ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಈದ್ ಉಲ್ ಫಿತ್ರ್‌– ಖರೀದಿ ಭರಾಟೆ ಜೋರು

Published 8 ಏಪ್ರಿಲ್ 2024, 4:26 IST
Last Updated 8 ಏಪ್ರಿಲ್ 2024, 4:26 IST
ಅಕ್ಷರ ಗಾತ್ರ

ಮಂಗಳೂರು: ಮುಸ್ಲಿಮರ ಪವಿತ್ರ ಮಾಸ ರಂಜಾನ್‌ ಉಪವಾಸ ವ್ರತಾಚರಣೆಯ ಸಂಪನ್ನಗೊಳ್ಳಲು ಕೆಲವೇ ದಿನಗಳಷ್ಟೇ ಬಾಕಿ ಇದ್ದು, ಈದ್‌ ಉಲ್‌ಫಿತ್ರ್‌ ಹಬ್ಬ ಈ ವಾರವೇ ಬರಲಿದೆ. ಹಾಗಾಗಿ ರಜಾ ದಿನವಾದ ಭಾನುವಾರ ನಗರದ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿತ್ತು.

ನಗರದ ಮಾಲ್‌ಗಳು, ಕೆಲ ಬಟ್ಟೆ ಅಂಗಡಿಗಳು, ಅತ್ತರ್‌ (ಸುಗಂಧ ದ್ರವ್ಯ) ಮಾರಾಟ ಮಳಿಗೆಗಳ ಗ್ರಾಹಕರಿಂದ ಗಿಜಿಗುಡುತ್ತಿದ್ದವು. ಕೆಲವರಂತೂ ಕುಟುಂಬ ಸಮೇತ ಬಂದು ಉಡುಪುಗಳನ್ನು ಖರೀದಿಸಿದರು. ಕುರ್ತಾ ಫೈಜಾಮ, ಅಂಗಿ, ಸೀರೆ, ಮಕ್ಕಳ ಬಟ್ಟೆಗಳ ಮಾರಾಟಕ್ಕೆ ಕೆಲವು ಮಳಿಗೆಗಳು ವಿಶೇಷ ರಿಯಾಯಿತಿ ಪ್ರಕಟಿಸಿದ್ದವು.

‘ಪೈಜಾಮ, ಕುರ್ತಾ, ಟೋಪಿ, ಅತ್ತರ್, ಚಪ್ಪಲಿ, ಶೂಗಳಿಗೆ ಬೇಡಿಕೆ ಹೆಚ್ಚು ಇತ್ತು. ಈ ಸಲದ ವ್ಯಾಪಾರ ಚೆನ್ನಾಗಿ ಆಗಿದೆ. ನಾವು ಈದ್ ಉಲ್ ಫಿತ್ರ್ ಸಲುವಾಗಿಯೇ ಮುಂಬೈ ಹಾಗೂ ಬೇರೆ ಬೇರೆ ಕಡೆಗಳಿಂದ ಉಡುಪು ಹಾಗೂ ಅತ್ತರ್‌ಗಳ ಮಾರಾಟ ಚೆನ್ನಾಗಿ ಆಗಿದೆ’ ಎಂದು ಬಂದರ್‌ನ ಕಿಸ್ವಾ ಮಳಿಗೆಯ ಅಬ್ದುಲ್‌ ಖಾದರ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಚಂದ್ರ ದರ್ಶನವನ್ನು ಆಧರಿಸಿ ಈ ವಾರದಲ್ಲಿ ಬುಧವಾರ ಅಥವಾ ಗುರುವಾರ ಈದ್‌ ಉಲ್‌ ಫಿತ್ರ್‌ ಹಬ್ಬ ಬರಲಿದೆ. ಅದರೊಂದಿಗೆ ರಂಜಾನ್‌ ತಿಂಗಳ ಉಪವಾಸ ವ್ರತಾಚರಣೆಯೂ ಕೊನೆಗೊಳ್ಳಲಿದೆ. ಮುಸ್ಲಿಮರೆಲ್ಲರೂ ಶ್ರದ್ಧೆ ಭಕ್ತಿಯಿಂದ ಈ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬದ ಸಲುವಾಗಿ ಈಗಾಗಲೇ ತಯಾರಿ ಶುರುಮಾಡಿದ್ದಾರೆ. ಹೊಸ ಉಡುಪು ಧರಿಸುವುದು ಈ ಹಬ್ಬದ ವಿಶೇಷ’ ಎಂದು ಮುಸ್ಲಿಂ ಸಮುದಾಯದ ಮುಖಂಡರೊಬ್ಬರು ತಿಳಿಸಿದರು.

ಮಾಂಸದ ಧಾರಣೆ ಹೆಚ್ಚಳ: ಈದ್ ಉಲ್ ಫಿತ್ರ್‌ ಸಮೀಪಿಸುತ್ತಿದ್ದಂತೆಯೇ ಆಡು, ಕುರಿ ಹಾಗೂ ಕೋಳಿ ಮಾಂಸದ ಧಾರಣೆ ಹೆಚ್ಚಳವಾಗಿದೆ.

‘ತಿಂಗಳಿನಿಂದೀಚೆಗೆ  ಕುರಿ ಮಾಂಸದ ದರ ಪ್ರತಿ ಕೆ.ಜಿ. ₹ 50ರಷ್ಟು ಹೆಚ್ಚಳವಾಗಿದೆ. ಮಾಂಸದ ಅಡುಗೆ ಈ ಹಬ್ಬದ ಬನ್ನೂರು ಕುರಿ ಮಾಂಸ ಪ್ರತಿ ಕೆ.ಜಿ.ಗೆ ₹ 850 ಇದ್ದು, ಇತರ ಕುರಿ ಮಾಂಸ ಕೆ.ಜಿ.ಗೆ ₹ 600 ತಲುಪಿದೆ’ ಎಂದು ಬೆಂದೂರ್‌ವೆಲ್‌ನ ಮಟನ್‌ ಮಳಿಗೆಯ ಬಷೀರ್‌ ತಿಳಿಸಿದರು.

‘ಈ ಹಬ್ಬದ ಸಂಭ್ರಮ ಇರುವುದೇ ಮಾಂಸದ ಅಡುಗೆ ಮಾಡಿ ಎಲ್ಲರೂ ಹಂಚಿಕೊಂಡು ತಿನ್ನುವುದರಲ್ಲಿ. ಹಬ್ಬದ ಸಂದರ್ಭದಲ್ಲಿ ಕೋಳಿ ಮಾಂಸದ ದರದಲ್ಲಿ ಭಾರಿ ಹೆಚ್ಚಳವಾಗಿದೆ. ಕುರಿ ಮಾಂಸವೂ ದುಬಾರಿಯಾಗಿದೆ’ ಎಂದು ನಜೀರ್‌ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT