ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಂಟ್ವಾಳ | ಧಾರಾಕಾರ ಮಳೆ; ಹಲವೆಡೆ ಹಾನಿ, ಸಂಚಾರ ಅಸ್ತವ್ಯಸ್ಥ

Published 26 ಜೂನ್ 2024, 14:04 IST
Last Updated 26 ಜೂನ್ 2024, 14:04 IST
ಅಕ್ಷರ ಗಾತ್ರ

ಬಂಟ್ವಾಳ: ತಾಲ್ಲೂಕಿನಾದ್ಯಂತ ಮಂಗಳವಾರ ತಡರಾತ್ರಿಯಿಂದ ಬುಧವಾರ ಮಧ್ಯಾಹ್ನತನಕ ಸುರಿದ ಧಾರಾಕಾರ ಮಳೆಗೆ ಹಲವೆಡೆ ಮಳೆ ಹಾನಿ ಸಂಭವಿಸಿದೆ. ಗೋಳ್ತಮಜಲು ಗ್ರಾಮದ ನೆಟ್ಲ ನಿವಾಸಿ ಧನಂಜಯ ಗಟ್ಟಿ ಎಂಬವರ ಮನೆ ಮೇಲೆ ಮರ ಬಿದ್ದು ಮನೆ ಮತ್ತು ಆವರಣಗೋಡೆಗೆ ಹಾನಿಯಾಗಿದೆ. ಕೆದಿಲ ಗ್ರಾಮದ ಗಾಂಧಿನಗರ ನಿವಾಸಿ ಪೂವಕ್ಕ ಎಂಬುವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ನರಿಕೊಂಬು ಗ್ರಾಮದ ಮರ್ಲೆಮಾರು ಎಂಬಲ್ಲಿ ಭತ್ತದ ಗದ್ದೆ ನೀರಿನಲ್ಲಿ ಮುಳುಗಿದೆ. ಇದೇ ಗ್ರಾಮದ ಮಾಣಿಮಜಲು ನಿವಾಸಿ ರಾಮಚಂದ್ರ ಗೌಡ ಎಂಬವರ ಮನೆ ಬದಿ ಧರೆ ಕುಸಿದಿದೆ.

ಪುದು ಗ್ರಾಮದ ಕೆಸನಮೊಗರು ನಿವಾಸಿ ಬಾಬು ಸಪಲ್ಯ ಎಂಬುವರ ಮನೆ ಮೇಲೆ ಮರ ಬಿದ್ದು ಗೋಡೆ ಮತ್ತು ಮಾಡಿನ ಹೆಂಚು ಹಾನಿಯಾಗಿದೆ. ಅಮ್ಟಾಡಿ ಗ್ರಾಮದ ಕಿನ್ನಿಬೆಟ್ಟು ನಿವಾಸಿ ಬ್ರಿಜಿತ್ ಡಿಕೋಸ್ತ ಎಂಬುವರ ಹಟ್ಟಿ ಕುಸಿದು ಹಾನಿಯಾಗಿದೆ. ಪುಣಚ ಗ್ರಾಮದ ಮಲ್ಲಿಕಟ್ಟೆ ನಿವಾಸಿ ಭಾಸ್ಕರ ನಲಿಕೆ ಎಂಬುವರ ಮನೆಯ ಆವರಣಗೋಡೆ ಕುಸಿದಿದೆ. ಪುರಸಭಾ ವ್ಯಾಪ್ತಿಯ ಹೊಸ್ಮಾರು ಎಂಬಲ್ಲಿ ಅಶೋಕ ಪೂಜಾರಿ ಮತ್ತು ಗಣೇಶ ಪೂಜಾರಿ ಎಂಬುವರ ಮನೆಯ ಆವರಣ ಗೋಡೆ ಕುಸಿದಿದ್ದು, ಎರಡು ಮನೆಗಳು ಅಪಾಯಕಾರಿ ಸ್ಥಿತಿಯಲ್ಲಿವೆ. ಮನೆಯಲ್ಲಿದ್ದವರನ್ನು ಸ್ಥಳಾಂತರ ಮಾಡಲಾಗಿದೆ.

ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ 4.8 ಮೀಟರ್ ಏರಿಕೆಯಾಗಿದ್ದು, ಕಲ್ಲಡ್ಕದಲ್ಲಿ ದಿನವಿಡೀ ವಾಹನ ದಟ್ಟಣೆ ಉಂಟಾಗಿ ಸಂಚಾರ ಅಸ್ತವಸ್ಯಸ್ತಗೊಂಡಿತು. ಮಾಣಿ ಮತ್ತು ದಾಸಕೋಡಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಹೆದ್ದಾರಿ ಪಕ್ಕದಲ್ಲಿರುವ ಕೆಲವು ಮನೆಗಳು ಕುಸಿತದ ಭೀತಿ ಎದುರಿಸುತ್ತಿದೆ.

ಜನಸ್ಪಂದನೆ ರದ್ದು

ಬಿ.ಸಿ.ರೋಡು ಅಂಬೇಡ್ಕರ್ ಭವನದಲ್ಲಿ ಬುಧವಾರ ಮಧ್ಯಾಹ್ನ ಬಳಿಕ ಆಯೋಜಿಸಿದ್ದ ಜಿಲ್ಲಾಧಿಕಾರಿ 'ಜನಸ್ಪಂದನಾ' ಕಾರ್ಯಕ್ರಮ ಮಳೆಯ ಕಾರಣ ರದ್ದುಗೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT