ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಹಮದಾಬಾದ್ ಸ್ಫೋಟ: ರಾಜ್ಯದ ಮೂವರಿಗೆ ಶಿಕ್ಷೆ

Last Updated 20 ಫೆಬ್ರುವರಿ 2022, 20:22 IST
ಅಕ್ಷರ ಗಾತ್ರ

ಮಂಗಳೂರು: ಅಹಮದಾಬಾದ್‌ ಸರಣಿ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದ 38 ಜನರಲ್ಲಿ ಮಂಗಳೂರಿನ ಇಬ್ಬರು ಸೇರಿದ್ದಾರೆ. ಇಲ್ಲಿನ ಸೈಯದ್‌ ಮೊಹಮ್ಮದ್ ನೌಷಾದ್‌ಗೆ ಜೀವಾವಧಿ ಶಿಕ್ಷೆ ಹಾಗೂ ಅಹ್ಮದ್‌ ಬಾವಾಗೆ ಮರಣ ದಂಡನೆ ವಿಧಿಸಲಾಗಿದೆ. ವಿಜಯಪುರದ ಮಹಮ್ಮದ್‌ ಅದಾನ್‌ಗೂ ಮರಣದಂಡನೆ ವಿಧಿಸಲಾಗಿದೆ.

ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ರಿಯಾಜ್‌ ಭಟ್ಕಳ್‌, ಉಳ್ಳಾಲದಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ 2008ರ ಅಕ್ಟೋಬರ್‌ 3 ರಂದು ಮಹಾರಾಷ್ಟ್ರ ಪೊಲೀಸರು ಉಳ್ಳಾಲದ ಮುಕ್ಕಚ್ಚೇರಿ, ತೊಕ್ಕೊಟ್ಟು ಸಮೀಪದ ಚೆಂಬುಗುಡ್ಡೆ ಮತ್ತು ನಗರದ ಪಾಂಡೇಶ್ವರದ ಸುಭಾಸ್‌ನಗರ ಹಾಗೂ ಇತರ ಕಡೆಗಳಲ್ಲಿ ದಾಳಿ ನಡೆಸಿದ್ದರು.

ಈ ವೇಳೆ ಮುಕ್ಕಚ್ಚೇರಿಯ ಮೊಹಮ್ಮದ್ ಅಲಿ, ಜಾವೇದ್‌ ಅಲಿ, ಸುಭಾಸ್‌ ನಗರದ ನೌಷಾದ್‌ ಮತ್ತು ಹಳೆಯಂಗಡಿಯ ಅಹ್ಮದ್‌ ಬಾವಾನನ್ನು ಬಂಧಿಸಿದ್ದರು. ಆರೋಪಿಗಳಿಂದ 5 ಬಾಂಬ್‌, ₹11.39 ಲಕ್ಷ ನಗದು, ಗುಜರಾತ್‌ನ ನಕ್ಷೆ, 21 ಮೊಬೈಲ್‌ ಫೋನ್‌, ಸಿಮ್‌ ಕಾರ್ಡ್‌, ಜಿಹಾದಿ ಸಾಹಿತ್ಯ, ಲ್ಯಾಪ್‌ಟಾಪ್‌, ಹಾರ್ಡ್‌ ಡಿಸ್ಕ್, 4 ಪಾಸ್‌ಪೋರ್ಟ್‌ ಇತ್ಯಾದಿಗಳನ್ನು ಪೊಲೀಸರು ವಶವಡಿಸಿಕೊಂಡಿದ್ದರು. ಕೆಲವು ದಿನಗಳ ಬಳಿಕ ಮತ್ತೆ ಪಡುಬಿದ್ರಿಯ ಉಚ್ಚಿಲ, ಚಿಕ್ಕಮಗಳೂರು ಹಾಗೂ ಗುಜರಾತ್‌, ಮಹಾರಾಷ್ಟ್ರದಲ್ಲಿ ಮತ್ತೆ 6 ಮಂದಿಯನ್ನು ಬಂಧಿಸಿದ್ದರು.

ಯಾಸಿನ್‌ ಭಟ್ಕಳ ಹಾಗೂ ರಿಯಾಜ್‌ ಭಟ್ಕಳರ ಆಪ್ತನಾಗಿದ್ದ ನೌಷಾದ್ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ. ಆತನಿಗೆ ಸರ್ಕೀಟ್ ತಯಾರಿಕೆ ಗೊತ್ತಿತ್ತು. ನಗರದಲ್ಲಿ ಅಮೋನಿಯಂ ನೈಟ್ರೇಟ್ ಬಳಸಿ ಸರ್ಕೀಟ್‌ ತಯಾರಿಸಿ, ಸೂರತ್‌ಗೆ ಸಾಗಿಸಲಾಗುತ್ತಿತ್ತು. ಅಲ್ಲಿ ಇಕ್ಬಾಲ್ ಭಟ್ಕಳ ಡೆಟೋನೇಟರ್‌ಗಳನ್ನು ಜೋಡಿಸಿ ಸ್ಫೋಟಕ್ಕೆ ಬಳಸುತ್ತಿದ್ದ ಎನ್ನುವ ಮಾಹಿತಿ ಈ ಹಿಂದೆ ವಿಚಾರಣೆಯಲ್ಲಿ ಬೆಳಕಿಗೆ ಬಂದಿತ್ತು.

2017ರ ಏಪ್ರಿಲ್‌ 12ರಂದು ಸೈಯದ್‌ ಮೊಹಮ್ಮದ್‌ ನೌಷಾದ್‌, ಅಹ್ಮದ್‌ ಬಾವಾ ಮತ್ತು ಪಡುಬಿದ್ರಿಯ ಇನ್ನೊಬ್ಬ ಅಪರಾಧಿಗೆ ಮಂಗಳೂರಿನ ನ್ಯಾಯಾಲಯವು ಕಠಿಣ ಜೀವಾವಧಿ ಶಿಕ್ಷೆ ವಿಧಿಸಿತ್ತು.

'ನರಭಕ್ಷಕ ಚಿರತೆಯಂತೆ ವರ್ತಿಸಬಹುದು...'

ಅಹಮದಾಬಾದ್: ‘ಅಹಮದಾಬಾದ್‌ನಲ್ಲಿ 2008ರಲ್ಲಿ ನಡೆದಿದ್ದ ಸರಣಿ ಬಾಂಬ್‌ ಸ್ಫೋಟ ಪ್ರಕರಣದಲ್ಲಿ 38 ಜನರು ಗಲ್ಲು ಶಿಕ್ಷೆಗೆ ಅರ್ಹರಾಗಿದ್ದರು. ಅವರು ಸಮಾಜದಲ್ಲಿ ಇದ್ದರೆ ನರಭಕ್ಷಕ ಚಿರತೆಯಂತೆ ವರ್ತಿಸಬಹುದು’ ಎಂದು ಕೋರ್ಟ್‌ ಹೇಳಿದೆ.

ಸರಣಿ ಬಾಂಬ್‌ ಸ್ಫೋಟ ಪ್ರಕರಣ ಸಂಬಂಧ 38 ಜನರಿಗೆ ಗಲ್ಲುಶಿಕ್ಷೆ, 11 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಇಲ್ಲಿನ ವಿಶೇಷ ನ್ಯಾಯಾಲಯ ಆದೇಶಿಸಿತ್ತು. ಸ್ಪೋಟದಲ್ಲಿ 56 ಜನರು ಮೃತಪಟ್ಟಿದ್ದರು ಮತ್ತು 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಗಲ್ಲು ಶಿಕ್ಷೆಗೆ ಒಳಗಾದ ಎಲ್ಲರೂ ಇಂಡಿಯನ್‌ ಮುಜಾಹಿದೀನ್‌ ಸಂಘಟನೆಯವರು.

ಪ್ರಕರಣ ಕುರಿತ ತೀರ್ಪಿನಲ್ಲಿ ಈ ಉಲ್ಲೇಖವಿದೆ. ಅಪರೂಪದಲ್ಲಿ ಅಪರೂಪದ ಪ್ರಕರಣ ಇದಾಗಿದ್ದು, ಗಲ್ಲು ಶಿಕ್ಷೆಯು ಸೂಕ್ತವಾದುದಾಗಿದೆ ಎಂದೂ ಕೋರ್ಟ್ ಅಭಿಪ್ರಾಯಪಟ್ಟಿದೆ. ಗರಿಷ್ಠ ಸಂಖ್ಯೆಯ ಅಪರಾಧಿಗಳಿಗೆ ಶಿಕ್ಷೆ ವಿಧಿಸಿದ ಪ್ರಕರಣ ಇದಾಗಿದೆ.

‘ಶಾಂತಿಯುತ ಸಮಾಜಕ್ಕೆ ಭಂಗ ತಂದಿದ್ದಾರೆ. ದೇಶವಿರೋಧಿ ಕೃತ್ಯ ಎಸಗಿದ್ದಾರೆ. ಕೆಲವರಿಗೆ ಅಲ್ಲಾಹು ಮೇಲಷ್ಟೇ ವಿಶ್ವಾಸವಿತ್ತು, ಸರ್ಕಾರ, ನ್ಯಾಯಾಂಗ ವ್ಯವಸ್ಥೆ ಮೇಲಲ್ಲ’ ಎಂದು ವಿಶೇಷ ನ್ಯಾಯಾಧೀಶ ಎ.ಆರ್.ಪಟೇಲ್‌ ತೀರ್ಪಿನ ಆದೇಶದಲ್ಲಿ ತಿಳಿಸಿದ್ದಾರೆ.

‘ದೇವರು ಹೊರತುಪಡಿಸಿ ಯಾರೊಬ್ಬರ ಮೇಲೂ ವಿಶ್ವಾಸವಿಲ್ಲ ಎಂದು ಹೇಳುವವರನ್ನು ಜೈಲಿನಲ್ಲಿ ಇಡುವ ಅಗತ್ಯವಿಲ್ಲ. ಅವರಿಗೆ ಇಡುವಂತಹ ಜೈಲು ದೇಶದಲ್ಲಿ ಇಲ್ಲ. ಇಂತಹವರು ಸಮಾಜದಲ್ಲಿ ಇದ್ದರೆ ನರಭಕ್ಷಕ ಚಿರತೆಯಂತೆ ವರ್ತಿಸಬಹುದು. ಸಮಾಜದಲ್ಲಿರುವ ಮಕ್ಕಳು, ಮಹಿಳೆಯರು ಸೇರಿದಂತೆ ಅಮಾಯಕರನ್ನು ಕೊಲ್ಲಬಹುದು’ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಸಾಕ್ಷ್ಯವಾಗಿ ಪರಿವರ್ತನೆಗೆ ಅಸೂಯೆ ಕಾರಣ: ಸರಣಿ ಸ್ಫೋಟ ಪ್ರಕರಣದಲ್ಲಿ ಕೆಲವರು ಸರ್ಕಾರಿ ಸಾಕ್ಷ್ಯವಾಗಿ ಪರಿವರ್ತನೆಯಾಗಲು ದ್ವೇಷ, ಅಸೂಯೆ, ಧಾರ್ಮಿಕ ನಂಬಿಕೆಗಳಲ್ಲಿನ ಭಿನ್ನಾಭಿಪ್ರಾಯ ಕಾರಣ ಎಂದು ಮೂವರು ಅಪರಾಧಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT