಗೆ ಜನಜಾಗೃತಿ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಪರಿಸರ ಹಾಗೂ ಸಾಮಾಜಿಕ ಸ್ವಾಸ್ಥ್ಯಕ್ಕೆ ನೆರವಾಗಿದ್ದಾರೆ. ‘ಪಾಲಿಕೆ ಕಾರ್ಯಾಲಯದಲ್ಲಿ ಇರಿಸಲಾಗಿರುವ ಕಂಟೇನರ್‌ನಲ್ಲಿ ಸಾರ್ವಜನಿಕರು ಸಾಮಗ್ರ ಹಾಕುತ್ತಾರೆ. ಕೆಲವು ತಿಂಗಳ ಹಿಂದೆ ಕಂಟೇನರ್‌ ಮಾಡಿದಾಗ ಸುಮಾರು 180 ಕೆ.ಜಿ . ಸಾಮಗ್ರಿ ಸಂಗ್ರಹವಾಗಿದ್ದನ್ನು ವಿಲೇವಾರಿ ಮಾಡಲಾಯಿತು’ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದರು.

ಪಾಲಿಕೆ ಕಸದಲ್ಲಿ ಹಾಕ್ಬೇಡಿ: ‘ಈಗ ಬಹಳಷ್ಟು ಜಾಗೃತಿ ನಡೆಯುತ್ತಿದೆ. ನಗರ ಪಾಲಿಕೆ ಹಾಗೂ ಸಂಘಸಂಸ್ಥೆಗಳ ಜತೆ ಸೇರಿ ನಾವು ಕೂಡ ಸಾಕಷ್ಟು ಜಾಗೃತಿ ಅಭಿಯಾನ ನಡೆಸುತ್ತಿದ್ದೇವೆ. ಕಂಪನಿಗಳು, ಕಚೇರಿಗಳಲ್ಲಿನ ಇ–ತ್ಯಾಜ್ಯ ಸುರಕ್ಷಿತವಾಗಿ ವಿಲೇವಾರಿ ಆಗುತ್ತಿದೆ. ಅದರೆ ಮನೆಮಂದಿ ಬಳಸುವ ಗೃಹೋಪಯೋಗಿ ಸಾಮಗ್ರಿಗಳಲ್ಲಿರುವ ಇ–ತ್ಯಾಜ್ಯ ವಿರ್ವಹಣೆಗೆ ಇನ್ನೂ ಅರಿವು ಬೆಳೆಸಬೇಕಿದೆ. ಹೆಚ್ಚಿನವರು ಪ್ರತಿದಿನ ಮಹಾನಗರ ಪಾಲಿಕೆಯ ವಾಹನಕ್ಕೆ ಸಾಗಿಸುವ ಮನೆಯ ಕಸದೊಂದಿಗೆ ಎಲೆಕ್ಟ್ರಾನಿಕ್‌ ಕಸವನ್ನೂ ಹಾಕಿ ಸಾಗಿಸುತ್ತಾರೆ. ಇದು ಅಪಾಯಕಾರಿ. ಹೀಗೆ ಮಾಡದಿರಿ’ ಎಂದು ಮಂಡಳಿಯ ಹಿರಿಯ ವೈಜ್ಞಾನಿಕ ಅಧಿಕಾರಿ ಜಯಪ್ರಕಾಶ್‌ ನಾಯಕ್‌ ಸಲಹೆ ನೀಡುತ್ತಾರೆ. ನಗರದ ವಿವಿಧೆಡೆ ಎಲೆಕ್ಟ್ರಾನಿಕ್‌ ತ್ಯಾಜ್ಯ ನಿರ್ವಹಣೆಗೆ ಒಟ್ಟು 6 ಕಂಪನಿಗಳು ಸಜ್ಜಾಗಿದ್ದುವು, ಅದರೆ 1 ಮಾತ್ರ ಸಕ್ರಿಯವಾಗಿದೆ. ಬೋಳೂರಿನಲ್ಲಿ 1, ಬಿಜೈಯಲ್ಲಿ 3, ಎಂ.ಜಿ.ರಸ್ತೆಯಲ್ಲಿ 1 ಮುಂತಾಗಿ ಒಪ್ಪಿಗೆ ಸೂಚಿಸಿರುವ ಕಂಪನಿಗಳು ಸಕ್ರಿಯವಾಗಿಲ್ಲ.

