ಶುಕ್ರವಾರ, ಜನವರಿ 22, 2021
28 °C
ನಗರದ ಎರಡು ಕಡೆಗಳಲ್ಲಿ ವಿವಾದಿತ ಗೋಡೆಬರಹ

ಒಂದೇ ತಂಡದಿಂದ ಕೃತ್ಯದ ಶಂಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ನಗರದ ನ್ಯಾಯಾಲಯ ಸಂಕೀರ್ಣದ ಆವರಣದ ಗೋಡೆ ಹಾಗೂ ಕದ್ರಿಯಲ್ಲಿರುವ ಸರ್ಕ್ಯೂಟ್ ಹೌಸ್‌ನಿಂದ ಕೆಳಗಡೆ ಹೋಗುವ ರಸ್ತೆ ಬದಿಯಲ್ಲಿನ ಅಪಾರ್ಟ್‌ಮೆಂಟ್‌ನ ಕಾಂಪೌಂಡ್‌ ಗೋಡೆ ಮೇಲೆ ಕಂಡು ಬಂದ ವಿವಾದಿತ ಬರಹಗಳ ಕೃತ್ಯವನ್ನು ಒಂದೇ ತಂಡ ನಡೆಸಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಎರಡೂ ವಿವಾದಿತ ಬರಹಗಳಲ್ಲಿ ಸಾಮ್ಯತೆ ಕಂಡುಬಂದಿದೆ. ಅಕ್ಷರ ವಿನ್ಯಾಸ, ಬರವಣಿಗೆ ಶೈಲಿಯು ಒಂದೇ ವ್ಯಕ್ತಿ ಬರೆದಿರುವ ಬಗ್ಗೆ ಶಂಕೆ ಮೂಡಿಸಿದೆ. ಎರಡೂ ಕಡೆಗಳಲ್ಲಿ ಬರೆಯಲು ಕಪ್ಪು ಬಣ್ಣದ ಸ್ಪ್ರೇ ಬಳಕೆ ಮಾಡಿರುವುದು ಸಂಶಯವನ್ನು ಪುಷ್ಟೀಕರಿಸಿದೆ.

ತನಿಖೆಗಾಗಿ ಪೊಲೀಸರ ಮೂರು ತಂಡಗಳನ್ನು ರಚಿಸಲಾಗಿತ್ತು. ಆದರೆ, ಎರಡೂ ಕೃತ್ಯಗಳು ಒಂದೇ ತಂಡದಿಂದ ನಡೆದಿರುವ ಶಂಕೆಯ ಹಿನ್ನೆಲೆಯಲ್ಲಿ ಬಂದರು ಠಾಣೆಯ ಮತ್ತೊಂದು ತನಿಖಾ ತಂಡವನ್ನು ರಚಿಸಲಾಗಿದೆ. ಈ ನಾಲ್ಕೂ ಪೊಲೀಸ್ ತಂಡಗಳಿಗೆ ಎರಡೂ ಪ್ರಕರಣದ ಹೊಣೆಯನ್ನು ನೀಡಲಾಗಿದೆ.

ನ್ಯಾಯಾಲಯದ ಆವರಣದ ಸಿಸಿಟಿವಿ ಫೂಟೇಜ್‌ನಲ್ಲಿ ಕಿಡಿಗೇಡಿಗಳ ಚಹರೆ ಅಸ್ಪಷ್ಟವಾಗಿ ದಾಖಲಾಗಿದೆ. ಆದರೆ, ಕದ್ರಿಯಲ್ಲಿ  ಫೂಟೇಜ್ ಇದಕ್ಕಿಂತ ಸ್ಪಷ್ಟವಾಗಿದೆ. ಈ ಕೃತ್ಯದಲ್ಲಿ ಎಷ್ಟು ಮಂದಿ ಭಾಗಿಯಾಗಿದ್ದಾರೆ ಎಂಬಿತ್ಯಾದಿ ಮಾಹಿತಿ ಇನ್ನೂ ದೃಢಪಟ್ಟಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

ಸತತ ಎರಡು ಘಟನೆಗಳ ಹಿನ್ನೆಲೆಯಲ್ಲಿ ನಗರದಲ್ಲಿ ಪೊಲೀಸ್ ಗಸ್ತು ಹೆಚ್ಚಿಸಲಾಗಿದೆ. ರಾತ್ರಿ ವೇಳೆ ನಿಗಾ ವಹಿಸಲು ಠಾಣೆಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು