ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

28 ನಗರಗಳಿಗೆ ನೈಸರ್ಗಿಕ ಅನಿಲ ಪೂರೈಕೆ

ಗೇಲ್ ಕೊಚ್ಚಿನ್‌–ಮಂಗಳೂರು ಪೈಪ್‌ಲೈನ್‌ ಮಂಗಳವಾರ ಉದ್ಘಾಟನೆ
Last Updated 5 ಜನವರಿ 2021, 8:20 IST
ಅಕ್ಷರ ಗಾತ್ರ

ಮಂಗಳೂರು: ಬಹುದಿನಗಳ ನಿರೀಕ್ಷೆಯಾಗಿದ್ದ ಕೊಚ್ಚಿನ್‌–ಮಂಗಳೂರು ಗೇಲ್‌ ಪೈಪ್‌ಲೈನ್‌ ಕಾಮಗಾರಿ ಪೂರ್ಣಗೊಂಡಿದ್ದು, ಅಧಿಕೃತವಾಗಿ ಮಂಗಳವಾರ (ಇದೇ 5) ಬೆಳಿಗ್ಗೆ 11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚ್ಯುವಲ್‌ ಕಾರ್ಯಕ್ರಮದ ಮೂಲಕ ಉದ್ಘಾಟನೆ ನೆರವೇರಿಸಲಿದ್ದಾರೆ.

2009ರಲ್ಲಿ ಆರಂಭಿಸಲಾಗಿದ್ದ ಗೇಲ್‌ ಪೈಪ್‌ಲೈನ್‌ ಕಾಮಗಾರಿ, ಹಲವು ಅಡೆತಡೆಗಳ ಮಧ್ಯೆ 11 ವರ್ಷಗಳ ನಂತರ ಪೂರ್ಣವಾಗಿದೆ. ಇದರಿಂದ ನಗರದ ಕೈಗಾರಿಕೆಗಳು ಹಾಗೂ ಗೃಹ ಬಳಕೆಗೆ ಪರಿಸರ ಸ್ನೇಹಿ ಇಂಧನ ಪೂರೈಕೆ ಸಾಧ್ಯವಾಗಲಿದೆ ಎಂದು ಗೇಲ್‌ ಇಂಡಿಯಾ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಮನೋಜ್‌ ಜೈನ್‌ ತಿಳಿಸಿದ್ದಾರೆ.

ಸದ್ಯಕ್ಕೆ ಮಂಗಳೂರಿನ ಎಂಸಿಎಫ್‌ಗೆ ನೈಸರ್ಗಿಕ ಅನಿಲ ಪೂರೈಕೆ ಆರಂಭಿಸಲಾಗಿದೆ. ಒಎಂಪಿಎಲ್ ಹಾಗೂ ಎಂಆರ್‌ಪಿಎಲ್‌ಗೂ ಪೂರೈಕೆ ಮಾಡಲಾಗುವುದು. ಜೊತೆಗೆ ನಗರದ ಮನೆಗಳಿಗೂ ಅನಿಲ ಜಾಲ ವಿಸ್ತರಣೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಪೈಪ್‌ಲೈನ್‌ ಕಾಮಗಾರಿ ಪೂರ್ಣಗೊಂಡಿರುವುದರಿಂದ ಒಂದು ವರ್ಷದಲ್ಲಿ ರಾಜ್ಯದ 28 ನಗರ ಮತ್ತು ಪಟ್ಟಣಗಳ ಗೃಹ ಬಳಕೆ, ಕೈಗಾರಿಕೆ ಹಾಗೂ ವಾಹನಗಳಿಗೆ ಎಲ್‌ಎನ್‌ಜಿ ಪೂರೈಕೆ ಮಾಡಲು ಸಾಧ್ಯವಾಗಲಿದೆ. ಮಂಗಳೂರು ಮತ್ತು ಬೆಂಗಳೂರಿನ ಸುತ್ತಲಿರುವ ನಗರ ಮತ್ತು ಪಟ್ಟಣಗಳಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಹೇಳಿದ್ದಾರೆ.

ಅನಿಲ ಪೂರೈಕೆ ಕೇಂದ್ರಗಳ ನಿರ್ಮಾಣ ಕಾರ್ಯ ಈ ನಗರ ಮತ್ತು ಪಟ್ಟಣಗಳಲ್ಲಿ ಆರಂಭವಾಗಿದೆ. ಕೊಚ್ಚಿನ್‌ ಟರ್ಮಿನಲ್‌ನಿಂದ ತಮಿಳುನಾಡಿನ ಮೂಲಕ ಬೆಂಗಳೂರಿಗೆ ಎಲ್‌ಎನ್‌ಜಿ ಪೂರೈಕೆ ಮಾಡಲಾಗುವುದು ಎಂದಿದ್ದಾರೆ.

ಎಲ್ಎನ್‌ಜಿ ಪೈಪ್‌ಲೈನ್‌ನ ಸುರಕ್ಷತೆಯ ಕುರಿತು ಪ್ರತಿಕ್ರಿಯಿಸಿರುವ ಅವರು, ಅಂತರರಾಷ್ಟ್ರೀಯ ಸುರಕ್ಷತಾ ಮಾನದಂಡವನ್ನು ಅನುಸರಿಸಿಯೇ ಪೈಪ್‌ಲೈನ್‌ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಪೈಪ್‌ಲೈನ್‌ನಿಂದ ಅನಿಲ ಸೋರಿಕೆ ಘಟನೆಗಳು ಸಂಭವಿಸುವ ಸಾಧ್ಯತೆಗಳು ಕಡಿಮೆ ಎಂದು ಹೇಳಿದ್ದಾರೆ.

ವರ್ಚ್ಯುವಲ್‌ ಕಾರ್ಯಕ್ರಮ: ಮಂಗಳವಾರ ವರ್ಚ್ಯುವಲ್‌ ವಿಧಾನದ ಮೂಲಕ ಪೈಪ್‌ಲೈನ್‌ ಲೋಕಾರ್ಪಣೆ ಆಗಲಿದೆ. ನಗರದ ಎಂಸಿಎಫ್‌ ಆವರಣದಲ್ಲಿ ಬೃಹತ್‌ ಪರದೆ ಅಳವಡಿಸಿ, ಕಾರ್ಯಕ್ರಮ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ.

ಕರ್ನಾಟಕದ ರಾಜ್ಯಪಾಲ ವಜುಭಾಯಿ ವಾಲಾ, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಕೇರಳದ ರಾಜ್ಯಪಾಲ ಆರೀಫ್‌ ಮೊಹಮ್ಮದ್ ಖಾನ್‌, ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್‌ ಭಾಗವಹಿಸಲಿದ್ದಾರೆ ಎಂದು ಮನೋಜ್‌ ಜೈನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT