ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಕ್ಷಣ ಕ್ಷೇತ್ರವನ್ನು ಹದಗೆಡಿಸಿದ ಸರ್ಕಾರ

ವಿಧಾನ ಪರಿಷತ್‌ ಚುನಾವಣೆ: ಕಾರ್ಯಕರ್ತರ ಸಭೆಯಲ್ಲಿ ವಿಜಯೇಂದ್ರ ವಾಗ್ದಾಳಿ
Published 28 ಮೇ 2024, 5:38 IST
Last Updated 28 ಮೇ 2024, 5:38 IST
ಅಕ್ಷರ ಗಾತ್ರ

ಮಂಗಳೂರು: ‘ಶಿಕ್ಷಣ ಕ್ಷೇತ್ರವನ್ನು ಸರ್ಕಾರ ಹದಗೆಡಿಸುತ್ತಿದೆ. ಈ ಕ್ಷೇತ್ರದ ನೀತಿ ನಿಯಮಗಳ‌ ಕಲ್ಪನೆಯೂ ಸರ್ಕಾರಕ್ಕೆ ಇಲ್ಲ. ಇದರಿಂದ ಮಕ್ಕಳಷ್ಟೇ ಅಲ್ಲ ಪೋಷಕರೂ ಚಿಂತೆಗೀಡಾಗಿದ್ದಾರೆ. ಶಿಕ್ಷಕರೂ ಆತಂಕಗೊಂಡಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.

ನೈರುತ್ಯ ಪದವೀಧರರ ಕ್ಷೇತ್ರ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಸಲುವಾಗಿ ಬಿಜೆಪಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಆಶ್ರಯದಲ್ಲಿ ಇಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ದೇಶಕ್ಕೆ ಉಜ್ವಲ ಭವಿಷ್ಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಜಾರಿಗೆ ತಂದರು. ಮೊಸರಿನಲ್ಲೂ ಕಲ್ಲು ಹುಡುಕಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅದನ್ನು ಬಿಟ್ಟು, ರಾಜ್ಯ ಶಿಕ್ಷಣ ನೀತಿಯನ್ನು (ಎಸ್‌ಇಪಿ) ಜಾರಿಗೊಳಿಸುವುದಾಗಿ ಘೋಷಿಸಿದರು. ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯಾಗಿದ್ದು ಬಿಜೆಪಿ ಮತ್ತು ಜೆಡಿಎಸ್ ನೇತೃತ್ವದ ಸರ್ಕಾರಗಳ ಅವಧಿಯಲ್ಲಿ’ ಎಂದರು.

‘ಈ ಸರ್ಕಾರವನ್ನು ಆಯ್ಕೆ ಮಾಡಿದ ಮತದಾರರು ತಮ್ಮ ತಲೆ ಮೇಲೆ ತಾವೇ ಚಪ್ಪಡಿ ಎಳೆದುಕೊಂಡಂತಾಗಿದೆ. ಅಭಿವೃದ್ಧಿ ಮರೀಚಿಕೆಯಾಗಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ‌ ಜಿಂದಾಬಾದ್ ಘೋಷಣೆ ಕೂಗಿದವರನ್ನು ಬಂಧಿಸಲು ಸಾಧ್ಯವಾಗಿಲ್ಲ. ಚೆನ್ನಗಿರಿಯಲ್ಲಿ ಪೊಲೀಸ್ ವಶದಲ್ಲಿದ್ದ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿ ಸತ್ತ ಒಂದೇ ಗಂಟೆಯಲ್ಲಿ ಸಾವಿರಾರು ಜನ ಪೊಲೀಸ್ ಠಾಣೆಗೆ ನುಗ್ಗಿ ದಾಂಧಲೆ ನಡೆಸಿ ದುಸ್ಸಾಹಸ ಮೆರೆದಿದ್ದಾರೆ. ಸರ್ಕಾರ ನಮ್ಮ ಜೊತೆಗಿದೆ ಎಂಬ ಭರವಸೆಯೇ ಇದಕ್ಕೆ ಕಾರಣ’ ಎಂದು ಆರೋಪಿಸಿದರು. 

ಪಕ್ಷದ ರಾಜ್ಯ ಘಟಕದ ಪ್ರಧಾನ‌ ಕಾರ್ಯದರ್ಶಿ ವಿ.ಸುನಿಲ್ ಕುಮಾರ್ , 'ಈ ಕ್ಷೇತ್ರದ ಮತದಾರರನ್ನು ಸಂಪರ್ಕಿಸಲು 703 ಕಾರ್ಯಕರ್ತರನ್ನು ಗುರುತಿಸಿದ್ದೇವೆ. ಒಬ್ಬೊಬ್ಬ ಕಾರ್ಯಕರ್ತ ಕನಿಷ್ಠ 25 ಮತದಾರರನ್ನು ಸಂಪರ್ಕಿಸಬೇಕು’ ಎಂದರು.  

ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ– ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಎಸ್.ಎಲ್.ಭೋಜೇಗೌಡ, ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ– ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಮಾತನಾಡಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಸ್ವಾಗತಿಸಿದರು. ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್‌, ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿ, ಹರೀಶ್ ಪೂಂಜ, ಪಕ್ಷದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಕ್ಯಾ.ಬ್ರಿಜೇಶ್ ಚೌಟ, ಮುಖಂಡರಾದ ಕ್ಯಾ.ಗಣೇಶ್ ಕಾರ್ಣಿಕ್‌, ಉದಯ್ ಕುಮಾರ್ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು. 
ಸಂಸದ ನಳಿನ್ ಕುಮಾರ್ ಕಟೀಲ್‌, ಶಾಸಕರಾದ ವೇದವ್ಯಾಸ ಕಾಮತ್‌ ಹಾಗೂ ಡಾ.ವೈ.ಭರತ್ ಶೆಟ್ಟಿ ಗೈರಾಗಿದ್ದರು.

‘ನಳಿನ್ ಹಾಗೂ ವೇದವ್ಯಾಸ ಕಾಮತ್ ಪೂರ್ವನಿಗದಿತ ಕಾರ್ಯಕ್ರಮದಿಂದಾಗಿ ಸಭೆಯಲ್ಲಿ ಪಾಲ್ಗೊಂಡಿಲ್ಲ. ಭರತ್ ಶೆಟ್ಟಿಯವರ   ಆರೋಗ್ಯ ಹದಗೆಟ್ಟಿದೆ’ ಎಂದು ಸತೀಶ್ ಕುಂಪಲ ತಿಳಿಸಿದರು.

‘ಬಂಡಾಯ ಅಭ್ಯರ್ಥಿಗಳ ಮಾತಿಗೆ ಮರುಳಾಗದಿರಿ’

‘ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಲ್ಲಿ ವಿಕಾಸ್ ಪುತ್ತೂರು ಅವರಂತಹ ಅನೇಕ ಟಿಕೆಟ್‌ ಆಕಾಂಕ್ಷಿಗಳಿದ್ದರು. ಆದರೆ ವರಿಷ್ಠರ ತೀರ್ಮಾನವನ್ನು ಒಪ್ಪಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಅವರೆಲ್ಲ ಶ್ರಮಿಸುತ್ತಿದ್ದಾರೆ. ಬಂಡಾಯ ಅಭ್ಯರ್ಥಿಗಳಾಗಿರುವ ಕೆಲವರು ಗೆದ್ದ ಬಳಿಕ ಸಂಘಟನೆಗೆ ಮರಳುತ್ತೇವೆ ಎನ್ನುತ್ತಿದ್ದಾರೆ. ಅವರ ಮಾತಿಗೆ  ಮರಳಾಗಬಾರದು. ಡಾ.ಧನಂಜಯ ಸರ್ಜಿ ಹಾಗೂ ಎಸ್‌.ಎಲ್ ಭೋಜೇಗೌಡ ಅವರನ್ನು ಭಾರಿ ಅಂತರದಿಂದ ಗೆಲ್ಲಿಸಬೇಕು’ ಎಂದು ವಿಜಯೇಂದ್ರ ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT