ಶನಿವಾರ, ಫೆಬ್ರವರಿ 4, 2023
28 °C
ಜಿ.ಪಂ. ಸದಸ್ಯೆ ಮೇಲೆ ಹಲ್ಲೆ ಪ್ರಕರಣ: ಕೋರ್ಟ್‌ ಆದೇಶ

ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ಸೇರಿ 15 ಜನರಿಗೆ ಜೈಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಳ್ಯ: ಚುನಾವಣೆ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಸುಳ್ಯ ಮಂಡಲ ಘಟಕದ ಅಧ್ಯಕ್ಷ ಹರೀಶ್ ಕಂಜಿಪಿಲಿ ಮತ್ತು ಇತರ 14 ಮಂದಿಗೆ ಸುಳ್ಯ ಜೆಎಂಎಫ್‌ಸಿ ನ್ಯಾಯಾಲಯ 2 ವರ್ಷ ಜೈಲು ಹಾಗೂ ಒಟ್ಟು ₹1.12 ಲಕ್ಷ ದಂಡ ವಿಧಿಸಿದೆ.

ಹರೀಶ್ ಕಂಜಿಪಿಲಿ, ಹರೀಶ್ ಕಾಯಿಪಳ್ಳ, ಈಶ್ವರಪ್ಪ ಗೌಡ ಹರ್ಲಡ್ಕ, ರವಿಚಂದ್ರ ಕೊಡಪಾಲ, ಸವಿನ್ ಕೆ.ಬಿ., ದಿವಾಕರ ನಾಯಕ್ ಎರ್ಮೆಟ್ಟಿ, ದಿನೇಶ್ ಚೆಮ್ನೂರು, ರಾಮಚಂದ್ರ ಹಲ್ದಡ್ಕ, ಷಣ್ಮುಖ ಸೂಟಗದ್ದೆ, ಧನಂಜಯ ಬಲ್ಕಾಡಿ, ಬಾಲಕೃಷ್ಣ ಕಂಜಿಪಿಲಿ, ಮನು ಯಾನೆ ಮನೋಹರ ಪುರ, ದೀಪಕ್ ಎಲಿಮಲೆ, ಮನೋಜ್ ಗಟ್ಟಿಗಾರು ಹಾಗೂ ವಿಕಾಸ್ ಯಾನೆ ವಿಶ್ವನಾಥ ಶಿಕ್ಷೆಗೆ ಒಳಗಾದವರು.

2013ರಲ್ಲಿ ನಡೆದ ಜಿ.ಪಂ. ಚುನಾವಣೆ ಸಂದರ್ಭದಲ್ಲಿ ಮರ್ಕಂಜದ ಕುದ್ಕುಳಿಯಲ್ಲಿ ಈ ಘಟನೆ ನಡೆದಿತ್ತು. ‘ಮದುವೆಗೆ ಹೋಗುತ್ತಿದ್ದಾಗ ತನ್ನ ವಾಹನವನ್ನು ಅಡ್ಡಗಟ್ಟಿದ ಹರೀಶ್ ಕಂಜಿಪಿಲಿ ಮತ್ತು ಇತರ 14 ಮಂದಿ, ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ಮಾಡಿದ್ದಾರೆ. ಜೀವ ಬೆದರಿಕೆ ಹಾಕಿದ್ದಲ್ಲದೆ ಸೀರೆಯನ್ನು ಎಳೆದಿದ್ದಾರೆ. ರಕ್ಷಣೆಗೆ ಬಂದ ಇಬ್ಬರ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಒಡ್ಡಿದ್ದರು’ ಎಂದು ಹಲ್ಲೆಗೆ ಒಳಗಾಗಿದ್ದ ಸರಸ್ವತಿ ಕಾಮತ್ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಆಗಿನ ಸಬ್‌ ಇನ್‌ಸ್ಪೆಕ್ಟರ್‌ ರವಿ ಬಿ.ಎಸ್., ಆರೋಪಿಗಳ ವಿರುದ್ಧ ಕೋರ್ಟ್‌ಗೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಸುಳ್ಯ ಹಿರಿಯ ನ್ಯಾಯಾಲಯದ ನ್ಯಾಯಾಧೀಶ ಸೋಮಶೇಖರ್ ಅವರು, ಆರೋಪಿಗಳ ಮೇಲಿನ ಆರೋಪ ಸಾಬೀತಾಗಿದೆಯೆಂದು ತೀರ್ಪು ನೀಡಿ, 2 ವರ್ಷ ಜೈಲು ಶಿಕ್ಷೆ ಮತ್ತು ₹1.12 ಲಕ್ಷ ದಂಡ ವಿಧಿಸಿದ್ದಾರೆ. ನೊಂದ ಮಹಿಳೆಗೆ ಎಲ್ಲ 15 ಆರೋಪಿಗಳು ತಲಾ ₹3,750 ರಂತೆ ₹50 ಸಾವಿರ ಪರಿಹಾರ ನೀಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಆರೋಪಿಗಳ ಪರ ವಕೀಲರು, ಆರೋಪಿಗಳಿಗೆ ಮೇಲಿನ ಕೋರ್ಟ್‌ಗೆ ಹೋಗಲು ಒಂದು ತಿಂಗಳ ಕಾಲಾವಕಾಶ ಕೊಟ್ಟು ಜಾಮೀನು ನೀಡುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ನ್ಯಾಯಾಧೀಶರು ಒಂದು ತಿಂಗಳ ಕಾಲಾವಕಾಶ ಮತ್ತು ಸ್ಥಳದಲ್ಲೇ ಜಾಮೀನು ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು