ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಐಚ್ಛಿಕ ಪ್ರವೇಶಾತಿ 5 ವಿದ್ಯಾರ್ಥಿಗಳ ಮಿತಿ: ಅಧ್ಯಾಪಕರ ಸ್ವಾಗತ

ಕನ್ನಡ ಐಚ್ಛಿಕ ಪ್ರವೇಶಾತಿ: 5 ವಿದ್ಯಾರ್ಥಿಗಳ ಮಿತಿಗೆ ಆದೇಶ
Last Updated 7 ಜುಲೈ 2020, 16:44 IST
ಅಕ್ಷರ ಗಾತ್ರ

ಮಂಗಳೂರು: ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಉತ್ತೇಜಿಸುವ ದೃಷ್ಟಿಯಿಂದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಐಚ್ಛಿಕ ಕನ್ನಡ ವಿಷಯದಲ್ಲಿನ ವಿದ್ಯಾರ್ಥಿಗಳ ಕನಿಷ್ಠ ದಾಖಲಾತಿ ಸಂಖ್ಯೆಯನ್ನು 15 ರಿಂದ 5ಕ್ಕೆ ನಿಗದಿಗೊಳಿಸಿ, ಉನ್ನತ ಶಿಕ್ಷಣ ಇಲಾಖೆ (ವಿಶ್ವವಿದ್ಯಾಲಯಗಳು–1) ಸರ್ಕಾರದ ಅಧೀನ ಕಾರ್ಯದರ್ಶಿ ಶೀತಲ್ ಎಂ. ಹಿರೇಮಠ ಆದೇಶ ಹೊರಡಿಸಿದ್ದಾರೆ.

ರಾಜ್ಯದ ಎಲ್ಲ ಸರ್ಕಾರಿ ಕಾಲೇಜುಗಳಲ್ಲಿ ಬಿಎ, ಬಿಎಸ್ಸಿ, ಬಿಬಿಎಂ ಮತ್ತು ಬಿಸಿಎ ಮುಂತಾದ ಪದವಿ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳ ಪ್ರವೇಶಾತಿಯು 15 ಅಥವಾ ಅದಕ್ಕಿಂತ ಕಡಿಮೆ ಇದ್ದಲ್ಲಿ ಈ ವಿದ್ಯಾರ್ಥಿಗಳನ್ನು ಹಾಲಿ ಇರುವ ವಿಭಾಗದಲ್ಲಿಯೇ ಸೇರಿಸಿಕೊಳ್ಳಬೇಕು. 15ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದಲ್ಲಿ ನೂತನ ವಿಭಾಗ ತೆರೆಯಬೇಕು ಎಂದು ಈ ಹಿಂದೆ ಆದೇಶಿಸಲಾಗಿತ್ತು.

2018 ರ ಸೆಪ್ಟೆಂಬರ್‌ನಲ್ಲಿ ನಡೆದ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಿರ್ಧರಿಸಿದಂತೆ, ಕನ್ನಡ ಐಚ್ಛಿಕ ವಿಷಯದ ಪ್ರವೇಶಾತಿಗೆ ಕನಿಷ್ಠ ಸಂಖ್ಯೆಯನ್ನು 5 ಕ್ಕೆ ನಿಗದಿಪಡಿಸಿ ಆದೇಶಿಸುವಂತೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಕೋರಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಪತ್ರದಲ್ಲಿನ ಅಂಶಗಳು ಸರ್ಕಾರದ ಕಾರ್ಯನೀತಿಗೆ ಸಂಬಂಧಿಸಿದ್ದು, ಈ ಕುರಿತು ಪರಿಶೀಲಿಸಿ, ಕ್ರಮ ಕೈಗೊಳ್ಳುವಂತೆ ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರು ಸರ್ಕಾರಕ್ಕೆ ಕೋರಿದ್ದರು.

ಈ ಎಲ್ಲ ಅಂಶಗಳನ್ನು ಪರಿಶೀಲಿಸಿ ರಾಜ್ಯ ಸರ್ಕಾರ, ಪದವಿ ಕಾಲೇಜುಗಳಲ್ಲಿ ಕನ್ನಡ ಐಚ್ಛಿಕ ವಿಷಯದ ವಿದ್ಯಾರ್ಥಿಗಳ ಕನಿಷ್ಠ ದಾಖಲಾತಿ ಸಂಖ್ಯೆಯನ್ನು 5 ಕ್ಕೆ ನಿಗದಿಗೊಳಿಸಿ ಆದೇಶಿಸಿದೆ.

ಸ್ವಾಗತ: ಪದವಿ ತರಗತಿಯ ಕನ್ನಡ (ಐಚ್ಛಿಕ) ವಿಷಯಕ್ಕೆ ಈ ಮೊದಲು ಕನಿಷ್ಠ 15 ವಿದ್ಯಾರ್ಥಿಗಳು ಕಡ್ಡಾಯವಿತ್ತು. ಆದರೆ ಇದೀಗ ಕಾಲೇಜು ಶಿಕ್ಷಣ ಇಲಾಖೆ ಕನಿಷ್ಠ 5 ವಿದ್ಯಾರ್ಥಿಗಳ ದಾಖಲಾತಿಯನ್ನು ಮಿತಿಗೊಳಿಸಿದ ಕ್ರಮವನ್ನು ಮಂಗಳೂರು ವಿಶ್ವವಿದ್ಯಾಲಯ ಪದವಿ ಕಾಲೇಜು ಕನ್ನಡ ಅಧ್ಯಾಪಕರ ಸಂಘ (ವಿಕಾಸ) ಸ್ವಾಗತಿಸಿದೆ.

ಕನ್ನಡ ಐಚ್ಛಿಕ ವಿದ್ಯಾರ್ಥಿಗಳ ಸಂಖ್ಯೆ 5ಕ್ಕೆ ನಿಗದಿಪಡಿಸಿರುವ ಸರ್ಕಾರದ ಈ ಕ್ರಮದಿಂದ ಭಾಷೆ, ಸಂಸ್ಕೃತಿ, ಸಾಹಿತ್ಯದ ಉಳಿವಿಗೆ ಸಹಕಾರಿಯಾಗಲಿದೆ.
– ಪ್ರೊ. ಕೃಷ್ಣಮೂರ್ತಿ, ವಿಕಾಸ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT