ಮಂಗಳೂರು: ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಒಂದು ದಶಕದ ಅವಧಿಯಲ್ಲಿ ಆಗಿರುವ ಅಂತರ್ಜಲ ಪ್ರಮಾಣ ಕುಸಿತದ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಲು ನೀರು ಪರಿಶೋಧನಾ ಸಮಿತಿ (ವಾಟರ್ ಆಡಿಟ್ ಕಮಿಟಿ) ರಚಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕಾಂಗ್ರೆಸ್ ಜಿಲ್ಲಾ ಘಟಕ, ದಕ್ಷಿಣ ಕನ್ನಡ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಆಶ್ರಯದಲ್ಲಿ ಬುಧವಾರ ಇಲ್ಲಿ ಆಯೋಜಿಸಿದ್ದ ಪಂಚಾಯತ್‌ರಾಜ್ ಪ್ರತಿನಿಧಿಗಳ ಜಿಲ್ಲಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಈ ಸಮಿತಿಯಲ್ಲಿ ತಜ್ಞರು, ವಿವಿಧ ಇಲಾಖೆಗಳ ಪ್ರತಿನಿಧಿಗಳು ಇರಲಿದ್ದಾರೆ. ಅವರು ಅಧ್ಯಯನ ನಡೆಸಿ, ನೀಡಿದ ವರದಿ ಆಧರಿಸಿ, ಅಂತರ್ಜಲ ಪುನಶ್ಚೇತನಕ್ಕೆ ಕ್ರಮ ವಹಿಸಲಾಗುವುದು ಎಂದರು.
ಗ್ರಾಮೀಣ ಭಾಗದ ಅನೇಕ ಸಮಸ್ಯೆಗಳ ಕುರಿತು ಜನರು ನನಗೆ ಕರೆ ಮಾಡುತ್ತಾರೆ. ಪ್ರತಿದಿನ ಕರೆಗಳು ಬರುತ್ತವೆ. ಹೀಗಾಗಿ, ಇಲಾಖೆಗೆ ಸಂಬಂಧಿಸಿದ ಜನರ ಸಮಸ್ಯೆ ಪರಿಹರಿಸಲು ‘ಪಂಚಮಿತ್ರ’ ಕಾಲ್ ಸೆಂಟರ್ ಯೋಜನೆ ಮುಂದಿನ ತಿಂಗಳಿನಿಂದ ಜಾರಿಗೆ ಬರಲಿದೆ. ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಪಂಚಾಯಿತಿಗಳು ಸ್ವತಂತ್ರ ಕಾರ್ಯನಿರ್ವಹಣೆ ಬಯಸುವಂತೆ, ಆದಾಯ ಸೃಷ್ಟಿಯಲ್ಲೂ ಸ್ವಾವಲಂಬನೆ ಸಾಧಿಸಬೇಕಾಗಿದೆ. ಪಂಚಾಯಿತಿಗಳಲ್ಲಿ ತ್ಯಾಜ್ಯ ಸಂಗ್ರಹ, ಸಂಸ್ಕರಣೆಯನ್ನು ವಾಣಿಜ್ಯ ಮಾದರಿಯಲ್ಲಿ ರೂಪಿಸಿ ಸ್ವಸಹಾಯ ಸಂಘದ ಸಹಕಾರದೊಂದಿಗೆ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.
ಪಿಡಿಒಗಳ ಹಾಜರಾತಿಯನ್ನು ಬಯೊಮೆಟ್ರಿಕ್ ವ್ಯವಸ್ಥೆಗೆ ತರುವ ಕುರಿತು ಯೋಚಿಸಲಾಗಿದೆ. ಗ್ರಾಮೀಣ ಅಭಿವೃದ್ಧಿಗೆ ಪೂರಕವಾಗಿ ಪಂಚತಂತ್ರ-2 ರೂಪಿಸಲಾಗಿದೆ. ಗ್ರಾಮ ಪಂಚಾಯಿತಿ ಸಭೆಯನ್ನು ಆನ್‌ಲೈನ್ ಮೂಲಕ ಮಾಡಿ 15ನೇ ಹಣಕಾಸು ಯೋಜನೆಯ ಯೋಜನೆ ರೂಪಿಸಿದರೆ, ಅನುದಾನ ಶೀಘ್ರ ಲಭ್ಯವಾಗುತ್ತದೆ. ಪುಸ್ತಕ ಓದುವ ಅರಿವು ಮೂಡಿಸುವ ನಿಟ್ಟಿನಲ್ಲಿ ಸುಸಜ್ಜಿತ ಗ್ರಂಥಾಲಯ ಇರುವ ಅರಿವು ಕೇಂದ್ರ ಆರಂಭಿಸಲಾಗುತ್ತದೆ ಎಂದು ಖರ್ಗೆ ಹೇಳಿದರು.
ಪಂಚಾಯತ್‌ರಾಜ್ ಅಧಿನಿಯಮದ ಬಗ್ಗೆ ಮಾತನಾಡಿದ ಕಾಂಗ್ರೆಸ್ ಮುಖಂಡ ವಿ.ಆರ್. ಸುದರ್ಶನ್ ಅವರು, ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಅವಧಿಯನ್ನು ಐದು ವರ್ಷಗಳಿಗೆ ಹೆಚ್ಚಿಸಬೇಕು. ಇಲ್ಲವಾದಲ್ಲಿ ಗ್ರಾಮ ಮಟ್ಟದಿಂದ ನಾಯಕತ್ವ ಬೆಳೆಯುವುದಿಲ್ಲ. ಪಂಚಾಯಿತಿ ಮೀಸಲಾತಿಯನ್ನು ಪ್ರತಿ ಎರಡು ಚುನಾವಣೆಗೊಮ್ಮೆ ಬದಲಿಸಬೇಕು ಎಂದು ಸಲಹೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಅಧಿಕಾರಿಗಳ ಕೈಯಲ್ಲಿರುವ ಗ್ರಾಮ ಪಂಚಾಯಿತಿ ಅಧಿಕಾರ ಜನಪ್ರತಿನಿಧಿಗಳ ಕೈಗೆ ಬರಬೇಕು. ನಿಗದಿತ ಅವಧಿಯಲ್ಲಿ ಚುನಾವಣೆ ನಡೆಯಬೇಕು. ಕೇರಳದ ಮಾದರಿಯಲ್ಲಿ ಪಕ್ಷದ ಚಿಹ್ನೆ ಅಡಿಯಲ್ಲಿ ಚುನಾವಣೆ ನಡೆಯಬೇಕು ಎಂದು ವಿನಂತಿಸಿದರು. ಪಕ್ಷ ಸದೃಢಗೊಳಿಸುವ ನಿಟ್ಟಿನಲ್ಲಿ ಪ್ರತಿ ಪಂಚಾಯಿತಿಯಲ್ಲಿ 25 ಜನರ ಕಾರ್ಯಪಡೆ ರಚಿಸಲಾಗುವುದು ಎಂದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಉಪಾಧ್ಯಕ್ಷ ರಮಾನಾಥ ರೈ ಅಭಿನಂದನಾ ಭಾಷಣ ಮಾಡಿದರು. ಮಾಜಿ ಸಚಿವ ಮಾಜಿ ಸಚಿವ ಅಭಯಚಂದ್ರ ಜೈನ್, ಪಕ್ಷದ ಪ್ರಮುಖರಾದ ಶಕುಂತಳಾ ಶೆಟ್ಟಿ, ಬಿ.ಇಬ್ರಾಹಿಂ, ಎಂ.ಶಶಿಧರ ಹೆಗ್ಡೆ, ಮಿಥುನ್ ರೈ, ಪ್ರವೀಣ್‌ಚಂದ್ರ ಆಳ್ವ, ಇನಾಯತ್ ಅಲಿ, ರಕ್ಷಿತ್ ಶಿವರಾಂ, ಕೃಷ್ಣಪ್ಪ, ಪದ್ಮರಾಜ್ ಆರ್., ಜಿ.ಎ. ಬಾವ, ಬಿ.ಎಚ್.ಖಾದರ್, ಅಶ್ವಿನ್ ಕುಮಾರ್, ಶಾಲೆಟ್ ಪಿಂಟೊ, ಮಮತಾ ಗಟ್ಟಿ ಸುಹಾನ್ ಆಳ್ವ ಇದ್ದರು.
ರಾಜೀವ್‌ಗಾಂಧಿ ಪಂಚಾಯತ್‌ರಾಜ್ ಸಂಘಟನೆ ಜಿಲ್ಲಾ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಸ್ವಾಗತಿಸಿದರು. ಎಂ.ಎಸ್.ಮಹಮ್ಮದ್ ವಂದಿಸಿದರು. ಕೆ. ಸಾಹುಲ್ ಹಮೀದ್, ಅಬ್ದುಲ್ ರಝಾಕ್ ಕುಕ್ಕಾಜೆ ನಿರೂಪಿಸಿದರು.
- ‘ನಮ್ಮ ಯೋಜನೆ ಮೋದಿಗೆ ಪ್ರಚಾರ’
‘ಜಲಜೀವನ್ ಯೋಜನೆ ಆಯುಷ್ಮಾನ್ ಭಾರತ್ ಅನ್ನಭಾಗ್ಯ ಯೋಜನೆಗಳಲ್ಲಿ ಶೇ50ರಷ್ಟು ರಾಜ್ಯದ ಪಾಲು ಇರುತ್ತದೆ. ನಮ್ಮದು ಆಚಾರ ವಿಚಾರ ಇದೆ ಆದರೆ ಪ್ರಚಾರ ಇಲ್ಲ. ಇದನ್ನು ನಾವು ಪ್ರಧಾನಿ ನರೇಂದ್ರ ಮೋದಿ ಅವರಿಂದ ಕಲಿಯಬೇಕಾಗಿದೆ. ವಾಸ್ತವ ವಿಚಾರವನ್ನು ಕಾಂಗ್ರೆಸ್ ಕಾರ್ಯಕರ್ತರು ಜನರಿಗೆ ತಿಳಿಸಬೇಕು. ಇಲ್ಲವಾದಲ್ಲಿ ನಾವೇ ಬಿಜೆಪಿಯನ್ನು ಬೆಳೆಸಿದಂತೆ ಆಗುತ್ತದೆ. ನಮ್ಮದು ಆಳುವ ಸರಕಾರವಲ್ಲ. ಜನರ ಮಾತು ಆಲಿಸುವ ಸರ್ಕಾರ’ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು. ‘ಮಲ್ಲಿಕಾರ್ಜುನ ಖರ್ಗೆ ಪುತ್ರನಾಗಿ ನನಗೆ ಟಿಕೆಟ್ ನೀಡಿದರೆ ವಂಶಪಾರಂಪರ್ಯ ಆಡಳಿತ ಎಂದು ಬಿಜೆಪಿಗರು ಹೇಳುತ್ತಾರೆ ಈಗ ಬಿಎಸ್‌ವೈ ಪುತ್ರನಿಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ನೀಡಿದರೆ ಸಮರ್ಥ ನಾಯಕತ್ವ ಎನ್ನುತ್ತಾರೆ. ಇದು ಯಾವ ನ್ಯಾಯ’ ಎಂದು ಪ್ರಶ್ನಿಸಿದರು.
ನಮಗೆ ಬೇರೆ ಕೆಲಸ ಇಲ್ವಾ?’
‘ಜೆಡಿಎಸ್ ಕಚೇರಿ ಗೋಡೆ ಮೇಲೆ ವಿದ್ಯುತ್ ಕಳ್ಳ ಕುಮಾರಸ್ವಾಮಿ ಪೋಸ್ಟರ್‌ಗೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧ ಇಲ್ಲ. ನಮಗೆ ಬೇರೆ ಕೆಲಸ ಇಲ್ವಾ? ನಾವು ಆಡಳಿತ ನಡೆಸುತ್ತಿದ್ದೇವೆ. ಒಂದೊಮ್ಮೆ ಹಾಗೆ ಮಾಡಬೇಕೆಂದಿದ್ದರೆ ಹಿಂದೆ ‘ಪೇ ಸಿಎಂ’ ಅಭಿಯಾನಂತೆ ಬಹಿರಂಗವಾಗಿಯೇ ಭ್ರಷ್ಟಾಚಾರ ಆರೋಪ ಮಾಡುತ್ತೇವೆ. ನಿರಾಧಾರವಾಗಿ ನಾವು ಯಾವುದನ್ನೂ ಮಾಡುವುದಿಲ್ಲ’ ಎಂದು ಸುದ್ದಿಗಾರರ ಜೊತೆ ಮಾತನಾಡುತ್ತ ಸಚಿವ ಪ್ರಿಯಾಂಕ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.