ಡಿಜಿಟಲ್‌ ಅಲ್ಲ: ಇ–ತ್ಯಾಜ್ಯವು ಐ.ಟಿ.(ಇನ್ಫರ್ಮೇಷನ್‌ ಅಂಡ್‌ ಟೆಕ್ನಾಲಜಿ), ಕಂಪ್ಯೂಟರ್‌ ಸಾಫ್ಟ್‌ವೇರ್‌– ಹಾರ್ಡ್‌ವೇರ್‌ ಉದ್ಯಮ, ಸೇವೆ ಹಾಗೂ ಡಿಜಿಟಲ್‌ ರಂಗಕ್ಕೆ ಸೇರಿದ್ದಾದರೂ, ಎಲೆಕ್ಟ್ರಾನಿಕ್‌ ತ್ಯಾಜ್ಯ ನಿರ್ವಹಣೆ ಇನ್ನೂ ಡಿಜಿಟಲ್‌ ಆಗಿಲ್ಲ.ಮಾನವಕಾರ್ಯ (ಮ್ಯಾನುವಲ್‌)ದ ಮೂಲಕವೇ ನಡೆಯುತ್ತಿರುವುದು ಮಾತ್ರ ವಿರೋಧಾಭಾಸ. ಆನ್‌ಲೈನ್‌ ಮೂಲಕ ಗ್ಯಾಜೆಟ್‌ , ಎಲೆಕ್ಟ್ರಾನಿಕ್‌ ಸಾಧನ ಸಲಕರಣೆಗಳನ್ನು ಕೊಳ್ಳುವ ಜನರು, ಕೆಟ್ಟಸಲಕರಣೆ, ಅವುಗಳ ತ್ಯಾಜ್ಯವನ್ನು ಆನ್‌ಲೈನ್‌ ಅಥವಾ ಡಿಜಿಟಲ್‌ ಶೈಲಿಯಲ್ಲಿ ಮಾಡದೆ, ಇತರ ಸಾಮಾನ್ಯ ಕಸದೊಂದಿಗೆ ‘ಎತ್ಹಾಕು’ತ್ತಾರೆ. ಸರ್ಕಾರಿ ತ್ಯಾಜ್ಯ ವಿಲೇವಾರಿಯೂ ಡಿಜಿಟಲ್‌ ಆಗಿಲ್ಲ, ಕಾರ್ಮಿಕರೇ ಬಂದು ಒಯ್ಯುವ ಮ್ಯಾನುವಲ್‌ ಶೈಲಿಯಲ್ಲೇ ಇದೆ!

ವಾಪಸಾತಿ ವ್ಯವಸ್ಥೆ: ಪ್ರತಿ ವರ್ಷ ನಿಗದಿತ ಪ್ರಮಾಣದಲ್ಲಿ ಹಳೆ ಉಪಕರಣಗಳನ್ನು ಮರಳಿ ಪಡೆದು ಸಂಸ್ಕರಣೆ ಮಾಡುವಂತೆ ಉತ್ಪಾದನಾ ಕಂಪನಿಗಳಿಗೆ ಹೊಣೆಗಾರಿಕೆ ನೀಡಲಾಗಿದೆ. ಇ– ತ್ಯಾಜ್ಯ ನಿರ್ವಹಣಾ ಕಾಯ್ದೆಯ 2018ರ ತಿದ್ದುಪಡಿಯಲ್ಲಿ ಈ ಬಗ್ಗೆ ಕಟ್ಟುನಿಟ್ಟಿನ ಮಾಹಿತಿಯನ್ನು ಎಲೆಕ್ಟ್ರಾನಿಕ್‌, ಕಂಪ್ಯೂಟರ್‌, ಗೃಹಬಳಕೆ, ಮೊಬೈಲ್‌ ಮತ್ತಿತರ ಸಾಮಗ್ರಿ ಉತ್ಪಾದಿಸುವ ಹಾಗೂ ಮಾರಾಟಮಾಡುವ ಕಂಪನಿಗಳಿಗೆ ಸೂಟನೆ ನೀಡಲಾಗಿದೆ. ಇದೆಲ್ಲವೂ ಇಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದೆಯೇ ಎಎಂಬುದನ್ನು ಪಾಲಿಕೆ ಪರಿಸರ ಅಧಿಕಾರಿಗಳು ಗಮನಿಸಬೇಕಿದೆ.

ಎರಡನೇ ಐಟಿ ಹಬ್‌: ರಾಜ್ಯದಲ್ಲಿ ರಾಜಧಾನಿ ಬೆಂಗಳೂರು ಬಿಟ್ಟರೆ ಎರಡನೇ ಐ.ಟಿ. ಕೇಂದ್ರ ಮಂಗಳೂರು. ಈ ಕಾರಣದಿಂದಲೇ ಇಲ್ಲಿ ಇನ್ಫೊಸಿಸ್‌, ಎಮ್ಫಸಿಸ್‌ ನಂತಹ ದಿಗ್ಗಜಗಳು, 100ರಷ್ಟು ಸಾಫ್ಟ್‌ವೇರ್‌ ಹಾಗೂ ಐಟಿ ಸೇವೆ ನೀಡುವ ಕಂಪನಿಗಳಿವೆ. ‘ಇನ್ಫೊಸಿಸ್‌ನಂಥ ಪ್ರಮುಖ ಸಂಸ್ಥೆಗಳು ನಗರ ಮಧ್ಯದಿಂದ ಗ್ರಾಮಭಾಗಕ್ಕೆ ತಮ್ಮ ಕ್ಯಾಂಪಸ್‌ – ಘಟಕವನ್ನು ಸ್ಥಳಾಂತರಿಸುತ್ತಿವೆ. ಗ್ರಾಮೀಣ ಭಾಗದಲ್ಲೂ ಈಗ ಡಿಜಿಟಲ್‌ , ಎಲೆಕ್ಟ್ರಾನಿಕ್‌ ಸಲಕರಣೆಗಳ ಪ್ರಮಾಣ ಹೆಚ್ಚಿದೆ. ಈ ಹಂತದಲ್ಲಿ ಇ–ತ್ಯಾಜ್ಯ ನಿರ್ವಹಣೆ ಬಗ್ಗೆ ಗ್ರಾಮೀಣರಲ್ಲೂ ಜಾಗೃತಿ ಮೂಡಬೇಕಿದೆ’ ಎನ್ನುತ್ತಾರೆ ಮಾಲಿನ್ಯ ನಿಯಂತ್ರಣ, ಪರಿಸರ ಅಧಿಕಾರಿಗಳು.

ಇದೆಲ್ಲ ಇ–ತ್ಯಾಜ್ಯ: ನಿರುಪಯುಕ್ತ ಕಂಪ್ಯೂಟರ್, ಎಲ್‌ಸಿಡಿ, ಎಲ್‌ಇಡಿ ಟಿವಿ, ಡಿಶ್‌–ಡಿ2ಎಚ್‌ ಔಲಭ್ಯ ನೀಡುವ ಡಿಜಿಟಲ್‌ ಸಲಕರಣೆಗಳು, ರಿಮೋಟ್‌ ಕಂಟ್ರೋಲ್‌ ಉಪಕರಣ, ಟ್ಯೂಬ್‌ನ ಡೂಮ್‌ ಟಿವಿ, ಲ್ಯಾಪ್‍ಟಾಪ್, ಡಿಜಿಟಲ್‌ ಗಡಿಯಾರಗಳು, ಕ್ಯಾಲ್ಕುಲೇಟರ್, ಸಿ.ಡಿ., ಪ್ರಿಂಟರ್, ಕೀ-ಬೋರ್ಡ್, ಸ್ಕ್ಯಾನರ್‌ಗಳು, ಸ್ವಯಂಚಾಲಿತ ಫ್ರಿಜ್‌, ವಾಷಿಂಗ್‌ ಮಷೀನ್‌, ಕೂಲಿಂಗ್‌ ಸಿಸ್ಟಂ, ಹವಾನಿಯಂತ್ರಕಗಳು, ಸೌರ ವಿದ್ಯುತ್‌ ಕೋಶ, ಸಲಕರಣೆಗಳು, ವಾಹನಗಳ ಎಲೆಕ್ಟ್ರಾನಿಕ್‌ ಭಾಗಗಗಳು, ಇವೆಲ್ಲದರಲ್ಲಿ ಬಳಕೆಯಾಗುವ ಪ್ಲಾಸ್ಟಿಕ್‌, ಕ್ಯಾಡ್ಮಿಯಂ, ಕ್ರೋಮಿಯಂ ಮುಂತಾದ ಹಲವು ಲೋಹಗಳು, ಪಾದರಸ(ಮರ್ಕ್ಯುರಿ) ಬಳಸಿದ ರಾಸಾಯನಿಕ ಸಾಮಗ್ರಿಗಳು, ಸರ್ಕೀಟ್‌ ಬೋರ್ಡ್‌, ಯುಎಸ್‌ಬಿ ಕೇಬಲ್‌, ವೈರ್‌ಗಳು, ಎಲ್‌ಇಡಿ, ಸಿಎಫ್‌ಎಲ್‌ ಬಲ್ಬ್‌ಗಳು ಮುಂತಾದ ಕೆಟ್ಟುಹೋದ ವಿದ್ಯುತ್‌ ಚಾಲಿತ ಸಾಮಗ್ರಿಗಳೆಲ್ಲ ವ್ಯವಸ್ಥಿತವಾಗಿ ವಿಲೇವಾರಿ ಮಾಡಬೇಕಾದ, ಸ್ವಾಸ್ಥ್ಯ ಕೆಡಿಸುವ ಅಪಾಯಕಾರಿ ಇ–ತ್ಯಾಜ್ಯಗಳಾಗಿವೆ. ಜನರ ಹೊಸ ಹೊಸ ಅಗತ್ಯತೆಗಳನ್ನು ಪೂರೈಸುತ್ತಿರುವ ಪ್ರಭಾವದಿಂದ ಇ-ತ್ಯಾಜ್ಯದ ಪ್ರಮಾಣ ಹೆಚ್ಚುತ್ತಲೇ ಹೋಗುತ್ತಿದೆ. ಇದು ನಮ್ಮ ಪರಿಸರದ ಮೇಲೆ ತುಂಬಾ ಪರಿಣಾಮ ಬೀರುತ್ತಿದೆ.

ಅಪಾಯ ಇ-ತ್ಯಾಜ್ಯ: ಇ-ತ್ಯಾಜ್ಯಗಳಲ್ಲಿರುವ ಪ್ಲಾಸ್ಟಿಕ್‌, ಪಾದರಸ, ಸೀಸ, ಬೇರಿಯಂ, ಕ್ಯಾಡ್ಮಿಯಂ, ದ್ರವ ಘನ ಲೋಹಗಳು ನೀರನ್ನು ಕೆಡಿಸುವೆ. ವಿಲೇವಾರಿ ಹಂತದಲ್ಲಿ ಇ-ತ್ಯಾಜ್ಯದಿಂದ ತಾಮ್ರ, ಬೆಳ್ಳಿ, ಬಂಗಾರ, ಪ್ಲಾಟಿನಂ ಬೇರ್ಪಡಿಸಿ ಮರುಬಳಕೆ ಮಾಡಬಹುದು– ಈ ಹಂತದ ಪ್ರಕ್ರಿಯೆಯೂ ಆರೋಗ್ಯ, ಪರಿಸರದ ಮೇಲೆ ಪರಿಣಾಮ ಬೀರುತ್ತವೆ. ವಿದ್ಯುನ್ಮಾನ ತ್ಯಾಜ್ಯ ವಸ್ತುಗಳು ಶೇ 38ರಷ್ಟು ರಾಸಾಯನಿಕದಿಂದ ಕೂಡಿರುವುದರಿಂಧ ಎಲ್ಲವನ್ನೂ ಇದನ್ನೂ ಸುರಕ್ಷಿತ, ಗಾಳಿ, ನೀರು, ನೆಲದಲ್ಲಿ ಸೂಕ್ಷ್ಮ ಮಾಲಿನ್ಯ ಹರಡದಂತೆ ನಿರ್ವಹಿಸಬೇಕಿದೆ. ಇವೆಲ್ಲವನ್ನೂ ಗಮನದಲ್ಲಿ ಇರಿಸಿ ‘ಇ–ತ್ಯಾಜ್ಯ’ ನಿರ್ವಹಣೆ ಗೆ ಕೇಂದ್ರ ಸರ್ಕಾರ ಕಾಯ್ದೆ ನಿರ್ಮಿಸಿದೆ, 2018ರ ಪರಿಷ್ಕೃತ ನಿಯಮ ರೂಪಿಸಿದೆ.ಮಾಲಿನ್ಯ ನಿಯಂತ್ರಣ ಮಂಡಳಿಯೂ ಕಟ್ಟೆಚ್ಚರ ವಹಿಸಿದೆ. ಆದರೂ ಗೃಹ ಬಳಕೆಯ ಹಳೆಯ ಎಲೆಕ್ಟ್ರಾನಿಕ್ ಸಾಮಗ್ರಿ ಗುಜರಿ ಅಂಗಡಿ ಅಥವಾ ಸಾಮನ್ಯ ಅಡುಗೆ ಮನೆ ಕಸದ ತೊಟ್ಟಿಗೆ ತುಂಬಲಾಗುತ್ತಿದೆ.

ಪಾಲಿಕೆ ಕಚೇರಿಯಲ್ಲಿ ಬೂತ್‌: ಮಂಗಳೂರು ಮಹಾನಗರ ಪಾಲಿಕೆಯ ಲಾಲ್‌ಭಾಗ್‌ನಲ್ಲಿರುವ ಪ್ರಧಾನ ಕಚೇರಿಯ ಕಟ್ಟಡದಲ್ಲಿ ಇ–ವೇಸ್ಟ್‌ ಸಂಗ್ರಹ ಬೂತ್‌ ಕೆಲವು ವರ್ಷಗಳಿಂದ ಕಾರ್ಯಾಚರಿಸುತ್ತಿದೆ. ಇಲ್ಲಿ ಸಂಗ್ರಹವಾಗುವ ಎಲೆಕ್ಟ್ರಾನಿಕ್‌ ತ್ಯಾಜ್ಯ ಸಾಮಗ್ರಿಗಳನ್ನು ಮುಗಾಂಬಿಕಾ ಸಂಸ್ಥೆ ಒಯ್ಯುತ್ತಿದೆ. ಪಾಲಿಕೆಯ ಪರಿಸರ ವಿಭಾಗ ಈ ಬೂತ್‌ನ ಉಸ್ತುವಾರಿ ವಹಿಸಿದ್ದಾರೆ. ಆದರೆ ಜನರು ತಮ್ಮಲ್ಲಿರುವ ಎಲೆಕ್ಟ್ರಾನಿಕ್‌ ನಿರುಪಯುಕ್ತ ಸಾಮಗ್ರಿ ಎಲ್ಲೆಂದರಲ್ಲಿ ಎಸೆಯುವ ಬದಲು ಇಲ್ಲಿ ತಂದು ನಿಕ್ಷೇಪಿಸಬೇಕು. ಭಾರಿ ಪ್ರಮಾಣದಲ್ಲಿ ಇ–ತ್ಯಾಜ್ಯ ಇದ್ದರೆ ವಿಲೇವಾರಿ ಕಂಪನಿ ಎಂಎಂಆರ್‌ ರೀಸೈಕ್ಲಿಂಗ್‌ ಕಂಪನಿ (9945565009/8861308851) ಇವರನ್ನು ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT