ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿ ಬಡ ಕುಟುಂಬಗಳ ರೋದನ

Last Updated 9 ನವೆಂಬರ್ 2021, 4:58 IST
ಅಕ್ಷರ ಗಾತ್ರ

ಶೃಂಗೇರಿ: ನೆಮ್ಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುದುರೆಮುಖ ರಾಷ್ಟ್ರೀಯ ಉದ್ಯಾನದ ಒಳಗೆ ಇರುವ ಮಲ್ನಾಡು ಗ್ರಾಮದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿರುವ 50ಕ್ಕೂ ಹೆಚ್ಚು ಕುಟುಂಬಗಳು ಮೂಲಸೌಕರ್ಯವಿಲ್ಲದೆ ದಿನ ಕಳೆಯುತ್ತಿವೆ.

ಮಲ್ನಾಡು ಗ್ರಾಮದ ಕಚಿಗೆ, ಹೊಸಿರು ಹಡ್ಲು, ಮುಂಡೋಡಿ, ಮೀನಗರಡಿ, ಒಳಲೆ ಮಾವಿನಕಾಡು, ಹಂಚಿನಕೊಡಿಗೆ ಮುಂತಾದ ಪ್ರದೇಶಗಳಲ್ಲಿ ಬಡ ಕುಟುಂಬಗಳು ವಾಸವಾಗಿವೆ. ವಿದ್ಯುತ್‌ ಸೌಕರ್ಯದಿಂದಲೂ ವಂಚಿತರಾಗಿರುವ ಕುಟುಂಬಗಳು ಕತ್ತಲಿನಲ್ಲಿ ಚಿಮಣಿ ದೀಪದಡಿ ಕಾಲ ಕಳೆಯುತ್ತಿವೆ.

ಸಮಸ್ಯೆಗಳ ಸರಮಾಲೆ: ಶೃಂಗೇರಿ ಪಟ್ಟಣದಿಂದ ಸುಮಾರು 30 ಕಿ.ಮೀ. ದೂರದಲ್ಲಿ ಇರುವ ಮೀನಗರಡಿ, ಕಚಿಗೆ, ಹಸಿರುಹಡ್ಲುಗೆ ಮಳೆಗಾಲದಲ್ಲಿ ಇಲ್ಲಿನ ರಸ್ತೆಯಲ್ಲಿ ವಾಹನ ಚಲಾಯಿಸಲು ಅಸಾಧ್ಯ. ಮನೆಗೆ ಬೇಕಾಗುವ ಆಹಾರ ಸಾಮಗ್ರಿ, ಜಮೀನಿಗೆ ಹಾಕಲು ಗೊಬ್ಬರ ತರಲು ಬುಕ್ಕಡಿಬೈಲಿಗೆ 15 ಕಿ.ಮೀ. ನಡೆದುಕೊಂಡು ಹೋಗಬೇಕು. ಅನಾರೋಗ್ಯ ಕಾಡಿದಾಗ ರೋಗಿಗೆ ಕಂಬಳಿಯಲ್ಲಿ ಸುತ್ತಿ ಹೊತ್ತುಕೊಂಡು ಸಂಪರ್ಕವಿರುವ ರಸ್ತೆಯಲ್ಲಿ ಕಾಯುವ ಪಿಕ್‍ಆಪ್ ಮೂಲಕ ಆಸ್ಪತ್ರೆಗೆ ತೆರಳುವ ಸ್ಥಿತಿ-ಗತಿ ಇದೆ.

ಇಲ್ಲಿರುವ 50ಕ್ಕೂ ಹೆಚ್ಚು ಕುಟುಂಬಗಳಿಗೆ ವಿದ್ಯುತ್ ಸಂಪರ್ಕವಿಲ್ಲ. ಲಾಕ್‍ಡೌನ್‍ನಲ್ಲಿ ಅತ್ತ ವಿದ್ಯುತ್ ಸಂಪರ್ಕವಿಲ್ಲದೆ, ಇತ್ತ ಮೊಬೈಲ್‌ ನೆಟ್‍ವರ್ಕ್ ಇಲ್ಲದೆ ಮಕ್ಕಳ ಆನ್‌ಲೈನ್‌ ಶಿಕ್ಷಣಕ್ಕೆ ಸಮಸ್ಯೆಯಾಗಿತ್ತು. ಪ್ರಸ್ತುತ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಟ್ಟಣದ ಹಾಸ್ಟೆಲ್‍ನಲ್ಲಿ ಇದ್ದು ಕಲಿಯುತ್ತಿದ್ದಾರೆ.

ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಕಾಂಕ್ರೀಟ್ ರಸ್ತೆ ಮಾಡಲು ಅವಕಾಶವಿದೆ ಎಂದು ಸಂಬಂಧಪಟ್ಟ ಇಲಾಖೆ ಹೇಳುತ್ತಿದೆ. ಕಾಂಕ್ರೀಟ್ ರಸ್ತೆಗೆ ಬೇಕಾಗುವ ಲಕ್ಷಗಟ್ಟಲೆ ಹಣ ಸರ್ಕಾರ ನೀಡಬೇಕು. ವಿದ್ಯುತ್ ಸಂಪರ್ಕ ಕಲ್ಪಿಸಿ ಕೊಡಿ ಎಂದು ಇತ್ತೀಚೆಗೆ ಚಿಕ್ಕಮಗಳೂರಿಗೆ ಭೇಟಿ ನೀಡಿದಇಂಧನ ಸಚಿವ ಸುನೀಲ್ ಕುಮಾರ್ ಅವರಿಗೆ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.

‘ವಿದ್ಯುತ್ ಕಾಣದ ಹಳ್ಳಿಗಳು ಇಂದಿಗೂ ಇವೆ ಎಂಬುದಕ್ಕೆ ನಮ್ಮ ಗ್ರಾಮ ಉತ್ತಮ ಉದಾಹರಣೆ. ಚಿಮಿಣಿ ದೀಪದಲ್ಲಿ ಹಿರಿಯ ತಲೆಮಾರಿನವರು ಬದುಕು ಸಾಗಿಸಿದ್ದು ಯುವಪೀಳಿಗೆ ಕೂಡಾ ಅದೇ ಸ್ಥಿತಿ ಎದುರಿಸುತ್ತಿದೆ. ಕೂಡಲೇ
ನಮಗೆ ವಿದ್ಯುತ್ ಮತ್ತು ರಸ್ತೆ ಸಂಪರ್ಕ ಕಲ್ಪಿಸಿ ಕೊಡಬೇಕು’ ಎಂದು ಗ್ರಾಮಸ್ಥರಾದ ಜನಾರ್ದನ್, ಗಿರಿಜಾ, ಜ್ಯೋತಿ, ವಸಂತ, ತಿಮ್ಮಪ್ಪ ಒತ್ತಾಯಿಸಿದ್ದಾರೆ.

‘ರಾಷ್ಟ್ರೀಯ ಉದ್ಯಾನದಲ್ಲಿ ಬದುಕು ಕಟ್ಟಿಕೊಂಡ ಜನರಿಗೆ ಮೂಲಸೌಲಭ್ಯ ನೀಡಬೇಕು. ಜನರತ್ತ ಸಂಬಂಧಪಟ್ಟ ಇಲಾಖೆ ಮಾನವೀಯತೆ ತೋರಿಸಬೇಕು. ಒಟ್ಟಾರೆ ಗ್ರಾಮಸ್ಥರಿಗೆ ವಿದ್ಯುತ್ ಮತ್ತು ರಸ್ತೆ ಸಂಪರ್ಕ ನೀಡಬೇಕು’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಪುಟ್ಟಪ್ಪ ಹೆಗ್ಡೆ ಹೇಳುತ್ತಾರೆ.

‘ಬದುಕು ಕಟ್ಟಲು ಅವಕಾಶ ಮಾಡಿ’

‘ಕುದುರೆಮುಖ ರಾಷ್ಟ್ರೀಯ ಉದ್ಯಾನ ಘೋಷಣೆ ಮಾಡುವ ಸಂದರ್ಭದಲ್ಲಿ ಜನರಿಗೆ ಮೂಲ ಸೌಕರ್ಯ ನೀಡಲು ಧಕ್ಕೆ ಮಾಡುವುದಿಲ್ಲ ಎಂದು ಹೇಳಿದ್ದರು. ಈಗ ವನ್ಯಜೀವಿ ವಿಭಾಗದವರು ಕೃಷಿ ಚಟುವಟಿಕೆಗೆ, ರಸ್ತೆ ಮಾಡುವುದಕ್ಕೆ, ವಿದ್ಯುತ್ ಸಂಪರ್ಕ ನೀಡಲು ಅಡ್ಡಿ ಪಡಿಸುತ್ತಿದ್ದಾರೆ. ಅವರಿಗೆ ಪರಿಹಾರ ನೀಡಲು ಸರ್ಕಾರದಲ್ಲಿ ಹಣ ಇಲ್ಲ. ಕೂಡಲೇ ಸರ್ಕಾರ ಹಣ ಬಿಡುಗಡೆ ಮಾಡಿ ಅಲ್ಲಿನ ಜನರಿಗೆ ಪರಿಹಾರ ನೀಡಿ, ಅವರ ಬದುಕು ಕಟ್ಟಿಕೊಳ್ಳಲು ಅವಕಾಶ ಮಾಡಬೇಕು’ ಎಂದು ಶಾಸಕ ಟಿ.ಡಿ ರಾಜೇಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT