ಗುರುವಾರ , ಆಗಸ್ಟ್ 11, 2022
23 °C
ಫಾದರ್ ಮುಲ್ಲರ್ ಆಸ್ಪತ್ರೆ ವೈದ್ಯರ ತಂಡದಿಂದ ಶಸ್ತ್ರಚಿಕಿತ್ಸೆ

ಶಿಶುಗಳ ದೇಹಕ್ಕೆ ಸೇರಿದ ಬೆನ್ನುಮೂಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಎರಡು ಶಿಶುಗಳಲ್ಲಿ ದೇಹದಿಂದ ಹೊರಬಂದಿದ್ದ ಬೆನ್ನುಮೂಳೆಯನ್ನು ದೇಹದಲ್ಲಿ ಸೇರಿಸುವ ಶಸ್ತ್ರಚಿಕಿತ್ಸೆಯನ್ನು ಇಲ್ಲಿನ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನಲ್ಲಿ ಯಶಸ್ವಿಯಾಗಿ ಮಾಡಲಾಗಿದೆ.

30 ವಾರದಲ್ಲಿ ಜನಿಸಿದ್ದ 1ಕೆ.ಜಿ. 700 ಗ್ರಾಂ ತೂಕವಿದ್ದ ಒಂದು ಮಗು ಹಾಗೂ 2 ಕೆ.ಜಿ. 600 ಗ್ರಾಂ ತೂಕವಿದ್ದ ಇನ್ನೊಂದು ಮಗುವಿನಲ್ಲಿ ‘ಮೈಲ್ಮೆನಿಂಗೋಕೊಯಿಲ್‌’ ಎನ್ನುವ ವಿಚಿತ್ರ ಸ್ಥಿತಿ ಕಂಡು ಬಂದಿತ್ತು. ಈ ಪ್ರಕರಣದಲ್ಲಿ ಬೆನ್ನುಮೂಳೆಯು ದೇಹದಿಂದ ಹೊರಗೆ ಬಂದಿರುತ್ತದೆ. ಹಾಗೆಯೇ ಬಿಟ್ಟಲ್ಲಿ ದೈಹಿಕ ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.

ಎರಡೂ ಶಿಶುಗಳನ್ನು ಆಸ್ಪತ್ರೆಯ ನೂತನ ಶಿಶು ಆರೈಕೆ ಘಟಕದಲ್ಲಿ ದಾಖಲು ಮಾಡಿಕೊಳ್ಳಲಾಗಿತ್ತು. ವೈದ್ಯರ ನಾಲ್ಕು ತಂಡಗಳು ಕೂಲಂಕಷವಾಗಿ ಚರ್ಚಿಸಿ, ಶಿಶುಗಳಿಗೆ ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಿದವು. ಸಿಟಿ ಮತ್ತು ಎಂಆರ್‌ಐ ಸ್ಕ್ಯಾನ್‌ ಮೂಲಕ ಬೆನ್ನಮೂಳೆಯ ಸ್ಥಿತಿಯನ್ನು ಪರಿಶೀಲಿಸಲಾಯಿತು.

ನ್ಯೂರೋಸರ್ಜರಿ, ಶಿಶು ಆರೈಕೆ ವಿಭಾಗ, ಪ್ಲಾಸ್ಟಿಕ್ ಸರ್ಜರಿ ಹಾಗೂ ಅರವಳಿಕೆ ತಜ್ಞರ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಪೂರ್ಣಗೊಳಿಸಿದ್ದು, ಬೆನ್ನಮೂಳೆಯನ್ನು ದೇಹದಲ್ಲಿ ಸೇರ್ಪಡೆ ಮಾಡಲಾಗಿದೆ. ಏಳು ಗಂಟೆಯ ಸುದೀರ್ಘ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಶಿಶುಗಳು ಚೇತರಿಸಿಕೊಳ್ಳುತ್ತಿವೆ.

‘ಈ ಶಸ್ತ್ರಚಿಕಿತ್ಸೆಯು ಸವಾಲಾಗಿತ್ತು. ಪ್ರತಿ ಹಂತದಲ್ಲೂ ಉತ್ತಮ ಚಿಕಿತ್ಸೆ ನೀಡುವ ಮೂಲಕ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿಭಾಯಿಸಲಾಗಿದೆ. ಶಿಶುಗಳ ಪಾಲಕರೂ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಶಸ್ತ್ರಚಿಕಿತ್ಸೆಗೆ ಸಹಕಾರ ನೀಡಿದ್ದಾರೆ. ವೈದ್ಯರ ತಂಡವೂ ಉತ್ತಮ ಕೆಲಸ ಮಾಡಿದೆ' ಎಂದು ಆಸ್ಪತ್ರೆಯ ನ್ಯೂರೋ ಸರ್ಜನ್ ಡಾ.ಗ್ರೋವರ್ ಲೋಬೊ ತಿಳಿಸಿದ್ದಾರೆ.

ಡಾ.ಪ್ರವೀಣ್, ಡಾ.ಮಾರಿಯೊ, ಡಾ.ಬಾಲಕೃಷ್ಣ, ಡಾ.ವಿಷ್ಮಾ, ಡಾ.ಅನಂತ ಹಾಗೂ ಡಾ.ಅರವಿಂದ ರಾವ್ ಅವರನ್ನು ಒಳಗೊಂಡ ತಂಡ ಈ ಶಸ್ತ್ರಚಿಕಿತ್ಸೆಯನ್ನು ಮಾಡಿದೆ. ಫಾದರ್ ಮುಲ್ಲರ್ ಚಾರಿಟಬಲ್ ಸಂಸ್ಥೆಗಳ ನಿರ್ದೇಶಕ ಫಾ. ರಿಚರ್ಡ್ ಕುವೆಲ್ಲೊ, ಆಸ್ಪತ್ರೆಯ ಆಡಳಿತಾಧಿಕಾರಿ ಫಾ. ರುಡಾಲ್ಫ್‌ ಡೇಸಾ ಅವರು ವೈದ್ಯರ ತಂಡವನ್ನು ಅಭಿನಂದಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು