ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್‌ಗೆ ಅದ್ಧೂರಿ ಸ್ವಾಗತ; ಸ್ಮಾರಕಗಳಿಗೆ ಭೇಟಿ

‘ಸೌಹಾರ್ದ ಪರಂಪರೆ ಮರಳಿಕಟ್ಟಿ ಜಿಲ್ಲೆಯ ಗತವೈಭವ ಮರುಕಳಿಸುವಂತೆ ಮಾಡುವ ಕನಸು’
Published 23 ಮಾರ್ಚ್ 2024, 5:33 IST
Last Updated 23 ಮಾರ್ಚ್ 2024, 5:33 IST
ಅಕ್ಷರ ಗಾತ್ರ

ಮಂಗಳೂರು: ಬೆಂಗಳೂರಿನಿಂದ ಶುಕ್ರವಾರ ಮಂಗಳೂರಿಗೆ ವಾಪಸಾದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಅವರಿಗೆ ಕಾರ್ಯಕರ್ತರು, ಅಭಿಮಾನಿಗಳು ಅದ್ದೂರಿ ಸ್ವಾಗತ ಕೋರಿದರು.

ವಿಮಾನ ನಿಲ್ದಾಣದಲ್ಲಿ ಅವರನ್ನು ಬರಮಾಡಿಕೊಂಡ ನೂರಾರು ಮಂದಿ ಹಾರ ಹಾಕಿ ಚೆಂಡೆ ಹಾಗೂ ವಾದ್ಯಮೇಳದ ಹಿನ್ನೆಲೆಯಲ್ಲಿ ಮೆರವಣಿಗೆ ಮಾಡಿದರು.

ಆಧುನಿಕ ಮಂಗಳೂರು ಶಿಲ್ಪಿ ಉಳ್ಳಾಲ ಶ್ರೀನಿವಾಸ್ ಮಲ್ಯ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಪದ್ಮರಾಜ್‌ ಅವರು ಕದ್ರಿಯ ವೀರ ಯೋಧರ ಸ್ಮಾರಕ್ಕೆ ತೆರಳಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು. ನಂತರ ಎಂ.ಜಿ ರಸ್ತೆಯಲ್ಲಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಪುರಭವನದಲ್ಲಿ ಬಿ.ಆರ್.ಅಂಬೇಡ್ಕರ್ ಪ್ರತಿಮೆಗೂ ಗೌರವ ಸಲ್ಲಿಸಿದರು.

ಬಾವುಟಗುಡ್ಡಕ್ಕೆ ತೆರಳಿದ ಅವರು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಗೆ ನಮನ ಸಲ್ಲಿಸಿ, ಟಾಗೋರ್ ಪಾರ್ಕ್‌ನಲ್ಲಿ ರವೀಂದ್ರನಾಥ ಟಾಗೋರ್ ಪ್ರತಿಮೆಗೆ ಗೌರವ ಸಲ್ಲಿಸಿದರು.

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ತುಳುನಾಡಿನ ಸಮಗ್ರ ಅಭಿವೃದ್ಧಿ ಮಾಡುವುದರೊಂದಿಗೆ ಸೌಹಾರ್ದ ಪರಂಪರೆ ಮರಳಿಕಟ್ಟುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಗತವೈಭವ ಮರುಕಳಿಸುವಂತೆ ಮಾಡುವುದು ತಮ್ಮ ಉದ್ದೇಶ ಎಂದರು.

ಮಂಗಳೂರು ಮಹಾನಗರಪಾಲಿಕೆ ವಿಪಕ್ಷ ನಾಯಕ ಪ್ರವೀಣ್‌ ಚಂದ್ರ ಆಳ್ವ ಇದ್ದರು.

ಬಂಟ್ವಾಳದಲ್ಲಿ ಸಭೆ

ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಮೂರು ದಶಕಗಳಿಂದ ಜಿಲ್ಲೆಯಲ್ಲಿ ಉತ್ತಮ ಯೋಜನೆಗಳು ಜಾರಿಯಾಗಲಿಲ್ಲ ಎಂದು ದೂರಿದರು.

ಮುಖಂಡರಾದ ರಮಾನಾಥ್ ರೈ, ಎಂ.ಎಸ್ ಮೊಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಸುದರ್ಶನ್ ಜೈನ್, ಅಶ್ವಿನ್ ಕುಮಾರ್ ರೈ, ಯೂಸೆಲ್ ರಾಡ್ರಿಗಸ್, ಸುಭಾಷ್‌ ಚಂದ್ರ ಶೆಟ್ಟಿ, ಜಯಂತಿ ವಿ.ಪೂಜಾರಿ, ಸುಧೀರ್ ಕುಮಾರ್ ಶೆಟ್ಟಿ, ಇಬ್ರಾಹಿಂ ನವಾಜ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT