ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಮತ್ತೆ ಬಂದ ಗಣಪತಿ ಬಪ್ಪಾ...

ಎಲ್ಲೆಡೆ ರಾರಾಜಿಸುತ್ತಿವೆ ಫ್ಲೆಕ್ಸ್‌, ಬ್ಯಾನರ್‌ಗಳು, ಪರಿಸರಸ್ನೇಹಿ ಗಣಪನ ಸ್ತುತಿಸಲು ತಯಾರಿ
Last Updated 29 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ಮಂಗಳೂರು: ಕೋವಿಡ್‌ ಕಾರಣದಿಂದ ಎರಡು ವರ್ಷಗಳಿಂದ ಮಂಕಾಗಿದ್ದ ಗಣೇಶೋತ್ಸವಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಭರದ ಸಿದ್ಧತೆ ನಡೆಯುತ್ತಿದೆ. ಮನೆ-ಮನಗಳಲ್ಲಿ ಹಬ್ಬದ ಸಡಗರ ಜೋರಾಗಿದ್ದು, ಆಯೋಜಕರು ಮೂರ್ತಿ ಪ್ರತಿಷ್ಠಾಪನೆಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ 375ಕ್ಕೂ ಅಧಿಕ ಸ್ಥಳಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ನಡೆಯುತ್ತಿದ್ದು, ಎಲ್ಲೆಡೆ ಸಡಗರದ ವಾತಾವರಣ ಕಂಡುಬರುತ್ತಿದೆ.

ಗಣೇಶೋತ್ಸವ ಆಚರಿಸುವ ಸಂಬಂಧ ಜಿಲ್ಲಾಡಳಿತ ನಿಯಮ ರೂಪಿಸಿದ್ದು, ಅದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆಯೋಜಕರಿಗೆ ಸೂಚಿಸಿದೆ. ಕೆಲ ನಿರ್ಬಂಧಗಳ ನಡುವೆಯೂ ಈ ಬಾರಿ ಹಬ್ಬದ ಸಂಭ್ರಮ ಕಳೆಗಟ್ಟಿದ್ದು, ಮಂಗಳೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಗಣೇಶೋತ್ಸವದ ಫ್ಲೆಕ್ಸ್‌, ಬ್ಯಾನರ್‌ಗಳು ರಾರಾಜಿಸುತ್ತಿವೆ. ನಾನಾ ಭಂಗಿಯಲ್ಲಿರುವ ಗಣಪನ ಮೂರ್ತಿಗಳು ಮಾರುಕಟ್ಟೆಗೆ ಬಂದಿದ್ದು, ಅವುಗಳ ಮಾರಾಟವೂ ಜೋರಾಗಿ ನಡೆಯುತ್ತಿದೆ.

ಸಾರ್ವಜನಿಕವಾಗಿ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಗಣೇಶ ಚತುರ್ಥಿ ಅಥವಾ ಚೌತಿ ಪ್ರಮುಖವಾದುದು. ಸಂಘಟನೆಗಳ ನೇತೃತ್ವದಲ್ಲಿ ನಡೆಯುವ ಈ ಉತ್ಸವದಲ್ಲಿ ಜಾತಿ, ಮತ ಭೇದವಿಲ್ಲದೆ ಎಲ್ಲರೂ ಪಾಲ್ಗೊಳ್ಳುತ್ತಾರೆ. ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸಿ, ಬಳಿಕ ಶೋಭಾಯಾತ್ರೆಯಲ್ಲಿ ವಿಸರ್ಜನೆ ಮಾಡುವುದು ಸಂಪ್ರದಾಯ. ಇದೇ ವೇಳೆ ಕ್ರೀಡೆ, ಜಾನಪದ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮನರಂಜನೆಯ ಜತೆಗೆ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲಾಗುತ್ತಿದೆ.

ಶೋಭಾಯಾತ್ರೆಯೇ ಗಣೇಶೋತ್ಸವದ ಕೇಂದ್ರಬಿಂದು. ವೈವಿಧ್ಯಮಯ ಟ್ಯಾಬ್ಲೊ, ಕುಣಿತ ಭಜನೆ, ಜಾನಪದ ಕುಣಿತಗಳು, ಕೀಲುಕುದುರೆ ನೃತ್ಯ, ನಾಸಿಕ್‌ ಬ್ಯಾಂಡ್‌, ಬೊಂಬೆ ನೃತ್ಯಗಳು ಶೋಭಾಯಾತ್ರೆಗೆ ವಿಶೇಷ ಕಳೆ ತಂದುಕೊಡುತ್ತವೆ. ‘ಗಣಪತಿ ಬಪ್ಪಾ ಮೋರೆಯಾ’ ಘೋಷಣೆದೊಂದಿಗೆ, ಪಟಾಕಿ, ಸಿಡಿಮದ್ದು, ಅಬ್ಬರದ ಸಂಗೀತ, ಭಕ್ತರ ನೃತ್ಯದೊಂದಿಗೆ ಸಾಗಿ ಬರುವ ಗಣೇಶನನ್ನು ಕಣ್ತುಂಬಿಕೊಳ್ಳಲು ಭಕ್ತರ ಸಾಗರವೇ ಜಮಾಯಿಸುತ್ತದೆ. ಮಾತ್ರವಲ್ಲ, ಗಣಪನಿಗೆ ದಾರಿಯುದ್ದಕ್ಕೂ ಪೂಜೆ ನಡೆಯುತ್ತದೆ.

ಮಂಗಳೂರು ನಗರದಲ್ಲೇ ಸುಮಾರು 50ಕ್ಕೂ ಅಧಿಕ ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸ ಆಚರಿಸಲಾಗುತ್ತದೆ. ಮಂಗಳೂರಿನ ಕೇಂದ್ರ ಮೈದಾನ, ಪಂಪ್‌ವೆಲ್‌, ಬಂಟ್ಸ್ ಹಾಸ್ಟೆಲ್‌ ಓಂಕಾರ ನಗರ, ರಥಬೀದಿ, ಕೆಎಂಸಿ, ಕರಂಗಲ್ಪಾಡಿ ಮಾರುಕಟ್ಟೆ, ಮರೋಳಿ, ಕುಲಶೇಖರ, ಬಿಕರ್ನಕಟ್ಟೆ ಸಿದ್ಧಿವಿನಾಯಕ ದೇವಸ್ಥಾನ, ಕುಲಶೇಖರ, ಕೊಡಿಯಾಲ್‌ಬೈಲ್‌, ಬಿಜೈ,ಚೊಕ್ಕಪಟ್ಣ, ಪೊಲೀಸ್‌ ಲೇನ್‌, ಜಪ್ಪಿನಮೊಗರು, ಅತ್ತಾವರ, ಬಲ್ಮಠ, ಕೊಡಿಕಲ್‌, ತೊಕ್ಕೊಟ್ಟು, ಕೆಎಸ್ಆರ್‌ಪಿ, ಕೆಎಸ್‌ಆರ್‌ಟಿಸಿ, ಎನ್‌ಎಂಪಿಟಿ, ಎಂಸಿಎಫ್‌, ಕೆಒಐಸಿಎಲ್‌, ಕರ್ನಾಟಕ ಗೃಹ ಮಂಡಳಿ, ಮಾರಿಗುಡಿ, ಕೊಣಾಜೆ,ಮೀನುಗಾರಿಕಾ ಕಾಲೇಜು ಹೀಗೆ ನಗರದ ವಿವಿಧೆಡೆ ಗಣೇಶನ ಆರಾಧನೆ ಅದ್ಧೂರಿಯಾಗಿ ನಡೆಯುತ್ತದೆ.

ಮಣ್ಣಿನ ಮೂರ್ತಿಗಳಿಗೆ ಭಾರಿ ಬೇಡಿಕೆ: ಪರಿಸರಕ್ಕೆ ಹಾನಿಯಾಗುವ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಹಾಗೂ ಕೃತಕ ಬಣ್ಣ ಬಳಸಿ ತಯಾರಿಸುವ ಮೂರ್ತಿಗಳಿಗೆ ಸರ್ಕಾರವೇ ನಿಷೇಧ ಹೇರಿರುವ ಕಾರಣ ಈ ಬಾರಿಯೂ ಮಣ್ಣಿನ ಮೂರ್ತಿಗಳಿಗೆ ಬೇಡಿಕೆ ಹೆಚ್ಚಿದೆ. ಸಾರ್ವಜನಿಕ ಮಾತ್ರವಲ್ಲದೆ ಮನೆಗಳಲ್ಲಿ ಪ್ರತಿಷ್ಠಾಪನೆಗೆ ಪರಿಸರ ಸ್ನೇಹಿ ವಿಗ್ರಹಗಳ ಖರೀದಿಗೆ ಸ್ಥಳೀಯರು ಹೆಚ್ಚು ಆಸಕ್ತಿ ವಹಿಸಿರುವುದು ಕಂಡು ಬಂದಿದೆ.

‘ನಮ್ಮ ಕುಟುಂಬ 9 ದಶಕಗಳಿಂದ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನು ತಯಾರಿಸುತ್ತಿದೆ. ಆವೆ ಮಣ್ಣಿನಿಂದ ನಾವು ಮೂರ್ತಿ ತಯಾರಿಸುತ್ತೇವೆ. ಭತ್ತ ಕೃಷಿ ಕಡಿಮೆಯಾದ ಕಾರಣ ಇಂದು ಆವೆ ಮಣ್ಣು ಸಿಗುವುದೇ ಕಷ್ಟ. ನಾವು ಪ್ರತಿವರ್ಷ ಸುಮಾರು 250 ಮೂರ್ತಿಗಳನ್ನು ತಯಾರಿಸುತ್ತೇವೆ. ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚುತ್ತಿದೆ. ಸಮಯ ಮತ್ತು ಸ್ಥಳದ ಅಭಾವದಿಂದಾಗಿ ಜನರ ಬೇಡಿಕೆಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ’ ಎನ್ನುತ್ತಾರೆ ಮಣ್ಣಗುಡ್ಡೆಯ ಮೂರ್ತಿ ತಯಾರಕ, ವಿಜಯ ಬ್ಯಾಂಕ್‌ನ ನಿವೃತ್ತ ಹಿರಿಯ ವ್ಯವಸ್ಥಾಪಕ ರಾಮಚಂದ್ರ ರಾವ್.

‘35 ವರ್ಷಗಳಿಂದ ಮಣ್ಣಿನ ಮೂರ್ತಿ ತಯಾರಿಕೆಯಲ್ಲಿ ನಿರತವಾಗಿದ್ದೇನೆ. ಈ ವರ್ಷ 350 ಗಣಪತಿಯ ಮೂರ್ತಿ ತಯಾರಿಸಿದ್ದು, ಉತ್ತಮ ಬೇಡಿಕೆ ಇದೆ. ಗಣಪತಿ ಪೂಜೆಗೆ ನೀರಿನಲ್ಲಿ ಲೀನವಾಗುವ ಮೂರ್ತಿಯನ್ನೇ ಬಳಸಬೇಕೆಂದು ಶಾಸ್ತ್ರ ಹೇಳುತ್ತದೆ. ಹೀಗಾಗಿ, ಮಂಗಳೂರಿನಲ್ಲಿ ಮಣ್ಣಿನ ಗಣಪತಿಯನ್ನು ಹೊರತುಪಡಿಸಿ ಉಳಿದ ಮೂರ್ತಿಗಳಿಗೆ ಬೇಡಿಕೆಯಿಲ್ಲ. ಮಣ್ಣಿನ ಮೂರ್ತಿ ತಯಾರಿಕಾ ಕಲೆಯು ಇಂದು ನಶಿಸುತ್ತಿದೆ. ಇದನ್ನು ಮುಂದಿನ ತಲೆಮಾರಿಗೆ ವರ್ಗಾಯಿಸುವ ಕೆಲಸ ಆಗಬೇಕು. ಪ್ರತಿ ಶಾಲೆಗಳಲ್ಲಿ ಮಣ್ಣಿನ ಕಲಾಕೃತಿ ರಚಿಸುವ ತರಬೇತಿಯನ್ನು ಹಮ್ಮಿಕೊಳ್ಳುವ ಮೂಲಕ ಈ ಕಲೆಯನ್ನು ಉಳಿಸಬೇಕು’ ಎಂದು ಒತ್ತಾಯಿಸುತ್ತಾರೆ ರಥಬೀದಿಯ ‘ಆದಿತ್ಯ ಸ್ಕ್ರಿನ್‌ ಶೈನ್‌ ಡಿಸ್ಲೆ’ ಮಳಿಗೆಯ ವಿನಾಯಕ ಸೇಠ್.

ಸಂಘನಿಕೇತನದ ಅಮೃತ ಮಹೋತ್ಸವ

ಜಿಲ್ಲೆಯಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ಶತಮಾನಗಳ ಇತಿಹಾಸವಿದ್ದರೂ ನಾನಾ ಕಾರಣಗಳಿಂದ ಕೆಲವೊಂದು ಕಡೆ ಸ್ಥಗಿತಗೊಂಡಿದೆ. ನಿರಂತರವಾಗಿ ಆಚರಣೆ ಮಾಡಿಕೊಂಡು ಬಂದ ಉತ್ಸವಗಳಲ್ಲಿ ಮಂಗಳೂರಿನ ಸಂಘನಿಕೇತನದ ಗಣೇಶೋತ್ಸವಕ್ಕೆ ಈಗ 75ರ ಸಂಭ್ರಮ. ಕೇಶವ ಸ್ಮೃತಿ ಸಂವರ್ಧನ ಸಮಿತಿಯ ಆಶ್ರಯದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ಇಲ್ಲಿ ಆಚರಣೆ ನಡೆಯುತ್ತಿದೆ.

‘ಬಾಲಗಂಗಾಧರ ತಿಲಕರ ಪ್ರೇರಣೆಯಿಂದ ಧಾರ್ಮಿಕ ಜಾಗೃತಿ, ಸಾಮಾಜಿಕ ಬದ್ಧತೆ ಮತ್ತು ರಾಷ್ಟ್ರೀಯ ಚಿಂತನೆಗಳೇ ಸಂಘನಿಕೇತನದ ಗಣೇಶೋತ್ಸವದ ಪ್ರೇಕರ ಶಕ್ತಿ. ಸಾರ್ವಜನಿಕ ಗಣೇಶೋತ್ಸವದ ಮೂಲ ಉದ್ದೇಶವನ್ನು ಆದರ್ಶವಾಗಿರಿಸಿಕೊಂಡು 1948ರಲ್ಲಿ ಗಣೇಶೋತ್ಸವವನ್ನು ಆರಂಭಿಸಲಾಗಿತ್ತು. 1975–76ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಇದ್ದಂತಹ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲೆ ನಿರ್ಬಂಧ ವಿಧಿಸಿ, ಸಂಘನಿಕೇತನಕ್ಕೆ ಬೀಗ ಹಾಕಿ ಪೊಲೀಸ್‌ ಕಾವಲು ಇದ್ದಂತಹ ಸಂದರ್ಭದಲ್ಲೂ ಸಮೀಪದ ಆವರಣದಲ್ಲಿ ಗಣೇಶೋತ್ಸವವನ್ನು ವೈಭವದಿಂದ ಆಚರಿಸಿದ ಹಿರಿಮೆ ಹೊಂದಿದೆ. ಅಲ್ಲದೆ, 1978ರಲ್ಲಿ ಪತ್ರಕರ್ತ ನಾಗೊರಿ ಕೊಲೆ ಸಂದರ್ಭದಲ್ಲಿ 144 ಸೆಕ್ಷನ್‌ ಜಾರಿ ಇದ್ದರೂ ಗಣೇಶನ ಶೋಭಾಯಾತ್ರೆ ಮೆರವಣಿಗೆ ನಿರ್ಬಂಧಿಸಿದಾಗ 21 ದಿನಗಳ ಪರ್ಯಾಂತ ಉತ್ಸವ ನಡೆಸಲಾಗಿತ್ತು’ ಎಂಬುದನ್ನು ಸ್ಮರಿಸುತ್ತಾರೆ ಗಣೇಶೋತ್ಸವ ಸಮಿತಿ ಅಧ್ಯಕ್ಷ ಕೆ.ಪ್ರವೀಣ್‌ ಕುಮಾರ್.

ಈ ಬಾರಿ ಆ.31ರಿಂದ ಸೆ.4ರವರೆಗೆ ಗಣೇಶೋತ್ಸವವುಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಸೆ. 4ರಂದು ಸಂಜೆ 6 ಗಂಟೆಗೆ ಶೋಭಾಯಾತ್ರೆ ಹೊರಡಲಿದ್ದು, ಮಣ್ಣಗುಡ್ಡೆ, ಅಳಕೆ, ರಥಬೀದಿ ಮಾರ್ಗವಾಗಿ ಮಹಾಮ್ಮಾಯಿ ಕೆರೆಯ ಬಳಿ ಮೂರ್ತಿಯನ್ನು ವಿಸರ್ಜಿಸಲಾಗುತ್ತದೆ.

ಪಂಪ್‌ವೆಲ್‌ ಗಣಪಗೆ ಸುವರ್ಣ ಸಂಭ್ರಮ

ಮಂಗಳೂರು ನಗರದ ಕಂಕನಾಡಿ ಪಂಪ್‌ವೆಲ್ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ನಡೆಸುವ ಗಣೇಶೋತ್ಸವಕ್ಕೆ ಈ ಬಾರಿ ಸುವರ್ಣ ಮಹೋತ್ಸವ ಸಂಭ್ರಮ. ಈ ನಿಟ್ಟಿನಲ್ಲಿ ಆ.29ರಿಂದ 5 ದಿನಗಳ ಕಾಲ ವಿವಿಧ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನೂತನವಾಗಿ ಉದ್ಘಾಟನೆಗೊಂಡ ಸಮಿತಿ ಕಟ್ಟಡ ‘ಸುಮುಖ’ ಭವನದಲ್ಲಿ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದೆ. ಅನ್ನದಾನಕ್ಕೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಯು ಆ.29ರಂದು ಸಂಜೆ 4ಗಂಟೆಗೆ ಶರವು ಮಹಾಗಣಪತಿ ದೇವಸ್ಥಾನದಿಂದ ಹೊರಡಲಿದೆ. ಸೆ.2ರಂದು ಸಂಜೆ 4 ಗಂಟೆಗೆ ಶೋಭಾಯಾತ್ರೆ ಹೊರಡಲಿದ್ದು, ಪಂಪ್ ವೆಲ್, ಕಂಕನಾಡಿ ಹಳೇ ಮಾರ್ಗವಾಗಿ, ಕಂಕನಾಡಿ ವೃತ್ತದಲ್ಲಿ ತಿರುಗಿ ಬೈಪಾಸ್ ರಸ್ತೆಯಾಗಿ ಪಂಪ್ ವೆಲ್, ಗರೋಡಿ ಹಾಗೂ ನಾಗುರಿಯಾಗಿ ಪಡೀಲ್‌ನ ಬೈರಾಡಿ ಕೆರೆಯಲ್ಲಿ ಮೂರ್ತಿಯನ್ನು ಜಲಸ್ತಂಭನಗೊಳಿಸಲಾಗುವುದು ಸುವರ್ಣ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ತಿಳಿಸಿದ್ದಾರೆ.

ಮನೆಗಳಲ್ಲಿ ಮೂರ್ತಿ ಪ್ರತಿಷ್ಠಾಪನೆ

ಕರಾವಳಿಯ ಕೆಲವು ಮನೆಗಳಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ತಲೆತಲಾಂತರದಿಂದ ನಡೆಸಿಕೊಂಡು ಬರಲಾಗುತ್ತಿದೆ. ಭಾದ್ರಪದ ಶುಕ್ಲದ ಚೌತಿಯಂದು ಮುದ್ದು ಗಣಪ ಭಕ್ತರ ಮನೆಗೆ ಬರುತ್ತಾನೆ ಅನ್ನೋ ಮಾತೂ ಚಾಲ್ತಿಯಲ್ಲಿದೆ. ಗಣಪನಿಗೆ ಪ್ರಿಯವಾದ ಮೋದಕ, ಲಾಡು, ಕಡಬು ಮುಂತಾದ ನೈವೇದ್ಯವನ್ನು ತಯಾರಿಸಿ, ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರ ತನಕ ಸಂಪ್ರದಾಯ ಬದ್ಧವಾಗಿ ಹಬ್ಬವನ್ನು ಆಚರಿಸುತ್ತಾರೆ. ಇನ್ನು ಕೆಲವು ಭಕ್ತರು ಗಣಪತಿ ದೇವಸ್ಥಾನಗಳಿಗೆ ಹೋಗಿ ವಿಶೇಷ ಪೂಜೆ ಸಲ್ಲಿಸುತ್ತಾರೆ.

‘ನಾವು ಎರಡು ದಶಕಗಳಿಂದ ಮನೆಯಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಮಾಡುತ್ತಿದ್ದೇವೆ. ನಮ್ಮ ಕುಟುಂಬದ ಸದಸ್ಯರು ಉದ್ಯೋಗದ ನಿಮಿತ್ತ ಬೇರೆ ಬೇರೆ ಊರಿನಲ್ಲಿದ್ದು, ಚೌತಿಯಂದು ಎಲ್ಲರೂ ಒಟ್ಟು ಸೇರಿ ಸಂಭ್ರಮಿಸುತ್ತೇವೆ’ ಎನ್ನುತ್ತಾರೆ ಕಂಕನಾಡಿಯ ಗೃಹಿಣಿ ಸುಮತಿ.

ನಿಯಮಗಳು

l ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಸೇರಿದಂತೆ ಪರಿಸರಕ್ಕೆ ಹಾನಿಯಾಗುವ ಮೂರ್ತಿಗೆ ಅವಕಾಶ ವಿಲ್ಲ

l ಶುದ್ಧ ಮಣ್ಣಿನಿಂದ ಮಾಡಿದ ಗಣಪತಿ ಮೂರ್ತಿಯನ್ನೇ ಬಳಸಬೇಕು

l ಸಾಮಾಜಿಕ ಸ್ವಾಸ್ಥ್ಯ ಕದಡುವ ಬ್ಯಾನರ್ ಅಥವಾ ಫ್ಲೆಕ್ಸ್‌ಗೆ ಅವಕಾಶವಿಲ್ಲ

l ರಾತ್ರಿ 10 ಗಂಟೆಯ ನಂತರ ಧ್ವನಿ ವರ್ಧಕಗಳನ್ನು ಬಳಸುವಂತಿಲ್ಲ

l ಸಾರ್ವಜನಿಕ ಗಣೇಶೋತ್ಸವಕ್ಕೆ ಸ್ಥಳೀಯ ಸಂಸ್ಥೆಯ ಅನುಮತಿ ಕಡ್ಡಾಯ

l ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆಯಲು ಅನುಮತಿ ಪಡೆಯಬೇಕು

l ವಿಸರ್ಜನೆ ಮೆರವಣಿಗೆಯಲ್ಲಿ ವಿದ್ಯುತ್ ತಂತಿ, ಕೇಬಲ್‍ ಬಳಸುವಂತಿಲ್ಲ

l ಗಾಳಿ, ಮಳೆಗೆ ಹಾನಿಯಾಗ ದಂತಹ ಪೆಂಡಾಲ್‌ ಹಾಕಬೇಕು

l ದೊಡ್ಡ ಮೂರ್ತಿ ಇರುವೆಡೆ ಸಿಸಿಟಿಟಿ ಕ್ಯಾಮೆರಾ ಅಳವಡಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT