ಮಂಗಳೂರು: ‘ವೈದ್ಯಕೀಯ ವೃತ್ತಿ ಪವಿತ್ರವಾದುದು. ಈ ವೃತ್ತಿ ಮಾಡುವವರು ವೃತ್ತಿಧರ್ಮದೊಂದಿಗೆ ಪ್ರಾಮಾಣಿಕತೆ, ನೈತಿಕತೆ ಮೈಗೂಡಿಸಿಕೊಳ್ಳಬೇಕು. ಜತೆಗೆ ಸಾಮಾಜಿಕ ಹೊಣೆಗಾರಿಕೆಯನ್ನೂ ಮರೆಯಬಾರದು’ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಕೆ.ರಮೇಶ್ ಹೇಳಿದರು.
ನಗರದ ಕಂಕನಾಡಿ ಫಾದರ್ ಮುಲ್ಲರ್ ಸಭಾಂಗಣದಲ್ಲಿ ಶುಕ್ರವಾರ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು, ವಾಕ್ ಮತ್ತು ಶ್ರವಣ ವಿಭಾಗ, ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸ್‌ನ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಮಂಗಳೂರಿನಲ್ಲಿ ಹಲವು ವೈದ್ಯಕೀಯ ಕಾಲೇಜುಗಳಿದ್ದರೂ ಫಾದರ್ ಮುಲ್ಲರ್ ಕಾಲೇಜು ಅತ್ಯುತ್ತಮ ಪ್ರಾಧ್ಯಾಪಕರನ್ನು ಹೊಂದಿ ಗುಣಮಟ್ಟದ ಶಿಕ್ಷಣ ನೀಡುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಫಾದರ್ ಮುಲ್ಲರ್ ಸಂಸ್ಥೆಗಳ ಅಧ್ಯಕ್ಷ ಹಾಗೂ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನಾ ಅಧ್ಯಕ್ಷತೆ ವಹಿಸಿ, ‘ವೈದ್ಯಕೀಯ ವೃತ್ತಿಯಲ್ಲಿ ಯಶಸ್ಸು ಗಳಿಸಲು ಓದು, ಕೌಶಲ, ಅನುಭವ ಸಹಕಾರಿಯಾಗುತ್ತದೆ. ವ್ಯಕ್ತಿಯನ್ನು ಗೌರವಿಸಿ, ನೈತಿಕತೆ, ಅನುಕಂಪ, ಮಾನವೀಯತೆಯೊಂದಿಗೆ ಸೇವೆ ಸಲ್ಲಿಸುವುದು ನಮ್ಮ ಗುರಿಯಾಗಿದೆ. ಯುವ ವೈದ್ಯರು ಬಡರೋಗಿಗಳಿಗೆ ಸಹಾಯ ಮಾಡುವಂತವರಾಗಬೇಕು’ ಎಂದರು.
ಮಲೇಶಿಯಾದ ಸಾಬಾ ಹೆಲ್ತ್ ಕೇರ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ದತೂಕ್ ಎರಿಕ್ ಕೊರೈ ಮಾತನಾಡಿ, ‘ಮಾನವೀಯತೆಯ ಕಾಳಜಿಯೊಂದಿಗಿನ ಮನುಕುಲದ ಅಭಿವೃದ್ಧಿಗೆ ವೈದ್ಯಕೀಯ ಸೇವೆ ಮುಖ್ಯ’ ಎಂದು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ 157 ಮಂದಿಗೆ ಎಂಬಿಬಿಎಸ್ ಪದವಿ, 73 ಮಂದಿಗೆ ಎಂಡಿ ಹಾಗೂ ಎಂಎಸ್ ಪದವಿ, 40 ಮಂದಿಗೆ ಸ್ನಾತಕೋತ್ತರ ಫಿಸಿಯೋಥೆರಪಿ ಪದವಿ, 9 ಮಂದಿಗೆ ಮಾಸ್ಟರ್ ಫಿಸಿಯೋಥೆರಪಿ ಪದವಿ, 32 ಮಂದಿಗೆ ವಾಕ್ ಮತ್ತು ಶ್ರವಣ ಪದವಿ, 12 ಮಂದಿಗೆ ಆಡಿಯೋಲಜಿ ಸ್ನಾತಕೋತ್ತರ ಪದವಿ, ಅಲೈಡ್ ಹೆಲ್ತ್ ಸೈನ್ಸಸ್‌ನ 100 ಪದವೀಧರರಿಗೆ ಹಾಗೂ 12 ಮಂದಿಗೆ ಸ್ಪೀಚ್ ಲ್ಯಾಂಗ್ವೇಜ್ ಪ್ಯಾಥೋಲಜಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಪ್ರದಾನ ಮಾಡಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಸಂಪೂರ್ಣ ಸ್ವಯಂಚಾಲಿತವಾಗಿರುವ ಕೇಂದ್ರೀಯ ಪ್ರಯೋಗಾಲಯವನ್ನು ಡಾ.ಪೀಟರ್ ಪಾವ್ಲ್ ಸಲ್ಡಾನಾ ಉದ್ಘಾಟಿಸಿದರು. ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಡೀನ್ ಡಾ.ಆಂತೋನಿ ಸಿಲ್ವನ್ ಡಿಸೋಜ, ಫಾದರ್ ಮುಲ್ಲರ್ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಹಿಲ್ಡಾ ಡಿಸೋಜ, ಫಾದರ್ ಮುಲ್ಲರ್ ಕಾಲೇಜಿನ ಸ್ಪೀಚ್ ಆಂಡ್ ಹಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಅಖಿಲೇಶ್ ಪಿ.ಎಂ ವಾರ್ಷಿಕ ವರದಿ ವಾಚಿಸಿದರು.
ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ನಿರ್ದೇಶಕ ಫಾ.ರಿಚರ್ಡ್ ಅಲೋಶಿಯಸ್ ಕುವೆ ಸ್ವಾಗತಿಸಿದರು. ಅಜಿತ್ ಮಿನೇಜಸ್ ವಂದಿಸಿದರು. ಪ್ರೀತಂ ತಾವ್ರೊ, ಶ್ರದ್ಧಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.