ಭಾನುವಾರ, ನವೆಂಬರ್ 28, 2021
22 °C

ಮಂಗಳೂರು: ಹಿಂದೂಗಳ ಧ್ವನಿ ಅಡಗಿಸುವ ಯತ್ನ -ಅಡ್ಯಂತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ‘ಕಾರಿಂಜ ಕ್ಷೇತ್ರದ ಸಮೀಪದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯ ವಿರುದ್ಧ ಹೋರಾಟ ನಡೆಸುತ್ತಿರುವ ಹಿಂದೂ ಜಾಗರಣ ವೇದಿಕೆಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್‌ ಕಾರಂತ ವಿರುದ್ಧ ದೂರು ದಾಖಲಿಸುವ ಮೂಲಕ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ, ಹಿಂದೂಗಳ ಧ್ವನಿಯನ್ನು ಅಡಗಿಸುವ ಪ್ರಯತ್ನ ಮಾಡಿದ್ದಾರೆ’ ಎಂದು ಹಿಂದೂ ಜಾಗರಣ ವೇದಿಕೆಯ ಪ್ರಾಂತ ಕಾರ್ಯಕಾರಿಣಿ ಸದಸ್ಯ ರಾಧಾಕೃಷ್ಣ ಅಡ್ಯಂತಾಯ ಹೇಳಿದರು.

ಜಿಲ್ಲಾಧಿಕಾರಿಯ ಕ್ರಮವನ್ನು ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಖಂಡಿಸಿದ ಅವರು, ‘ಕಾರಿಂಜ ಕ್ಷೇತ್ರದ ಸುತ್ತ ನಡೆಯುತ್ತಿರುವ ಗಣಿಗಾರಿಕೆ ಹಾಗೂ ಇತರ ಅಕ್ರಮಗಳ ವಿರುದ್ಧ ವೇದಿಕೆಯು ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಹೋರಾಟ ಮಾಡುತ್ತಿದೆ. ಜಿಲ್ಲಾಧಿಕಾರಿಯು ಅಕ್ರಮವನ್ನು ತಡೆಯುವ ಮೂಲಕ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಬೇಕಾಗಿತ್ತು. ಅದರ ಬದಲು, ಹೋರಾಟಗಾರರ ವಿರುದ್ಧ ದೂರು ದಾಖಲಿಸಿದ್ದು ಖಂಡನೀಯ ಎಂದರು.

ಜಗದೀಶ್‌ ಕಾರಂತರ ಭಾಷಣದಿಂದ ಜಿಲ್ಲಾಧಿಕಾರಿಯ ಘನತೆಗೆ ಧಕ್ಕೆಯಾಗಿದ್ದನ್ನು ಅಲ್ಲಗಳೆಯುವುದಿಲ್ಲ, ಆದರೆ ಅವರ ಮಾತುಗಳು ಸ್ಥಳೀಯ ನಿವಾಸಿಗಳ ಆಕ್ರೋಶವನ್ನು ಪ್ರತಿನಿಧಿಸುತ್ತವೆ ಎಂಬುದನ್ನು ಜಿಲ್ಲಾಧಿಕಾರಿ ಅರಿಯಬೇಕು. ಜಿಲ್ಲಾಧಿಕಾರಿ ಹುದ್ದೆಗೆ ಘನತೆ ಇರುವಂತೆ, ಜನರಿಗೂ ಭಾವನೆಗಳಿರುತ್ತವೆ. ಮಾತುಗಳನ್ನು ಶಬ್ದಶಃ ಅರ್ಥ ಮಾಡಿಕೊಳ್ಳದೆ, ಅವು ಜನರ ಭಾವನೆಗಳ ಪ್ರತಿರೂಪ ಎಂಬುದನ್ನು ಜಿಲ್ಲಾಧಿಕಾರಿ ಅರ್ಥ ಮಾಡಿಕೊಳ್ಳಬೇಕು ಎಂದರು.

ಕಾರಂತರ ವಿರುದ್ಧ ನೀಡಿರುವ ದೂರನ್ನು ಜಿಲ್ಲಾಧಿಕಾರಿ ಕೂಡಲೇ ಹಿಂತೆಗೆದುಕೊಳ್ಳಬೇಕು ಎಂದು ನಾವು ಆಗ್ರಹಿಸುತ್ತೇವೆ. ದೂರಿಗೆ ಹೆದರಿ ನಾವು ಈ ಒತ್ತಾಯ ಮಾಡುತ್ತಿಲ್ಲ. ಇಂಥ ಸಾವಿರ ದೂರುಗಳನ್ನು ಎದುರಿಸಲೂ ಸಿದ್ಧ, ಆದರೆ, ಜನರ ಭಾವನೆಯನ್ನು ಗೌರವಿಸಬೇಕಾದ್ದು ಜಿಲ್ಲಾಧಿಕಾರಿಯ ಹೊಣೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಬದ್ಧರಾಗಿ ಅವರು ಆ ಕೆಲಸ ಮಾಡಬೇಕು’ ಎಂದರು.

ಕಾಲು ಮುರಿಯುತ್ತೇವೆ: ಮಾತಿನ ಭರದಲ್ಲಿ ಅಡ್ಯಂತಾಯ ಅವರು, ಸ್ಥಳೀಯ ಪೊಲೀಸ್‌ ಅಧಿಕಾರಿಯ ವಿರುದ್ಧ ಮಾತನಾಡುತ್ತಾ, ‘ಹಿಂದೂ ಸಮಾಜವನ್ನು ಫುಟ್‌ಬಾಲ್‌ನಂತೆ ಒದ್ದರೆ ಕಾಲು ಮುರಿಯುತ್ತೇವೆ’ ಎಂದರು. ಆ ಬಗ್ಗೆ ಮಾಧ್ಯಮದವರು ಪ್ರಶ್ನೆ ಕೇಳುತ್ತಿದ್ದಂತೆ, ‘ನಾನು ಆ ಅರ್ಥದಲ್ಲಿ ಹೇಳಿಲ್ಲ, ಚೆಂಡನ್ನು ಒದ್ದರೆ ಚೆಂಡು ಹಾರುತ್ತದೆ. ಕಲ್ಲು ಬಂಡೆಗೆ ಒದ್ದರೆ ಕಾಲು ಮುರಿಯುತ್ತದೆ ಎಂದಿದ್ದೇನೆ’ ಎಂದು ಸ್ಪಷ್ಟನೆ ನೀಡಿದರು.

ಹಿಂದೂ ಜಾಗರಣ ವೇದಿಕೆಯ ಪ್ರಾಂತ ಉಪಾಧ್ಯಕ್ಷ ಕಿಶೋರ್‌, ಜಿಲ್ಲಾ ಅಧ್ಯಕ್ಷ ಜಗದೀಶ್‌ ನೆತ್ತರಕೆರೆ, ವಿಭಾಗ ಸಂಪರ್ಕ ಪ್ರಮುಖ ರತ್ನಾಕರ ಶೆಟ್ಟಿ ಕಲ್ಲಡ್ಕ ಹಾಗೂ ಪ್ರಶಾಂತ ಕೆಂಪುಗುಡ್ಡ ಮಾಧ್ಯಮಗೋಷ್ಠಿಯಲ್ಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.