ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲಿಷ್ಠ ಭಾರತಕ್ಕೆ ಶಿಕ್ಷಣದ ಅಡಿಪಾಯ ಮುಖ್ಯ: ಯು.ಟಿ.ಖಾದರ್

Published 8 ಜನವರಿ 2024, 6:54 IST
Last Updated 8 ಜನವರಿ 2024, 6:54 IST
ಅಕ್ಷರ ಗಾತ್ರ

ಬೆಳ್ತಂಗಡಿ: ‘ಮಕ್ಕಳಲ್ಲಿರುವ ವಿಶೇಷ ಶಕ್ತಿಯನ್ನು ಗುರುತಿಸಿ, ಸರ್ಕಾರ ನೀಡುವ ಸವಲತ್ತುಗಳನ್ನು ಬಳಸಿಕೊಂಡು ಅವರ ವ್ಯಕ್ತಿತ್ವ ರೂಪಿಸುವ ಶಿಕ್ಷಣ ನೀಡುವುದು ಪೋಷಕರ ಜವಾಬ್ದಾರಿ. ಬಲಿಷ್ಠ ಭಾರತವನ್ನು ಕಟ್ಟಲು ಶಿಕ್ಷಣದ ಅಡಿಪಾಯವೇ ಮುಖ್ಯ’ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.

ನಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಅರಿಯಲು ಪೋಷಕರು ಆಗಾಗ ಶಾಲೆಗೆ ಭೇಟಿ ನೀಡಬೇಕು. ಶಾಲಾಭಿವೃದ್ಧಿ ಸಮಿತಿಯವರು ಶಿಕ್ಷಕರ ಒತ್ತಡವನ್ನು ಕಡಿಮೆ ಮಾಡುವ ಮೂಲಕ ಅವರು ಉತ್ತಮ ಮಾರ್ಗದರ್ಶಕರಾಗುವಂತೆ ಪ್ರೋತ್ಸಾಹಿಸಬೇಕು. ಗ್ರಾಮೀಣ ಮಟ್ಟದವರಿಗೂ ನಗರ ಮಟ್ಟದ ಶಿಕ್ಷಣವನ್ನು ನೀಡಿ ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ನಡೆಯುತ್ತಿರುವುದು ಅಭಿವೃದ್ಧಿಯ ಸಂಕೇತ’ ಎಂದರು.

ಕಟ್ಟಡ ಉದ್ಘಾಟಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜ, ‘ವಿಧಾನ ಪರಿಷತ್‌ ಸದಸ್ಯರ ನಿಧಿಯಿಂದ ಒಂದು ಗ್ರಾಮೀಣ ಶಾಲೆ ಅಭಿವೃದ್ಧಿ ಹೊಂದಿರುವುದು ಹೆಮ್ಮೆಯ ವಿಚಾರ. ಅಭಿವೃದ್ಧಿಯ ನಿಟ್ಟಿನಲ್ಲಿ ರಾಜಕೀಯ ಮಾಡದೆ ಕೆಲಸ ಮಾಡುವ ಹರೀಶ್ ಕುಮಾರ್ ಎಲ್ಲರಿಗೂ ಮಾದರಿ. ಮುಂದಿನ ಹಂತದಲ್ಲಿ ಇಲ್ಲಿನ ಅಭಿವೃದ್ಧಿಗೆ ಶಾಸಕರ ನಿಧಿಯಿಂದ ಸಹಕಾರ ನೀಡಲಾಗುವುದು’ ಎಂದರು.

ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ನಡ ಶಾಲೆಯಲ್ಲಿ ಮುಂದಿನ ವರ್ಷ ಹಾಜರಾತಿಯಲ್ಲಿ ಶೇ 20 ಹೆಚ್ಚಿದರೆ ಎಂಎಲ್‌ಸಿ ನಿಧಿಯಿಂದ ರಂಗಮಂದಿರ ನಿರ್ಮಾಣಕ್ಕೆ ₹ 5 ಲಕ್ಷ ಅನುದಾನ ಒದಗಿಸಲಾಗುವುದು’ ಎಂದು ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ಪ್ರತಾಪ ಸಿಂಹ ನಾಯಕ್ ಮಾತನಾಡಿದರು.

₹ 1.17 ಕೋಟಿ ವೆಚ್ಚದಲ್ಲಿ ನೂತನ ಶಾಲಾ ಕಟ್ಟಡ ನಿರ್ಮಿಸಲು ಸರ್ಕಾರದ ಅನುದಾನ ನೀಡಿದ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಅವರನ್ನು ಶಾಲಾಭಿವೃದ್ಧಿ ಸಮಿತಿ ಹಾಗೂ ಊರವರ ಪರವಾಗಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಗೌರವಿಸಿದರು. ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

ನಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಬಿಇಒ ತಾರಕೇಸರಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಸಂತ ಗೌಡ, ಶಾಲಾ ಸಂಸ್ಥಾಪಕ ಮನೆತನದ ಧನಂಜಯ ಅಜ್ರಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ದಿವಾಕರ ಪೂಜಾರಿ, ಸದಸ್ಯರಾದ ಎನ್.ಬಿ‌.ಹರಿಶ್ಚಂದ್ರ, ಲಲಿತಾ ಓಬಯ್ಯ ಗೌಡ, ಸುಶೀಲಾ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸತೀಶ್ಚಂದ್ರ ಎಸ್., ರಂಜನ್ ಜಿ.ಗೌಡ, ಅಭಿನಂದನ್ ಹರೀಶ್ ಕುಮಾರ್ ಭಾಗವಹಿಸಿದ್ದರು.

ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಪುಷ್ಪಾ ವಂದಿಸಿದರು. ಬೆದ್ರಬೆಟ್ಟು ಶಾಲಾ ಶಿಕ್ಷಕ ಕೃಷ್ಣಪ್ಪ ಹಾಗೂ ಯೋಗೀಶ್ ಕಂಕಿತ್ತಿಲು ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT