ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಲುವೆಯಲ್ಲಿ ಕೊಚ್ಚಿ ಹೋದ ರಿಕ್ಷಾ: ಚಾಲಕ ಸಾವು

ದಕ್ಷಿಣ ಕನ್ನಡ: ರಾತ್ರಿ ಇಡೀ ಭಾರಿ ಮಳೆ- ಮಂಗಳೂರಿನ ತಗ್ಗು ಪ್ರದೇಶದ ಮನೆಗಳಿಗೆ ನೀರು
Published 26 ಮೇ 2024, 3:26 IST
Last Updated 26 ಮೇ 2024, 3:26 IST
ಅಕ್ಷರ ಗಾತ್ರ

ಮಂಗಳೂರು: ನಗರದಲ್ಲಿ ಶುಕ್ರವಾರ ರಾತ್ರಿ ಶುರುವಾದ ಧಾರಾಕಾರ ಮಳೆ ಶನಿವಾರ ಬೆಳಿಗ್ಗೆವರೆಗೂ ಸುರಿಯಿತು. ನಗರದ  ತಗ್ಗು ಪ್ರದೇಶದ 20 ಕ್ಕೂ ಅಧಿಕ ಮನೆಗಳಿಗೆ ನೀರುನುಗ್ಗಿತ್ತು.‌ ಮಳೆ ನೀರು ಕಾಲುವೆಯಲ್ಲಿ ಆಟೊರಿಕ್ಷಾ ಕೊಚ್ಚಿ ಹೋಗಿ, ಚಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಕೊಟ್ಟಾರ ಚೌಕಿಯ ಕೂಳೂರು ಫೆರ‍್ರಿ ರಸ್ತೆ ಬಳಿಯ ನಿವಾಸಿ ದೀಪಕ್ ಆಚಾರ್ಯ (42) ಮೃತರು.

ಬ್ಯಾಪ್ಟಿಸ್ಟ್‌ ಜಾರ್ಜ್‌ ಪಿರೇರಾ ಅವರ ರಿಕ್ಷಾದ ಚಾಲಕರಾಗಿದ್ದ ದೀಪಕ್  ಶುಕ್ರವಾರ ಮಧ್ಯಾಹ್ನ 1ಗಂಟೆಗೆ ಮನೆಯಲ್ಲಿ ಊಟ ಮುಗಿಸಿ, ಬಾಡಿಗೆಗೆ ಹೋಗಿದ್ದರು. ರಾತ್ರಿ 10 ಗಂಟೆವರೆಗೂ ಮನೆಗೆ ಮರಳಿರಲಿಲ್ಲ. ಅವರು ಚಲಾಯಿಸುತ್ತಿದ್ದ ರಿಕ್ಷಾ ಯಮುನಾ ಪ್ಯಾರಡೈಸ್‌ ಅಪಾರ್ಟ್‌ಮೆಂಟ್‌ ಸಮುಚ್ಚಯದ ಬಳಿ ಮಳೆ ನೀರು ಹರಿಯುವ ಕಾಲುವೆಯಲ್ಲಿ ಮಧ್ಯರಾತ್ರಿ ಬಳಿಕ ಪತ್ತೆಯಾಗಿತ್ತು.

‘ಇಲ್ಲಿನ ಮಳೆ ನೀರು ಹರಿಯುವ ಕಾಲುವೆಯನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಸ್ವಚ್ಛಗೊಳಿಸಿಲ್ಲ. ಹಾಗಾಗಿ, ಹೂಳು ತುಂಬಿ ಕಾಲುವೆಯಲ್ಲಿ ಮಳೆ ನೀರು ಹರಿವಿಗೆ ಅಡ್ಡಿ ಉಂಟಾಗಿತ್ತು. ಮಳೆ ನೀರು ರಸ್ತೆ ಮೇಲೆ ಹರಿದಿದ್ದ ಕಾರಣ ರಸ್ತೆ ಮತ್ತು  ಕಾಲುವೆ ನಡುವೆ ವ್ಯತ್ಯಾಸ ತಿಳಿಯದ ಸ್ಥಿತಿ ನಿರ್ಮಾಣವಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಈ ಕಾಲುವೆಗೆ ಸರಿಯಾದ ತಡೆಗೋಡೆ ನಿರ್ಮಿಸದೇ ನಿರ್ಲಕ್ಷ್ಯ ವಹಿಸಿದ್ದೇ ಈ ದುರ್ಘಟನೆಗೆ  ಕಾರಣ’ ಎಂದು ಆರೋಪಿಸಿ ದೀಪಕ್‌ ಅವರ ಸೋದರಿ ಹೇಮಲತಾ ದೂರು ನೀಡಿದ್ದು, ಪೊಲೀಸರು ಮಹಾನಗರ ಪಾಲಿಕೆಯ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಭಾರಿ ಮಳೆಯಿಂದಾಗಿ ಕೊಟ್ಟಾರ ಚೌಕಿಯಲ್ಲಿ ಸುಮಾರು 10 ಮನೆಗಳು ಹಾಗೂ ಸಾಗರ್ ಕೋರ್ಟ್ ಪ್ರದೇಶದಲ್ಲಿ ಸುಮಾರು 10 ಮನೆಗಳು ಜಲಾವೃತವಾಗಿದ್ದವು.

ಸಾಗರ ಕೋರ್ಟ್ ಪ್ರದೇಶದಲ್ಲಿ ಜಲಾವೃತವಾಗಿದ್ದ ಮನೆಯೊಂದರಿಂದ ವೃದ್ದೆಯೊಬ್ಬರನ್ನು ರಕ್ಷಣೆ ಮಾಡಲಾಗಿದೆ.

‘ಸಾಗರ್‌ ಕೋರ್ಟ್‌ ಪ್ರದೇಶದ ಜಲಾವೃತಗೊಂಡಿದ್ದ ಮನೆಯಲ್ಲಿ ಕಾಯಿಲೆಯಿಂದ ಬಳಲುತ್ತಿದ್ದ ವೃದ್ಧೆ ಲಕ್ಷ್ಮೀ (80) ಅವರು ಸಿಲುಕಿದ್ದರು. ಈ ಬಗ್ಗೆ ಮಾಹಿತಿ ಬಂದ ತಕ್ಷಣ ಸ್ಥಳಕ್ಕೆ ಧಾವಿಸಿ ಅವರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದ್ದೇವೆ‘ ಎಂದು ಕದ್ರಿ ಅಗ್ನಿ ಶಾಮಕ ಠಾಣೆಯ ಮೂಲಗಳು ತಿಳಿಸಿವೆ. 

‘ಬೆಂಗಳೂರಿನಲ್ಲಿದ್ದ ಲಕ್ಷ್ಮೀ ಹಾಗೂ ಅವರ ಮಗಳು ಚಂದ್ರಾವತಿ ಅವರು ಈಚೆಗಷ್ಟೇ  ಇಲ್ಲಿಗೆ ವಾಸ್ತವ್ಯ ಬದಲಾಯಿಸಿದ್ದರು. ಪ್ರವಾಹ ಇಳಿಯುವವರೆ ಉಳಿದುಕೊಳ್ಳಲು ಆಶ್ರಯ ನೀಡುವಂತೆ  ಅವರು ನೆರೆಮನೆಯವರ ಸಹಾಯ ಕೋರಿದ್ದರು.  ಅಗ್ನಿಶಾಮಕ ದಳದ ಸಿಬ್ಬಂದಿ ಸಮೀಪದಲ್ಲಿದ್ದ ಬೇರೊಂದು ಮನೆಗೆ ಸಾಗಿಸಿದರು’ ಎಂದು ಸ್ಥಳೀಯರು ತಿಳಿಸಿದರು.

‘ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದಾಗಿ ಅಡುಗೆ ಅನಿಲ ಸಿಲಿಂಡರ್‌, ಫ್ರಿಜ್‌ ಕೆಸರು ನೀರಿನಲ್ಲಿ ತೇಲುತ್ತಿತ್ತು. ಮನೆಯ ಒಳಗೂ ಸೊಂಟ ಮಟ್ಟದವರೆಗೆ ನೀರಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಸ್ಪಂದಿಸಿದ್ದರಿಂದ ವೃದ್ಧೆಯ ರಕ್ಷಣೆ  ಸಾಧ್ಯವಾಯಿತು. ಸ್ಥಳೀಯ ಪಾಲಿಕೆ ಕರೆಯನ್ನೇ ಸ್ವೀಕರಿಸಿಲ್ಲ’ ಎಂದು ಸ್ಥಳೀಯರು ತಿಳಿಸಿದರು.  ಸಹಾಯಕ ಅಗ್ನಿಶಾಮಕ ಅಧಿಕಾರಿ ಅಬ್ದುಲ್ ಹಮೀದ್‌, ಸಿಬ್ಬಂದಿ ಚಂದ್ರಶೇಖರ ಸಾಲ್ಯಾನ್‌, ದಿವಾಕರ ದಯಾಕರ್‌, ಶಿವರಾಜ್‌ ಹಾಗೂ ಸಿದ್ಧೇಶ್ ಈ ರಕ್ಷಣಾ ಕಾರ್ಯಕ್ಕೆ ನೆರವಾಗಿದ್ದರು.

ಕೊಟ್ಟಾರ ಬಳಿಯ ಅನೇಕ ಮನೆಗಳ ಒಳಗೆ 2ರಿಂದ 3 ಅಡಿಗಳಷ್ಟು ಎತ್ತರಕ್ಕೆ ನೀರು ನಿಂತಿತ್ತು ಎಂದು ಸ್ಥಳೀಕ ನಿವಾಸಿ ಯತೀಶ್‌ ಮಾಹಿತಿ ನೀಡಿದರು.

‘ಪ್ರತಿ ವರ್ಷವೂ ಮಳೆಗಾಲದಲ್ಲಿ ಇಲ್ಲಿ ಪ್ರವಾಹ ಮಾಮೂಲಿ ಎಂಬಂತಾಗಿದೆ. ಮಳೆ ನೀರಿನ ಚರಂಡಿಗಳ ಹೂಳನ್ನು ತೆಗೆಯದ ಕಾರಣ ಮೊದಲ ಮಳೆಗೇ ಮನೆಯೊಳಗೆ ನೀರು ನುಗ್ಗಿ ಸಮಸ್ಯೆ ಉಂಟಾಗಿದೆ’ ಎಂದು ಕೊಟ್ಟಾರಚೌಕಿ ನಿವಾಸಿ ದೀಪ‍ಕ್‌ರಾಜ್‌ ಶೆಟ್ಟಿ ತಿಳಿಸಿದರು.

ಕೊಟ್ಟಾರದ ಅನೇಕ ಅಂಗಡಿಗಳು, ವಾಹನಗಳ ಬಿಡಿಭಾಗಗಳ ಮಳಿಗೆಗಳು, ಹೋಟೆಲ್‌ಗಳ ಒಳಗೆ ನೀರು ನುಗ್ಗಿತ್ತು.  ಹೋಟಲ್‌ ಹಾಗೂ ಮಳಿಗೆಗಳ ಮಾಲೀಕರು  ಕಟ್ಟಡದೊಳಗೆ ನಿಂತಿದ್ದ ನೀರನ್ನು ಹೊರೆಗೆ ಚೆಲ್ಲುತ್ತಿದ್ದುದು ಶನಿವಾರ ಕಂಡು ಬಂತು.

ಕೊಟ್ಟಾರ ಚೌಕಿಯ ಅಂಗಡಿಯಲ್ಲಿ ನೀರು ನಿಂತಿರುವುದು – ಪ್ರಜಾವಾಣಿ ಚಿತ್ರ
ಕೊಟ್ಟಾರ ಚೌಕಿಯ ಅಂಗಡಿಯಲ್ಲಿ ನೀರು ನಿಂತಿರುವುದು – ಪ್ರಜಾವಾಣಿ ಚಿತ್ರ
ಕೊಟ್ಟಾರ ಚೌಕಿಯ ಅಂಗಡಿಯೊಂದರಲ್ಲಿ ನಿಂತಿದ್ದ ನೀರನ್ನು ಸಿಬ್ಬಂದಿ ತೆರವುಗೊಳಿಸಿದರು – ಪ್ರಜಾವಾಣಿ ಚಿತ್ರ 
ಕೊಟ್ಟಾರ ಚೌಕಿಯ ಅಂಗಡಿಯೊಂದರಲ್ಲಿ ನಿಂತಿದ್ದ ನೀರನ್ನು ಸಿಬ್ಬಂದಿ ತೆರವುಗೊಳಿಸಿದರು – ಪ್ರಜಾವಾಣಿ ಚಿತ್ರ 
ಕೊಟ್ಟಾರ ಚೌಕಿಯ ಅಂಗಡಿಯೊಂದರಲ್ಲಿ ನಿಂತಿದ್ದ ನೀರನ್ನು ಸಿಬ್ಬಂದಿ ತೆರವುಗೊಳಿಸಿದರು – ಪ್ರಜಾವಾಣಿ ಚಿತ್ರ
ಕೊಟ್ಟಾರ ಚೌಕಿಯ ಅಂಗಡಿಯೊಂದರಲ್ಲಿ ನಿಂತಿದ್ದ ನೀರನ್ನು ಸಿಬ್ಬಂದಿ ತೆರವುಗೊಳಿಸಿದರು – ಪ್ರಜಾವಾಣಿ ಚಿತ್ರ
ಮಂಗಳೂರಿನ ಕೊಟ್ಟಾರ ಚೌಕಿಯಲ್ಲಿರುವ ವಾಹನಗಳ ಬಿಡಿಭಾಗಗಳ ಮಾರಾಟ ಮಳಿಗೆ ಶನಿವಾರ ಜಲಾವೃತವಾಗಿತ್ತು – ಪ್ರಜಾವಾಣಿ ಚಿತ್ರ 
ಮಂಗಳೂರಿನ ಕೊಟ್ಟಾರ ಚೌಕಿಯಲ್ಲಿರುವ ವಾಹನಗಳ ಬಿಡಿಭಾಗಗಳ ಮಾರಾಟ ಮಳಿಗೆ ಶನಿವಾರ ಜಲಾವೃತವಾಗಿತ್ತು – ಪ್ರಜಾವಾಣಿ ಚಿತ್ರ 
ಉಳ್ಳಾಲ ಸಮೀಪದ ದೇರಳಕಟ್ಟೆಯಲ್ಲಿ ಕುಸಿದುಬಿದ್ದ ಆವರಣಗೋಡೆಯಡಿ ಸಿಲುಕಿ ಎರಡು ಕಾರುಗಳು ಶನಿವಾರ ಜಖಂಗೊಂಡಿವೆ
ಉಳ್ಳಾಲ ಸಮೀಪದ ದೇರಳಕಟ್ಟೆಯಲ್ಲಿ ಕುಸಿದುಬಿದ್ದ ಆವರಣಗೋಡೆಯಡಿ ಸಿಲುಕಿ ಎರಡು ಕಾರುಗಳು ಶನಿವಾರ ಜಖಂಗೊಂಡಿವೆ

Highlights -

Cut-off box - ದೇರಳಕಟ್ಟೆ: ಆವರಣಗೋಡೆ ಕುಸಿದು 2 ಕಾರು ಜಖಂ ‌ಉಳ್ಳಾಲ: ದೇರಳಕಟ್ಟೆ ಯೆನೆಪೋಯ ಆಸ್ಪತ್ರೆ ಬಳಿ ಮರದ ಮಿಲ್‌ನ ಆವರಣ ಗೋಡೆ ಕುಸಿದು ಎರಡು ಕಾರುಗಳು ಜಖಂಗೊಂಡಿದ್ದು ಒಂದು ಕೈಗಾಡಿ ಶನಿವಾರ ಸಂಜೆ ಹಾನಿಗೊಳಗಾಗಿದೆ. ಗೋಡೆ ಕುಸಿದ ಸಂದರ್ಭದಲ್ಲಿ ವಾಹನದಲ್ಲಿ ಯಾರೂ ಇಲ್ಲದ ಕಾರಣ ಮತ್ತು ಆವರಣ ಗೋಡೆ ಬದಿಯಲ್ಲಿ ಎರಡೇ ವಾಹನಗಳು ಇದ್ದ ಕಾರಣ ಹೆಚ್ಚಿನ ಅನಾಹುತ ಸಂಭವಿಸುವುದು ತಪ್ಪಿದಂತಾಗಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಆವರಣಗೋಡೆ ಒದ್ದೆಯಾಗಿತ್ತು. ಯೆನೆಪೋಯ ಆಸ್ಪತ್ರೆಯ ವೈದ್ಯರು ಹಾಗೂ ಆಸ್ಪತ್ರೆಗೆ ರೋಗಿಯೊಬ್ಬರನ್ನು ಕರೆದುಕೊಂಡು ಬಂದಿದ್ದ ಕೇರಳದ ಕುಟುಂಬವೊಂದು ಆವರಣ ಗೋಡೆ ಪಕ್ಕ ಕಾರು ನಿಲ್ಲಿಸಿದ್ದರು. ಆವರಣ ಗೋಡೆಯ ಕೆಂಪುಕಲ್ಲುಗಳಡಿ ಸಿಲುಕಿ ಈ ಕಾರುಗಳ ಗಾಜುಗಳು ನಜ್ಜುಗುಜ್ಜಾಗಿವೆ. ಸ್ಥಳದಲ್ಲಿದ್ದ ಬೇಲ್‍ಪುರಿ ಮಾರಾಟದ ಗಾಡಿ ಕಲ್ಲಿನಡಿಗೆ ಸಿಕ್ಕಿ ಸಂಪೂರ್ಣ ಹಾನಿಗೊಂಡಿದೆ. ಬೇಲ್‍ಪುರಿ ಮಾರುವವ ಎರಡು ದಿನಗಳ ಹಿಂದೆ ಸ್ಥಳಕ್ಕೆ ₹ 15 ಸಾವಿರ ಪಾವತಿ ಮಾಡಿ ಆವರಣ ಗೋಡೆ ಪಕ್ಕದಲ್ಲಿ ಕೈಗಾಡಿಯನ್ನು ನಿಲ್ಲಿಸಿದ್ದ. ಆ ಕೈಗಾಡಿ ಕಲ್ಲುಗಳ ಅಡಿ ಸಿಲುಕಿ ಅಪ್ಪಚ್ಚಿಯಾಗಿದೆ. ವಾಹನಗಳು ಕಡಿಮೆಯಿತ್ತು: ಆಸ್ಪತ್ರೆಗೆ ರೋಗಿಗಳನ್ನು ಕರೆತರುವವರು ಖಾಸಗಿ ಜಾಗದಲ್ಲಿ ಹಣ ಪಾವತಿ ಮಾಡಿ ಕಾರು ನಿಲುಗಡೆ ಮಾಡಲು ವಕಾಶ ಕಲ್ಪಿಸಲಾಗಿತ್ತು. ಪ್ರತೀ ದಿನ ಈ ಜಾಗದ ಪಕ್ಕದಲ್ಲಿರುವ ಮರದ ಮಿಲ್ಲಿನ ಆವರಣಗೋಡೆಯ ಬಳಿ ಆರೇಳು ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿತ್ತು. ಶನಿವಾರ ಇಲ್ಲಿ ಎರಡು ಕಾರುಗಳನ್ನು ಮಾತ್ರ ನಿಲುಗಡೆ ಮಾಡಲಾಗಿತ್ತು.  ಆವರಣಗೋಡೆಯ ಇನ್ನೊಂದು ಭಾಗದಲ್ಲಿ ನಿಲ್ಲಿಸಿದ್ದ ಕಾರುಗಳಿಗೆ ಯಾವುದೇ ಹಾನಿ ಆಗಿಲ್ಲ.  ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಉಳ್ಳಾಲ ತಾಲೂಕಿನಲ್ಲಿ ಪ್ರಾಕೃತಿಕ ವಿಕೋಪಗಳು ಮುಂದುವರೆದಿದೆ. ಹಲವೆಡೆ ಆವರಣ ಗೋಡೆ ಕುಸಿತ ಮನೆಯ ಚಾವಣಿ ಕುಸಿದಿವೆ.  ಅಂಬ್ಲಮೊಗರು ಗ್ರಾಮ ಪಂಚಾಯಿತಿ  ವ್ಯಾಪ್ತಿಯ ಜಯಂತಿ ಅವರ ಮನೆಯ ಚಾವಣಿ ಸಂಪೂರ್ಣ ಕುಸಿದಿದೆ. ಆ ಸಂದರ್ಭದಲ್ಲಿ ಮನೆಯಲ್ಲಿ ಯಾರು ಇರಲಿಲ್ಲ.  ಮಳೆ ಆರಂಭದ ಸಂದರ್ಭದಲ್ಲಿ ಇದೇ ಮನೆಗೆ ಭಾಗಶಃ ಹಾನಿಗೊಂಡಿತ್ತು. ಮನೆ ಮಂದಿಯನ್ನು ಬೇರೆ ಕಡೆ ಸ್ಥಳಾಂತರಿಸಲಾಗಿತ್ತು.  ಘಟನಾ ಸ್ಥಳಕ್ಕೆ ತಹಶೀಲ್ದಾರ್ ಕಂದಾಯ ಅಧಿಕಾರಿ ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Cut-off box - ದ.ಕ: ವ್ಯಾಪಕ ಮಳೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಭಾರಿ ಮಳೆಯಾಗಿದೆ. ಕೆಲವೆಡೆ ಮರ ಉರುಳಿ ಬಿದ್ದು ಮನೆಗಳಿಗೆ ಹಾನಿ ಉಂಟಾಗಿದೆ. ವಿದ್ಯುತ್ ಪೂರೈಕೆಯೂ ಅಸ್ತವ್ಯಸ್ತಗೊಂಡಿದೆ.  ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆ 8.30ರವರೆಗೆ 24 ಗಂಟೆಗಳಲ್ಲಿ ಮೂಲ್ಕಿ ತಾಲ್ಲೂಕಿನ ಪಡುಪಣಂಬೂರಿನಲ್ಲಿ 19.20 ಸೆಂ.ಮೀ. ಕಿಲ್ಪಾಡಿಯಲ್ಲಿ 13.35 ಕೆಮ್ರಾಲ್‌ನಲ್ಲಿ 8.95 ಮಂಗಳೂರು ತಾಲ್ಲೂಕಿನ ಚೇಳಾಯ್ರುವಿನಲ್ಲಿ 13.30 ಬಾಳದಲ್ಲಿ 12.75 ಶಿರ್ತಾಡಿಯಲ್ಲಿ 10.45 ಪಡುಮಾರ್ನಾಡುವಿನಲ್ಲಿ 10.20 ಬೆಳುವಾಯಿಯಲ್ಲಿ 9.75 ಬಂಟ್ವಾಳ ತಾಲ್ಲೂಕಿನ ಬಡಗ ಬೆಳ್ಳೂರಿನಲ್ಲಿ 8.85 ಹಾಗೂ ಬೆಳ್ತಂಗಡಿ ತಾಲ್ಲೂಕಿನ ಹೊಸಂಗಡಿಯಲ್ಲಿ 8.65 ಸೆಂ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ‌ಯ ಮೂಲಗಳು ತಿಳಿಸಿವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT