ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುತ್ತೂರು | ಪುತ್ತಿಲ ಪರಿವಾರ, ಕಾಂಗ್ರೆಸ್ ಬೆಂಬಲಿತರಿಗೆ ಗೆಲುವು

ಗ್ರಾ.ಪಂ. ಉಪಚುನಾವಣೆ
Published 16 ಡಿಸೆಂಬರ್ 2023, 7:56 IST
Last Updated 16 ಡಿಸೆಂಬರ್ 2023, 7:56 IST
ಅಕ್ಷರ ಗಾತ್ರ

ಪುತ್ತೂರು: ತಾಲ್ಲೂಕಿನ ಎರಡು ಗ್ರಾಮ ಪಂಚಾಯಿತಿಗಳಲ್ಲಿ ತೆರವಾಗಿದ್ದ ತಲಾ ಒಂದು ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಆರ್ಯಾಪುವಿನಲ್ಲಿ ಬ್ಯಾಟ್ ಚಿಹ್ನೆ ಪಡೆದುಕೊಂಡಿದ್ದ ‘ಪುತ್ತಿಲ ಪರಿವಾರ’ ಬೆಂಬಲಿತ ಅಭ್ಯರ್ಥಿ ಸುಬ್ರಹ್ಮಣ್ಯ ಬಲ್ಯಾಯ ದೊಡ್ಡಡ್ಕ ಜಯಭೇರಿ ಸಾಧಿಸಿದ್ದು, ನಿಡ್ಪಳ್ಳಿಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎನ್. ಸತೀಶ್ ಶೆಟ್ಟಿ ಬಾಕೆತ್ತಿಮಾರ್ ಗೆಲುವು ಪಡೆದಿದ್ದಾರೆ. ಎರಡೂ ಕಡೆಗಳಲ್ಲಿ ಬಿಜೆಪಿ ಬೆಂಬಲಿತರು ಹೀನಾಯ ಸೋಲು ಕಂಡಿದ್ದಾರೆ.

ಆರ್ಯಾಪು ಪಂಚಾಯಿತಿಯ ಎರಡನೇ ವಾರ್ಡ್‌ ಸ್ಥಾನ ಹಿಂದುಳಿದ ವರ್ಗ ‘ಎ’ಗೆ ಮೀಸಲಾಗಿತ್ತು. ನಿಡ್ಪಳ್ಳಿ ಗ್ರಾಮ ಪಂಚಾಯಿತಿಯಲ್ಲಿ ತೆರವಾಗಿದ್ದ ಒಂದನೇ ವಾರ್ಡ್‌ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಇವೆರಡು ಸ್ಥಾನಗಳಿಗೆ ಜುಲೈ 23ರಂದು ಚುನಾವಣೆ ನಡೆದಿದ್ದು, ಬುಧವಾರ ಪುತ್ತೂರಿನ ಆಡಳಿತ ಸೌಧದಲ್ಲಿರುವ ತಹಶೀಲ್ದಾರ್ ಸಭಾಂಗಣದಲ್ಲಿ ಮತ ಎಣಿಕೆ ನಡೆಯಿತು.

ಆರ್ಯಾಪು ಪಂಚಾಯಿತಿಯ ಎರಡನೇ ವಾರ್ಡ್‌ನ 1,237 ಮತದಾರರಲ್ಲಿ 999 ಮಂದಿ ಮತದಾರರು ಮತ ಚಲಾಯಿಸಿದ್ದು,  ಸುಬ್ರಹ್ಮಣ್ಯ ಬಲ್ಯಾಯ ದೊಡ್ಡಡ್ಕ 499 ಮತ ಪಡೆದರೆ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪುರುಷೋತ್ತಮ ಪ್ರಭು ಅಬ್ಬುಗದ್ದೆ 353 ಮತಗಳು, ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಗದೀಶ್ ಭಂಡಾರಿ ಗೆಣಸಿನಕುಮೇರು 140 ಮತ ಪಡೆದಿದ್ದಾರೆ. ಏಳು ಮತಗಳು ತಿರಸ್ಕೃತಗೊಂಡಿವೆ.

ನಿಡ್ಪಳ್ಳಿ ಪಂಚಾಯಿತಿಯ ಒಂದನೇ ವಾರ್ಡ್‌ನಲ್ಲಿ 607 ಮತದಾರರಲ್ಲಿ 529 ಮಂದಿ ಮತ ಚಲಾಯಿಸಿದ್ದರು. ಇಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸತೀಶ್ ಶೆಟ್ಟಿ 235 ಮತ ಪಡೆದರೆ, ಪುತ್ತಿಲ ಪರಿವಾರದ ಅಭ್ಯರ್ಥಿ ಜಗನ್ನಾಥ್ ರೈ  208 ಮತಗಳು, ಬಿಜೆಪಿ ಬೆಂಬಲಿತ ಅಭ್ಯರ್ಥಿ ಚಂದ್ರಶೇಖರ್ ಪ್ರಭು ಗೋಳಿತ್ತಡಿ 85 ಮತ ಪಡೆದಿದ್ದಾರೆ. ಒಂದು ಮತ ತಿರಸ್ಕ್ಥತಗೊಂಡಿದೆ.

ಕಳೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸತೀಶ್ ಶೆಟ್ಟಿ ಇದೇ ಸ್ಥಾನದಿಂದ ಸ್ಪರ್ಧಿಸಿ 29 ಮತಗಳ ಅಂತರದಿಂದ ಸೋತಿದ್ದರು. ಬಿಜೆಪಿ ಬೆಂಬಲಿತ ಮುರಳೀಕೃಷ್ಣ ಭಟ್ ಅವರಿಗೆ ಗೆಲುವಾಗಿತ್ತು. ಮುರಳೀಕೃಷ್ಣ ಭಟ್ ಅವರು ರಸ್ತೆ ಅಫಘಾತದಲ್ಲಿ ಮೃತಪಟ್ಟಿದ್ದ ಹಿನ್ನಲೆಯಲ್ಲಿ ಉಪಚುನಾವಣೆ ನಡೆದಿತ್ತು. ಈಗ ಸತೀಶ್ ಶೆಟ್ಟಿ ಗೆದ್ದು, ಬಿಜೆಪಿ ವಶದಲ್ಲಿದ್ದ ಸ್ಥಾನವನ್ನು ಕಸಿದುಕೊಂಡಿದ್ದಾರೆ.

ಸತೀಶ್ ಶೆಟ್ಟಿ
ಸತೀಶ್ ಶೆಟ್ಟಿ

ಸಂಘಟನೆಗೆ ಮತ್ತಷ್ಟು ಬಲ: ಪುತ್ತಿಲ

ಸ್ವಾರ್ಥ ರಾಜಕಾರಣ ಮೆಟ್ಟಿ ನಿಂತ ಚುನಾವಣೆ ಇದಾಗಿದ್ದು ಪ್ರಜ್ಞಾವಂತ ಮತದಾರರ ನಿಲುವು ವ್ಯಕ್ತವಾಗಿದೆ ಎಂದು ಹಿಂದುತ್ವವಾದಿ ಮುಖಂಡ ಅರುಣಕುಮಾರ್ ಪುತ್ತಿಲ ಪ್ರತಿಕ್ರಿಯಿಸಿದ್ದಾರೆ.

‘ಯಾವುದೇ ಪಕ್ಷದ ವಿರುದ್ಧ ನಮ್ಮ ಹೋರಾಟವಲ್ಲ. ಮೋದಿ ಮತ್ತು ಯೋಗಿ ಮಾದರಿಯ ಆಡಳಿತ ಕರ್ನಾಟಕದಲ್ಲಿ ಬರಬೇಕು. ಧರ್ಮಾಧಾರಿತವಾಗಿ ಕಾರ್ಯಕರ್ತರ ಅಪೇಕ್ಷೆಯೊಂದಿಗೆ ಸಂಘಟನೆಯನ್ನು ಇನ್ನಷ್ಟು ಬಲಪಡಿಸುವ ಕೆಲಸವನ್ನು ಮುಂದಿನ ದಿನಗಳಲ್ಲಿ ಮಾಡುತ್ತೇವೆ’ ಎಂದಿದ್ದಾರೆ. ‘ಈ ಎರಡೂ ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಸದಸ್ಯರಿದ್ದರು. ಆದರೆ ಈ ಬಾರಿ ಬಿಜೆಪಿ ಎರಡೂ ಸ್ಥಾನ ಕಳೆದುಕೊಂಡು ಮೂರನೇ ಸ್ಥಾನಕ್ಕೆ ಕುಸಿದಿದೆ. ಜನತೆ ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳನ್ನು ಒಪ್ಪಿಕೊಂಡಿದ್ದಾರೆ’ ಎಂದು ಶಾಸಕ ಅಶೋಕ್‌ಕುಮಾರ್ ರೈ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT