ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿ ಗುಡ್ಡಕುಸಿತ ತಡೆಗೆ ಶಾಶ್ವತ ಪರಿಹಾರಕ್ಕೆ ಯತ್ನ : ಲೋಕೋಪಯೋಗಿ ಇಲಾಖೆ

ಅಧ್ಯಯನಕ್ಕೆ ತಜ್ಞರ ಸಮಿತಿ ನೇಮಕ
Last Updated 27 ಆಗಸ್ಟ್ 2018, 15:25 IST
ಅಕ್ಷರ ಗಾತ್ರ

ಮಂಗಳೂರು: ಕರಾವಳಿ ಪ್ರದೇಶ ಮತ್ತು ಬೆಂಗಳೂರಿನ ನಡುವಿನ ಸಂಪರ್ಕದ ಕೊಂಡಿಗಳಾಗಿರುವ ಶಿರಾಡಿ, ಸಂಪಾಜೆ ಮತ್ತು ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿ ಶಾಶ್ವತವಾಗಿ ಭೂಕುಸಿತ ತಡೆಗೆ ಕ್ರಮ ಕೈಗೊಳ್ಳಲು ಮುಂದಾಗಿರುವ ಲೋಕೋಪಯೋಗಿ ಇಲಾಖೆ, ಈ ಸಂಬಂಧ ಅಧ್ಯಯನಕ್ಕೆ ಮೂವರು ತಜ್ಞರ ಸಮಿತಿ ನೇಮಿಸಿದೆ.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಮಣ್ಣು ಎಂಜಿನಿಯರಿಂಗ್‌ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಆರ್‌.ಶ್ರೀನಿವಾಸಮೂರ್ತಿ ಸಮಿತಿಯ ನೇತೃತ್ವ ವಹಿಸಿದ್ದಾರೆ. ನಿವೃತ್ತ ಪ್ರಧಾನ ಎಂಜಿನಿಯರ್‌ ಹಾಗೂ ಲೋಕೋಪಯೋಗಿ ಇಲಾಖೆಯ ಟೆಂಡರು ಪರಿಶೀಲನಾ ತಾಂತ್ರಿಕ ಸಮಿತಿ ಅಧ್ಯಕ್ಷ ಜೈಪ್ರಸಾದ್ ಮತ್ತು ಸೇತುವೆ ನಿರ್ಮಾಣ ಕ್ಷೇತ್ರದ ತಜ್ಞ ಸಲಹೆಗಾರ ಜಯಗೋಪಾಲ್‌ ಸಮಿತಿಯಲ್ಲಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 234ರ ಚಾರ್ಮಾಡಿ ಘಾಟಿ ಮಾರ್ಗದಲ್ಲಿ ಜೂನ್‌ 12ರಂದು ಭಾರಿ ಪ್ರಮಾಣದ ಭೂಕುಸಿತ ಸಂಭವಿಸಿತ್ತು. ಈ ಕಾರಣದಿಂದ ಹಲವು ದಿನಗಳ ಕಾಲ ಈ ಮಾರ್ಗವನ್ನು ಬಂದ್ ಮಾಡಲಾಗಿತ್ತು. ಆಗಸ್ಟ್‌ 14ರಿಂದ ಕೆಲವು ದಿನಗಳ ಕಾಲ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಮಾರ್ಗದಲ್ಲಿ ಸರಣಿ ಭೂಕುಸಿತ ಸಂಭವಿಸಿತ್ತು. ರಾಷ್ಟ್ರೀಯ ಹೆದ್ದಾರಿ 234ರ ಸಂಪಾಜೆ ಘಾಟಿ ಮಾರ್ಗದಲ್ಲಿ ಆಗಸ್ಟ್ 15ರಿಂದ ನಿರಂತರವಾಗಿ ಹಲವು ದಿನಗಳ ಕಾಲ ಭೂಕುಸಿತ ಸಂಭವಿಸಿದೆ. ಶಿರಾಡಿ ಮತ್ತು ಸಂಪಾಜೆ ಘಾಟಿ ಮಾರ್ಗಗಳಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ಬಂದ್‌ ಮಾಡಲಾಗಿದೆ.

ಮೂರೂ ಘಾಟಿಗಳ ಪ್ರದೇಶದಲ್ಲಿ ಮಳೆಗಾಲದಲ್ಲಿ ಪದೇ ಪದೇ ಭೂಕುಸಿತ ಸಂಭವಿಸುತ್ತಿರುವುದರಿಂದ ಮಂಗಳೂರು– ಬೆಂಗಳೂರು ನಡುವಣ ಸಂಪರ್ಕ ದುಸ್ತರವಾಗುತ್ತಿದೆ. ಸರಕು ಸಾಗಣೆ ಸ್ಥಗಿತಗೊಳ್ಳುವ ಸ್ಥಿತಿಗೆ ತಲುಪಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗಿರುವ ಲೋಕೋಪಯೋಗಿ ಇಲಾಖೆ, ತಜ್ಞರ ಸಮಿತಿ ನೇಮಿಸಿದೆ. ಭೂಕುಸಿತ ಹಿಂದಿರುವ ಕಾರಣಗಳು ಮತ್ತು ಹೆದ್ದಾರಿ ಬದಿಯಲ್ಲಿ ಶಾಶ್ವತವಾಗಿ ಭೂಕುಸಿತ ತಡೆಗೆ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿದೆ.

ಅಧ್ಯಯನಕ್ಕೆ ತೊಡಕು:

‘ಸಮಿತಿ ನೇಮಕವಾದ ಬಳಿಕ ಭೂಕುಸಿತ ಹೆಚ್ಚಾಯಿತು. ಸಂಪಾಜೆ ಘಾಟಿಯಲ್ಲಿ ಸಮಿತಿ ಪರಿಶೀಲನೆ ನಡೆಸಿದೆ. ಶಿರಾಡಿ ಮಾರ್ಗದಲ್ಲಿ ಪ್ರಾಥಮಿಕ ಹಂತದ ಅಧ್ಯಯನ ಮಾತ್ರ ಸಾಧ್ಯವಾಗಿದೆ. ಅಲ್ಲಿ ಪರಿಸ್ಥಿತಿ ಅರಿಯಲು ಸಮಿತಿಗೆ ಇನ್ನಷ್ಟು ಸಮಯ ಅಗತ್ಯವಿದೆ. ಸಂಪಾಜೆ ಘಾಟಿಯಲ್ಲಿ 14 ಕಿ.ಮೀ. ಉದ್ದಕ್ಕೆ ಭೂಕುಸಿತ ಸಂಭವಿಸಿರುವ ಕಾರಣದಿಂದ ಸಮಿತಿ ಭೇಟಿ ನೀಡುವುದಕ್ಕೆ ಸಾಧ್ಯವೇ ಆಗಿಲ್ಲ’ ಎಂದು ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗದ ಮುಖ್ಯ ಎಂಜಿನಿಯರ್ ಗಣೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಸಮಿತಿಯು ವಿಸ್ತೃತವಾಗಿ ಅಧ್ಯಯನ ನಡೆಸಿ ವರದಿ ನೀಡಲಿದೆ. ಆಯಾ ಮಾರ್ಗಗಳಲ್ಲಿನ ಪರಿಸ್ಥಿತಿ ಆಧರಿಸಿ ಭೂಕುಸಿತ ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಶಿಫಾರಸು ನೀಡಲಿದೆ. ಮತ್ತೆ ಈ ರೀತಿಯ ಸಮಸ್ಯೆಗಳು ಉದ್ಭವಿಸದಂತೆ ತಡೆಯಲು ಅಗತ್ಯವಿರುವ ಎಲ್ಲ ಕ್ರಮಗಳ ಬಗ್ಗೆಯೂ ಸಮಿತಿ ಅಧ್ಯಯನ ನಡೆಸಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT