ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆಬ್ರುವರಿ 9ರವರೆಗೆ ರಾಜ್ಯಾದ್ಯಂತ ಹನುಮಧ್ವಜ ಅಭಿಯಾನ: ಸುನೀಲ್‌ ಕೆ.ಆರ್‌

Published 2 ಫೆಬ್ರುವರಿ 2024, 12:23 IST
Last Updated 2 ಫೆಬ್ರುವರಿ 2024, 12:23 IST
ಅಕ್ಷರ ಗಾತ್ರ

ಮಂಗಳೂರು: ಮಂಡ್ಯ ಜಿಲ್ಲೆ ಕರೆಗೋಡು ಗ್ರಾಮದಲ್ಲಿ ಹನುಮಧ್ವಜ ತೆಗೆದುಹಾಕಿದ ರಾಜ್ಯ ಸರ್ಕಾರದ ಕ್ರಮ ಖಂಡಿಸಿ, ಹಿಂದೂಗಳಲ್ಲಿ ಆತ್ಮಸ್ಥ್ಯರ್ಯ ಹೆಚ್ಚಿಸಲು ರಾಜ್ಯದಾದ್ಯಂತ ಇದೇ 9ರ ವರೆಗೆ ಹನುಮಧ್ವಜ ಅಭಿಯಾನ ನಡೆಸುತ್ತಿರುವುದಾಗಿ ಬಜರಂಗದಳ ಪ್ರಾಂತ ಸಂಯೋಜಕ ಸುನೀಲ್‌ ಕೆ.ಆರ್‌. ತಿಳಿಸಿದರು.

ಶುಕ್ರವಾರ ಇಲ್ಲಿಯ ವಿಶ್ವ ಹಿಂದೂ ಪರಿಷತ್‌ ಕಚೇರಿಯಲ್ಲಿ ಹನುಮಧ್ವಜಾರೋಹಣ ಮಾಡಿ, ಆಂದೋಲನಕ್ಕೆ ಅವರು ಚಾಲನೆ ನೀಡಿದರು.

ಇದಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಎಲ್ಲ ಹಿಂದೂಗಳ ಮನೆ ಮನೆಗಳಲ್ಲಿ, ಧಾರ್ಮಿಕ ಕೇಂದ್ರಗಳಲ್ಲಿ ಹನುಮಧ್ವಜ ಹಾರಿಸಲಾಗುವುದು. ಕರೆಗೋಡಿನಲ್ಲಿ ಹನುಮಧ್ವಜ ಹಾರಿಸಲು ಅವಕಾಶ ನೀಡುವಂತೆ ಕೋರಿ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಮೂಲಕ ಇದೇ 9ರಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಫೆ.10ರಂದು ಎಲ್ಲೆಡೆ ಹನುಮಾನ್‌ ಚಾಲೀಸಾ ಪಠಣ ನಡೆಸಲಾಗುವುದು ಎಂದರು.

ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ಮತಬ್ಯಾಂಕ್‌ಗಾಗಿ ಅಲ್ಪಸಂಖ್ಯಾತರ ಓಲೈಕೆಯಲ್ಲಿ ತೊಡಗಿದ್ದು, ಹನುಮ ಧ್ವಜ ತೆರವುಗೊಳಿಸಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದೆ. ಇದನ್ನು ಪ್ರತಿಭಟಿಸಿ ಎಲ್ಲ ಹಿಂದೂಗಳು ತಮ್ಮ ಮನೆಗಳಲ್ಲಿ ಹನುಮ ಧ್ವಜ ಹಾಕಬೇಕು ಎಂದು ಅವರು ಮನವಿ ಮಾಡಿದರು.

‘ಕನ್ನಡ ಧ್ವಜ, ರಾಷ್ಟ್ರಧ್ವಜಕ್ಕೆ ನಮ್ಮ ವಿರೋಧ ವಿಲ್ಲ. ಆದರೆ, ಅವುಗಳಿಗೆ ಧ್ವಜ ಸಂಹಿತೆ ಇದೆ. ಅದನ್ನು ಪಾಲಿಸಬೇಕಾಗುತ್ತದೆ. ಕರೆಗೋಡು ಗ್ರಾಮದಲ್ಲಿ ಕನ್ನಡ, ರಾಷ್ಟ್ರ ಮತ್ತು ಹನುಮಧ್ವಜ ಮೂರನ್ನೂ ಹಾರಿಸಬೇಕಿತ್ತಲ್ಲವೇ’ ಎಂದು ಪ್ರಶ್ನಿಸಿದರು.

‘ಆಪ್ಘಾನಿಸ್ತಾನ, ಪಾಕಿಸ್ತಾನ ಸೇರಿ ಅಖಂಡ ಭಾರತ ನಿರ್ಮಾಣವಾಗಬೇಕು ಎಂಬುದು ನಮ್ಮ ಬೇಡಿಕೆ. ಪ್ರತಿ ವರ್ಷ ಆಗಸ್ಟ್‌ 14ರಂದು ನಾವು ಅಖಂಡ ಭಾರತ ಸಂಕಲ್ಪ ದಿನ ಮಾಡುತ್ತೇವೆ. ದೇಶ ವಿಭಜನೆ ಬಗ್ಗೆ ಸಂಸದ ಡಿ.ಕೆ. ಸುರೇಶ್‌ ಆಡಿರುವ ಮಾತು ಖಂಡನೀಯ. ಕಾಂಗ್ರೆಸ್ಸಿಗರು ದೇಶವನ್ನು ತುಂಡು ಮಾಡಿದ್ದಾರೆ. ಈಗಲೂ ಅದನ್ನೇ ಮಾಡಲು ಹೊರಟಿದ್ದಾರೆ‘ ಎಂದು ಟೀಕಿಸಿದರು.

ಬಜರಂಗದಳ ವಿಭಾಗ ಸಂಯೋಜಕ ಭುಜಂಗ ಕುಲಾಲ್‌, ವಿಶ್ವ ಹಿಂದೂಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಕೆ. ಪುರುಷೋತ್ತಮ, ಜಿಲ್ಲಾ ಸಹ ಸಂಯೋಜಕ ಪ್ರೀತಮ್‌ ಕಾಟಿಪಳ್ಳಿ, ಪುನೀತ್‌ ಅತ್ತಾವರ ಇದ್ದರು.

ಮಳಲಿ ಮಸೀದಿ ಜಾಗದಲ್ಲಿ ಮಂದಿರ: ವಿಶ್ವಾಸ

‘ದಕ್ಷಿಣ ಕನ್ನಡ ಜಿಲ್ಲೆಯ ಮಳಲಿ ಮಸೀದಿ ಇರುವ ಸ್ಥಳ ವಕ್ಫ್‌ ಮಂಡಳಿಯ ಆಸ್ತಿ ಅಲ್ಲ ಎಂದು ನ್ಯಾಯಾಲಯದ ತೀರ್ಪು ಬಂದಿದೆ. ಜ್ಞಾನವಾಪಿ, ಮಳಲಿ ಹಿಂದೆ ಮಂದಿರಗಳೇ ಆಗಿದ್ದವು. ಮುಸ್ಲಿಂ ಆಕ್ರಮಣದ ನಂತರ ಅವುಗಳನ್ನು ಮಸೀದಿಗಳನ್ನಾಗಿ ಪರಿವರ್ತಿಸಲಾಯಿತು. ಮಳಲಿಯಲ್ಲಿ ಮಂದಿರ ನಿರ್ಮಾಣ ಆಗಿಯೇ ಆಗುತ್ತದೆ’ ಎಂದು ಸುನೀಲ್‌ ಕೆ.ಆರ್‌. ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT