ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಗ್ಗಟ್ಟಿನ ಕಾರ್ಯ ಯಶಸ್ಸಿಗೆ ಮೂಲ

‘ಮತ್ಸ್ಯ ಸಂಪದ’ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿದ ಪೇಜಾವರ ಶ್ರೀ
Last Updated 20 ಮೇ 2022, 16:14 IST
ಅಕ್ಷರ ಗಾತ್ರ

ಮಂಗಳೂರು: ಸಹಕಾರಿ ತತ್ವವನ್ನು ಜಗತ್ತಿಗೆ ಮೊದಲ ಬಾರಿಗೆ ಬೋಧಿಸಿದ್ದು ಶ್ರೀಕೃಷ್ಣ. ಸಹಕಾರಿ ತತ್ವದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಕಾರಿ ಮೀನು ಮಾರಾಟ ಫೆಡರೇಶನ್‌ನ ನೂತನ ಕಟ್ಟಡ ಸಮಾಜದ ಸಮಗ್ರ ಏಳಿಗೆಗೆ ಕಾರಣವಾಗಲಿ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ನಗರದ ಉರ್ವಸ್ಟೋರ್ ಅಂಚೆ ಕಚೇರಿ ಬಳಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ನೂತನ ಪ್ರಧಾನ ಕಚೇರಿ ಸಂಕೀರ್ಣ ‘ಮತ್ಸ್ಯ ಸಂಪದ’ಕ್ಕೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಅವರು ಆಶೀರ್ವಚನ ನೀಡಿದರು.

‘ಮೊಗವೀರ ಸಮಾಜ ನಾಡಿನಲ್ಲೇ ಪ್ರಧಾನವಾದ ಸಮಾಜವಾಗಿದೆ. ಪರಸ್ಪರ ಒಗ್ಗಟ್ಟು ಈ ಸಮಾಜದ ಯಶಸ್ಸಿಗೆ ಮೂಲ ಕಾರಣ. ಮೊಗವೀರ ಸಮಾಜದ ಒಗ್ಗಟ್ಟಿನಿಂದ ಉಚ್ಚಿಲದಲ್ಲಿ ಸುಂದರವಾದ ಮಹಾಲಕ್ಷ್ಮಿ ದೇವಾಲಯ ಎದ್ದು ನಿಂತಿದೆ. ನೂತನ ಕಟ್ಟಡವು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಲಿ. 75 ಸೊಸೈಟಿಗಳನ್ನು ಒಳಗೊಂಡಿರುವ ಸಹಕಾರಿ ಮೀನು ಮಾರಾಟ ಫೆಡರೇಶನ್‍ನ ಉನ್ನತಿಗೆ ಕಾರಣವಾಗಲಿ’ ಎಂದು ಆಶಿಸಿದರು.

ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಜಿ. ಶಂಕರ್ ಮಾತನಾಡಿ, ಮೀನುಗಾರರಿಗೆ ಆರೋಗ್ಯ ಕಾರ್ಡ್‌, ₹ 10 ಸಾವಿರ ಬಡ್ಡಿರಹಿತ ಸಾಲ ಸಹಿತ ವಿವಿಧ ಯೋಜನೆಗಳನ್ನು ಫೆಡರೇಶನ್ ನೀಡಿದೆ. ₹3 ಕೋಟಿ ವೆಚ್ಚದ ನೂತನ ಕಟ್ಟಡಕ್ಕೆ ಸರ್ಕಾರ, ಶಾಸಕರು ಅನುದಾನ ಒದಗಿಸಬೇಕು ಎಂದರು.

ಶಾಸಕ ಲಾಲಾಜಿ ಆರ್.ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿದರು. ಶಾಸಕರಾದ ಡಾ.ವೈ.ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಮೇಯರ್ ಪ್ರೇಮಾನಂದ ಶೆಟ್ಟಿ, ಉಚ್ಚಿಲದ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್, ಉಡುಪಿ ಕಾಂಚನ ಹುಂಡೈ ಆಡಳಿತ ನಿರ್ದೇಶಕ ಪ್ರಸಾದ್‍ರಾಜ್ ಕಾಂಚನ್, ಉರ್ವ ಮಾರಿಯಮ್ಮ ದೇವಸ್ಥಾನ ಆಡಳಿತ ಮೊಕ್ತೇಸರ ದೇವಾನಂದ ಗುರಿಕಾರ, ಮತ್ಸ್ಯೋದ್ಯಮಿಗಳಾದ ಮಲ್ಪೆಯ ಆನಂದ ಪಿ.ಸುವರ್ಣ, ಮಂಗಳೂರಿನ ಮೋಹನ್ ಬೆಂಗ್ರೆ, ಶಶಿಧರ ಮೆಂಡನ್ ಇದ್ದರು. ಫೆಡರೇಶನ್ ಕಾರ್ಯನಿರ್ವಹಣಾಧಿಕಾರಿ ಹರೀಶ್ ಕುಮಾರ್ ವಂದಿಸಿದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಕಚೇರಿ ಮಂಗಳೂರಿನ ಮುಳಿಹಿತ್ಲುವಿನಲ್ಲಿದೆ. ಉಭಯ ಜಿಲ್ಲೆಗಳ ಮೀನುಗಾರರಿಗೆ ಅನುಕೂಲವಾಗಲೆಂದು ನಗರದ ಹೃದಯಭಾಗದಲ್ಲಿ ಪ್ರಧಾನ ಕಚೇರಿ ನಿರ್ಮಿಸಲಾಗುತ್ತಿದೆ. ಮುಳಿಹಿತ್ಲುವಿನಲ್ಲಿ ಫಿಶ್‍ಮಿಲ್, ಐಸ್‍ಪ್ಲ್ಯಾಂಟ್ ಕಾರ್ಯಾಚರಿಸಲಿದೆ ಎಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್‍ಪಾಲ್ ಎ.ಸುವರ್ಣ ತಿಳಿಸಿದರು.

‘ಮತ್ಸ್ಯಸಂಪದ’ ಶಿಲಾನ್ಯಾಸದ ಹಿನ್ನೆಲೆಯಲ್ಲಿ ಫೆಡರೇಶನ್ ವತಿಯಿಂದ ನೀಲಾವರ ಗೋಶಾಲೆಯ ಗೋವರ್ಧನಗಿರಿ ಟ್ರಸ್ಟ್‌ಗೆ ₹ 2.5 ಲಕ್ಷ ದೇಣಿಗೆಯ ಚೆಕ್‍ ಅನ್ನು ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರಿಗೆ ಯಶಪಾಲ್ ಸುವರ್ಣ ಹಸ್ತಾಂತರಿಸಿದರು.

‘ಮೂರು ಜೆಟ್ಟಿ ನಿರ್ಮಾಣ’

‘ಮೀನುಗಾರಿಕೆಯ ಅಭಿವೃದ್ಧಿಗೆ ಪೂರಕವಾಗಿ ಕರಾವಳಿಯಲ್ಲಿ ಮೂರು ಮೀನುಗಾರಿಕಾ ಜೆಟ್ಟಿಗಳು ನಿರ್ಮಾಣಗೊಳ್ಳಲಿವೆ. ಇದಕ್ಕಾಗಿ ವ್ಯವಸ್ಥಿತ ಯೋಜನೆ ರೂಪುಗೊಂಡಿದೆ. ₹ 50ರಿಂದ 70 ಕೋಟಿ ಅನುದಾನ ಹೊಂದಿಕೆ ಮಾಡಬೇಕಾಗಿದೆ. ಮಂಗಳೂರಿನ ಹಳೆಬಂದರಿನಲ್ಲಿ ಮೂರನೇ ಹಂತದ ಜೆಟ್ಟಿ ವಿಸ್ತರಣೆಗೆ ₹ 22 ಕೋಟಿ ಅನುದಾನ ದೊರೆಯಲಿದೆ. ಮೀನುಗಾರಿಕಾ ಕ್ಷೇತ್ರದಲ್ಲಿ ಕೌಶಲಾಭಿವೃದ್ಧಿಗೆ ಪೂರಕವಾಗಿ ಮೀನುಗಾರಿಕಾ ವಿಶ್ವವಿದ್ಯಾಲಯದ ಮೂಲಕ ಹೊಸ ಸರ್ಟಿಫಿಕೇಟ್ ಕೋರ್ಸ್‍ಗಳನ್ನು ಶೀಘ್ರ ಆರಂಭಿಸಲಾಗುವುದು’ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT