ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು | ಮಾಸಾಂತ್ಯದೊಳಗೆ ಟೆಂಡರ್‌ ಆಹ್ವಾನ: ದಿನೇಶ್‌ ಗುಂಡೂರಾವ್‌

Published 3 ಡಿಸೆಂಬರ್ 2023, 4:58 IST
Last Updated 3 ಡಿಸೆಂಬರ್ 2023, 4:58 IST
ಅಕ್ಷರ ಗಾತ್ರ

ಮಂಗಳೂರು: ‘ಇಲ್ಲಿನ ಮೀನುಗಾರಿಕಾ ಬಂದರಿನ ಮೂರನೇ ಹಂತದ ವಿಸ್ತರಣೆ ಕಾಮಗಾರಿಗೆ ಈ ಡಿಸೆಂಬರ್‌ ಅಂತ್ಯದೊಳಗೆ ಟೆಂಡರ್‌ ಆಹ್ವಾನಿಸಲಾಗುತ್ತದೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.

‘ಮೀನುಗಾರಿಕಾ ಬಂದರಿನ ಮೂರನೇ ಹಂತದ ವಿಸ್ತರಣೆ ಕಾಮಗಾರಿಗೆ ಸಚಿವ ಸಂಪುಟದ ಅನುಮೋದನೆ ಸಿಕ್ಕಿದ್ದು, ₹ 49 ಕೋಟಿ ಮಂಜೂರಾಗಿದೆ. ಈ ಕುರಿತ ಪರಿಷ್ಕೃತ ಅಂದಾಜುಪಟ್ಟಿಯನ್ನು ವಾರದೊಳಗೆ ಸಿದ್ಧಪಡಿಸಲಾಗುತ್ತದೆ’ ಎಂದು ಅವರು ಇಲ್ಲಿ ಶನಿವಾರ ಸಭೆಯಲ್ಲಿ ಮಾಹಿತಿ ನೀಡಿದರು.

‘ಮೀನುಗಳ ಚಿಲ್ಲರೆ ಹಾಗೂ ಸಗಟು ಮಾರಾಟಕ್ಕೆ ಶೆಡ್‌ಗಳ ಸೌಕರ್ಯ ಬಂದರಿನಲ್ಲಿ ಇಲ್ಲ. ಈ ಬಗ್ಗೆ ಬಂದರು ಇಲಾಖೆ, ಮೀನುಗಾರಿಕಾ ಇಲಾಖೆ ಹಾಗೂ ಮಹಾನಗರ ಪಾಲಿಕೆಯವರು ಪರಸ್ಪರ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಬೇಕು‘ ಎಂದು ಅವರು ಸೂಚಿಸಿದರು.

ಬಂದರಿನ ನಿರ್ವಹಣೆಯ ಗುತ್ತಿಗೆ ಪಡೆದವರು ಅಲ್ಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದನ್ನು ಖಾತರಿಪಡಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ‌

ಯೋಜನೆ ಸಿದ್ಧಪಡಿಸಿ:

‘ಮೀನುಗಾರಿಕಾ ಬಂದರು ಅಭಿವೃದ್ಧಿಯೂ ಸೇರಿದಂತೆ ಪ್ರತಿ ವರ್ಷವೂ ಏನೆಲ್ಲ ಅಭಿವೃದ್ಧಿ ಕಾಮಗಾರಿಗಳು ನಡೆಯಬೇಕಿವೆ ಎಂಬ ಕುರಿತು ಮೊದಲೇ ಯೋಜನೆಯನ್ನು ರೂಪಿಸುವ ಅಗತ್ಯ ಇದೆ. ಬಂದರುಗಳ ವಾರ್ಷಿಕ ನಿರ್ವಹಣೆಗೆ ಮತ್ತು ಹೂಳೆತ್ತುವುದಕ್ಕೆ ಬೇಕಾಗುವ ಮೊತ್ತವನ್ನು ಮೊದಲೇ ಕಾಯ್ದಿರಿಸಬೇಕು’ ಎಂದು ಸಚಿವರು ನಿರ್ದೇಶನ ನೀಡಿದರು.

‘ಬಂದರಿನ ದಕ್ಕೆಯಲ್ಲಿ ಹೂಳೆತ್ತುವ ₹ 3.9 ಕೋಟಿ ಮೊತ್ತದ ಕಾಮಗಾರಿ ಪ್ರಗತಿಯಲ್ಲಿದೆ. ದಕ್ಕೆಯಿಂದ ಅಳಿವೆ ಬಾಗಿಲಿನವರೆಗೆ  ಹೂಳೆತ್ತುವುದಕ್ಕೆ ₹ 29 ಕೋಟಿ ಮೊತ್ತದ ಕಾಮಗಾರಿ ಮಂಜೂರಾಗಿದ್ದು, ಈ ಕಾರ್ಯವೂ ಶೀಘ್ರವೇ ಆರಂಭವಾಗಲಿದೆ. ಬ್ರೇಕ್ ವಾಟರ್‌ಗಳ ನಿರ್ವಹಣೆಗೆ 1980ರಲ್ಲಿ ಹಳೆಬಂದರಿನ ಬಳಿ 4 ಮೀ ಆಳದಷ್ಟು ಹೂಳೆತ್ತಲಾಗಿತ್ತು. ಈಗ ಧಕ್ಕೆಯಿಂದ ಅಳಿವೆ ಬಾಗಿಲಿನವರೆಗೆ 7 ಮೀ ಆಳದವರೆಗೆ ಹೂಳೆತ್ತಲಾಗುತ್ತದೆ. ಈ ಕಾಮಗಾರಿ ಪೂರ್ಣಗೊಂಡ ಬಳಿಕ ದೊಡ್ಡ ಗಾತ್ರದ ಹಡಗುಗಳೂ ಧಕ್ಕೆಗೆ ಪ್ರವೇಶಿಸಬಹುದು’ ಎಂದು ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.

‘ಇಲ್ಲಿ ಹೂಳು ಪದೇ ಪದೇ ಶೇಖರಣೆ ಆಗುವುದನ್ನು ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಪ್ರಸ್ತಾವ ಸಿದ್ಧಪಡಿಸಲಾಗುತ್ತಿದೆ’ ಎಂದರು.

‘ಮೀನುಗಾರಿಕಾ ಬಂದರಿನಲ್ಲಿ ಒಂದನೇ ಹಾಗೂ ಎರಡನೇ ಹಂತದ ವಿಸ್ತರಣೆಗೊಂಡ ದಕ್ಕೆಗಳ ಅಭಿವೃದ್ಧಿಗಾಗಿ ಒಟ್ಟು ₹ 37.5 ಕೋಟಿಯ ಕಾಮಗಾರಿಗೆ ಕೇಂದ್ರ ಸರ್ಕಾರ ಮಂಜೂರಾತಿ ನೀಡಿದೆ. ಶಿಥಿಲಗೊಂಡು ಕುಸಿದ ಜೆಟ್ಟಿಗಳ ದುರಸ್ತಿ ಕಾಮಗಾರಿಯನ್ನು ಇದರಡಿ ಕೈಗೊ‌ಳ್ಳಲಾಗುತ್ತಿದೆ’ ಎಂದು ವಿವರಿಸಿದರು. ಮೀನು ಹರಾಜು ಪ್ರದೇಶವು ಶಿಥಿಲಾವಸ್ಥೆಯಲ್ಲಿದೆ. ಇಲ್ಲಿನ ಹರಾಜು ಕಟ್ಟೆಯನ್ನು ಅಭಿವೃದ್ಧಿಪಡಿಸಲಾಗುತ್ತದೆ. ಬಹು ಅಂತಸ್ತುಗಳ ದಾಸ್ತಾನು ಕೊಠಡಿ ಹಾಗೂ ತ್ಯಾಜ್ಯ ನೀರು ಶುದ್ಧೀಕರಣ ಘಟಕವನ್ನು (ಎಸ್‌ಟಿಪಿ) ಅಭಿವೃದ್ಧಿಪಡಿಸಲಾಗುತ್ತದೆ. ಇಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದೂ ಈ ಕಾಮಗಾರಿಯಲ್ಲಿ ಸೇರಿದೆ’ ಎಂದು ಮಾಹಿತಿ ನೀಡಿದರು.

ಟ್ರಾಲ್‌ಬೋಟ್‌ ಮೀನುಗಾರರ ಸಂಘದ ಅಧ್ಯಕ್ಷ ಚೇತನ ಬೆಂಗ್ರೆ, ‘ಮಲ್ಪೆ ಮೀನುಗಾರಿಕಾ ಬಂದರಿನಲ್ಲಿರುವಂತೆ ಇಲ್ಲಿನ ಬಂದರಿನಲ್ಲಿ ಅಗ್ನಿಶಾಮಕ ಠಾಣೆಯ ಅಗತ್ಯವಿದೆ. ಇಲ್ಲಿಗೆ ಸೀ ಆಂಬುಲೆನ್ಸ್‌ ಕೂಡ ಬೇಕು’ ಎಂದರು.

‘ತೀರದ ನಿರ್ವಹಣೆ ಯೋಜನೆಗೆ ಸಂಬಂಧಿಸಿ ಚೆನ್ನೈನ ಐಐಟಿ ಶೀಘ್ರವೇ ವರದಿ ಸಲ್ಲಿಸಲಿದೆ’ ಎಂದು ಸಚಿವರು ತಿಳಿಸಿದರು.

'ಬಂದರಿನ ಸುರಕ್ಷತೆಗೆ ಕ್ರಮವಹಿಸಿ’

ಇದಕ್ಕೂ ಮುನ್ನ ಸಚಿವ ದಿನೇಶ್‌ ಗುಂಡೂರಾವ್‌ ಅವರು ಮೀನುಗಾರಿಕಾ ಬಂದರಿಗೆ ಭೇಟಿ ನೀಡಿ ಮೀನುಗಾರರ ಅಹವಾಲು ಆಲಿಸಿದರು.  ‘ನಗರದ ಹೆಬ್ಬಾಗಿಲಿನಂತಿರುವ ಈ ಬಂದರಿನ ಸುರಕ್ಷತೆಗೆ ಕ್ರಮವಹಿಸಬೇಕು. ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಇಲ್ಲಿನ ವಾಹನ ನಿಲುಗಡೆ ಸ್ಥಳವನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಬಂದರಿನ ಸ್ವಚ್ಛತೆಗೆ ಕ್ರಮವಹಿಸಬೇಕು’ ಎಂದು ಮೀನುಗಾರ ಮುಖಂಡರು ಒತ್ತಾಯಿಸಿದರು.‘ಇಲ್ಲಿನ ಪರಿಸರ ಸ್ವಚ್ಛವಾಗಿರದ ಕಾರಣ ರಫ್ತುದಾರರು ಮೀನುಗಳ ಖರೀದಿಗೆ ಹಿಂದೇಟು ಹಾಕುತ್ತಾರೆ. ಹಾಗಾಗಿ ಇಲ್ಲಿನ ಮೀನುಗಳಿಗೆ ಉತ್ತಮ ದರವೂ ಸಿಗುತ್ತಿಲ್ಲ’ ಎಂದು ಚೇತನ್‌ ಬೆಂಗ್ರೆ ತಿಳಿಸಿದರು.

ಅಂಕಿ ಅಂಶ

₹ 3.9 ಕೋಟಿ ಮೀನುಗಾರಿಕಾ ಬಂದರಿನ ದಕ್ಕೆಯಲ್ಲಿ ಹೂಳೆತ್ತುವ ಕಾಮಗಾರಿಗೆ ಮಂಜೂರಾದ ಅನುದಾನ ₹ 37.5 ಕೋಟಿ ಬಂದರಿನ 1 ಮತ್ತು2ನೇ ಹಂತದಲ್ಲಿ ನಿರ್ಮಾಣವಾದ ದಕ್ಕೆಗಳ ಅಭಿವೃದ್ಧಿ ಮಂಜೂರಾದ ಹಣ ₹ 29 ಕೋಟಿ ದಕ್ಕೆಯಿಂದ ಅಳಿವೆಬಾಗಿಲಿನವೆಗೆ ಹೂಳೆತ್ತಲು ಮಂಜೂರಾದ ಅನುದಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT