ಮಂಗಳೂರು: ‘ಸರ್ಕಾರಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ₹ 17 ಕೋಟಿ ವೆಚ್ಚದಲ್ಲಿ ಕ್ರಿಟಿಕಲ್ ಕೇರ್ ಘಟಕವನ್ನು ಶೀಘ್ರವೇ ಆರಂಭಿಸಲಿದ್ದೇವೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಸರ್ಕಾರಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ಸೂಪರ್ ಸ್ಪೆಷಾಲಿಟಿ ವಿಭಾಗದ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಅವರು ಗುರುವಾರ ಮಾತನಾಡಿದರು.
‘ಈ ಆಸ್ಪತ್ರೆ ಯಾವುದೇ ಆಧುನಿಕ ಖಾಸಗಿ ಆಸ್ಪತ್ರೆಗಿಂತಲೂ ಕಡಿಮೆ ಇಲ್ಲ. ಮಾಡ್ಯುಲಾರ್ ಶಸ್ತ್ರಚಿಕಿತ್ಸಾ ಕೊಠಡಿಗಳು ಹಾಗೂ ಅಗತ್ಯ ವೈದ್ಯಕೀಯ ಸಲಕರಣೆಗಳನ್ನು ಒದಗಿಸಿದ್ದೇವೆ. ಕೆಎಂಸಿ ನೆರವಿನಿಂದ ಎಲ್ಲಾ ತರಹದ ಸೂಪರ್ ಸ್ಪೆಷಾಲಿಟಿ ಸೇವೆಗಳು ಇಲ್ಲಿ ಲಭಿಸುವಂತೆ ನೋಡಿಕೊಳ್ಳುತ್ತೇವೆ. ನ್ಯೂರೊ, ಕಾರ್ಡಿಯೊ ಥೊರಾಸಿಕ್, ಮಂಡಿಚಿಪ್ಪು ಬದಲಾವಣೆ ಶಸ್ತ್ರಚಿಕಿತ್ಸೆ ಸೌಕರ್ಯಗಳನ್ನೂ ಒದಗಿಸಲಿದ್ದೇವೆ. ಎರಡೇ ತಿಂಗಳಲ್ಲಿ ಕ್ಯಾಥ್ಲ್ಯಾಬ್ ಆರಂಭಿಸಲಿದ್ದೇವೆ’ ಎಂದು ಭರವಸೆ ನೀಡಿದರು.
ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್, ‘ಕಟ್ಟಡ ಚೆಂದವಿದ್ದರೆ ಸಾಲದು. ರೋಗಿಗಳ ಬಗ್ಗೆ ವೈದ್ಯರು ಹಾಗೂ ಶೂಶ್ರೂಷಕ ಸಿಬ್ಬಂದಿ ವಹಿಸುವ ಕಾಳಜಿಯಿಂದಾಗಿ ಆಸ್ಪತ್ರೆಗೆ ಹೆಸರು ಬರುತ್ತದೆ. ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ನಿಮ್ಹಾನ್ಸ್ ಹಾಗೂ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಗಳ ಘಟಕಗಳನ್ನು ಇಲ್ಲಿ ಆರಂಭಿಸಲು ಕ್ರಮವಹಿಸಬೇಕು’ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಡಿ.ವೇದವ್ಯಾಸ ಕಾಮತ್, ‘ವೆನ್ಲಾಕ್ ಆಸ್ಪತ್ರೆಯ ಅತ್ಯಾಧುನಿಕ ಸಲಕರಣೆಗಳ ನಿರ್ವಹಣೆಗೆ ಆ್ಯಪ್ ರೂಪಿಸಬೇಕು’ ಎಂದು ಸಲಹೆ ನೀಡಿದರು.
ಇಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕಿ ಮತ್ತು ಅಧೀಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದ ಡಾ.ರಾಜೇಶ್ವರಿದೇವಿ, 30 ವರ್ಷಕ್ಕೂ ಹೆಚ್ಚು ಕಾಲ ಕರ್ತವ್ಯ ನಿರ್ವಹಿಸಿದ್ದ ಡಾ. ಮೋಹನ ಚಂದ್ರಸುವರ್ಣ, ಪ್ರೊ.ದಿವಾಕರ ರಾವ್, ಪ್ರೊ.ಸುರೇಶ್ ಪೈ, ಪ್ರೊ.ಸುರೇಶ್ ಪೈ ಅವರನ್ನು ಸನ್ಮಾನಿಸಲಾಯಿತು.
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಶಾಸಕ ಅಶೋಕ್ ಕುಮಾರ್ ರೈ, ಪಾಲಿಕೆ ವಿರೋಧ ಪಕ್ಷದ ನಾಯಕ ಪ್ರವೀಣಚಂದ್ರ ಆಳ್ವ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ., ಪಾಲಿಕೆ ಆಯುಕ್ತ ಸಿ.ಎಲ್.ಆನಂದ್, ಕೆಎಂಸಿ ಆಸ್ಪತ್ರೆಯ ಡೀನ್ ಡಾ. ಉನ್ನಿಕೃಷ್ಣನ್, ಡಾ.ದಿಲೀಪ್ ನಾಯಕ್, ಪಾಲಿಕೆ ಸದಸ್ಯರಾದ ಎ.ಸಿ.ವಿನಯರಾಜ್, ಅನಿಲ್ ಕುಮಾರ್, ಸ್ಮಾರ್ಟ್ ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ರಾಜು, ಪ್ರಧಾನ ವ್ಯವಸ್ಥಾಪಕ ಅರುಣಪ್ರಭ ಭಾಗವಹಿಸಿದ್ದರು. ಜಿಲ್ಲಾ ಶಸ್ತ್ರಚಿಕಿತ್ಸಕಿ ಮತ್ತು ಅಧೀಕ್ಷಕಿ ಡಾ.ಜೆಸಿಂತಾ ಡಿಸೋಜ ಸ್ವಾಗತಿಸಿದರು. ಡಾ.ಸದಾನಂದ, ಅನಿತಾ ಪಿಂಟೊ ಕಾರ್ಯಕ್ರಮ ನಿರೂಪಿಸಿದರು.
Cut-off box - ‘ಏಮ್ಸ್ ಆಸ್ಪತ್ರೆ– ಪ್ರಸ್ತಾವ ಸಲ್ಲಿಸಿ’ ‘ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಏಮ್ಸ್) ಆಸ್ಪತ್ರೆಯನ್ನು ಇಲ್ಲಿಗೆ ಮಂಜೂರು ಮಾಡುವ ಬಗ್ಗೆ ರಾಜ್ಯ ಸರ್ಕಾರ ಪ್ರಸ್ತಾವ ಸಲ್ಲಿಸಬೇಕು. ಏಳೆಂಟು ಜಿಲ್ಲೆಗಳ ರೋಗಿಗಳಿಗೆ ಚಿಕಿತ್ಸೆ ಒದಗಿಸುತ್ತಿರುವ ಈ ಆಸ್ಪತ್ರೆಯನ್ನು ಪ್ರಾದೇಶಿಕ ಆಸ್ಪತ್ರೆ ಎಂದು ಪರಿಗಣಿಸಿ ಇಲ್ಲಿನ ಸಿಬ್ಬಂದಿ ಕೊರತೆ ನೀಗಿಸಬೇಕು. ಇಲ್ಲಿ ಕ್ಯಾನ್ಸರ್ ಚಿಕಿತ್ಸೆಯ ಘಟಕವನ್ನು ಆರಂಭಿಸುವ ತುರ್ತು ಅಗತ್ಯವಿದೆ’ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.